ಚಿಕ್ಕಬಳ್ಳಾಪುರ/ಗುಡಿಬಂಡೆ: ದ್ವಿಚಕ್ರ ವಾಹನದಲ್ಲಿ ತೆರಳುತಿದ್ದ ಸ್ಥಳೀಯ ಕಾಂಗ್ರೆಸ್ ಮುಖಂಡರೊಬ್ಬರನ್ನು ತಲೆ ಕಡಿದು ಕೊಲೆ ಮಾಡಿರುವ ಭೀಕರ ಘಟನೆ ಜಿಲ್ಲೆಯ ಗುಡಿಬಂಡೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಘಟನೆಯಿಂದ ತಾಲ್ಲೂಕು ಬೆಚ್ಚಿಬಿದ್ದಿದೆ.
ಗುಡಿಬಂಡೆ ತಾಲ್ಲೂಕಿನ ಬೋಗೇನಹಳ್ಳಿ ಗ್ರಾಮದ ನರಸಿಂಹಪ್ಪ (47) ಕೊಲೆಯಾದ ವ್ಯಕ್ತಿ. ನರಸಿಂಹಪ್ಪ ತನ್ನ ದ್ವಿಚಕ್ರ ವಾಹನದಲ್ಲಿ ಬೋಗೇನಹಳ್ಳಿಯಿಂದ ವರದಯ್ಯಗಾರಹಳ್ಳಿಗೆ ತೆರಳತ್ತಿದ್ದಾಗ ಹಿಂದಿನಿಂದ ಬಂದ ಹಂತಕರು ಮಚ್ಚಿನಂಥ ಆಯುಧದಿಂದ ತಲೆಯ ಹಿಂಬದಿಗೆ ಹೊಡೆದಿದ್ದಾರೆ. ಬೋಗೇನಹಳ್ಳಿಗೆ ಕೇವಲ ನೂರೈವತ್ತು ಮೀಟರ್ ದೂರದಲ್ಲೇ ಈ ಘಟನೆ ನಡೆದಿದೆ. ಇದೆಲ್ಲವನ್ನೂ ಗಮನಿಸಿದರೆ ಹಂತಕರು ಪಕ್ಕಾ ಪ್ಲ್ಯಾನ್ ಮಾಡಿಕೊಂಡೇ ಈ ಕೃತ್ಯ ಎಸಗಿದ್ದಾರೆನ್ನಬಹುದು.
ಶನಿವಾರ ಸಂಜೆ 5 ಗಂಟೆ ಸುಮಾರಿನಲ್ಲಿ ಹಾಡುಗಲೇ ಈ ಕೃತ್ಯ ನಡೆದಿದ್ದು, ಈ ಭಾಗದ ಜನರನ್ನು ಬೆಚ್ಚಿ ಬೀಳುವಂತೆ ಮಾಡಿದೆ. ಕೊಲೆ ಮಾಡಿದ ಕಾರಣ ತಿಳಿದು ಬಂದಿಲ್ಲವಾದರೂ, ರಾಜಕೀಯ ವೈಷಮ್ಯ ಅಥವಾ ವೈಯಕ್ತಿಕ ಕಾರಣಗಳಿರಬಹುದಾ? ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮಚ್ಚಿನಿಂದ ಹೊಡೆತ ಬಿದ್ದ ಕೂಡಲೇ ತೀವ್ರ ರಕ್ತಸ್ರಾವವಾಗಿ ನರಸಿಂಹಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆಂದು ಗೊತ್ತಾಗಿದೆ.
ಪಂಚಾಯಿತಿ ವೈಷಮ್ಯ? ಅಥವಾ..
ಕೆಲ ದಿನಗಳ ಹಿಂದೆ ನಡೆದ ಪಂಚಾಯಿತಿ ಚುನಾವಣೆಯಲ್ಲಿ ತಿರುಮಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ಫರ್ಧಿಸಿದ್ದ ನರಸಿಂಹಪ್ಪ ಸೋಲನುಭವಿಸಿದ್ದರು. ತಿರುಮಣಿ ಭಾಗದಲ್ಲಿ ಜಿದ್ದಾಜಿದ್ದಿ ರಾಜಕೀಯವೂ ಇತ್ತೆನ್ನಲಾಗಿದ್ದು, ಪಂಚಾಯಿತಿ ಚುನಾವಣೆಯಲ್ಲಿ ಶತಾಗತಾಯ ಗೆಲ್ಲಲು ನರಸಿಂಹಪ್ಪ ಭಾರೀ ಪ್ರಯತ್ನ ಮಾಡಿದ್ದರೆಂದು ಮೂಲಗಳು ತಿಳಿಸಿವೆ.
ಜತೆಗೆ; ನರಸಿಂಹಪ್ಪ ಕಾಂಗ್ರೆಸ್ ಪಕ್ಷದಲ್ಲಿದ್ದರೆಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಬೆಂಬಲಿಗ ಎಂಬ ಮಾಹಿತಿ ಸಿಕ್ಕಿದೆ. ಆದರೆ, ಈ ರೀತಿಯಾಗಿ ಒಬ್ಬ ವ್ಯಕ್ತಿಯನ್ನು ಕೊಲೆ ಮಾಡಿರುವುದಕ್ಕೆ ಎಲ್ಲೆಡೆ ತೀವ್ತ ಆಘಾತ ವ್ಯಕ್ತವಾಗಿದೆ. ಇನ್ನೊಂದೆಡೆ ದಲಿತ ಸಂಘರ್ಷ ಸಮಿತಿಯಲ್ಲೂ ಅವರು ಸಕ್ರಿಯರಾಗಿದ್ದರೆನ್ನಲಾಗಿದೆ. ಸಿಕೆನ್ಯೂಸ್ ನೌ ಸಂಗ್ರಹಿಸಿ ಮಾಹಿತಿ ಪ್ರಕಾರ ನರಸಿಂಹಪ್ಪಗೆ ಊರಿನಲ್ಲೂ ಶತ್ರುಗಳು ಇಲ್ಲ ಎಂದು ಗೊತ್ತಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪರವಾಗಿ ಕೆಲಸ ಮಾಡಿ ತದ ನಂತರ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದರೆಂಬ ಮಾಹಿತಿಯೂ ಸಿಕ್ಕಿದೆ. ಜತೆಗೆ, ರಿಯಲ್ ಎಸ್ಟೇಟ್ ವ್ಯವಹಾರವನ್ನೂ ನರಸಿಂಹಪ್ಪ ಮಾಡುತ್ತಿದ್ದರೆನ್ನಲಾಗಿದೆ.
ಹಾಗೆಯೇ, ನರಸಿಂಹಪ್ಪ ಅವರನ್ನು ಹಿಂಬಾಲಿಸಿ ಬಂದ ಹಂತಕರು ದ್ವಿಚಕ್ರ ವಾಹನದಲ್ಲೇ ಬಂದಿರುವ ಸಾಧ್ಯತೆ ಇದ್ದು, ಅವರಲ್ಲಿ ಒಬ್ಬ ವಾಹನವನ್ನು ಚಲಾಯಿಸುತ್ತಿದ್ದರೆ ಹಿಂಬದಿಯಲ್ಲಿ ಕೂತಿರುವ ಮತ್ತೊಬ್ಬ ಕೃತ್ಯವನ್ನು ಎಸಗಿರುವ ಸಾಧ್ಯತೆ ಇದೆ. ಇವೆಲ್ಲ ಅಂಶಗಳನ್ನು ಇಟ್ಟುಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರಲ್ಲದೆ ವಿವಿಧ ಆಯಾಮಗಳಲ್ಲಿ ಮಾಹಿತಿ ಕಲೆ ಹಾಕಿದ್ದಾರೆ. ಶ್ವಾನದಳವೂ ತೀವ್ರ ತಪಾಸಣೆ ನಡೆಸಿದ್ದು. ಬೆರಳಚ್ಚು ತಜ್ಞರು ಕೂಲಂಕಶವಾಗಿ ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹ ಮಾಡಿದ್ದಾರೆ. ಗುಡಿಬಂಡೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.