ಚಿಕ್ಕಬಳ್ಳಾಪುರ: ಮಾಘ ಮಾಸದ ರಥಸಪ್ತಮಿ ವೇಳೆ ಮಾಡುವ ಸೂರ್ಯ ನಮಸ್ಕಾರಗಳು ಅತ್ಯಂತ ಶ್ರೇಷ್ಠ ಎಂದು ಭಾರತ್ ಸ್ವಾಭಿಮಾನ್ ಸಂಸ್ಥೆಯ ಜಿಲ್ಲಾಧ್ಯಕ್ಷ ಪಿ.ವಿ.ರಾಮಚಂದ್ರ ರೆಡ್ಡಿ ಹೇಳಿದ್ದಾರೆ.
ಚಿಕ್ಕಬಳ್ಳಾಪುರದ ಪತ್ರಕರ್ತರ ಭವನದಲ್ಲಿ ಪತಂಜಲಿ ಯೋಗ ಸಮಿತಿಯು ರಥಸಪ್ತಮಿ ಅಂಗವಾಗಿ ಹಮ್ಮಿಕೊಂಡಿದ್ದ ʼ108 ಸೂರ್ಯ ನಮಸ್ಕಾರʼ ಎಂಬ ಸೂರ್ಯೊಪಾಸನ ಯೊಗಾಭ್ಯಾಸದಲ್ಲಿ ಸೂರ್ಯ ನಮಸ್ಕಾರ ಮಾಡಿಸಿದ ನಂತರ ಮಾತನಾಡಿದ ಅವರು, ಸೂರ್ಯ ನಮಸ್ಕಾರವನ್ನು ಕ್ರಮಬದ್ದವಾಗಿ ಮಾಡುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಕಲೆ ಸಂಸ್ಕೃತಿ, ನಾಡು-ನುಡಿ ಹೇಗೆ ಪ್ರಸಿದ್ಧವೋ ಹಾಗೆಯೇ ಒಂದೊಂದು ಹಬ್ಬವೂ ಒಂದೊಂದು ರೀತಿಯ ವಿಶೇಷತೆಯ ಸಂಕೇತವಾಗಿರುತ್ತದೆ. ಅದರಂತೆ ಮಾಘ ಮಾಸದ ರಥಸಪ್ತಮಿಯ ವೇಳೆ 108 ಸೂರ್ಯ ನಮಸ್ಕಾರ ಮಾಡುವುದರಲ್ಲಿ ತುಂಬಾ ವಿಶೇಷತೆ ಇದೆ ಎಂದರು ಅವರು.
ಹೃದಯಕ್ಕೆ ಒಳ್ಳೆಯ ವ್ಯಾಯಾಮ
ಸೂರ್ಯ ನಮಸ್ಕಾರದ ರೂಪದಲ್ಲಿ 12 ಪ್ರಬಲ ಯೋಗಾಸನಗಳ ಸರಣಿಯು ವಿಶೇಷವಾಗಿ ಹೃದಯಕ್ಕೆ ಒಳ್ಳೆಯ ವ್ಯಾಯಾಮ ನೀಡುತ್ತದೆ. ಈ ಆಸನಗಳು ದೇಹವನ್ನು ಸುಸ್ವರೂಪದಲ್ಲಿ ಇರಿಸಲು ಮತ್ತು ಮನಸ್ಸನ್ನು ಶಾಂತವಾಗಿರಿಸಲು ಉತ್ತಮ ಮಾರ್ಗವಾಗಿದೆ. ಅದೇ ರೀತಿ ಸೂರ್ಯ ನಮಸ್ಕಾರಗಳನ್ನು ಖಾಲಿ ಹೊಟ್ಟೆಯಲ್ಲಿ ಸೂರ್ಯೋದಯದ ಸಮಯದಲ್ಲಿ ಮಾಡುವುದು ಅತ್ಯುತ್ತಮವಾದುದು. ನಾವು ಒಳ್ಳೆಯ ಆರೋಗ್ಯವನ್ನು ಪಡೆದುಕೊಳ್ಳಲು ಸರಳವಾದರೂ ಆರೋಗ್ಯದ ಮೇಲೂ ಒಳ್ಳೆಯ ಗುಣಾತ್ಮಕತೆ ಪಡೆದುಕೊಳ್ಳುವ ಸೂರ್ಯ ನಮಸ್ಕಾರಗಳನ್ನು ರೂಡಿಸಿಕೊಳ್ಳುವುದು ಒಳ್ಳೆಯ ಬೆಳವಣಿಗೆ ಎಂದು ರಾಮಚಂದ್ರ ರೆಡ್ಡಿ ವಿವರಿಸಿದರು.
ಸೂರ್ಯ ದೇವನಿಗೆ ಕೃತಜ್ಞತೆ
ಬೆಂಗಳೂರು ವಿಶ್ವವಿದ್ಯಾಲಯ ಚಿಕ್ಕಬಳ್ಳಾಪುರ ಶಿಕ್ಷಣ ಕಾಲೇಜಿನ ಪ್ರಾದ್ಯಾಪಕ ಹಾಗೂ ಪತಂಜಲಿ ಯೋಗ ಸಮಿತಿ ಜಿಲ್ಲಾ ಸಂಚಾಲಕ ಡಾ.ಎನ್.ಲೋಕನಾಥ್ ಮಾತನಾಡಿ; ಸೂರ್ಯ ನಮಸ್ಕಾರಗಳು ಉತ್ತಮ ಆರೋಗ್ಯ ಮಾತ್ರವಲ್ಲದೆ, ಈ ಭೂಮಿಯನ್ನು ತನ್ನ ಶಕ್ತಿಯಿಂದ ಜೀವಂತವಾಗಿರಿಸಿರುವ ಸೂರ್ಯ ದೇವನಿಗೆ ನಮ್ಮ ಕೃತಜ್ಞತೆಯನ್ನು ಅರ್ಪಿಸಲು ಕೂಡ ಸೂರ್ಯ ನಮಸ್ಕಾರವು ಒಂದು ಸದಾವಕಾಶವಾಗಿರಲಿದೆ, ಮುಂದಿನ 10 ದಿನಗಳವರೆವಿಗೆ ಸೂರ್ಯನ ಚೈತನ್ಯದೆಡೆಗೆ ಕೃತಜ್ಞತೆಯ ಭಾವನೆಯನ್ನು ಮೂಡಿಸಿಕೊಳ್ಳುವುದರ ಜತೆಗೆ ನಮ್ಮ ದಿನಚರಿಯನ್ನು ಲವಲವಿಕೆಯಿಂದಿರಿಸಲು ಸಾದ್ಯವಾಗಲಿದೆ ಎಂದರು.
ಇದೇ ವೇಳೆ, ಲೋಕನಾಥ್ ಅವರು ಸೂರ್ಯ ನಮಸ್ಕಾರಗಳ ನಂತರ ಇನ್ನಿತರ ಯೋಗಾಸನಗಳನ್ನು ಮಾಡಿ ನಂತರ ದೀರ್ಘವಾದ ಯೋಗನಿದ್ರೆ ವಿಶ್ರಮಿಕೆ ಮಾಡಿಸಿದರಲ್ಲದೆ ಇವೆಲ್ಲವುಗಳಿಂದ ಆರೋಗ್ಯ ಆನಂದ ಮತ್ತು ನೆಮ್ಮದಿಯನ್ನು ಕಂಡುಕೊಳ್ಳಲು ಬಹು ಉಪಯೋಗಿ ಯೋಗಾಸನವಾಗಿದೆ ಎಂದು ಸೂರ್ಯ ನಮಸ್ಕಾರಗಳ ಅದೂ ಈ ಸಂದರ್ಭದ ಮಹತ್ವವನ್ನು ವಿವರಿಸಿದರು.
ಮಹಿಳೆಯರಿಗೂ ಸೂರ್ಯ ನಮಸ್ಕಾರ ಒಳ್ಳೆಯದು
ಮಹಿಳಾ ಪತಂಜಲಿ ಯೋಗ ಸಮಿತಿ ಜಿಲ್ಲಾ ಅಧ್ಯಕ್ಷೆ ಕೆ.ವೀಣಾ ಲೋಕನಾಥ್ ಮಾತನಾಡಿ ಸೂರ್ಯ ನಮಸ್ಕಾರಗಳು ಬಹಳಷ್ಟು ಮಹತ್ವ ಪಡೆದುಕೊಂಡಿದೆ. ಜತೆಗೆ, ಜನಪ್ರಿಯತೆಯೂ ಹೌದು, ಇದು ಆರೋಗ್ಯವೃದ್ದಿಗೆ ಹಾಗೂ ಮನೋಭಾವವನ್ನು ಹೆಚ್ಚಿಸುವುದಕ್ಕೆ ಅದರಲ್ಲೂ ಮಹಿಳೆಯರಿಗೆ ಸಾಕಷ್ಟು ಪ್ರಯೋಜನಕಾರಿಯಾಗಲಿದೆ. ಅಲ್ಲದೆ ಸೂರ್ಯ ನಮಸ್ಕಾರವು ಆರೋಗ್ಯ ಸ್ಥಿತಿಯಲ್ಲಿ ಧನಾತ್ಮಕ ಬದಲಾವಣೆ ತರುವುದಲ್ಲದೆ, ರೋಗ ಪ್ರತಿರೋಧಕ ಶಕ್ತಿ ಸಾಮರ್ಥ್ಯ ಮತ್ತು ಜೀವನಾಸಕ್ತಿಯನ್ನು ಹೆಚ್ಚಿಸಲಿದೆ ಎಂದ ಅವರು, ಒಟ್ಟಾರೆಯಾಗಿ ವ್ಯಕ್ತಿತ್ವದ ಸರ್ವತೋಮುಖ ಅಭಿವೃದ್ದಿಗೆ ಪೂರಕವಾಗಿರುವ ಸೂರ್ಯ ನಮಸ್ಕಾರಗಳು ಜಾತಿ, ಮತ, ಪಂಥಗಳನ್ನು ಮೀರಿ ಎಲ್ಲಾ ವಯೋಮಾನದವರಿಗೂ ಅನ್ವಯವಾಗುವಂಥ ಒಂದು ವಿಶಿಷ್ಟ ಪೂರ್ಣ ವ್ಯಾಯಾಮ ಇದಾಗಿದೆ. ಪತಂಜಲಿ ಯೋಗ ಸಮಿತಿಯು ಪ್ರತಿ ವರ್ಷದಂತೆ ಪ್ರಸಕ್ತ ಸಾಲಿನಲ್ಲೂ ಸೂರ್ಯ ನಮಸ್ಕಾರಾಭ್ಯಾಸ ಮಾಡಿಸುವುದರ ಜೊತೆಗೆ ಅದರ ಲಾಭದ ಮಾಹಿತಿ ಒದಗಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಮಾಜಿ ಸದಸ್ಯ ಮೊಬೈಲ್ ಬಾಬು, ಯೋಗ ಪಟುಗಳಾದ ಅನಿಲ್, ವಾಪಸಂದ್ರ ನಾಗರತ್ನಮ್ಮ, ಉಮಾ ಶಂಕರ್, ನಾಗಭೂಷಣ್, ನಾಗವೇಣಿ ಸೇರಿದಂತೆ ಇನ್ನಿತರರು ಯೊಗಭ್ಯಾಸದಲ್ಲಿ ನಿರತರಾಗಿದ್ದರು.