ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕರ್ನಾಟಕದ ಡೊನಾಲ್ಡ್ ಟ್ರಂಪ್ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಮೂದಲಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ವಿಶ್ವನಾಥ್, ಸಿದ್ದರಾಮಯ್ಯ ಅಮೆರಿಕದ ಮಾಜಿ ಅಧ್ಯಕ್ಷ ಟ್ರಂಪ್ ಇದ್ದಂತೆ. ಇದು ಟ್ರಂಪಾಯಣದಂತೆ ಸಿದ್ದರಾಮಾಯಣ ನಡೆಯುತ್ತಿದೆ. ಸೋಲನ್ನು ಒಪ್ಪಿಕೊಳ್ಳಲು ಅವರು ಸಿದ್ದರಿಲ್ಲ ಎಂದರು.
ಸಿದ್ದು ಕಾಂಗ್ರೆಸ್ ಸಂಸ್ಕಾರ ಸಂಸ್ಕೃತಿ ಇಲ್ಲದ ಮನುಷ್ಯ. ನಾವು ಅವರನ್ನು ಕಾಂಗ್ರೆಸ್‌ಗೆ ಕರೆದುಕೊಂಡು ಬಂದಿದ್ದಕ್ಕೆ ಸಿಎಂ ಆದವರು. ಅದೃಷ್ಟದಿಂದ ಸಿಎಂ ಆದವರು ಅವರು ಎಂದರು ವಿಶ್ವನಾಥ್.
ಸಿದ್ದರಾಮಯ್ಯ ಅವರಿಗೆ ಸ್ವಾರ್ಥ ಬಿಟ್ಟರೆ ಬೇರೆ ಏನೂ ಗೊತ್ತಿಲ್ಲ ಎಂದು ದೂರಿದ ಅವರು, ಸಿದ್ದರಾಮಯ್ಯ ಮಿಠಾಯಿ ಕಂಡ ಮಗುವಿನಂತಾಗಿದ್ದಾರೆ. ಯಡಿಯೂರಪ್ಪನವರನ್ನು ನೋಡಿದ ಕೂಡಲೇ ಅವರಿಗೆ ಸಿಎಂ ಎಂಬ ಮಿಠಾಯಿ ನೆನಪಾಗುತ್ತದೆ. ಅದನ್ನು ಒಮ್ಮೆ ಪಡೆಯಬೇಕೆಂಬ ಚಡಪಡಿಕೆ ಅವರಿಗೆ. ಹಾಗಾಗಿ ನಾಯಕತ್ವದ ಬದಲಾವಣೆ ಬಗ್ಗೆ ಮಾತನಾಡುತ್ತಾರೆಂದು ಟೀಕಿಸಿದರು.
ಇಂದು ಯಾವ ಅಹಿಂದ ಹೋರಾಟವೂ ಅಲ್ಲ. ಇದು ಸಿದ್ದರಾಮಯ್ಯ ಹಾಗೂ ಮಹಾವೇಪ್ಪ ಅವರ ಸ್ವಾರ್ಥದ ಹೋರಾಟ. ಸ್ವಾರ್ಥಕ್ಕಾಗಿ ಸಿದ್ದರಾಮಯ್ಯ ಹಿಂದ-ಅಹಿಂದ ಎಂದು ಚಡಪಡಿಸುತ್ತಿದ್ದಾರೆ. ಅವರಿಗೆ ಅಸ್ತಿತ್ವದ ಅಭದ್ರತೆ ಕಾಡುತ್ತಿದೆ. ಹಾಗಾಗಿ ಈಗ ಅಹಿಂದ ಹಿಂದೆ ಹೊರಟಿದ್ದಾರೆ.
-ಹೆಚ್.ವಿಶ್ವನಾಥ್
ಕುರುಬ ಸಮಾಜದ ಎಸ್‌ಟಿ ಹೋರಾಟ ಅವರಿಲ್ಲದೆ ಯಶಸ್ವಿಯಾಗಿದೆ. ಲಕ್ಷಾಂತರ ಜನರು ಸೇರಿಸಿ ಯಶಸ್ಸು ಕಂಡಿದ್ದೇವೆ. ನಾನು ಇಲ್ಲದಿದ್ದರೆ ಆಗಲ್ಲ ಎಂದುಕೊಂಡಿದ್ದರು ಅವರು. ಅವರಲ್ಲಿ ನಾನು ನಾನು ಅನ್ನೋ ಸ್ವಾರ್ಥ ಇತ್ತು. ಸಿದ್ದರಾಮಯ್ಯ ಯಾರ ಯಶಸ್ಸನ್ನು ಸಹಿಸುವುದಿಲ್ಲ. ತಮ್ಮ ಸಮುದಾಯದ ಸ್ವಾಮೀಜಿಯವರ ಹೋರಾಟವನ್ನು ಅವರು ಸಹಿಸುವುದಿಲ್ಲ ಎಂದು ವಿಶ್ವನಾಥ್ ಟೀಕಿಸಿದರು.
ಸಿದ್ದರಾಮಯ್ಯ ಅಲ್ಪಸಂಖ್ಯಾತರನ್ನು ಬಿಟ್ಟು ಅಹಿಂದ ಹೋರಾಟ ನಡೆಸುತ್ತಿದ್ದಾರೆ. ಈಗಾಗಲೆ ಅಲ್ಪಸಂಖ್ಯಾತರನ್ನು ತುಳಿದು ಹಾಕಿದ್ದಾರೆ. ಮುಸ್ಲಿಮರನ್ನು ಸಾಕಷ್ಟು ಬಾರಿ ಸೋಲಿಸಲು ಕಾರಣರಾಗಿದ್ದಾರೆಂದು ವಿಶ್ವನಾಥ್ ಹರಿಹಾಯ್ದರು.
ಸಿದ್ದರಾಮಯ್ಯ ಅವರಿಗೆ ಸಮುದಾಯ ನನ್ನ ಜೊತೆ ಇಲ್ಲ ಅನ್ನೋದು ಈಗ ಅವರಿಗೆ ಕಾಣುತ್ತಿದೆ. ಒಂದೆಡೆ ಡಿ.ಕೆ.ಶಿವಕುಮಾರ್ ನಾಯಕತ್ವ ಪ್ರಬಲವಾಗುತ್ತಿದೆ. ಪಕ್ಷ ಹಾಗೂ ಸಮುದಾಯ ಎರಡರಲ್ಲೂ ಸಿದ್ದು ಏಕಾಂಗಿಯಾಗುತ್ತಿದ್ದಾರೆಂದು ವಿಶ್ವನಾಥ್ ಅಭಿಪ್ರಾಯಪಟ್ಟರು.
ಇದೀಗ ಅವರಿಗೆ ರಾಜಕೀಯ ಅಸ್ತಿತ್ವಕ್ಕೆ ಚಡಪಡಿಕೆ ಶುರುವಾಗಿದೆ ಎಂದ ವಿಶ್ವನಾಥ್; ನಾನು ಸಿದ್ದರಾಮಯ್ಯ ಮೈಸೂರಿನಲ್ಲೇ ಓದಿದ್ದು. ಅವರು ಯಾವ ವಿದ್ಯಾರ್ಥಿ ಹೋರಾಟದಲ್ಲೂ ಇರಲಿಲ್ಲ ಎಂದರು ಅವರು.
Lead photo: Nandan Mysore