ಚಿಕ್ಕಬಳ್ಳಾಪುರ: ಗ್ರಾಮಗಳ ಸಮಸ್ಯೆಗಳನ್ನು ಅರಿಯಲು ಜಿಲ್ಲಾಧಿಕಾರಿಗಳು ಹಾಗೂ ಇಡೀ ಜಿಲ್ಲಾಡಳಿತ ಗ್ರಾಮ ವಾಸ್ತವ್ಯ ಹೂಡಬೇಕು ಎಂದು ಸರಕಾರ ನಿರ್ದೇಶನ ನೀಡಿರುವ ಹಿನ್ನೆಲೆಯಲ್ಲಿ ಇದೇ ಫೆಬ್ರವರಿ 20ರಂದು ಇಡೀ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಗ್ರಾಮ ವಾಸ್ತವ್ಯಕ್ಕೆ ಅಣಿಯಾಗುತ್ತಿದೆ.
ಗ್ರಾಮಗಳಿಗೆ ತೆರಳಿ ಅಲ್ಲಿಯೇ ವ್ಯಾಸ್ತವ್ಯ ಹೂಡುವ ಮೂಲಕ ನೇರವಾಗಿ ಜನರ ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲೇ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಆರ್.ಲತಾ ಅವರು ಸೇರಿದಂತೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ತಹಸೀಲ್ದಾರ್‌ಗಳು ಫೆಬ್ರವರಿ 20ರಂದು ಶನಿವಾರ ಆಯ್ದ ಗ್ರಾಮಗಳಲ್ಲಿ ಗ್ರಾಮ ವಾಸ್ತವ್ಯ ಹೂಡಲಿದ್ದಾರೆ.
ಅದೇ ದಿನ ಅತಿ ಹಿಂದುಳಿದ ಪ್ರದೇಶ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರು ಹೆಚ್ಚಿನ ಜನಸಂಖ್ಯೆಯಲ್ಲಿ ವಾಸ ಇರುವಂತಹ ಶಿಡ್ಲಘಟ್ಟ ತಾಲ್ಲೂಕಿನ ಬೋದಗೂರು ಗ್ರಾಮದಲ್ಲಿ ಜಿಲ್ಲಾಧಿಕಾರಿ ಆರ್.ಲತಾ ಅವರು ಗ್ರಾಮ ವಾಸ್ತವ್ಯ ಹೂಡಲಿದ್ದಾರೆ. ಆ ಮೂಲಕ ನೇರವಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಪರಿಹಾರ ಒದಗಿಸಲು ಅವರು ಮುಂದಾಗಿದ್ದಾರೆ.
ತಹಸೀಲ್ದಾರ್‌ಗಳ ಗ್ರಾಮ ವಾಸ್ತವ್ಯ ಎಲ್ಲೆಲ್ಲಿ?
ಚಿಕ್ಕಬಳ್ಳಾಪುರದ ತಹಸೀಲ್ದಾರ್ ಅವರು ತಿಪ್ಪೇನಹಳ್ಳಿಯಲ್ಲಿ, ಗೌರಿಬಿದನೂರಿನ ತಹಸೀಲ್ದಾರ್ ಮಂಚೇನಹಳ್ಳಿ ಹೋಬಳಿಯ ಹಳೇಹಳ್ಳಿಯಲ್ಲಿ, ಗುಡಿಬಂಡೆ ತಹಸೀಲ್ದಾರ್ ಕಸಬಾ ಹೋಬಳಿಯ ದಪ್ಪರ್ತಿ ಗ್ರಾಮದಲ್ಲಿ, ಬಾಗೇಪಲ್ಲಿ ತಹಸೀಲ್ದಾರ್ ಚೇಳೂರು ಹೋಬಳಿಯ ಪುಲಿಗಲ್ ಗ್ರಾಮ ಹಾಗೂ ಚಿಂತಾಮಣಿ ತಹಸೀಲ್ದಾರ್‌ರವರು ಕಸಬಾ ಹೋಬಳಿಯ ಅನೂರು ಗ್ರಾಮದಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಸರಕಾರದ ಸವಲತ್ತುಗಳನ್ನು ಅರ್ಹ ಫಲಾನುಭವಿಗಳಿಗೆ ದೊರಕಿಸುವುದು ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳ ಆದ್ಯ ಕರ್ತವ್ಯ. ವಿನಾಕಾರಣ ಸಾರ್ವಜನಿಕರು ಸರಕಾರಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಬೇಕು. ಮೇಲಧಿಕಾರಿಗಳನ್ನು ಭೇಟಿ ಮಾಡಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಗ್ರಾಮವಾಸ್ತವ್ಯ ಒಂದು ವೇದಿಕೆಯಾಗಿದೆ. ಜನರಿಗಾಗಿ, ಜನರಿಗೋಸ್ಕರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಕಾರ್ಯನಿರ್ವಹಿಸುತ್ತಿದ್ದು, ಗ್ರಾಮ ವಾಸ್ತವ್ಯದ ಮೂಲಕ ಜನರೊಂದಿಗೆ ಬೆರೆತು ಪರಿಸ್ಥಿತಿ ಅವಲೋಕನ ಮಾಡಲಾಗುವುದು.
-ಆರ್.ಲತಾ, ಜಿಲ್ಲಾಧಿಕಾರಿ
ಕಂದಾಯ ಸಚಿವ ಆರ್.ಅಶೋಕ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಸೂಚನೆ ಮೇರೆಗೆ ಜಿಲ್ಲೆಯಲ್ಲಿ ಗ್ರಾಮ ವಾಸ್ತವ್ಯಕ್ಕೆ ಜಿಲ್ಲಾಡಳಿತ ಸಜ್ಜಾಗಿದೆ. ಈಗಾಗಲೇ ಎಲ್ಲಾ ತಹಸೀಲ್ದಾರ್‌ಗಳು ಆಯಾ ವ್ಯಾಪ್ತಿಯ ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಆಯ್ದ ಗ್ರಾಮಗಳಿಗೆ ಭೇಟಿ ನೀಡಿ ಬೆಳಗ್ಗೆ 10ರಿಂದ ಸಂಜೆ 5 ರವರೆಗೆ ವಾಸ್ತವ್ಯ ಹೂಡುವರು. ಗ್ರಾಮ ವಾಸ್ತವ್ಯ ಸಂದರ್ಭದಲ್ಲಿ ಎಲ್ಲಾ ಪಿಡಿಓಗಳು ಮತ್ತು ಪಂಚಾಯತಿ ಆಡಳಿತಾಧಿಕಾರಿಗಳು, ಕಂದಾಯ ಇಲಾಖೆ ಸಿಬ್ಬಂದಿ ಕಡ್ಡಾಯವಾಗಿ ಸ್ಥಳದಲ್ಲಿರಬೇಕು ಎಂದು ಸೂಚಿಸಲಾಗಿದೆ.
ಗ್ರಾಮ ಸ್ವರಾಜ್ಯದ ಪರಿಕಲ್ಪನೆ
ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆ ಹೊತ್ತಿನಲ್ಲಿ ಜನರಿಗೆ ಭರವಸೆ ನೀಡಿದ್ದ ಆಡಳಿತ ಪಕ್ಷ ಬಿಜೆಪಿ, ಸರಕಾರವನ್ನು ಜನರಿಗೆ ಇನ್ನಷ್ಟು ಹತ್ತಿರಗೊಳಿಸಿ ಗ್ರಾಮ ಸ್ವರಾಜ್ಯದ ಪರಿಕಲ್ಪನೆಯನ್ನು ಸಾಕಾರ ಮಾಡಲಾಗುವುದು ಎಂದು ಭರವಸೆ ನೀಡಿತ್ತು. ಅದರ ಮೊದಲ ಹೆಜ್ಜೆಯಾಗಿ ಜಿಲ್ಲಾಡಳಿತ ಗ್ರಾಮಗಳತ್ತ ನಡಿಗೆ ಆರಂಭಿಸಿದೆ.