M Krishnappa Chikkaballapur
ಚಿಕ್ಕಬಳ್ಳಾಪುರ: ಈ ವರ್ಷ ರೈತರಿಂದ ರಾಗಿ ಖರೀದಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ. 2020-21ನೇ ಸಾಲಿನ ಕನಿಷ್ಠ ಬೆಂಬಲ ಯೋಜನೆಯಡಿ ಐದು ತಾಲ್ಲೂಕುಗಳಲ್ಲಿ ರಾಗಿ ಖರೀದಿ ಕೇಂದ್ರಗಳನ್ನು ಈಗಾಗಲೇ ಪ್ರಾರಂಭಿಸಲಾಗಿದ್ದು, ಖರೀದಿ ಪ್ರಕ್ರಿಯೆಗೆ ಚಿಕ್ಕಬಳ್ಳಾಪುರ ಮತ್ತು ಶಿಡ್ಲಘಟ್ಟ ಖರೀದಿ ಕೇಂದ್ರಗಳಲ್ಲಿ ಕಾರ್ಯಪಡೆ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಆರ್.ಲತಾ ಅವರು ಖರೀದಿಗೆ ಚಾಲನೆ ನೀಡಿದರು.
1,32,771 ಕ್ವಿಂಟಾಲ್ ರಾಗಿ ಖರೀದಿ
ಈ ಸಂದರ್ಭದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು; ತಾಲ್ಲೂಕುವಾರು ನೋದಣಿಯಾದ ರೈತರ ಸಂಖ್ಯೆ ಹಾಗೂ ಪ್ರಮಾಣದಂತೆ ಬಾಗೇಪಲ್ಲಿ ತಾಲ್ಲೂಕಿನಲ್ಲಿ 1173 ರೈತರಿಂದ ಒಟ್ಟು 25544 ಕ್ವಿಂಟಾಲ್, ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ 1820 ರೈತರಿಂದ 37405 ಕ್ವಿಂಟಾಲ್, ಚಿಂತಾಮಣಿ ತಾಲ್ಲೂಕಿನಲ್ಲಿ 1398 ರೈತರಿಂದ 27540 ಕ್ವಿಂಟಾಲ್, ಗೌರಿಬಿದನೂರು ತಾಲ್ಲೂಕಿನಲ್ಲಿ 323 ರೈತರಿಂದ ಪ್ರಮಾಣ 6726 ಕ್ವಿಂಟಾಲ್ ಮತ್ತು ಶಿಡ್ಲಘಟ್ಟ ತಾಲ್ಲೂಕಿನಲ್ಲಿ 1786 ರೈತರಿಂದ ಒಟ್ಟು ಪ್ರಮಾಣ 35556 ಕ್ವಿಂಟಾಲ್ ಸೇರಿ ಈವರೆಗೆ ಒಟ್ಟು 6500 ರೈತರು ನೋಂದಣಿ ಮಾಡಿಕೊಂಡಿದ್ದು, ಅವರೆಲ್ಲರಿಂದ ಅಂದಾಜು 1,32,771 ಕ್ವಿಂಟಾಲ್ ರಾಗಿ ಖರೀದಿಯಾಗುವ ನಿರೀಕ್ಷೆ ಇದೆ ಎಂದರು.
ಕಳೆದ ಹಂಗಾಮಿನಲ್ಲಿ, ಅಂದರೆ; 2019-20ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 2393 ರೈತರಿಂದ 44,848 ಕ್ವಿಂಟಾಲ್ ರಾಗಿ ಖರೀದಿಸಲಾಗಿತ್ತು. ಕಳೆದ ಸಾಲಿಗೆ ಹೋಲಿಸಿದರೆ ಈ ಸಾಲಿನಲ್ಲಿ 2 ಪಟ್ಟು ಹೆಚ್ಚು ರೈತರು ರಾಗಿ ಮಾರಲು ನೋಂದಣೆ ಮಾಡಿಸಿಕೊಂಡಿದ್ದಾರೆ ಎಂದ ಅವರು, ಪ್ರಸಕ್ತ ಸಾಲಿನಲ್ಲಿ ರೈತರಿಂದ ಖರೀದಿ ಮಾಡುವ ರಾಗಿಗೆ ಪ್ರತಿ ಕ್ವಿಂಟಾಲಿಗೆ 3,250 ರೂ. ಹಾಗೂ ಒಮ್ಮೆ ಉಪಯೋಗಿಸಿದ 50 ಕೆ.ಜಿ. ಖಾಲಿ ಗೋಣ ಚೀಲಕ್ಕೆ 22 ರೂ.ನಂತೆ ಪ್ರತಿ ಕ್ವಿಂಟಾಲಿಗೆ 44 ರೂ. ಗಳನ್ನು ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದೆಂದು ತಿಳಿಸಿದರು.
ಬೆಂಬಲ ಬೆಲೆಯಿಂದ ರೈತರಿಗೆ ಸಂತಸ
ಆಹಾರ ನಾಗರಿಕರ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕಿ ಪಿ. ಸವಿತಾ ಅವರು ಮಾತನಾಡಿ, ಈ ಬಾರಿ ಜಿಲ್ಲಾಧಿಕಾರಿಗಳ ಸೂಚನೆಯಂತೆ ವ್ಯಾಪಕ ಪ್ರಚಾರ ಕೈಗೊಂಡಿರುವ ಸಲುವಾಗಿ ಬೆಂಬಲ ಬೆಲೆ ಪ್ರಯೋಜನವನ್ನು ಹೆಚ್ಚಿನ ರೈತರು ಸದುಪಯೋಗ ಪಡಿಸಿಕೊಂಡಿದ್ದಾರೆ. ಈ ಪ್ರಕ್ರಿಯೆಯು ಈಗಾಗಲೇ ನೋಂದಣೆ ಮಾಡಿರುವ ರೈತರು ದಿನಾಂಕ ಮಾರ್ಚ್ 15ರ ಒಳಗೆ ರಾಗಿಯನ್ನು ಖರೀದಿ ಕೇಂದ್ರಗಳಿಗೆ ನೀಡಲು ಅವಕಾಶವಿರುತ್ತದೆ ಎಂದು ತಿಳಿಸಿದರು.
- ಬೆಂಬಲ ಬೆಲೆ ಯೋಜನೆಯಡಿ ಸರಕಾರಕ್ಕೆ ರಾಗಿ ಮಾರಾಟ ಮಾಡಿದ ಚಿಕ್ಕಬಳ್ಳಾಪುರ ಮತ್ತು ಶಿಡ್ಲಘಟ್ಟ ತಾಲ್ಲೂಕಿನ ರೈತರಿಗೆ ಜಿಲ್ಲಾಧಿಕಾರಿ ಆರ್.ಲತಾ ಅವರು ಗ್ರೈನ್‍ವೋಚರ್ ವಿತರಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಆಹಾರ ನಾಗರಿಕರ ಸರಬರಾಜು ನಿಗಮದ ಜಿಲ್ಲಾ ವ್ಯವಸ್ಥಾಪಕ ವಿಜಯ ಕುಮಾರ್, ನಿಗಮದ ಅಧಿಕಾರಿ ಎಸ್.ರವಿಶಂಕರ್, ಮೋಹನ್‍ಕುಮಾರ್, ಶಿಡ್ಲಘಟ್ಟ ಮತ್ತು ಚಿಕ್ಕಬಳ್ಳಾಪುರ ಖರೀದಿ ಅಧಿಕಾರಿ ವೈ.ಜಿ.ಮಂಜುನಾಥ್, ಶಿಡ್ಲಘಟ್ಟದ ಖರೀದಿ ಅಧಿಕಾರಿ ಡಿ.ಸುಧಾಕರ್
ಎರಡೂ ತಾಲ್ಲೂಕುಗಳ ರೈತರು ಇದ್ದರು.