ಚಿಕ್ಕಬಳ್ಳಾಪುರ: ಕಬ್ಬು ಬೆಳೆಗಾರರ ಮಾದರಿಯಲ್ಲಿ ಮಾವು ಬೆಳೆಗಾರರು ಸಹಕಾರಿ ಸಂಘ ರಚಿಸಿಕೊಂಡು ಮಾವು ಸಂಸ್ಕರಣೆ, ಶೇಖರಣೆ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸಲಹೆ ನೀಡಿದ್ದಾರೆ.
ಮಾವು ಬೆಳೆಗಾರರು, ಖರೀದಿದಾರರು ಹಾಗೂ ರಫ್ತುದಾರರ ಸಮಾವೇಶದಲ್ಲಿ ಮಾತನಾಡಿದ ಅವರು, ಮಾವನ್ನು ಹೆಚ್ಚು ದಿನಗಳ ಕಾಲ ಶೇಖರಿಸಿ ಇಡಲಾಗದು. ಇದಕ್ಕಾಗಿ ಸೂಕ್ತ ಮಾರುಕಟ್ಟೆ ಸೃಷ್ಟಿಸಬೇಕಾಗುತ್ತದೆ. ಚಿಕ್ಕಬಳ್ಳಾಪುರ, ಕೋಲಾರದಲ್ಲಿ ಸಮರ್ಪಕ ಸಂಸ್ಕರಣಾ ಘಟಕವಿಲ್ಲ. ಈ ಭಾಗದಲ್ಲಿ ಕೋಲ್ಡ್ ಸ್ಟೋರೇಜ್ ಕೂಡ ಇಲ್ಲ. ಉತ್ತರ ಕರ್ನಾಟಕ ಭಾಗದಲ್ಲಿ ಕಬ್ಬು ಬೆಳೆಯುವವರು ಸಹಕಾರ ಸಂಘ ಮಾಡಿಕೊಂಡು ಕಬ್ಬು ಸಂಸ್ಕರಣೆ, ಬಳಕೆ ಮಾಡುತ್ತಿದ್ದಾರೆ. ಅದೇ ಮಾದರಿಯಲ್ಲಿ ಮಾವು ಬೆಳೆಗಾರರು ಕೂಡ ಸಹಕಾರ ಕ್ಷೇತ್ರದ ಮೂಲಕ ಸಂಸ್ಕರಣಾ ಘಟಕ, ಕೋಲ್ಡ್ ಸ್ಟೋರೇಜ್ ಮಾಡಬೇಕು. ಇದು ಪ್ರಧಾನಿ ನರೇಂದ್ರ ಮೋದಿಯವರ ಆತ್ಮನಿರ್ಭರ ಪರಿಕಲ್ಪನೆಗೆ ಪೂರಕ ಎಂದರು.
ರಾಜ್ಯದಲ್ಲಿ 1.67 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ಕೋಲಾರ, ಚಿಕ್ಕಬಳ್ಳಾಪುರ, ರಾಮನಗರದಲ್ಲಿ ಹೆಚ್ಚು ಮಾವು ಬೆಳೆಯುತ್ತಿದ್ದು, ವರ್ಷಕ್ಕೆ 12 ಲಕ್ಷದಿಂದ 14 ಲಕ್ಷ ಟನ್ ಮಾವು ಉತ್ಪಾದನೆಯಾಗುತ್ತಿದೆ. ಈ ಬಾರಿ ಮಾವು ಉತ್ಪಾದನೆ ಹೆಚ್ಚಲಿದ್ದು, ಸುಮಾರು 14 ಲಕ್ಷ ಟನ್ ಫಸಲು ಬರುವ ನಿರೀಕ್ಷೆ ಇದೆ ಎಂದರು.
ಕಿಸಾನ್ ರೈಲಿನಿಂದ ಅನುಕೂಲ
ಕೇಂದ್ರ ಸರಕಾರ ಕಿಸಾನ್ ರೈಲು ಆರಂಭಿಸಿದ್ದು, ಇದು ಬೆಳೆಗಳನ್ನು ಒಯ್ಯಲು ಅನುಕೂಲವಾಗಿದೆ. ಆಹಾರದಲ್ಲಿ ರಾಸಾಯನಿಕ ಬಳಕೆ ಹೆಚ್ಚಿರುವುದರಿಂದ ರೋಗಗಳು ಬರುತ್ತಿವೆ. ಕೃಷಿಕರು ಒಂದೇ ಬಾರಿಗೆ ಇಳುವರಿ ಪಡೆಯುವ ಕಡೆ ಗಮನಹರಿಸಬಾರದು. ದೂರದೃಷ್ಟಿ ಇಟ್ಟುಕೊಂಡು ಸಾವಯವ ಕೃಷಿ ಅನುಸರಿಸಬೇಕು ಎಂದು ಸಲಹೆ ನೀಡಿದರು ಸಚಿವರು.
ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ವತಿಯಿಂದ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ತೋಟಗಾರಿಕಾ ಸಚಿವ ಆರ್.ಶಂಕರ್, ನಿಗಮದ ಅಧ್ಯಕ್ಷ ಕೆ.ವಿ.ನಾಗರಾಜ್, ತೋಟಗಾರಿಕೆ ಇಲಾಖೆಯ ನಿರ್ದೇಶಕಿ ಫೌಝಿಯಾ ತರನ್ನಮ್ ಮುಂತಾದವರು ಉಪಸ್ಥಿತರಿದ್ದರು.
ಕೇರಳದಲ್ಲಿ ಸೋಂಕು; ಗಡಿಯಲ್ಲಿ ಎಚ್ಚರ
ಕೇರಳದಲ್ಲಿ ಕೊರೊನಾ ಪ್ರಕರಣ ಹೆಚ್ಚಿದ್ದು, ರಾಜ್ಯದ ಗಡಿಭಾಗದಲ್ಲಿ ಹೆಚ್ಚು ಎಚ್ಚರ ವಹಿಸಲಾಗಿದೆ. ರಾಜ್ಯದೊಳಗೆ ಬರುವವರು ನೆಗೆಟಿವ್ ಸರ್ಟಿಫಿಕೇಟ್ ಹೊಂದಿರಬೇಕು ಎಂದು ಸೂಚಿಸಲಾಗಿದ್ದು,
ಗಡಿಭಾಗದಲ್ಲಿ ಮಾರ್ಗಸೂಚಿ ಅನುಷ್ಠಾನಗೊಳಿಸಲು ಗೃಹ ಇಲಾಖೆ ಜತೆ ಚರ್ಚಿಸಲಾಗುವುದು ಎಂದು ಇದೇ ವೇಳೆ ಡಾ.ಸುಧಾಕರ್ ಹೇಳಿದರು
ಮಾರ್ಚ್ ತಿಂಗಳಿನಿಂದ ಸಾಮಾನ್ಯ ಜನರಿಗೆ ಲಸಿಕೆ ಸಿಗುವ ಸಾಧ್ಯತೆ ಇದೆ. ಎಲ್ಲರೂ ಲಸಿಕೆಯನ್ನಯ ಪಡೆಯಬೇಕು. ಯಾವುದೇ ಆತಂಕ ಬೇಡ ಎಂದು ಅವರು ಧೈರ್ಯ ತುಂಬಿದರು.