ಚಿಕ್ಕಬಳ್ಳಾಪುರ: ಆರೋಗ್ಯವೇ ಮಹಾ ಭಾಗ್ಯ. ಆರೋಗ್ಯವನ್ನು ಕಾಪಾಡಿಕೊಳ್ಳುವ ಮೂಲಕ ನಮ್ಮ ಜೀವನವನ್ನು ಸುಂದರಮಯವನ್ನಾಗಿಸಿಕೊಳ್ಳಬೇಕು ಎಂದು ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಎಂ.ಮುನಿಕೃಷ್ಣಪ್ಪ ಪತ್ರಕರ್ತರಿಗೆ ಕಿವಿಮಾತು ಹೇಳಿದ್ದಾರೆ.
ಚಿಕ್ಕಬಳ್ಳಾಪುರ ನಗರದ ಪತ್ರಕರ್ತರ ಭವನದಲ್ಲಿ ಶನಿವಾರದಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಕರ್ತರಿಗೆ ಮತ್ತು ಅವರ ಕುಟುಂಬದ ಸದಸ್ಯರಿಗೆ ಹಮ್ಮಿಕೊಂಡಿದ್ದ ಉಚಿತ ಹೃದಯ ತಪಾಸಣೆ ಹಾಗೂ ವಿವಿಧ ಆರೋಗ್ಯ ಪರೀಕ್ಷೆ ಶಿಬಿರ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು; ಸದಾ ಒತ್ತಡದಲ್ಲಿ ಕೆಲಸ ಮಾಡುವ ಪತ್ರಕರ್ತರು ಅರೋಗ್ಯ ಕಾಪಾಡಿಕೊಳ್ಳುವುದು ಅತಿಮುಖ್ಯ ಎಂದರು.
ಸಾಮಾನ್ಯ ಜನರಿಗೆ ಆರೋಗ್ಯ ಸಮಸ್ಯೆಯಾದರೆ ತಕ್ಷಣ ಸ್ಪಂದಿಸುವ ಪತ್ರಕರ್ತರು ತಮ್ಮ ಆರೋಗ್ಯದ ಕಡೆ ಲಕ್ಷ್ಯ ಕೊಡುವುದಿಲ್ಲ. ಹೀಗಾದರೆ ನಮ್ಮನ್ನು ನಂಬಿದ ಕುಟುಂಬಕ್ಕೆ ನಾವು ಏನು ತಾನೆ ಕೊಡಲು ಸಾಧ್ಯ. ಸಂಘದ ವತಿಯಿಂದ ನಡೆಯುವ ಇಂಥಹ ಶಿಬಿರಗಳನ್ನು ಎಲ್ಲರೂ ಸದುಪಯೋಗ ಪಡೆದುಕೊಳ್ಳಬೇಕು.
-ಎಂ.ಮುನಿಕೃಷ್ಣಪ್ಪ
ವರದಿಗಾರರಿಗೆ ಹೆಚ್ಚು ಒತ್ತಡ
ಸಂಘದ ನಿಕಟಪೂರ್ವ ಅಧ್ಯಕ್ಷ ಎಂ.ಜಯರಾಂ ಮಾತನಾಡಿ; ವೃತ್ತಿ ಬದುಕಿನಲ್ಲಿ ಸಣ್ಣ ಪ್ರಮಾಣದ ಅನಾರೋಗ್ಯವಾದರೆ ಕೂಡಲೇ ಕ್ರಮಬದ್ದವಾಗಿ ತಜ್ಞ ವೈದ್ಯರ ಸಲಹೆ ಪಡೆಯುವುದು ಅತಿ ಮುಖ್ಯ. ಕೆಲಸ ಕಾರ್ಯಗಳಲ್ಲಿ ಒತ್ತಡಕ್ಕೆ ಸಿಕ್ಕಿ ರಕ್ತದೊತ್ತಡ, ಮಧುಮೇಹದ ಜತೆಗೆ ಇನ್ನಿತರೆ ಕಾಯಿಲೆಗಳಿಗೆ ಗುರಿಯಾಗುತಿರುತ್ತೇವೆ. ಹಾಗೆ ಆಗುವುದು ಬೇಡ ಎಂದರು.
ಒತ್ತಡಗಳಿಗೆ ತುತ್ತಾಗುವಂತಹ ಪತ್ರಕರ್ತರಿಗೆ ಅನುಕೂಲವಾಗಲೆಂಬ ಕಾರಣಕ್ಕೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಉಚಿತ ಆರೋಗ್ಯ ಶಿಬಿರ ಹಮ್ಮಿಕೊಂಡು ಉತ್ತಮ ಸೇವಾ ಕಾರ್ಯಗಳನ್ನು ಕೈಗೆತ್ತಿಕೊಂಡಿದೆ. ಜನರಿಂದ ಹಿಡಿದು ವಿಐಪಿಗಳವರೆಗೂ ಅಪರಿಚಿತರಿಗೆ ಪರಿಚಿತರಿಗೆಲ್ಲಾ ತೊಂದರೆಯಾದರೂ ಕೂಡಲೆ ಸ್ಪಂದಿಸಿ ಅದನ್ನು ಸರಿದಾರಿಗೆ ಹಾಗೂ ಸೂಕ್ತ ಚಿಕಿತ್ಸೆ ಲಭಿಸುವಂತೆ ಕಾಳಜಿ ವಹಿಸುತ್ತೇವೆ. ಆದರೆ ಸಂಕಷ್ಟದ ಸುಳಿಗೆ ಸಿಗುವ ವರದಿಗಾರರೇ ಒಮ್ಮೊಮ್ಮೆ ಒತ್ತಡಗಳಿಗೆ ಸಿಲುಕಿ ದೊಡ್ಡ ಕಾಯಿಲೆಗಳಿಗೂ ತುತ್ತಾಗುತಿದ್ದಾರೆ. ಇದು ದುರಂತವಲ್ಲದೆ ಮತ್ತೇನಲ್ಲ. ವೃತ್ತಿನಿರತ ಪತ್ರಕರ್ತರಿಗಾಗಿಯೇ ಮಣಿಪಾಲ್ ಆಸ್ಪತ್ರೆಯ ಆಡಳಿತ ಮಂಡಳಿ ಸ್ಪಂದಿಸಿ ಉಚಿತವಾಗಿ ಆರೋಗ್ಯ ಶಿಬಿರ ನಡೆಸಿಕೊಡುತ್ತಿರುವುದು ಶ್ಲಾಘನೀಯ ಎಂದರು ಜಯರಾಂ.
ನಗರಸಭೆ ಅಧ್ಯಕ್ಷ ಆನಂದ ರೆಡ್ಡಿ (ಬಾಬು) ಶಿಬಿರದ ಉದ್ಘಾಟಸಿ ಮಾತನಾಡಿ; ಪತ್ರಕರ್ತರಿಗಾಗಿ ಆರೋಗ್ಯ ಶಿಬಿರ ಹಮ್ಮಿಕೊಂಡಿರುವುದು ಒಳ್ಳೆಯ ಬೆಳವಣಿಗೆ. ತುರ್ತು ಸಂದರ್ಭಗಳಲ್ಲಿ ರಕ್ತ ಸಿಗದೆ ಪ್ರಾಣ ಕಳೆದುಕೊಳ್ಳುವ ಜೀವಗಳ ರಕ್ಷಣೆಗೆಗಾಗಿ ಯುವಜನರು ಹೆಚ್ಚು ಹೆಚ್ಚಾಗಿ ರಕ್ತದಾನ ಮಾಡಬೇಕು ಎಂದು ಕರೆ ನೀಡಿದರು.
ಉಚಿತ ಆರೋಗ್ಯ ಶಿಬಿರದಲ್ಲಿ ಮಣಿಪಾಲ್ ಅಸ್ಪತ್ರೆ ತಜ್ಞ ವೈದ್ಯ ಡಾ.ಚಂದನ್, ಟಿಎಂಟಿ ತಜ್ಞೆ ಡಾ.ವನಿತಾ, ಚಿಂತಾಮಣಿ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ರಾಧಾಕೃಷ್ಣ, ಖಜಾಂಚಿ ಕೆ.ಎಸ್.ನಾರಾಯಣಸ್ವಾಮಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಆನಂದ್, ಮುಬಶೀರ್, ಕಾರ್ಯದರ್ಶಿ ಹರಿಹರ ಕುಮಾರ್, ಜಿಲ್ಲಾ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ಚಿ.ವೀರಶೇಖರ್ ಸೇರಿದಂತೆ ಜಿಲ್ಲೆಯ ವಿವಿಧ ತಾಲ್ಲೂಕುಗಳ ಪದಾಧಿಕಾರಿಗಳು ಇದ್ದರು.