ಮೈಸೂರು: ಸರಕಾರದಿಂದ ಯಾವುದೇ ಕಲೆ ಬೆಳಯುತ್ತದೆ ಎಂಬ ನಿರೀಕ್ಷೆ ಇರಬಾರದು. ಸರಕಾರದಿಂದ ಯಾವ ಕಲೆಯೂ ಬೆಳೆಯುವುದಿಲ್ಲ ಎಂದು ಖ್ಯಾತ ಸಾಹಿತಿ ಡಾ. ಎಸ್.ಎಲ್.ಭೈರಪ್ಪನವರು ಅಭಿಪ್ರಾಯಪಟ್ಟಿದ್ದಾರೆ.
ನಗರದ ಕಲಾಮಂದಿರದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಡಾ.ಎಸ್.ಎಲ್.ಭೈರಪ್ಪನವರ ʼಪರ್ವʼ ಕಾದಂಬರಿ ಮತ್ತು ರಂಗಪ್ರಸ್ತುತಿ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಲೆಗಳು ಸರಕಾರದಿಂದ ಬೆಳೆಯುತ್ತದೆ ಎಂದು ನಿರೀಕ್ಷೆಯನ್ನು ಇಟ್ಟುಕೊಳ್ಳಬಾರದು. ಅದೆಷ್ಟೋ ಸಂಗೀತ ಸಂಸ್ಥೆಗಳು ಸರಕಾರದ ನೆರವಿಲ್ಲದೆ ಟಿಕೆಟ್ನಿಂದ, ಸಂಸ್ಥೆಯ ಸದಸ್ಯರಿಂದ ಬೆಳೆಯುತ್ತಿವೆ ಎಂದು ಅವರು ಹೇಳಿದರು.
ಇತ್ತೀಚಿನ ದಿನಗಳಲ್ಲಿ ನಾಟಕ ವೀಕ್ಷಣೆಗೆ ಪ್ರೇಕ್ಷಕರ ಕೊರತೆ ಕಾಣುತ್ತದೆ ಎಂದ ಅವರು; ಮಹಾರಾಷ್ಟ್ರದಲ್ಲಿ ನಾಟಕ ಪ್ರದರ್ಶನಕ್ಕೆ ಪ್ರೇಕ್ಷಕರಿಂದ ಉತ್ತಮ ಸ್ಪಂದನೆ ಇದೆ. ಈ ಹಿಂದೆ ನಾಟಕವನ್ನು ಹೆಚ್ಚಿನ ಸಂಖ್ಯೆಯಲ್ಲಿ ಜನ ವೀಕ್ಷಿಸುತ್ತಿದ್ದರು. ಈಗ ನಾಟಕ ನೋಡುವವರ ಸಂಖ್ಯೆ ಕಡಿಮೆ ಆಗಿದೆ.
ನಾಟಕ ಪ್ರದರ್ಶನವನ್ನು ಉಚಿತವಾಗಿ ನಡೆಸಬಾರದು. ಟಿಕಟ್ ಇರದಿದ್ದರೆ ಪ್ರೇಕ್ಷಕರಿಗೆ ಅದರ ರಸ ಗೊತ್ತಾಗುವುದಿಲ್ಲ ಎಂದರು.
ಪ್ರವೇಶ ದರ ಕಡಿಮೆ
ʼಪರ್ವʼ ನಾಟಕಕ್ಕೂ ಟಿಕೆಟ್ ನಿಗದಿಗೊಳಿಸಲಾಗಿದೆ. 1 ಸಾವಿರ, 500 ರೂ. 250 ರೂ. ಟಿಕೆಟ್ ದರ ಇದೆ. ಇದು ಕಡಿಮೆ ಎಂದರು. ಇಲ್ಲಿ ದುಡ್ಡು ಮುಖ್ಯ ಅಲ್ಲ ಎಂದ ಭೈರಪ್ಪ, ನಾಟಕ ಏಳೂವರೆ ಗಂಟೆ ಕಾಲ ನಡೆಯಲಿದೆ. ಹಾಗಾಗಿ ಈ ದರ ಕಡಿಮೆ. ಎರಡೂವರೆ ಗಂಟೆಯ ಸಿನಿಮಾಗೆ 300ರಿಂದ 400 ರೂ. ನೀಡಿ ನೋಡುತ್ತೇವೆ. ಹಾಗಾಗಿ ಈ ನಾಟಕದ ಪ್ರವೇಶ ದರ ಕಡಿಮೆ ಎಂದು ಅವರು ಅಭಿಪ್ರಾಯಪಟ್ಟರು.
ಸಾಹಿತ್ಯ ಕೃತಿಯ ಅಂತರಂಗ ಶೋಧಿಸಿ ಹೇಳುವ ವಿದ್ವತ್, ಸಂವೇದನೆ ಇರುವ ವ್ಯಕ್ತಿ ಶತಾವಧಾನಿ ಗಣೇಶ್ ಅವರು. ಇಂಥ ವ್ಯಕ್ತಿಯನ್ನು ಹೋಲುವವರು ಕರ್ನಾಟಕದಲ್ಲಿ ಯಾರೂ ಇಲ್ಲ ಎಂದು ಭೈರಪ್ಪನವರು ಹೇಳಿದರು.
ಈ ಸಂದರ್ಭದಲ್ಲಿ ಭೈರಪ್ಪನವರು ʼಪರ್ವʼ ನಾಟಕದ ಟಿಕೆಟ್ ಬಿಡುಗಡೆ ಮಾಡಿ 1 ಸಾವಿರ ರೂ. ಮೌಲ್ಯದ ಮೊದಲ ಟಿಕೆಟ್ ಅನ್ನು ಖರೀದಿಸಿರು. ಖ್ಯಾತ ವಿಮರ್ಶಕ ಶತಾವಧಾನಿ ಡಾ.ಆರ್.ಗಣೇಶ್ ಅವರು ʼಪರ್ವʼ ರಷ್ಯನ್ ಮತ್ತು ಮ್ಯಾಂಡರಿನ್ ಭಾಷೆ ಆವೃತ್ತಿಯನ್ನು ಬಿಡುಗಡೆ ಮಾಡಿದರು.
ನಾಟಕ ನಿರ್ದೇಶಕ ಪ್ರಕಾಶ ಬೆಳವಾಡಿ, ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ, ಜಂಟಿ ನಿರ್ದೇಶಕ ಮಲ್ಲಿಕಾರ್ಜುನಸ್ವಾಮಿ, ಡಾ. ಶೇಖರ್ ಅವರುಗಳು ಉಪಸ್ಥಿತರಿದ್ದರು.