M krishnappa Chikkaballapur
ಚಿಕ್ಕಬಳ್ಳಾಪುರ: ಶಿವಮೊಗ್ಗ ಜಿಲ್ಲೆಯ ಹುಣಸೋಡಿಯಲ್ಲಿ ಸಂಭವಿಸಿದ್ದ ಮಾರಕ ಜಿಲೆಟಿನ್ ಸ್ಫೋಟದ ಧಾರುಣ ಪ್ರಕರಣ ಮಾಸುವ ಮೊದಲೇ ಅಷ್ಟೇ ಭೀಕರವಾದ ಇನ್ನೊಂದು ಸ್ಫೋಟ ರಾಜ್ಯವನ್ನು ಬೆಚ್ಚಿಬೀಳಿಸಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಅವರ ತವರೂರು ಪೆರೇಸಂದ್ರಕ್ಕೆ ಕೂಗಳತೆ ದೂರದಲ್ಲಿ ಈ ದುರಂತ ನಡೆದುಬಿಟ್ಟಿದೆ.
ದುರಂತದಲ್ಲಿ 6 ಮಂದಿ ಸಾವನ್ನಪ್ಪಿದ್ದು, ಇನ್ನಷ್ಟು ಸತ್ತಿದ್ದು, ಮೃತರ ದೇಹವೆಲ್ಲವೂ ಛಿದ್ರಛಿದ್ರವಾಗಿದ್ದು, ಆ ಚಿತ್ರಗಳನ್ನು ಪ್ರಕಟಿಸಲು ಸಾಧ್ಯವಾಗದಷ್ಟು ಭೀಕರವಾಗಿವೆ. ಇನ್ನೊಂದೆಡೆ ಈ ಘಟನೆಗೆ ಹಾಗೂ ಜಿಲ್ಲೆಯಲ್ಲಿ ನಡೆಯುತ್ತಿರುವ ನಿಯಮಬಾಹಿರ ಕಲ್ಲು ಕ್ರಷರ್‌ಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ನೇರ ಕಾರಣ ಎಂದು ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಾರದ್ದು ಈ ಕ್ರಷರ್?
ದುರಂತಕ್ಕೆ ಕಾರಣವಾದ ಈ ಕ್ರಷರ್ ಗುಡಿಬಂಡೆಯ ಬಿಜೆಪಿ ಮುಖಂಡ ನಾಗರಾಜ್ ಹಾಗೂ ಆಂಧ್ರ ಪ್ರದೇಶದ ಶಿವಾರೆಡ್ಡಿ, ರಾಘವೇಂದ್ರ ರೆಡ್ಡಿ ಸಂಯುಕ್ತ ಮಾಲೀಕತ್ವದ್ದು ಎಂದು ತಿಳಿದುಬಂದಿದೆ. ಇವರ ಮಾಲೀಕತ್ವದ ಭ್ರಮರವಾಸಿನಿ ಎಂಬ ಕಲ್ಲು ಕ್ವಾರಿಯಲ್ಲಿ ಅನಧಿಕೃತವಾಗಿ ಶೇಖರಿಸಿಟ್ಟಿದ್ದ ಸ್ಪೋಟಕ ಜಿಲೆಟಿನ್ ವಸ್ತುಗಳನ್ನು ಪೊಲೀಸರ ಕಣ್ತಪ್ಪಿಸಿ ನಾಶಪಡಿಸಲು ನಡುರಾತ್ರಿ ಅರಣ್ಯ ಪ್ರದೇಶದತ್ತ ಕೊಂಡೊಯ್ಯುವ ವೇಳೆ ಈ ಸ್ಫೋಟ ಸಂಭವಿಸಿದೆ. ಈ ಕ್ವಾರಿಯಲ್ಲಿ ಕಾರ್ಯನಿರ್ವಹಿಸುತಿದ್ದ ಎಂಜಿನಿಯರ್, ಕಂಪ್ಯೂಟರ್ ಆಪರೇಟರ್ ಸಮೇತವಾಗಿ ಆರು ಮಂದಿ ಸ್ಥಳದಲ್ಲೇ ಧಾರುಣವಾಗಿ ಸಾವನ್ನಪ್ಪಿದ್ದಾರೆ.
ಗುಡಿಬಂಡೆ ನಾಗರಾಜ್
ಇನ್ನೊಂದೆಡೆ ಕ್ವಾರಿ ಮಾಲೀಕ ನಾಗರಾಜ್ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸುಧಾಕರ್ ಪರಮಾಪ್ತ ಎಂದು ಗೊತ್ತಾಗಿದ್ದು, ಆ ವ್ಯಕ್ತಿ ನಾಪತ್ತೆಯಾಗಿದ್ದಾನೆ.
ಹಿರೇನಾಗವಲ್ಲಿ ಗ್ರಾಮದ ರಾಮು, ಕಂಪ್ಯೂಟರ್ ಆಪರೇಟರ್, ಗಂಗಾಧರ, ನೇಪಾಳ ಮೂಲದ ಮಹೇಶ, ಎಂಜಿನಿಯರ್ ಉಮಾ ಕಾಂತ್, ಚೇಳೂರಿನ ಅಭಿ ಸಾವನ್ನಪ್ಪಿದ ನತದೃಷ್ಟರು. ಜಿಲೆಟೆನ್ ಸ್ಪೋಟಕಕ್ಕೆ ಆರೂ ದೇಹಗಳು ಛಿದ್ರಛಿದ್ರಗೊಂಡಿದ್ದು, ಮೃತದೇಹಗಳನ್ನು ನೋಡಲಾರದಷ್ಟು ಛಿದ್ರವಾಗಿದ್ದು, ಮೃತರ ಸಂಬಂಧಿಕರ ರೋಧನ ಮುಗಿಲುಮುಟ್ಟಿದೆ.
ಪಾರಾದ ವಾಹನ ಚಾಲಕ
ನಡುರಾತ್ರಿ ಟಾಟಾ ಎಸ್ ವಾಹನದಲ್ಲಿ ಸ್ಫೋಟಕಗಳನ್ನು ಸಾಗಿಸುತಿದ್ದ ಚಾಲಕ ರಿಯಾಜ್ ಎಂಬಾತ ಪ್ರಾಣಾಪಾಯದಿಂದ ಪಾರಾಗಿದ್ದು ಸದ್ಯ ಪೊಲೀಸ್ ವಶದಲ್ಲಿದ್ದಾನೆ. ಈತನಿಂದ ಮತ್ತಷ್ಟು ಮಾಹಿತಿ ಪಡೆಯಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ಬಂದ ಸಚಿವ ಸುಧಾಕರ್
ಪ್ರಕರಣಕ್ಕೆ ಸಂಭಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಘಟನಾ ಸ್ಥಳಕ್ಕೆ ಭೇಟಿ ನೀಟಿ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು; ಈ ಕ್ವಾರಿ ಅಧಿಕೃತವಾಗಿದೆ. ಕಳೆದ ತಿಂಗಳಲ್ಲಿ ರಾಜ್ಯದ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಜಿಲೆಟಿನ್ ಸ್ಪೋಟಕ ಪ್ರಕರಣದ ನಂತರ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸತತವಾಗಿ ಕ್ವಾರಿಗಳ ಮೇಲೆ ದಾಳಿ ಮಾಡಿ ಪರಿಶೀಲಿಸಿ ಕ್ರಮ ಕೈಗೊಂಡಿದ್ದರು ಅದರ ನಂತರ ಇದೀಗ ಈ ದುರ್ಘಟನೆ ನಡೆದಿದೆ ಎಂದರು.
ಈ ಕ್ವಾರಿಯ ಮೇಲೆ ಫೆಬ್ರವರಿ 7ರಂದು ದಾಳಿ ನಡೆಸಿ ಅನಧಿಕೃತವಾಗಿ ಸಂಗ್ರಹಿಸಿಟ್ಟುಕೊಂಡಿದ್ದ ಸ್ಪೊಟಕ ವಸ್ತುಗಳ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿತ್ತು. ಈ ಕ್ವಾರಿ ಮಾಲೀಕರ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಕ್ವಾರಿ ಮಾಲೀಕರು ನಾಪತ್ತೆಯಾಗಿದ್ದಾರೆ. ಇಲ್ಲಿ ಸಂಗ್ರಹಿಸಿಟ್ಟುಕೊಂಡಿದ್ದ ಸ್ಪೊಟಕ ವಸ್ತುಗಳನ್ನು ಪೊಲೀಸರು ಹಾಗೂ ಗಣಿ ಇಲಾಖೆ ಅಧಿಕಾರಿಗಳ ಭಯದಿಂದಾಗಿ ನಾಶಪಡಿಸಲು ಸಾಗಿಸುವ ವೇಳೆ ಈ ದುರಂತ ನಡೆದಿದೆ ಎಂದು ಮೇಲ್ನೋಟಕ್ಕೆ ಗೊತ್ತಾಗಿದೆ. ಎಂದರು ಸುಧಾಕರ್.
ಕ್ವಾರಿ ಮಾಲೀಕರು ಎಷ್ಟೇ ಪ್ರಭಾವಿಗಳಾದರೂ ಅವರ ವಿರುದ್ದ ಕ್ರಮ ಜರುಗಿಸಲಾಗುವುದು. ಇವನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದಿರುವ ಸಚಿವರು, ಇನ್ನು ಸ್ಪೋಟದಿಂದ ಮೃತರಾದ ಕಾರ್ಮಿಕರ ಪರಿಹಾರ ನೀಡುವ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು ಅವರು.
ಈ ಸಂದರ್ಭದಲ್ಲಿ ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ), ಕೇಂದ್ರ ವಲಯದ ಪ್ರತಾಪ್ ರೆಡ್ಡಿ, ಜಿಲ್ಲಾಧಿಕಾರಿ ಆರ್.ಲತಾ, ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಸೇರಿದಂತೆ ಜಿಲ್ಲೆಯ ಇನ್ನಿತರೆ ಅಧಿಕಾರಿಗಳು ಸ್ಥಳದಲ್ಲಿದ್ದರು.
ಬಂಧನಕ್ಕೆ ಆದೇಶ
ಈ ನಡುವೆ ಭ್ರಮರವಾಸಿನಿ ಕ್ರಷರ್ ಮಾಲೀಕರ ಬಂಧನಕ್ಕೆ ಸರಕಾರ ಆದೇಶ ನೀಡಿದ್ದು, ರಾತ್ರಿ ಸ್ಫೋಟದ ವಿಷಯ ತಿಳಿಯುತ್ತಿದ್ದಂತೆ ಮೂವರು ಮಾಲೀಕರು ನಾಪತ್ತೆಯಾಗಿದ್ದಾರೆ. ಗುಡಿಬಂಡೆಯ ಬಿಜೆಪಿ ಮುಖಂಡ ನಾಗರಾಜ್ ಹಾಗೂ ಆಂಧ್ರ ಪ್ರದೇಶದ ಶಿವಾರೆಡ್ಡಿ, ರಾಘವೇಂದ್ರ ರೆಡ್ಡಿ ಸಂಯುಕ್ತ ಮಾಲೀಕತ್ವದ್ದು ಎಂದು ತಿಳಿದುಬಂದಿದೆ. ಪೊಲೀಸರು ಇವರ ಬಂಧನಕ್ಕೆ ಬಲೆ ಬೀಸಿದ್ದು, ವಿವಿಧ ತಂಡಗಳನ್ನು ರಚಿಸಿಕೊಂಡು ಹುಡುಕಾಟ ಆರಂಭಿಸಿದ್ದಾರೆ ಪೊಲೀಸರು.
***
Comments 2