ಚಿಕ್ಕಬಳ್ಳಾಪುರ: ಜಿಲ್ಲೆಯ ಹಿರೇನಾಗವೇಲಿ ಕ್ರಷರ್ ಸ್ಫೋಟಕ್ಕೆ ಸಂಬಂಧಿಸಿದಂತೆ ಈವರೆಗೆ ಜಿಲ್ಲಾ ಪೊಲೀಸರು ಕ್ರಷರ್‌ನ ಇಬ್ಬರು ಮಾಲೀಕರು ಸೇರಿ ಒಟ್ಟು ಐವರನ್ನು ಬಂಧಿಸಿದ್ದಾರೆ. ಆದರೆ ಪ್ರಮುಖ ಆರೋಪಿಯಾಗಿರುವ ಕ್ರಷರ್ ಮಾಲೀಕ ಗುಡಿಬಂಡೆ ಬಿಜೆಪಿ ಮಖಂಡ ಹಾಗೂ ರೈಲ್ವೆ ಸಲಹಾ ಮಂಡಳಿ ಸದಸ್ಯ ಜಿ.ಎಸ್.ನಾಗರಾಜ್ ಇನ್ನೂ ಪತ್ತೆಯಾಗಿಲ್ಲ.
ಈ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್; ಆರೋಪಿಗಳಾದ ರಾಘವೇಂದ್ರ ರೆಡ್ಡಿ (ಎ2), ವೆಂಕಟಶಿವಾರೆಡ್ಡಿ (ಎ4) ಮಧುಸೂದನ ರೆಡ್ಡಿ (ಎ14), ಪ್ರವೀಣ್ (ಎ5), ಸ್ಫೋಟಕಗಳನ್ನು ಟಾಟಾ ಸ್ ಗಾಡಿಯಲ್ಲಿ ಸಾಗಿಸುತ್ತಿದ್ದ ವಾಹನ ಚಾಲಕ ರಿಯಾಜ್ (ಎ7) ನನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಕ್ರಷರ್‌ನ ಇನ್ನೊಬ್ಬ ಮಾಲೀಕನಾದ ಇಮ್ತಿಯಾಜ್ ದೇವನಹಳ್ಳಿ ಮೂಲದವರಾಗಿದ್ದು, ಎರಡು ತಿಂಗಳ ಹಿಂದೆ ಇವರು ನಿಧನರಾಗಿದ್ದಾರೆ.
ಈ ನಡುವೆ ಗುಡಿಬಂಡೆ ನಾಗರಾಜ್ ಬಂಧನಕ್ಕೆ ಬಲೆ ಬೀಸಲಾಗಿದ್ದು, ನಮ್ಮ ತಂಡಗಳು ಎಲ್ಲಡೆ ವ್ಯಾಪಕ ಶೋಧ ನಡೆಸುತ್ತಿವೆ ಎಂದು ಪೊಲೀಸ್ ವರಿಷ್ಠಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇನ್ನು ಸ್ಫೋಟಕಗಳನ್ನು ಸಾಗಿಸುತ್ತಿದ್ದ ರಿಯಾಜ್ ಕೂಡ ಗಾಯಗೊಂಡಿದ್ದು, ಆತನಿಗೆ ಚಿಕಿತ್ಸೆ ಕೊಡಿಸಿದ ನಂತರ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.