ಬೆಂಗಳೂರು: ರಾಜ್ಯ ಸರಕಾರ ಹಿರೇನಾಗವೇಲಿ ಸ್ಫೋಟ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿದ ಮರುದಿನವೇ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ನೀಡಿರುವ ಹೇಳಿಕೆಯೊಂದು ಎಲ್ಲರ ಹುಬ್ವೇರಿಸುವಂತೆ ಮಾಡಿದೆ.
ಸ್ಫೋಟಕ್ಕೆ ಮೃತಪಟ್ಟ ಯುವಕರು ಮದ್ಯ ಸೇವಿಸಿ ಪಾರ್ಟಿ ಮಾಡಿದ್ದೇ ಕಾರಣ ಬಂಧಿತ ಚಾಲಕ ರಿಯಾಜ್ ಹೇಳಿಕೆಯನ್ನು ಉಲ್ಲೇಖಿಸಿ ಹೇಳಿಕೆ ನೀಡಿರುವ ಸಚಿವರು, ಇಡೀ ಪ್ರಕರಣವನ್ನು ಮೃತ ದುರ್ದೈವಿಗಳ ತಲೆಗೆ ಕಟ್ಟುವ ಪ್ರಯತ್ನ ನಡೆಸುತ್ತಿದ್ದಾರೆ ಎಂಬ ಅನುಮಾನ ಹುಟ್ಟು ಹಾಕಿದ್ದಾರೆ.
ಇಷ್ಟಕ್ಕೂ ಸಚಿವರು ಹೇಳಿದ್ದೇನು?
- ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಸಚಿವರು ಹೇಳಿದ್ದಿಷ್ಟು:
- ಪ್ರಾಥಮಿಕ ತನಿಖೆಯಲ್ಲಿ ಸ್ಫೋಟಕಗಳನ್ನು ಕ್ವಾರಿಯಿಂದ ಒಂದೂವರೆ ಕಿಲೋಮೀಟರ್ ದೂರದಲ್ಲಿರುವ ಕೊಠಡಿಯೊಂದರಲ್ಲಿ ಇರಿಸಿದ್ದ ಅಂಶ ಗೊತ್ತಾಗಿದೆ. ಪೊಲೀಸರ ದಾಳಿ ಬಳಿಕ ಹೆದರಿದ ಮಾಲೀಕರು ಅದನ್ನು ಸಮೀಪದ ಕಾಡಿನಲ್ಲಿ ಬಿಸಾಡುವಂತೆ ಹೇಳಿದ್ದರಿಂದ ಸಿಬ್ಬಂದಿಗಳು ಅದನ್ನು ತೆಗೆದುಕೊಂಡು ಘಟನೆ ನಡೆದ ಸ್ಥಳಕ್ಕೆ ತೆರಳಿದ್ದಾರೆ.
- ಕ್ಯಾಂಪ್‌ಫೈರ್ ಮಾದರಿಯಲ್ಲಿ ಬೆಂಕಿ ಹಚ್ಚಿಕೊಂಡು ಅಲ್ಲೇ ಎಲ್ಲರೂ ಮದ್ಯ ಸೇವಿಸಿ ಪಾರ್ಟಿ ಮಾಡಿದ್ದಾರೆ. ಬಳಿಕ ಸ್ಫೋಟಕಗಳನ್ನು ಅದೇ ಬೆಂಕಿಗೆ ಎಸೆದಿದ್ದಾರೆ. ಅದರಿಂದ ಅನಾಹುತ ಸಂಭವಿಸಿತು ಎಂದು ಬದುಕುಳಿದಿರುವ ಚಾಲಕ ನೀಡಿರುವ ಹೇಳಿಕೆ ಮತ್ತು ಸ್ಥಳ ಪರಿಶೀಲನೆ ನಡೆಸಿದ ತಜ್ಞರು ನೀಡಿದ ಮಾಹಿತಿಯಿಂದ ಬೆಳಕಿಗೆ ಬಂದಿದೆ.
ಇದಿಷ್ಟನ್ನೂ ಸಚಿವ ಸುಧಾಕರ್ ಹೇಳಿದ್ದರೆ, ಮಂಗಳವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ನೀಡಿದ್ದ ಹೇಳಿಕೆ ಇದಕ್ಕೆ ತದ್ವಿರುದ್ಧವಾಗಿತ್ತು. ಪೆಟ್ರೋಲಿಯಂ ಜೆಲ್ ಹಾಗೂ ಅಮೋನಿಯಂ ನೈಟ್ರೇಟ್ ಉಳ್ಳ ಸ್ಫೋಟಕಗಳನ್ನು ಸಾಗಿಸುವಾಗ ಗಾಳಿಯಲ್ಲೇ ಸ್ಫೋಟವಾಗಿದೆ. ನೆಲದ ಮೇಲೆ ಸ್ಫೋಟ ಸಂಭವಿಸಿಲ್ಲ ಎಂದಿದ್ದರು. ಈ ಹೇಳಿಕೆ ನೀಡಿದಾಗ ಗೃಹ ಸಚಿವರ ಜತೆ ಸುಧಾಕರ್ ಕೂಡ ಇದ್ದರು.
ಬಸವರಾಜ ಬೊಮ್ಮಾಯಿ
ಗೃಹ ಸಚಿವರು ಹೇಳಿಕೆ ನೀಡುವಾಗ ಮೃತರು ಪಾರ್ಟಿ ಮಾಡಿದ್ದರು ಎಂಬ ಸಂಗತಿಯನ್ನೂ ಅಪ್ಪಿತಪ್ಪಿಯೂ ಹೇಳಿರಲಿಲ್ಲ. ಗೃಹ ಸಚಿವರು ಘಟನಾ ಸ್ಥಳಕ್ಕೆ ಭೇಟಿ ನೀಡುವ ಮುನ್ನವೇ ಪೊಲೀಸರು ರಿಯಾಜ್‌ನನ್ನು ಸಿಕ್ಕಾಪಟ್ಟೆ ಡ್ರಿಲ್ ಮಾಡಿದ್ದರು. ಸೋಮವಾರ ರಾತ್ರಿ ಸ್ಫೋಟ ಸಂಭವಿಸಿದ ನಂತರ ಕೆಲ ಗಂಟೆಗಳಲ್ಲಿ ಆತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಚಿಕ್ಕಬಳ್ಳಾಪುರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ನಂತರ ಆತನಿಂದ ಮಾಹಿತಿಯನ್ನು ಹೊರತೆಗೆದಿದ್ದರು.
ರಿಯಾಜ್
ಹೀಗಾಗಿ ಘಟನೆ ನಡೆದ ದಿನದ ರಾತ್ರಿಯಿಂದ ನಡೆದ, ಇಡೀ ಸ್ಫೋಟ ಪ್ರಕರಣಕ್ಕೆ ಹೈ ವಿಟ್ನೆಸ್ ಆಗಿರುವ ರಿಯಾಜ್ ಕೊಟ್ಟ ಎಲ್ಲ ಪ್ರಾಥಮಿಕ ಮಾಹಿತಿಯನ್ನು ಜಿಲ್ಲಾ ಪೊಲೀಸರು ಗೃಹ ಸಚಿವರಿಗೆ ಹೇಳದೇ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮಾತ್ರ ಶೇರ್ ಮಾಡಿದರಾ? ಎಂಬ ಪ್ರಶ್ನೆ ಎದ್ದಿದೆ.
ಸಿಐಡಿ ತನಿಖೆಯಿಂದ ಸತ್ಯ ಹೊರಬಹುದು ಎಂದು ಜನ ನಂಬಿದ್ದಾರೆ! ಆದರೆ, ತನಿಖೆಯ ಜಾಡು ಆರಂಭದಲ್ಲೇ ಹಳಿ ತಪ್ಪುತ್ತಿದೆಯಾ ಎಂಬ ಅನುಮಾನವೂ ಶುರುವಾಗಿದೆ!!
- ಈ ಸುದ್ದಿಯನ್ನು ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ..