ಚಿಕ್ಕಬಳ್ಳಾಪುರ: ಹಿರೇವಾಗವೇಲಿ ಸ್ಫೋಟದ ಪ್ರಮುಖ ಆರೋಪಿ ಗುಡಿಬಂಡೆಯ ಬಿಜೆಪಿ ಮುಖಂಡ ಹಾಗೂ ದಕ್ಷಿಣ ರೈಲ್ವೆಯ ಸಲಹಾ ಮಂಡಳಿ ಸದಸ್ಯ ಜಿ.ಎಸ್.ನಾಗರಾಜ್ ಕೊನೆಗೂ ಪೊಲೀಸರಿಗೆ ಸಿಕ್ಕಿ ಆಗಿದೆ.
ಆರು ಮಂದಿಯನ್ನು ಅತ್ಯಂತ ಧಾರುಣವಾಗಿ ಬಲಿ ತೆಗೆದುಕೊಂಡು ಈ ಸ್ಫೋಟ ಸಂಭವಿಸುತ್ತಿದ್ದಂತೆ ನಾಗರಾಜ್ ನಾಪತ್ತೆಯಾಗಿದ್ದರು. ತಮಿಳುನಾಡಿನ ಹೊಸೂರಿನಲ್ಲಿ ಕ್ವಾರಿ ಮಾಲೀಕನೂ ಆದ ನಾಗರಾಜ್ ಹಾಗೂ ಸ್ಫೋಟಕಗಳನ್ನು ನಡೆಸುತ್ತಿದ್ದ ಗಣೇಶ್ ಪೊಲೀಸ್ ಬಲೆಗೆ ಬಿದ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇವರಿಬ್ಬರೂ ಸಿಕ್ಕಿಬೀಳುವುದರೊಂದಿಗೆ ಬಂಧಿತರ ಸಂಖ್ಯೆ 7ಕ್ಕೆ ಏರಿಕೆಯಾಗಿದ್ದು, ಇನ್ನೂ ಐವರು ಆರೋಪಿಗಳಿಗಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ.
ಆರೋಪಿ ನಾಗರಾಜ್ ದುರಂತ ಸಂಭವಿಸಿದ ಕ್ವಾರಿ ಮಾಲೀಕನಷ್ಟೇ ಅಲ್ಲದೆ, ಗುಡಿಬಂಡೆ ತಾಲ್ಲೂಕಿನ ಬಿಜೆಪಿ ಮುಖಂಡ ಕೂಡ. ಇತ್ತೀಚೆಗೆ ದಕ್ಷಿಣ ರೈಲ್ವೆ ಸಲಹಾ ಸಮಿತಿ ಸದಸ್ಯ ಸ್ಥಾನಕ್ಕೆ ನೇಮಕವಾಗಿದ್ದ. ಇನ್ನೊಬ್ಬ ಆರೋಪಿ ಗಣೇಶ್ ಕ್ವಾರಿಗೆ ಜಿಲೆಟಿನ್ ಸ್ಫೋಟಕಗಳನ್ನ ಸರಬರಾಜು ಮಾಡುತ್ತಿದ್ದ ಎನ್ನಲಾಗಿದೆ.
ಉಳಿದಂತೆ ಈಗಾಗಲೇ ರಾಘವೇಂದ್ರ ರೆಡ್ಡಿ, ವೆಂಕಟಶಿವಾರೆಡ್ಡಿ, ಪ್ರವೀಣ್, ಮಧುಸೂಧನ್, ಚಾಲಕ ರಿಯಾಜ್‌ನನ್ನು ಬಂಧಿಸಲಾಗಿತ್ತು.