ಬೆಂಗಳೂರು: ಆರೋಗ್ಯ ಮತ್ತು ವೈದ್ಯ ಶಿಕ್ಷಣ ಖಾತೆ ಸಚಿವ ಡಾ.ಕೆ.ಸುಧಾಕರ್ ವಿರುದ್ಧ ಹೊನ್ನಾಳಿ ಶಾಸಕ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡುತ್ತ ತಮ್ಮ ಅಸಮಾಧಾನ ಹೊರಹಾಕಿದ ಅವರು; “ಸಚಿವರೆಂದರೆ ದೇವಲೋಕದಿಂದ ಇಳಿದು ಬಂದವರಾ? ನಾವೇನು ಬಿಟ್ಟಿ ಬಿದ್ದಿದ್ದೀವಾ? ಕೆಲ ಸಚಿವರು ಕೈಗೇ ಸಿಗೋದಿಲ್ಲ. ಅವರ ಪಿಎಗಳು, ಪಿಎಸ್‍ಗಳು ಮೊಬೈಲ್ ಕಾಲ್ ರಿಸೀವ್ ಮಾಡಲ್ಲ” ಎಂದು ರೇಣುಕಾಚಾರ್ಯ ಹರಿಹಾಯ್ದರು.
ಕಾಂಗ್ರೆಸ್ ಮತ್ತು ಜೆಡಿಎಸ್‍ನಿಂದ ಬಂದ ಎಲ್ಲ ಸಚಿವರು ಇದೇ ರೀತಿ ಮಾಡುತ್ತಿದ್ದಾರೆ ಎಂದು ನಾನು ಹೇಳುವುದಿಲ್ಲ. ಕೆಲ ಸಚಿವರು ಮಾತ್ರ ನಮಗೆ ಕೈಗೆ ಸಿಗುತ್ತಿಲ್ಲ. ಆರೋಗ್ಯ ಇಲಾಖೆಗೆ ಸಂಬಂಧಿಸಿದ ಹೊನ್ನಾಳಿ ಕ್ಷೇತ್ರದ ಕೆಲಸ ಮಾಡಿಸಿಕೊಡುವಂತೆ ನಾನು ಸಚಿವ ಡಾ.ಸುಧಾಕರ್ ಅವರನ್ನು ಹತ್ತಾರು ಸಲ ಭೇಟಿ ಆಗಿದ್ದೇನೆ, ವಿಧಾನಸೌಧವೂ ಸೇರಿದಂತೆ ಅವರ ಮನೆ ಬಾಗಿಲಿಗೇ ಹೋಗಿ ಮನವಿ ಪತ್ರ ನೀಡಿದ್ದೇನೆ. ಪತ್ರವನ್ನೂ ಬರೆದಿದ್ದೇನೆ. ಆದರೂ ಏನೂ ಪ್ರಯೋಜನ ಆಗಿಲ್ಲ. ನನ್ನ ಕ್ಷೇತ್ರದ ಸಮಸ್ಯೆಗಳಿಗೆ ಸುಧಾಕರ್ ಸ್ಪಂದಿಸಿಲ್ಲ. ನನ್ನ ಕ್ಷೇತ್ರದ ಕೆಲಸಗಳ ಬಗ್ಗೆ ರಾಜಿ ಆಗುವ ಮಾತೇ ಇಲ್ಲ ಎಂದು ರೇಣುಕಾಚಾರ್ಯ ದೂರಿದರು.
ನಾನು ಮೂರು ಬಾರಿ ಶಾಸಕನಾಗಿ ಆಯ್ಕೆ ಆಗಿದ್ದೇನೆ. ಹೊನ್ನಾಳಿ ಕ್ಷೇತ್ರದ ಜನರ ಆಶೋತ್ತರಗಳನ್ನು ನಾನು ಈಡೇರಿಸಬೇಕಾಗಿದೆ. ಸುಧಾಕರ್ ಅವರಂತೂ ಕೈಗೇ ಸಿಗುವುದಿಲ್ಲ. ಅವರ ಜತೆಗೆ ಇನ್ನೂ ಐದಾರು ಸಚಿವರು ಸಿಗುವುದೇ ಇಲ್ಲ. ಅವರು ಎಲ್ಲಿ ಇರುತ್ತಾರೆ? ಎಲ್ಲಿ ಭೇಟಿಯಾಗಬೇಕು? ಎಂಬುದೇ ಗೊತ್ತಾಗುತ್ತಿಲ್ಲ.
-ಎಂ.ಪಿ.ರೇಣುಕಾಚಾರ್ಯ
ಸಚಿವ ಸುಧಾಕರ್ ವರ್ತನೆ ಸರಿ ಇಲ್ಲ. ಅವರೂ ಕಾಲ್ ಪಿಕ್ ಮಾಡಲ್ಲ, ಅವರ ಪಿಎಗಳು ಕೂಡ ಕಾಲ್ ಪಿಕ್ ಮಾಡ್ತಿಲ್ಲ. ಎರಡೆರಡು ಖಾತೆಗಳನ್ನು ಡಿಮಾಂಡ್ ಮಾಡಿ ಪಡೆಯಲು ಆಗುತ್ತದೆ. ಆದರೆ ಶಾಸಕರ ಕ್ಷೇತ್ರಗಳ ಕೆಲಸಗಳನ್ನು ಮಾಡಿಕೊಡಲು ಆಗುವುದಿಲ್ಲವೇ ಎಂದು ಕಿಡಿಕಾರಿದ ರೇಣುಕಾಚಾರ್ಯ; ಸುಧಾಕರ್ ಒಬ್ಬರಿಂದಲೇ ಈ ಸರಕಾರ ಬಂದಿಲ್ಲ. ಇವರ ಜತೆಯಲ್ಲೇ ಐದಾರು ಸಚಿವರದ್ದು ಇದೇ ಗೋಳು.ನಾನು ಕೂಡ ಪಕ್ಷಕ್ಕೆ ದುಡಿದಿದ್ದೇನೆ, ಜೈಲಿಗೂ ಹೋಗಿ ಬಂದಿದ್ದೇನೆ. ಪಕ್ಷದ ಸಂಘಟನೆ ಮಾಡಿ ಮೂರು ಸಲ ಗೆದ್ದಿದ್ದೇನೆ. ಆದರೆ ಪಕ್ಷಕ್ಕಾಗಿ ಕೆಲವರ ಕೊಡುಗೆ ಶೂನ್ಯ. ನನಗಂತೂ ತೀವ್ರ ಅವಮಾನವಾಗಿದೆ ಎಂದು ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದರು.
Comments 1