ಗುಡಿಬಂಡೆ: ರಾಜ್ಯ ಬಿಜೆಪಿ ಸರಕಾರ ನ್ಯಾ.ಎ.ಜೆ.ಸದಾಶಿವ ವರದಿಯನ್ನು ಮುಂಬರುವ ಬಜೆಟ್ ಅಧಿವೇಶನದಲ್ಲಿ ಜಾರಿ ಮಾಡುವುದಾಗಿ ಘೋಷಿಸಬೇಕು. ಇಲ್ಲದಿದ್ದರೆ ಸರಕಾರಕ್ಕೆ ಭವಿಷ್ಯ ಇರುವುದಿಲ್ಲ ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಹೆಣ್ಣೂರು ಲಕ್ಷ್ಮೀನಾರಾಯಣ ಎಚ್ಚರಿಕೆ ನೀಡಿದ್ದಾರೆ.
ನ್ಯಾ.ಸದಾಶಿವ ವರದಿ ಜಾರಿಗಾಗಿ ಒತ್ತಾಯಿಸಿ ರಾಜ್ಯವ್ಯಾಪಿ ಜನವರಿ 20ರಿಂದ ಸಂಚಾರ ಮಾಡುತ್ತೀರುವ ಚೈತನ್ಯ ರಥಯಾತ್ರೆ ಪಟ್ಟಣಕ್ಕೆ ಆಗಮಿಸಿದ ಸಮಯದಲ್ಲಿ ಮಾತನಾಡಿದ ಅವರು; ಮಾರ್ಚ್ ತಿಂಗಳಿನಲ್ಲಿ ನಡೆಯುವ ವಿಧಾನ ಮಂಡಲ ಅಧಿವೇಶನದಲ್ಲಿ ರಾಜ್ಯ ಸರಕಾರ ವರದಿಯನ್ನು ಜಾರಿ ಮಾಡಬೇಕು. ಇಲ್ಲವಾದರೇ ನಿಮ್ಮ ಕುರ್ಚಿಗಳಿಂದ ಕೆಳಗೆ ಇಳಿಸುವ ಕೆಲಸ ನಮಗೆ ಗೊತ್ತಿದೆ ಎಂದು ಸರಕಾರವನ್ನು ಉದ್ದೇಶಿಸಿ ಹೇಳಿದರು.
ಮಾದಿಗರ ವಿರಾಟ್ ಶಕ್ತಿ ಪ್ರದರ್ಶನ
ಮಾರ್ಚ್ ತಿಂಗಳು ಎಂಟನೇ ತಾರೀಖು ಬೆಂಗಳೂರಿನಲ್ಲಿ ಮಾದಿಗರ ವಿರಾಟ್ ಶಕ್ತಿ ಪ್ರದರ್ಶನವನ್ನು ಮಾಡಲು ಇಡೀ ರಾಜ್ಯದ ಉದ್ದಗಲಕ್ಕೂ ಸಂಚಾರ ಮಾಡಿ ಮಾದಿಗ ಜನಾಂಗದಲ್ಲಿ ಅರಿವು ಮೂಡಿಸುವ ಸಲುವಾಗಿ ರಥಯಾತ್ರೆಯ ಮೂಲಕ ಸಂಚಾರ ಮಾಡುತ್ತೀದ್ದೇವೆ. ಮಾದಿಗರ ವಿರಾಟ್ ಶಕ್ತಿ ಪ್ರದರ್ಶನಕ್ಕೆ ರಾಜ್ಯದ ಎಲ್ಲಾ ಹಳ್ಳಿ ಪ್ರದೇಶಗಳಿಂದ ಲಕ್ಷಾಂತರ ಜನರು ಕುಟುಂಬಗಳ ಸಮೇತ ಬರುತ್ತಾರೆ ಎಂದು ತಿಳಿಸಿದರು ಲಕ್ಷ್ಮೀನಾರಾಯಣ.
ಸುಪ್ರೀಂ ಕೋರ್ಟ್ ತೀರ್ಪಿನಂತೆ ಮತ್ತು ಶಿರಾ ಉಪ ಚುನಾವಣೆಯಲ್ಲಿ ಬಿಜೆಪಿ ಸರಕಾರ ಮಾದಿಗರಿಗೆ ನೀಡಿದ ಭರವಸೆಯಂತೆ ಕೂಡಲೇ ಕರ್ನಾಟಕದಲ್ಲಿ ನ್ಯಾ.ಸದಾಶಿವ ಆಯೋಗದ ವರದಿ ಜಾರಿ ಮಾಡಿ ಒಳ ಮೀಸಲಾತಿ ನೀಡಬೇಕೆಂದು ಅವರು ಆಗ್ರಹಿಸಿದರು.
ಪರಿಶಿಷ್ಟ ಜಾತಿ ಪಟ್ಟಿಯಲ್ಲಿ 101 ಜಾತಿ
ರಾಜ್ಯದಲ್ಲಿ ಬಹುಪಾಲು ಸಂಖ್ಯೆಯಲ್ಲಿ ಮಾದಿಗ ಜನಾಂಗವಿದ್ದು, ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ಸರಕಾರ ಜಾರಿ ಮಾಡಬೇಕು. ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಎಲ್ಲಾ ಕ್ಷೇತ್ರಗಳಲ್ಲಿ ಅನ್ಯಾಯವಾಗಿರುವ ಜಾತಿ ಯಾವುದಾದರೂ ಇದ್ದರೇ ಅದು ಮಾದಿಗ ಜಾತಿ ಮಾತ್ರ. ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ 101 ಜಾತಿಗಳು ಇದ್ದು, ಇದರಲ್ಲಿ ಮಾದಿಗ ಜನಾಂಗಕ್ಕೆ ಮೀಸಲಾತಿ ಸಿಗದೇ ಅಭಿವೃದ್ದಿಯಲ್ಲಿ ಹಿನ್ನಡೆಯನ್ನು ಅನುಭವಿಸುವಂತಾಗಿದೆ ಎಂದು ಅವರು ಹೇಳಿದರು.
ಇನ್ನೂ ಅನೇಕ ವಿದ್ಯಾವಂತರು ವಿದ್ಯಾಭ್ಯಾಸವನ್ನು ಪಡೆದು ಉದ್ಯೋಗ ಸಿಗದೇ ಬದುಕುಗಳನ್ನು ರೂಪಿಸಿಕೊಳ್ಳಲು ಸಾಧ್ಯವಾಗದ ಪರಿಸ್ಥಿಯಲ್ಲಿ ಇದ್ದಾರೆ. ಆದ್ದರಿಂದ ನಮ್ಮ ಮಾದಿಗರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ಜಾರಿ ಮಾಡಬೇಕು ಎಂದು ಈ ವೇಳೆ ಒತ್ತಾಯಿಸಿದರು ಅವರು.
ಚೈತನ್ಯ ರಥ ಯಾತ್ರೆಯಲ್ಲಿ ಆಗಮಿಸಿದ ಮುಖಂಡರಿಗೆ ಪುಷ್ಪ ಮಾಲೆಗಳನ್ನು ಹಾಕಿ ಹೂಗಳನ್ನು ಚೆಲ್ಲಿ ತಮಟೆ ವಾದ್ಯಗಳಿಂದ ಸ್ವಾಗತವನ್ನು ಕೋರಲಾಯಿತು. ಈ ವೇಳೆ ಮಾದಿಗ ಮೀಸಲಾತಿಯ ಹೋರಾಟದ ಮುಖಂಡರಾದ ಅಂಬಣ್ಣ ಅರೋಲಿಕರ್, ದಿಲೀಪ್ ಕುಮಾರ್, ಬೀಚಗಾನಹಳ್ಳಿ ನಾರಾಯಣಸ್ವಾಮಿ, ಪಸಪಲೋಡು ಚಲಪತಿ, ಕಡೇಹಳ್ಳಿ ಕದಿರಪ್ಪ, ಜೀವಿಕ ಚನ್ನರಾಯಪ್ಪ, ಜೀವಿಕ ರತ್ನಮ್ಮ, ಬ್ರಾಹ್ಮಣರಹಳ್ಳಿ ನರಸಿಂಹಮೂರ್ತಿ, ಶ್ರೀನಿವಾಸ ಎಮ್, ಎನ್.ನಾರಾಯಣಪ್ಪ, ಡಿ.ಎನ್.ನರಸಿಂಹಪ್ಪ, ನಾಗರಾಜು ಸೇರಿ ಮುಂತಾದವರು ಇದ್ದರು.