ಮಹಾರಾಷ್ಟ್ರ ಗಡಿ ಪ್ರದೇಶಗಳಿಗೆ ಕೊಟ್ಟಷ್ಟೇ ಮಹತ್ತ್ವವನ್ನು ಚಿಕ್ಕಬಳ್ಳಾಪುರ ಗಡಿ ಪ್ರದೇಶಗಳಿಗೂ ಕೋಡಲೇಬೇಕು: ಕೆ.ಅಮರನಾರಾಯಣ
ಸಂದರ್ಶನ: ಪಿ.ಕೆ.ಚನ್ನಕೃಷ್ಣ ಮತ್ತು ಎಂ.ಕೃಷ್ಣಪ್ಪ ಚಿಕ್ಕಬಳ್ಳಾಪುರ
- ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ಒಂದು ದೊಡ್ಡ ಗೌರವ. ಹೀಗಾಗಿ ಇಂಥ ಗೌರವ ಸಿಕ್ಕಿದಾಗ ಸಂತೋಷವಾಗುತ್ತದೆ, ಸಹಜ. ಆದರೆ, ಮಹತ್ವದ ಹೊಣೆಗಾರಿಕೆಯೂ ಹೌದು. ಸಮ್ಮೇಳನದ ವೇದಿಕೆಯಿಂದ ತಾವು ಇಡೀ ಜಿಲ್ಲೆಗೆ ನೀಡುವ ಸಂದೇಶವೇನು?
ನಿಜ, ಖಂಡಿತಾ ಸಂತೋಷ ಆಗುತ್ತದೆ. ಏಕೆಂದರೆ, ಇದು ನಮ್ಮ ನೆಲದಲ್ಲಿ ನಡೆಯುತ್ತಿರುವ ಕನ್ನಡದ ಹಬ್ಬ, ನುಡಿ ಜಾತ್ರೆ. ಇದು ಅರ್ಥಪೂರ್ಣವಾಗಿರಬೇಕು. ಆದರೆ, ಅದೊಂದು ಮಹತ್ತ್ವದ ಜವಾಬ್ದಾರಿ ಎಂಬುದರ ಅರಿವು ನನಗಿದೆ. ಏಕೆಂದರೆ; ಜಿಲ್ಲೆಯು ಜ್ವಲಂತ ಸಮಸ್ಯೆಗಳನ್ನು ಎದುರಿಸುತ್ತಿದೆ. ಅದರಲ್ಲಿ ನೀರಾವರಿ ಸಮಸ್ಯೆ ಮುಖ್ಯವಾದದ್ದು. ಈ ಬಗ್ಗೆ ನಾನು ಮಾತನಾಡುತ್ತೇನೆ. ಅದಕ್ಕೊಂದು ಶಾಶ್ವತ ಪರಿಹಾರ ಸಿಗಲೇಬೇಕು ಎನ್ನುವುದು ನನ್ನ ಅಭಿಲಾಶೆ. ಇನ್ನು ಜಿಲ್ಲೆಯ ಅನೇಕ ಸಮಸ್ಯೆಗಳ ಮೇಲೆ ಖಂಡಿತಾ ಬೆಳಕು ಚೆಲ್ಲುತ್ತೇನೆ. ನಾಯಕರು, ಅಧಿಕಾರಿಗಳು ಮಾತ್ರವಲ್ಲದೆ ಪ್ರತಿಯೊಬ್ಬ ವ್ಯಕ್ತಿ ನಮ್ಮ ನೆಲಕ್ಕೆ ಸಲ್ಲಿಸಬೇಕಾದ ಸೇವೆಯ ಬಗ್ಗೆ ನೆನಪು ಮಾಡುತ್ತೇನೆ. ಒಟ್ಟಾರೆ, ನನ್ನ ಜೀವನದಲ್ಲಿ ಈ ಗೌರವ ಬಹಳ ದೊಡ್ಡದು, ವಿಶೇಷವಾದದ್ದು. ಹೀಗಾಗಿ ನನಗೆ ಅವರ್ಣನೀಯ ಆತ್ಮ ಸಂತೋಷವಾಗಿದೆ.
ಹಸಿರ ಜೀವಿಯಷ್ಟೇ ಅಲ್ಲ ಸರಳ ಜೀವಿ..
- ಅದನ್ನು ಇನ್ನೂ ಸ್ವಲ್ಪ ವಿವರಿಸಿ ಹೇಳುವಿರಾ? ಇಡೀ ಸಮ್ಮೇಳನದಲ್ಲಿ ತಮ್ಮ ಅಭಿಪ್ರಾಯಗಳು ಧ್ವನಿಸುವಂತೆ ಮಾಡಲು ಏನೆಲ್ಲ ಯೋಚನೆಗಳು ತಮಗಿವೆ?
ನಾನು ಜಿಲ್ಲಾಧಿಕಾರಿ ಆಗಿದ್ದವನು. ಅದರಲ್ಲೂ ಉತ್ತರ ಕನ್ನಡ, ಚಿತ್ರದುರ್ಗ ಮತ್ತು ಚಾಮರಾಜನಗರದಂಥ ಗಡಿ ಜಿಲ್ಲೆಗಳಲ್ಲಿ ಕೆಲಸ ಮಾಡಿದವನು. ಆ ಹೊತ್ತಿನಲ್ಲೇ ನಾನು ಗ್ರಾಮ ವಾಸ್ತವ್ಯ ಮಾಡಿ ಜನರ ಜತೆ ಬೆರೆತು ಅವರ ಕಷ್ಟಸುಖಗಳನ್ನು ಅತ್ಯಂತ ನಿಕಟವಾಗಿ ಕಂಡವನು. ಹೀಗಾಗಿ ಜನರ ಸಮಸ್ಯೆಗಳು ನನಗೆ ಚಿರಪರಿಚಿತ. ಅವುಗಳ ಪರಿಹಾರದ ಬಗ್ಗೆಯೂ ನನಗೆ ಸ್ಪಷ್ಟತೆ ಇದೆ. ಹೀಗಾಗಿ ಚಿಕ್ಕಬಳ್ಳಾಪುರ ಜಿಲ್ಲೆ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ನಾನು ಭಾಗಿಯಾಗುವ ಎಲ್ಲ ಗೋಷ್ಠಿಗಳಲ್ಲೂ ಖಂಡಿತಾ ಮಾತನಾಡುತ್ತೇನೆ. ಒಂದು ಸ್ಪಷ್ಟ ಅಭಿಪ್ರಾಯ ರೂಪಿಸಲು ಪ್ರಯತ್ನ ಮಾಡುತ್ತೇನೆ. ಗಡಿ ಜಿಲ್ಲೆಯಾದ ನಮ್ಮ ನೆಲದಲ್ಲಿ ಕನ್ನಡ ವಾತಾವರಣ ಸೃಷ್ಟಿ ಮಾಡುವುದು, ಕನ್ನಡದ ಕೆಲಸಗಳ ಬಗ್ಗೆ ಪ್ರೇರಣೆ ನೀಡುವುದು, ಕನ್ನಡ ಶಾಲೆಗಳನ್ನು ಉಳಿಸುವುದು, ಕನ್ನಡ ಸಾಹಿತ್ಯದ ಸೃಷ್ಟಿಯ ಬಗ್ಗೆ ಆಶಾದಾಯಕ ವಾತಾವರಣ ಸೃಜಿಸುವುದು, ಆಂಧ್ರ ಪ್ರದೇಶಕ್ಕೆ ಹೊಂದಿಕೊಂಡಿರುವ ಗಡಿ ತಾಲ್ಲೂಕುಗಳಲ್ಲಿ ಕನ್ನಡವು ಸಮೃದ್ಧವಾಗಿ ಬೆಳೆಸುವುದು, ಅದರ ಜತೆಗೆ ನನ್ನ ಇವತ್ತಿನ ನಿಷ್ಠೆಯ ಕಾಯಕವಾಗಿರುವ ಪರಿಸರ ಸೇವೆಯ ಬಗ್ಗೆ ಅರಿವು ಮೂಡಿಸುವುದು ಮಾಡುತ್ತೇನೆ. ನನ್ನ ಮಾತುಗಳಿಗೆ ಆಸಕ್ತರು ಸಮ್ಮೇಳನದಲ್ಲಿ ಕಿವಿಗೊಡುತ್ತಾರೆಂಬ ಖಚಿತ ನಂಬಿಕೆ ನನಗಿದೆ.
- ಬೆಂಗಳೂರಿಗೆ ಹತ್ತಿರದಲ್ಲಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ದೊಡ್ಡ ಪಟ್ಟಿಯನ್ನೇ ಮಾಡುವಷ್ಟು ಸಮಸ್ಯೆಗಳಿವೆ. ಇವುಗಳನ್ನು ತಾವು ನೋಡುವ ದೃಷ್ಟಿಕೋನ ಹೇಗೆ?
*ನಾನು ಮೊದಲೇ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ ಆಗಿ ಕೆಲಸ ಮಾಡಿದವನು. ಈಗ ನಿವೃತ್ತಿಯಾದ ಮೇಲೆ ಯೋಜನಾ ಮಂಡಳಿಯ ಸಲಹಾ ಸಮಿತಿ ಸದಸ್ಯನಾಗಿ ಕೆಲಸ ಮಾಡುತ್ತಿದ್ದೇನೆ. ಹೀಗಾಗಿ ಸಮಸ್ಯೆಗಳನ್ನು ನಾನು ಆಳವಾಗಿ ಬಲ್ಲೆ. ಹಾಗೆ ನೋಡಿದರೆ, ಸಮಸ್ಯೆಗಳು ಇಲ್ಲದ ಜಾಗವೇ ಇಲ್ಲ. ಒಂದೊಂದು ಜಿಲ್ಲೆಗೂ ಒಂದೊಂದು ರೀತಿಯ ಸಮಸ್ಯೆಗಳಿರುತ್ತವೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ಸಮಸ್ಯೆ ಇಲ್ಲದ ಜಾಗವೇ ಇಲ್ಲ. ಅವುಗಳನ್ನು ಜೀವಂತ ಮತ್ತು ಜ್ವಲಂತ ಸಮಸ್ಯೆಗಳು ಎಂದು ವಿಂಗಡಿಸಬಹುದು. ಆದರೆ, ಅವುಗಳನ್ನು ಹಾಗೆಯೇ ಬಿಡಬಾರದು. ಅಲ್ಪಾವಧಿಯಲ್ಲಿ ಅಥವಾ ದೀರ್ಘಾವಧಿಯಲ್ಲಿ ಪರಿಹರಿಸಬೇಕು. ದೀರ್ಘಾವಧಿ ಪರಿಹಾರ ಎಂದಾಗ ವೈಜ್ಞಾನಿಕವಾಗಿ ಚಿಂತಿಸಿ, ಆಲೋಚಿಸಿ ಮಾಡಬೇಕು. ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸ್ಥಳೀಯ ಅಗತ್ಯಕ್ಕೆ ತಕ್ಕಂತೆ ಇವುಗಳನ್ನು ಪರಿಹಾರ ಮಾಡಬೇಕು. ಜಿಲ್ಲೆಯಲ್ಲಿ ಜಿಲ್ಲಾಡಳಿತವೇ ಸರಕಾರ. ನಮ್ಮ ಜಿಲ್ಲೆಯಲ್ಲೂ ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನವನ್ನು ನಾವು ಕಾಣುತ್ತಿದ್ದೇವೆ. ಆದರೆ, ನೀರಿನಂಥ ಜ್ವಲಂತ ಸಮಸ್ಯೆ ಹಾಗೆಯೇ ಇದೆ. ಇದು ತುರ್ತಾಗಿ ಬಗೆಹರಿಯಬೇಕು. ನಮ್ಮ ಜಿಲ್ಲೆಯ ಅಭಿವೃದ್ಧಿ ನೀರಿನೊಂದಿಗೆ ಥಳುಕು ಹಾಕಿಕೊಂಡಿದೆ ಎಂಬ ಸಂಗತಿಯನ್ನು ಯಾರೂ ಮರೆಯಬಾರದು. ಎಲ್ಲ ಸಮಸ್ಯೆಗಳಿಗೂ ನೀರೇ ಪರಿಹಾರ.
ಕೆ.ಅಮರನಾರಾಯಣ ದಂಪತಿ.
- ನೀರಿನ ಸಮಸ್ಯೆಯನ್ನು ನಾವು ಬಗೆಹರಿಸಿಕೊಳ್ಳುವ ಬಗೆ ಹೇಗೆ? ದೊಡ್ಡ ಯೋಜನೆಗಳಿಂದ ಇದು ಸಾಧ್ಯವೇ?
ನನ್ನ ಪ್ರಕಾರ ಚಿಕ್ಕಬಳ್ಳಾಪುರ ಜಿಲ್ಲೆ ಎದುರಿಸುತ್ತಿರುವ ದೊಡ್ಡ ಸಮಸ್ಯೆ ನೀರಿನದ್ದೇ. ನಮ್ಮ ರಾಜ್ಯದ 76 ತಾಲ್ಲೂಕುಗಳಲ್ಲಿ ಜಲಕ್ಷಾಮ ಇದೆ. ಚಿಕ್ಕಬಳ್ಳಾಪುರದ ಎಲ್ಲ ತಾಲ್ಲೂಕುಗಳಲ್ಲೂ ಈ ಬಿಕ್ಕಟ್ಟು ಇದೆ. ನಾವು ಭೂಗರ್ಭದಲ್ಲಿರುವ ಎಲ್ಲ ಜಲವನ್ನು ಬಗೆದುಬಿಟ್ಟಿದ್ದೇವೆ. ಈಗ ವಿಷಯುಕ್ತ ನೀರು ಕುಡಿಯುವ ಕಡೆ ಹೋಗುತ್ತಿದ್ದೇವೆ. ಈಗಲೇ, ಈ ಕ್ಷಣದಲ್ಲೇ ನಾವು ಎಚ್ಚೆತ್ತುಕೊಳ್ಳಲೇಬೇಕು. ಪರ್ಯಾಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲೇಬೇಕು. ಅದು ಎತ್ತಿಹೊಳೆ ಯೋಜನೆಯ ನೀರೇ ಇರಬಹುದು ಅಥವಾ ಬೆಂಗಳೂರಿನಿಂದ ಬರುತ್ತಿರುವ ಸಂಸ್ಕರಿತ ನೀರೇ ಇರಬಹುದು. ಬದಲಿ ಜಲಮೂಲಗಳನ್ನು ಹುಡುಕಿಕೊಂಡು ಎಚ್ಚರ ವಹಿಸಬೇಕು. ಇನ್ನು, ನಮ್ಮ ಜಿಲ್ಲೆಯಲ್ಲಿ ಬೀಳುವ ಮಳೆ ಬಹಳ ಕಡಿಮೆ. ಕೇವಲ 747 ಮಿ.ಮೀ ಮಳೆಯಷ್ಟೇ ಆಗುತ್ತದೆ. ಬೆಂಗಳೂರಿನಲ್ಲಿ 1,000 ಮಿ.ಮೀ.ಗೂ ಹೆಚ್ಚು ಮಳೆ ಸುರಿಯುತ್ತದೆ. ಅದೆಲ್ಲವೂ ವ್ಯರ್ಥವಾಗಿ ಹರಿದುಹೋಗುತ್ತದೆ. ಎಲ್ಲೂ ಇಂಗುತ್ತಿಲ್ಲ. ಆದರೆ, ನಮ್ಮ ನೆಲದಲ್ಲಿ ಸುರಿಯುವ 747 ಮಿ.ಮೀ.ನಷ್ಟು ಮಳೆಯಲ್ಲಿ ಒಂದು ಹನಿಯೂ ಪೋಲಾಗದಂತೆ ಎಚ್ಚರ ವಹಿಸಿ ಸಂಗ್ರಹ ಮಾಡಿಟ್ಟುಕೊಂಡರೆ ನಮಗೊಂದಿಷ್ಟು ನಿರಾಳತೆ ಸಿಗಬಹುದು. ಈ ಅಂಶವನ್ನು ಸಮ್ಮೇಳನದಲ್ಲಿ ಒತ್ತಿ ಹೇಳುತ್ತೇನೆ. ಏಕೆಂದರೆ; ನೀರು ಜೀವಜಲ, ನೀರೊಂದಿದ್ದರೆ ಏನನ್ನು ಬೇಕಾದರೂ ಸಾಧಿಸಿ ತೋರಿಸಬಹುದು. ಜತೆಗೆ, ಶುದ್ಧ ಗಾಳಿಯನ್ನೂ ನಾವು ರಕ್ಷಿಸಿಕೊಳ್ಳಬೇಕಿದೆ. ವಾಹನ ಮಾಲಿನ್ಯದಿಂದ ನಂದಿಬೆಟ್ಟದಂಥ ಗಿರಿಧಾಮವೇ ನಮ್ಮ ಶ್ವಾಸಕೋಶಗಳಿಗೆ ಸುರಕ್ಷಿತವಲ್ಲ ಎನ್ನುವಂತೆ ಆಗಿದೆ. ಅಲ್ಲೂ ಅಷ್ಟು ಪ್ರಮಾಣದ ವಾಹನ ಮಾಲಿನ್ಯವಿದೆ.
- ನೀರಿನ ನಿರ್ಲಕ್ಷ್ಯವನ್ನು ಹಿಮ್ಮೆಟ್ಟಿ ಬರುವುದಕ್ಕೆ ಸಮ್ಮೇಳನಾಧ್ಯಕ್ಷರಾಗಿ ತಮ್ಮ ಕಾರ್ಯಸೂಚಿ ಏನಾದರೂ ಇದೆಯಾ?
ಖಂಡಿತಾ ಇದೆ. ನೀರು ತಾನಾಗಿಯೇ ಉದ್ಭವ ಆಗುವುದಿಲ್ಲ. ಕಾಡು-ಮೇಡು, ಹಸಿರು ಇದ್ದರೆ ಮಾತ್ರ ಮಳೆಯಾಗಿ ಭೂಮಿಯಲ್ಲೂ ನೀರು ಸಮೃದ್ಧಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ಹಸರೀಕರಣಕ್ಕೆ ನಾನು ಪ್ರಯತ್ನ ಮಾಡುತ್ತಿದ್ದೇನೆ. ಈ ಪರಿಕಲ್ಪನೆಯಲ್ಲಿ ಮೂಡಿಬಂದ ಯೋಜನೆಯೇ ʼಕೋಟಿನಾಟಿʼ. ಕೃಷಿ ಭೂಮಿ ಇರಬಹುದು ಅಥವಾ ಬರಡು ಭೂಮಿ ಇರಬಹುದು, ಎಲ್ಲೇ ಆದರೂ ಮರ ಗಿಡ ಬೆಳೆಸಬೇಕು. ಆಗ ಮಾತ್ರ ಜಲಮೂಲಗಳು ಸೃಷ್ಟಿಯಾಗುತ್ತವೆ. ಇರುವ ಜಲಮೂಲಗಳೂ ಉಳಿಯುತ್ತವೆ. ವಸ್ತುಸ್ಥಿತಿ ಎಂದರೆ, ನಮ್ಮ ಜಿಲ್ಲೆಯಲ್ಲಿ ಶೇ.12ರಷ್ಟು ಮಾತ್ರ ಅರಣ್ಯವಿದೆ. ಅದು ಶೇ.33ರಷ್ಟು ಇರಲೇಬೇಕು. ಹೀಗಿರಬೇಕಾದರೆ ಮಳೆ ಎಲ್ಲಿಂದ ಬರುತ್ತದೆ? ಜಿಲ್ಲೆಯಲ್ಲಿ ಬೆಟ್ಟಗುಡ್ಡ ಬರಡು ಪ್ರದೇಶಗಳೇ ಹೆಚ್ಚಿರುವುದರಿಂದ ಅಲ್ಲೆಲ್ಲ ಮೊದಲು ಹಸಿರು ಮೂಡಿಸಬೇಕು. ಆಗ ಅಲ್ಲಲ್ಲಿಯೇ ನೀರು ಉತ್ಪಾದನೆ ಶುರುವಾಗುತ್ತದೆ. ಪಶ್ಚಿಮ ಘಟ್ಟಗಳಲ್ಲಿ ನಿತ್ಯವೂ ಜಲ ಸಮೃದ್ಧವಾಗಿರಲು ಕಾರಣವೆಂದರೆ, ಅರಣ್ಯ ಮಾತ್ರ. ಕಾಡುಗಳೇ ಮಳೆಯನ್ನು ತರಿಸುತ್ತವೆ, ತೇವಾಂಶವನ್ನು ಕಾಪಾಡುತ್ತವೆ. ಇದೇ ಸೂತ್ರವನ್ನು ಎಲ್ಲೆಡೆಗೂ ಅನ್ವಯಿಸಬೇಕು. ಪರಿಸರ ರಕ್ಷಣೆ, ಹಸರೀಕರಣದ ಬಗ್ಗೆ ನಮ್ಮಲ್ಲಿ ರಾಜಿ ಇಲ್ಲದ ಮನೋಭಾವ ಬರಬೇಕು.
ಪರಿಸರ ಕುರಿತ ಸಭೆಯಲ್ಲಿ..
- ತಾವು ಅನೇಕ ಸಲ ನಮ್ಮ ಜಿಲ್ಲೆಯ ಸಪ್ತನದಿಗಳ ಬಗ್ಗೆ ಹೇಳುತ್ತಲೇ ಇದ್ದೀರಿ. ಆ ನದಿಗಳನ್ನು ಪುನರುಜ್ಜೀವನ ಸಾಧ್ಯವೇ?
ಖಂಡಿತಾ ಸಾಧ್ಯವಿದೆ. ಈ ಸಪ್ತ ನದಿಗಳು ನಮ್ಮ ಜಿಲ್ಲೆಯ ಅದೃಷ್ಟ ಎನ್ನಬಹುದು. ಚಿತ್ರಾವತಿ, ಪಾಲಾರ್, ಉತ್ತರ ಪಿನಾಕಿನಿ, ದಕ್ಷಿಣ ಪಿನಾಕಿನಿ, ಕುಶಾವತಿ, ಕುಮಧ್ವತಿ ಪಾಪಾಗ್ನಿ ನದಿಗಳನ್ನು ಪುನರುಜ್ಜೀವನಗೊಳಿಸಿದರೆ ಇಡೀ ಚಿಕ್ಕಬಳ್ಳಾಪುರ ಮಲೆನಾಡಾಗುತ್ತದೆ. ಉತ್ತರ ಭಾರತದಲ್ಲಿ ಇಂಥ ನಿರ್ಜೀವ ನದಿಗಳನ್ನು ಪುನರುಜ್ಜೀನಗೊಳಿಸಲಾಗಿದೆ. ಈ ನದಿಗಳ ಉಗಮಸ್ಥಾನದಿಂದ ಹರಿಯುವ ಮಾರ್ಗದುದ್ದಕ್ಕೂ ಹಸಿರೀಕರಣ ಮಾಡಿದರೆ ನೀರಿನ ಸಮಸ್ಯೆಗೆ ಇಲ್ಲಿಯೇ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು. ಈಗ ಈ ಕಾರ್ಯಕ್ರಮ ಕೈಗೆತ್ತಿಕೊಂಡರೆ ಹತ್ತು ವರ್ಷಗಳಲ್ಲಿ ಜಿಲ್ಲೆಯಲ್ಲಿ ಜಲಕ್ಷಾಮವನ್ನು ತೊಡೆದುಹಾಕಬಹುದು. ಇನ್ನು, ವಾತಾವರಣದಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆಯಾಗುತ್ತಿರವುದು ಕೋವಿಡ್‌ನಂಥ ಕಾಯಿಲೆಗಳಿಗೆ ಕಾರಣ. ಇದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು. ಹಸರೀಕರಣ ಮಾಡುವುದರಿಂದ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಜಿಲ್ಲೆಯಲ್ಲಿ ಜೀವವೈವಿಧ್ಯವನ್ನು ಉಳಿಸಿಕೊಳ್ಳಬೇಕು. ಈ ನದಿಗಳ ಪುನರುಜ್ಜೀವನದಿಂದ ಇದೆಲ್ಲ ಸಾಧ್ಯವಾಗುತ್ತದೆ.
ಇನ್ನೊಂದು ಮುಖ್ಯ ಅಂಶವನ್ನು ನಾನಿಲ್ಲಿ ಪ್ರಸ್ತಾಪ ಮಾಡುತ್ತಿದ್ದೇನೆ. ಅದು ಹೊಂಗೆ ಮರದ ಬಗ್ಗೆ. ಹಿಂದೆ ನಮ್ಮ ಜಿಲ್ಲೆಯಲ್ಲಿ ಹೊಂಗೆ ಮರಗಳು ವ್ಯಾಪಕವಾಗಿದ್ದವು. ಅನಾದಿ ಕಾಲದಿಂದಲೂ ನಮ್ಮ ಮನೆಗಳಲ್ಲಿ ಹೊಂಗೆ ಎಣ್ಣೆಯ ದೀಪಗಳನ್ನು ಉರಿಸುತ್ತಿದ್ದೆವು. ಈಗ ಆ ದೀಪಗಳಿಲ್ಲ. ಬಯೋ ಇಂಧನ ತಯಾರಿಕೆಗೆ ಈ ಮರ ರಾಮಭಾಣ. ವಾಹನ ಮಾಲಿನ್ಯ ತಗ್ಗಿಸಲಿಕ್ಕೆ ಜೈವಿಕ ಇಂಧನ ಬಳಸುವುದನ್ನು, ಅದರಲ್ಲೂ ಮತ್ತೆ ನಾವು ಹೊಂಗೆ ಎಣ್ಣೆ ಬಳಸುವುದನ್ನು ರೂಢಿಸಿಕೊಳ್ಳಬೇಕು. ಹೊಂಗೆ ಎಣ್ಣೆ ತೆಗೆಯುವ ಗಾಣಗಳು ಈಗ ಇಲ್ಲ. ಆದರೆ, ಹೊಂಗೆ ಬೀಜದ ಹಿಂಡಿ ಉತ್ಕೃಷ್ಟ ಗೊಬ್ಬರ. ಅದನ್ನು ರೈತರು ಮನಗಾಣಬೇಕು.
- ಸರಕಾರ ಮರಾಠಿ ಗಡಿ ಪ್ರದೇಶಕ್ಕೆ ಕೊಟ್ಟಷ್ಟು ಮಹತ್ತ್ವವನ್ನು ನಮ್ಮ ಗಡಿ ಪ್ರದೇಶಕ್ಕೆ ನೀಡುತ್ತಿಲ್ಲ. ನಮ್ಮ ಸರಕಾರಿ ಶಾಲೆಗಳು ಮುಚ್ಚುವ ಸ್ಥಿತಿಯಲ್ಲಿವೆ, ಈ ಬಗ್ಗೆ ತಾವು ಏನು ಹೇಳುತ್ತೀರಿ?
ಹೌದು, ಈ ಬಗ್ಗೆ ನಾನೂ ಕೇಳಿದ್ದೇನೆ. ನನ್ನ ಭಾಷಣದಲ್ಲೂ ಈ ಅಂಶವನ್ನು ಒತ್ತಿ ಹೇಳುತ್ತೇನೆ. ಮಹಾರಾಷ್ಟ್ರ ಗಡಿ ಭಾಗಕ್ಕೆ ಕೊಡುವಷ್ಟೇ ಮಹತ್ತ್ವವನ್ನು ನಮ್ಮ ಗಡಿ ಪ್ರದೇಶಕ್ಕೂ ನೀಡಬೇಕು. ಇದು ನ್ಯಾಯ ಕೂಡ. ಅನುದಾನವಿರಲಿ, ಯೋಜನೆಗಳಿರಲಿ, ಇನ್ನಾವುದೇ ಇರಲಿ ತಾರತಮ್ಯ ಮಾಡಲೇಬಾರದು. ಇದು ನನ್ನ ಖಚಿತ ಅಭಿಪ್ರಾಯ. ಇನ್ನು ಜಿಲ್ಲೆಯ ಕನ್ನಡ ಶಾಲೆಗಳನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದು. ಈ ಶಾಲೆಗಳ ದುಃಸ್ಥಿತಿಗೆ ಆಡಳಿತ ವೈಫಲ್ಯವೇ ಕಾರಣ. ನಾನು ಚಾಮರಾಜನಗರ, ಚಿತ್ರದುರ್ಗ ಜಿಲ್ಲೆಗಳ ಜಿಲ್ಲಾಧಿಕಾರಿಯಾಗಿ, ತುಮಕೂರಿನ ಜಿಪಂ ಸಿಇಓ ಆಗಿ ಪಾವಗಢದ ಪರಿಸ್ಥಿತಿಯನ್ನೂ ನೋಡಿದ್ದೇನೆ. ದಂತಚೋರ ವೀರಪ್ಪನ್‌ನಿಂದ ಕುಖ್ಯಾತಿಯಾಗಿದ್ದ ಚಾಮರಾಜನಗರದ ಗೋಪಿನಾಥಂ ಗ್ರಾಮಕ್ಕೂ ಭೇಟಿ ನೀಡಿದ್ದೇನೆ. ಅಲ್ಲೆಲ್ಲ ನಾನು ಕಂಡುಕೊಂಡ ವಾಸ್ತವ ಸಂಗತಿ ಎಂದರೆ, ಮಾತೃಭಾಷೆಗೆ ಆದ್ಯತೆ ಕೊಡುವುದು. ಮಾತೃಭಾಷೆ ಇದ್ದರೆ ಜನರ ಹೃದಯಗಳ ಜತೆ ಸಂವಾದ ಮಾಡಬಹುದು. ಇಲ್ಲವಾದರೆ.., ಊಹಿಸಿಕೊಳ್ಳುವುದೂ ಕಷ್ಟ. ಗೋಪಿನಾಥಂ ಗ್ರಾಮದಲ್ಲಿ ಆ ಕಾಲಕ್ಕೆ ಎರಡು ಸಲ ಗ್ರಾಮ ವಾಸ್ತವ್ಯ ಮಾಡಿದ್ದೆ. ಚಿತ್ರದುರ್ಗ ಜಿಲ್ಲೆಯ ಅಮರಾಪುರ ಎಂಬ ಗಡಿ ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದೆ. ಜತೆಗೆ, ಕಡೆವುಡಿ, ಪಿಲ್ಲಹಳ್ಳಿ ಎಂಬ ಗ್ರಾಮಗಳಲ್ಲೂ ವಾಸ್ತವ್ಯ ಮಾಡಿದ್ದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಗೋವಾ ಗಡಿಯಲಿರುವ ಕಾಣಕೋಣ ಎಂಬ ಗ್ರಾಮದಲ್ಲೂ ವಾಸ್ತವ್ಯ ಮಾಡಿದ್ದೆ. ಅಲ್ಲೆಲ್ಲ ನಾನು ಕನ್ನಡ ಶಾಲೆಗಳ ಕಡೆ ಹೆಚ್ಚು ಗಮನ ಹರಿಸಿದ್ದೆ. ಈಗ ನಮ್ಮ ಜಿಲ್ಲೆಯಲ್ಲೂ ಜಿಲ್ಲಾಡಳಿತ ಕನಿಷ್ಠ ಒಂದೇ ಒಂದು ಕನ್ನಡ ಶಾಲೆ ಸ್ಥಗಿತವಾಗಲಿಕ್ಕೂ ಬಿಡಬಾರದು. ಇದು ನನ್ನ ಕಾಳಜಿ. ವಾಸ್ತವ್ಯ ಹೂಡಿ ವಾಸ್ತವ ನೋಡು. ಇದು ನನ್ನ ನೀತಿ. ಇನ್ನು, ಸಮಾಜದಲ್ಲಿರುವ ಕಟ್ಟಕಡೆಯ ವ್ಯಕ್ತಿಯ ಉದ್ಧಾರ ಮಾಡುವುದು ಬಹಳ ಮುಖ್ಯ. ಪ್ರಗತಿ ಎಂಬುದು ವೈಯಕ್ತಿಕ ನೆಲೆಗಟ್ಟಿನಲ್ಲಿ ಬಹಳ ಮುಖ್ಯವಾಗುತ್ತದೆ. ಇದು ನಾನು ನಂಬಿದ ಫಿಲಾಸಫಿ.
ಇನ್ನು, ನಮ್ಮ ಗಡಿ ತಾಲ್ಲೂಕುಗಳ ಅಭಿವೃದ್ಧಿಗೆ ಸಂಬಂಧಿಸಿ ನಾನು ರಾಜ್ಯದ ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಒಂದು ಸುದೀರ್ಘ ಪತ್ರ ಬರೆಯುತ್ತೇನೆ. ನಮ್ಮ ಜಿಲ್ಲೆಯಲ್ಲಿ ಆಗಬೇಕಿರುವ ಕೆಲಸಗಳ ಬಗ್ಗೆ ಗಮನ ಸೆಳೆಯುತ್ತೇನೆ. ಸಾಧ್ಯವಾದರೆ, ಆ ಕಚೇರಿಗೂ ಹೋಗುತ್ತೇನೆ. ಆ ಪತ್ರವನ್ನು ನಾನು ಮಾಧ್ಯಮಗಳಿಗೂ ಬಿಡುಗಡೆ ಮಾಡುತ್ತೇನೆ.
- ಸಮ್ಮೇಳನದಲ್ಲಿ ಕೈಗೊಳ್ಳುವ ನಿರ್ಣಯಗಳ ಪರಿಸ್ಥಿತಿ ಏನು? ಹಿಂದೆ ಆಗಿರುವ ನಿರ್ಣಯಗಳಿರಲಿ, ತಮ್ಮ ಸರ್ವಾಧ್ಯಕ್ಷತೆಯ ಸಮ್ಮೇಳನದ ನಿರ್ಣಯಗಳ ಕಾರ್ಯಗತದ ಬಗ್ಗೆ ತಮ್ಮ ಪ್ರಯತ್ನವಿರುತ್ತದಾ?
ಹೌದು. ಆ ಬಗ್ಗೆ ನಾನು ಕಾಳಜಿ ವಹಿಸುತ್ತೇನೆ. ಈಗಾಗಲೇ ನಿರ್ಣಯಗಳ ವಿಚಾರದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಕೈವಾರ ಶ್ರೀನಿವಾಸ್ ಅವರ ಜತೆ ಚರ್ಚೆ ನಡೆಸಿದ್ದೇನೆ. ನಿರ್ಣಯ ಕೈಗೊಂಡ ಮೇಲೆ, ಅವುಗಳನ್ನು ಸರಕಾರದ ಗಮನಕ್ಕೆ ತರುವುದು, ಕಾರ್ಯಗತ ಆಗುವಂತೆ ನೋಡಿಕೊಳ್ಳುವುದೂ ಆಗಬೇಕು. ಅದಕ್ಕೆ ಸಮ್ಮೇಳನಾಧ್ಯಕ್ಷನಾಗಿ ನನ್ನ ಸಹಕಾರವೂ ಇರುತ್ತದೆ. ಇದು ಅತ್ಯಂತ ಮಹತ್ತ್ವದ ವಿಚಾರವೂ ಹೌದು. ನಾಡೋಜ ಚಿದಾನಂದ ಮೂರ್ತಿ ಅವರು ಸಮ್ಮೇಳನಗಳ ನಿರ್ಣಯಗಳ ಬಗ್ಗೆ ಇಂಥ ಕಾಳಜಿ ವ್ಯಕ್ತಪಡಿಸುತ್ತಲೇ ಇದ್ದರು.
- ಕನ್ನಡ ಎಂಬುದು ಚಿಕ್ಕಬಳ್ಳಾಪುರ ದಾಟುತ್ತಿಲ್ಲ. ಬಾಗೇಪಲ್ಲಿ, ಗುಡಿಬಂಡೆ, ಗೌರಿಬಿದನೂರಿನಂಥ ತಾಲ್ಲೂಕುಗಳಲ್ಲಿ ಕನ್ನಡ ಸಿನಿಮಾಗಳೇ ಕಾಣಲ್ಲ. ಜತೆಗೆ, ಆ ತಾಲ್ಲೂಕುಗಳಲ್ಲಿ ಕನ್ನಡ ನಿರ್ಲಕ್ಷ್ಯ ವಿಪರೀತ ಎನ್ನುವಷ್ಟಿದೆ!
ಕರ್ನಾಟಕಕ್ಕೆ ಹೊಂದಿಕೊಂಡಿರುವ ಆಂಧ್ರ ಪ್ರದೇಶದ ಜಿಲ್ಲೆಗಳಲ್ಲಿ ಕನ್ನಡ ಮಾತನಾಡುವ ಏಳು ಲಕ್ಷಕ್ಕೂ ಹೆಚ್ಚು ಜನ ಇದ್ದಾರೆ. ಅನಂತಪುರ ಜಿಲ್ಲೆಯಲ್ಲಿ ಕನ್ನಡ ಮಾತನಾಡುವ ಅಸಂಖ್ಯಾತ ಜನರಿದ್ದಾರೆ. ತೆಲುಗರು ಕನ್ನಡಿಗರನ್ನು ಹೆಚ್ಚು ಗೌರವಿಸುತ್ತಾರೆ. ಅಷ್ಟೇ ಅಲ್ಲ, ನಮ್ಮ ಜತೆ ಸೌಹಾರ್ದ ಸಂಬಂಧ ಹೊಂದಿದ್ದಾರೆ. ಅದೇ ರೀತಿ ನಮ್ಮ ಭಾಗದಲ್ಲೂ ತೆಲುಗು ಮಾತನಾಡುವ ಜನರಿದ್ದರೂ ಅವರೆಲ್ಲ ಅಪ್ಪಟ ಕನ್ನಡಿಗರೇ. ಸೂಕ್ತ ಶಿಕ್ಷಣ ಸಿಗದ ಕಾರಣಕ್ಕೆ ಅವರಿನ್ನೂ ಹಾಗೆಯೇ ಇದ್ದಾರೆ. ಮತ್ತೆ ಹೇಳುವುದಾದರೆ ಇದು ಆಡಳಿತ ವೈಫಲ್ಯವೇ ಸರಿ. ಇನ್ನು, ನೀವು ಹೇಳಿದ ಮೂರು ತಾಲ್ಲೂಕುಗಳಲ್ಲಿ ಕನ್ನಡ ಸಮೃದ್ಧವಾಗಿದೆ. ಆದರೆ, ನಮ್ಮ ಭಾಷೆಯನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯಬೇಕು. ನಿರಂತರ ಕಾರ್ಯಕ್ರಮಗಳು, ಚಟುವಟಿಕೆಗಳು ನಡೆದು ಸಿನಿಮಾಗಳೂ ಬರಬೇಕು, ಜನರೂ ನೋಡಬೇಕು. ಕನ್ನಡವನ್ನೇ ವ್ಯಾವಹಾರಿಕ ಭಾಷೆಯನ್ನಾಗಿ ಹೆಚ್ಚೆಚ್ಚು ಬಳಕೆ ಮಾಡಿಕೊಂಡರೆ ಅದು ಸಾಧ್ಯವಾಗುತ್ತದೆ. ಜಿಲ್ಲಾಡಳಿತ ಇಂಥ ತಾಲ್ಲೂಕುಗಳನ್ನು ಹೆಚ್ಚು ಒತ್ತಾಸೆಯಿಂದ ನೋಡಬೇಕು. ಕನ್ನಡ ಶಾಲೆಗಳನ್ನು ಉತ್ತಮಪಡಿಸಬೇಕು.
- ಈಗ ಗಡಿ ತಾಲ್ಲೂಕು ಬಾಗೇಪಲ್ಲಿ ಹೆಸರನ್ನು ಭಾಗ್ಯನಗರ ಎಂದು ಬದಲಾಯಿಸಲಾಗುತ್ತಿದೆ. ಅದೇ ರೀತಿ ʼಪಲ್ಲಿʼಗಳನ್ನು ʼಹಳ್ಳಿʼಗಳೆಂದು ಬದಲಿಸುವ ಬೇಡಿಕೆ ಬರುತ್ತಿದೆ? ಹೆಸರು ಬದಲಿಸಿದರೆ ಕನ್ನಡ ಉದ್ಧಾರ ಆಗುತ್ತದಾ? ಇದರಲ್ಲಿ ತಮಗೆ ನಂಬಿಕೆ ಇದೆಯಾ?
ಹೆಸರಿನಲ್ಲೇನಿದೆ? ನೀವು ಬಾಗೇಪಲ್ಲಿಯನ್ನಾದರೂ ಉಳಿಸಿ ಅಥವಾ ಭಾಗ್ಯನಗರವನ್ನಾದರೂ ಮಾಡಿ. ಒಟ್ಟಾರೆ ಕನ್ನಡವನ್ನು ಉಳಿಸಿ, ಬೆಳೆಸಿ. ಮಾತಿನಲ್ಲಿ, ಆಚರಣೆಯಲ್ಲಿ, ವ್ಯವಹಾರದಲ್ಲಿ ಕನ್ನಡ ಇಲ್ಲದಿದ್ದರೆ ಪ್ರಯೋಜನ ಇಲ್ಲ. ಭಾಗ್ಯನಗರ ಎಂದು ಹೆಸರಿಟ್ಟು ಕನ್ನಡ ಶಾಲೆಗಳನ್ನು ಮುಚ್ಚಿದರೆ ಅದಕ್ಕೆ ಸಾರ್ಥಕತೆ ಇರಲ್ಲ. ಯಾವುದೇ ಊರಿಗೆ, ಪಟ್ಟಣಕ್ಕೆ, ನಗರಕ್ಕೆ ಒಂದು ಹೆಸರಿಡಬೇಕಾದರೆ ಅದಕ್ಕೊಂದು ಇತಿಹಾಸ ಖಂಡಿತಾ ಇರುತ್ತದೆ. ಇನ್ನು ಹೆಸರು ಬದಲಾಯಿಸಲೇಬೇಕು ಎಂದು ಜನರ ಅಭಿಲಾಶೆ ಇದ್ದರೆ ಖಂಡಿತಾ ಬದಲಿಸಬಹುದು.
ಮೇಲಿನ ಎಲ್ಲ ಚಿತ್ರಗಳ ಕೃಪೆ: Kempareddy Amaranarayana facebook
ಎಂ.ಕೃಷ್ಣಪ್ಪ, ಕೆ.ಅಮರನಾರಾಯಣ, ಪಿ.ಕೆ.ಚನ್ನಕೃಷ್ಣ