ನಾಯಕರನ್ನು ಓಲೈಸುವ ಭರದಲ್ಲಿ ಸಮ್ಮೇಳನಾಧ್ಯಕ್ಷರನ್ನು ಕಡೆಗಣಿಸಿತಾ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು
- ಎಂ.ಕೃಷ್ಣಪ್ಪ ಚಿಕ್ಕಬಳ್ಳಾಪುರ
ಚಿಕ್ಕಬಳ್ಳಾಪುರ: ಸಮ್ಮೇಳನಾಧ್ಯಕ್ಷರ ಮೆರವಣಿಗೆ ಇಲ್ಲ. ನಗರದಲ್ಲಿ ಕನ್ನಡ ಸಂಭ್ರಮ ಕಾಣಲಿಲ್ಲ, ಭಾವುಟಗಳು ರಾರಾಜಿಸಲಿಲ್ಲ. ಸಮ್ಮೇಳನಾಧ್ಯಕ್ಷರಿಗೆ ಶುಭಾಶಯ ಪತ್ರಗಳೂ ಗೋಚರಿಸಲಿಲ್ಲ, ಕನಿಷ್ಠ ಮಾಧ್ಯಮಗಳಿಗೆ ಆಹ್ವಾನ ಪತ್ರಿಕೆಗಳಿಗೆ ತಲುಪದೇ ಸಮ್ಮೇಳನವು ಸುದ್ದಿಯಾಗಲೇ ಇಲ್ಲ!! ಆಹ್ವಾನ ಪತ್ರಿಕೆಯಲ್ಲಿ ಹೆಸರುಗಳಿದ್ದರೂ ರಾಜಕಾರಣಿಗಳು ಅತ್ತ ಸುಳಿಯಲಿಲ್ಲ.
ಎರಡು ದಿನಗಳ ಚಿಕ್ಕಬಳ್ಳಾಪುರ ಜಿಲ್ಲಾ 8ನೇ ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ದಿನವು ನೀರಸವಾಗಿ ಮುಕ್ತಾಯವಾಗಿದ್ದು ಹೀಗೆ. ಕೋವಿಡ್ ನೆಪವೋ, ಸಂಪನ್ಮೂಲ ಕೊರತೆಯೋ ಅಥವಾ ಹೇಗಾದರೂ ಮಾಡಿ ಮುಗಿಸಿದರಾಯಿತು ಎಂಬ ಕಸಾಪ ಉದಾಸೀನವೋ ಗೊತ್ತಿಲ್ಲ. ಅಂತೂ ಜಿಲ್ಲಾ ಕನ್ನಡಹಬ್ಬದ ಮೊದಲ ದಿನ ಶಿಷ್ಟಾಚಾರವನ್ನು ಮರೆತು ಅರೆಬರೆಯಾಗಿ ಸಂಪನ್ನಗೊಂಡಿತು.
ಒಂದೇ ಸಾಲಿನಲ್ಲಿ ಹೇಳುವುದಾದರೆ; ಜಲ್ಲಾಧಿಕಾರಿಯ ಕಚೇರಿ ಆವರಣಕ್ಕಷ್ಟೇ ಸಾಹಿತ್ಯ ಸಮ್ಮೇಳನ ಸೀಮಿತವಾಯಿತು.
ಆಹ್ವಾನ ಪತ್ರಿಕೆಯಲ್ಲೇ ಎಡವಟ್ಟು
ಆಹ್ವಾನ ಪತ್ರಿಕೆ ಮುದ್ರಣ ಮಾಡುವಾಗಲೇ ಸಮ್ಮೇಳನದ ಶಿಷ್ಠಾಚಾರವನ್ನು ಗಾಳಿಗೆ ತೂರಿದ್ದ ಜಿಲ್ಲಾ ಕಸಾಪ, ಸಮ್ಮೇಳನಾಧ್ಯಕ್ಷರನ್ನು ಕಡೆಗಣಿಸಿದ ಅಂಶ ಸ್ಪಷ್ಟವಾಗಿ ಗೋಚರವಾಗಿತ್ತು. ಸಾಮಾನ್ಯವಾಗಿ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ಸಮ್ಮೇಳನದ ಸರ್ವಾಧ್ಯಕ್ಷರೇ ವಹಿಸಬೇಕು. ಆದರೆ, ಸಮ್ಮೇಳನಾಧ್ಯಕ್ಷರನ್ನು ಭಾಷಣ ಓದುವುದಕ್ಕೆ ಸೀಮಿತಗೊಳಿಸಿ ಸಚಿವರಿಗೆ ಅಧ್ಯಕ್ಷ ಸ್ಥಾನ ನೀಡಲಾಗಿತ್ತು. ಇದು ಸಮ್ಮೇಳನದ ಶಿಷ್ಟಾಚಾರದ ಉಲ್ಲಂಘನೆ ಮಾತ್ರವಲ್ಲದೆ ಸಮ್ಮೇಳನಾಧ್ಯಕ್ಷರ ಕಡೆಗಣನೆ ಎಂದು ಕೆಲವರು ದನಿ ಎತ್ತಿದ್ದಾರೆ. ಈ ಬಗ್ಗೆ ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ ವೈ.ಎಲ್.ಹನುಮಂತರಾವ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಚಿತ್ರವೆಂದರೆ, ಅವರನ್ನು ಸಮ್ಮೇಳನಕ್ಕೇ ಕರೆದಿರಲಿಲ್ಲ. ಇನ್ನೂ ಕೆಲವರು ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಶಿಷ್ಠಾಚಾರದ ಉಲ್ಲಂಘನೆ
-ವೈ.ಎಲ್.ಹನುಮಂತರಾವ್, ಕಸಾಪ ನಿಕಟಪೂರ್ವ ಜಿಲ್ಲಾಧ್ಯಕ್ಷ
ನನಗೆ ಆಹ್ವಾನ ಕೊಟ್ಟಿಲ್ಲ. ನಾನು ನಿಕಟಪೂರ್ವ ಜಿಲ್ಲಾ ಕಸಾಪ ಅಧ್ಯಕ್ಷ. ನನ್ನನ್ನೇ ಕರೆದಿಲ್ಲ ಅಂದರೆ ವ್ಯವಸ್ಥೆ ಹೇಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು. ಸಮ್ಮೇಳನದಲ್ಲಿ ಶಿಷ್ಠಾಚಾರವೇ ಕಾಣಲಿಲ್ಲ. ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರೇ ಅಧ್ಯಕ್ಷರಾಗಿರುತ್ತಾರೆ, ಆಗಿರಬೇಕು. ಇಲ್ಲಿ ಹಾಗೆ ಆಗಿಲ್ಲ. ಆದರೆ, ಸಚಿವರಿಗೆ ಪಟ್ಟ ಕೊಟ್ಟಿದ್ದಾರೆ. ಸಾಮಾನ್ಯವಾಗಿ ಆಯಾ ಜಿಲ್ಲೆಯ ಸಚಿವರೋ ಅಥವಾ ಆ ಕ್ಷೇತ್ರದ ಶಾಸಕರೋ ಉದ್ಘಾಟನೆ ಮಾಡುವ ಸಂಪ್ರದಾಯ ನಡೆದುಕೊಂಡು ಬಂದಿದೆ. ಸಚಿವರು ಉದ್ಘಾಟನೆ ಮಾಡಬೇಕಷ್ಟೇ. ಆದರೆ, ಅವರಿಗೆ ಅಧ್ಯಕ್ಷ ಸ್ಥಾನ ಕೊಟ್ಟು ಸಮ್ಮೇಳನಾಧ್ಯಕ್ಷರನ್ನು ಕಡೆಗಣಿಸಲಾಗಿದೆ. ಇದು ಶಿಷ್ಠಾಚಾರದ ಉಲ್ಲಂಘನೆ.
ಇನ್ನು; ದಿನದ ಹಿಂದೆಯಷ್ಟೇ ಮಂಚೇನಹಳ್ಳಿ ತಾಲ್ಲೂಕು ಸಾಹಿತ್ಯ ಸಮ್ಮೇಳನ ನಡೆಯಿತು. ಅದಕ್ಕೆ ಹೋಲಿಸಿದರೆ, ಜಿಲ್ಲಾ ಸಮ್ಮೇಳನ ಏನೇನೂ ಅಲ್ಲ ಅನ್ನುವಂತಿತ್ತು. ಅದಕ್ಕೂ ಹಿಂದೆ ನಡೆದ ನೆರೆಯ ಕೋಲಾರ ಜಿಲ್ಲೆಯ ಸಾಹಿತ್ಯ ಸಮ್ಮೇಳನ ಈ ಸಮ್ಮೇಳನಕ್ಕಿಂತ ಅದೆಷ್ಟೋ ಪಾಲು ಉತ್ತಮವಾಗಿತ್ತು. ಹೆಚ್ಚು ಸಾಹಿತ್ಯಾಸಕ್ತರು ಭಾಗಿಯಾಗಿದ್ದರು. ಗೋಷ್ಠಿಗಳು ಅರ್ಥಪೂರ್ಣವಾಗಿದ್ದವು.
ಕೋವಿಡ್ ನೆಪವೊಡ್ಡಿ ಜಿಲ್ಲಾಧಿಕಾರಿಗಳ ಕಚೇರಿಯ ಸಮ್ಮೇಳನ ಸಭಾಂಗಣದಲ್ಲಿ ನಡೆದ ಕನ್ನಡ ಜಾತ್ರೆಯಲ್ಲಿ ಕೋವಿಡ್ ಮಾರ್ಗಸೂಚಿ ನಡುವೆಯೂ ಸಾಹಿತ್ಯಾಸಕ್ತರು ಭರ್ತಿ ಬರುತ್ತಾರೆಂಬ ನಿರೀಕ್ಷೆ ಇತ್ತು. ವಸ್ತುಸ್ಥತಿ ಎಂದರೆ, ಜಿಲ್ಲಾ ಸಾಹಿತ್ಯ ಪರಿಷತ್ ಕೋವಿಡ್ ಎಸ್‌ಓಪಿ ಬಗ್ಗೆ ತಲೆಕೆಡಿಸಿಕೊಂಡಂತೆ ಕಾಣಲಿಲ್ಲ. ಏಕೆಂದರೆ, ಸಮ್ಮೇಳನದ ಉದ್ಘಾಟನಾ ಸಮಾರಂಭಕ್ಕೆ ಮುನ್ನ ಬೆಳಗ್ಗೆಯೇ ಜಿಲ್ಲಾಧಿಕಾರಿ ಆರ್.ಲತಾ ಅವರು ಕನ್ನಡ ಧ್ವಜಾರೋಹಣ ನೆರೆವೇರಿಸಿದರು. ಅವರ ಜತೆಯಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಚಿಕ್ಕನರಸಿಂಹಯ್ಯ ಹಾಗೂ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಕೈವಾರ ಶ್ರೀನಿವಾಸ್ ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿ ಆರ್.ಲತಾ ಅವರು ಧ್ವಜಾರೋಹಣ ಮಾಡಿದ ಸಂದರ್ಭ.
ಗೌರವ ಉಪಸ್ಥಿತಿ ಎಸ್‌ಪಿ ಸಾಹೇಬರು ಎಲ್ಲೋ!
ಇದಿಷ್ಟೇ ಆದರೆ ಸರಿ, ಆಹ್ವಾನ ಪತ್ರಿಕೆಯಲ್ಲಿ ಈ ಕಾರ್ಯಕ್ರಮದ ಕೆಳಗೆ ʼಗೌರವ ಉಪಸ್ಥಿತಿʼ ಅಂತ ಸುಮಾರು 139 ಹೆಸರುಗಳನ್ನು ನಮೂದಿಸಲಾಗಿತ್ತು. ಆ ಪಟ್ಟಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಥುನ್ ಕುಮಾರ್ ಅವರ ಹೆಸರೂ ಇತ್ತು. ಜಿಲ್ಲೆಯ ಪ್ರಮುಖ ಅಧಿಕಾರಿಯಾದ ಅವರ ಹೆಸರನ್ನು ಮುದ್ರಿಸುವಲ್ಲಿ ಶಿಷ್ಠಾಚಾರ ಉಲ್ಲಂಘನೆ ಆಗಿದೆಯಾ ಎಂಬ ಪ್ರಶ್ನೆಯೂ ಎದ್ದಿದೆ. ಹನುಮಂತನ ಬಾಲದಂತಿದ್ದ ಈ ಪಟ್ಟಿಯಲ್ಲಿ ಎಸ್‌ಪಿ ಹೆಸರು ಕಳೆದೇಹೋಗಿತ್ತು! ಅವರೊಬ್ಬರ ಹೆಸರಷ್ಟೇ ಅಲ್ಲ, ಇನ್ನೂ ಅನೇಕ ಪ್ರಮುಖರ ಹೆಸರುಗಳನ್ನು ಭೂತಗನ್ನಡಿ ಹಾಕಿ ಹುಡುಕಬೇಕಾಗಿತ್ತು. ಇನ್ನು; ಈ 139 ಆಹ್ವಾನಿತರಲ್ಲಿ ಶೇ.20ರಷ್ಟು ಹಾಜರಾತಿಯೂ ಇರಲಿಲ್ಲ. ಇಷ್ಟೂ ಜನರನ್ನು ನಿಜಕ್ಕೂ ಆಹ್ವಾನಿಸಲಾಗಿತ್ತಾ ಅಥವಾ ಯಾವುದೋ ಕಾರಣಗಳಿಗೆ ಹೆಸರುಗಳನ್ನು ಮುದ್ರಿಸಲಾಗಿತ್ತಾ ಎಂಬುದು ಗೊತ್ತಾಗಿಲ್ಲ.
ಸಚಿವ ಡಾ.ಸುಧಾಕರ್ ಗೈರು
ಇನ್ನೂ ಉದ್ಘಾಟನಾ ಸಮಾರಂಭದ ಕಥೆಯೂ ಹಾಗೆಯೇ ಇತ್ತು. ಸದ್ಗುರು ಕಾಲಜ್ಞಾನಿ ಕೈವಾರ ತಾತಯ್ಯನವರ ವೇದಿಕೆಯಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಸಚಿವ ಡಾ.ಕೆ.ಸುಧಾಕರ್ ಪಾಲ್ಗೊಳ್ಳಲಿಲ್ಲ. ಅವರು ಅಧ್ಯಕ್ಷತೆ ವಹಿಸಿ ಸಮ್ಮೇಳನಾಧ್ಯಕ್ಷರ ಭಾಷಣ ಆಲಿಸಿ ಅದಕ್ಕೆ ಪೂರಕವಾಗಿ ಮಾತನಾಡಬೇಕಿತ್ತು. ರಾಜ್ಯಸಭೆ ಸದಸ್ಯ ಹಾಗೂ ಸಾಹಿತಿ ಡಾ.ಎಲ್.ಹನುಮಂತಯ್ಯ ಸಮ್ಮೇಳನವನ್ನು ಉದ್ಘಾಟಿಸಿದರು. ಇನ್ನೂ ಆಹ್ವಾನ ಪತ್ರಿಕೆಯಲ್ಲಿದ್ದ ಹೆಸರುಗಳಲ್ಲಿ ಅರ್ಧಕ್ಕರ್ಧ ನಾಯಕರು ಚಿಕ್ಕಬಳ್ಳಾಪುರದಲ್ಲೇ ದಿನವಿಡೀ ಇದ್ದರೂ ಸಮ್ಮೇಳನದ ಕಡೆ ಸುಳಿಯಲಿಲ್ಲ. ಪಕ್ಷದ ಕಾರ್ಯಕ್ರಮಕ್ಕೆ ಬಂದಿದ್ದ ಮಾಜಿ ಮುಖ್ಯಮಂತ್ರಿ, ಸರಸ್ವತಿ ಸಮ್ಮಾನ ಪ್ರಶಸ್ತಿ ಪುರಸ್ಕೃತರೂ ಆದ ಡಾ.ವೀರಪ್ಪ ಮೊಯಿಲಿ ಸಮ್ಮೇಳನಕ್ಕೆ ಬಂದು ಹೋಗಬಹುದಿತ್ತು. ಇಷ್ಟಕ್ಕೂ ಅವರಿಗೆ ಆಹ್ವಾನ ಪತ್ರಿಕೆ ಹೋಗಿದೆಯೋ ಇಲ್ಲವೋ ಗೊತ್ತಿಲ್ಲ.
ಆದರೆ, ಇದ್ಯಾವುದರ ಗೊಡವೆಯೇ ಇಲ್ಲದೆ ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಸಮ್ಮೇಳನಾಧ್ಯಕ್ಷರಾದ ಕೆ.ಅಮರನಾರಾಯಣ ಅವರು, ಇವೆಲ್ಲ ಓರೆ-ಕೋರೆಗಳನ್ನು ತಮ್ಮ ವಿದ್ವತ್‌ಪೂರ್ಣ ಭಾಷಣದಿಂದ ತೊಡೆದು ಹಾಕಿದರು.
ಇನ್ನು ಉದ್ಘಾಟಕರಾದ ಎಲ್.ಹನುಮಂತಯ್ಯ ಅವರು ಮಾಡಿದ ಭಾಷಣವನ್ನು ಕೆಲ ಸಭಿಕರೂ ಸೇರಿ ವೇದಿಕೆ ಮೇಲಿದ್ದ ಗಣ್ಯರೂ ಶ್ರದ್ಧೆಯಿಂದ ಕೇಳಿದ್ದು ಕಂಡು ಬಂತು. ಆದರೆ, ಸಭಾಂಗಣದ ಬಹುತೇಕ ಆಸನಗಳು ಖಾಲಿಯೇ ಇದ್ದವು. ಹೀಗಾಗಿ ಸಮ್ಮೇಳನದಲ್ಲಿ ವಿದ್ವತ್ ವಿಚಾರಗಳ ಹರಿವು ಇದ್ದರೂ ಅದು ಜನರನ್ನು ತಲುಪಲಿಲ್ಲ. ಪರಿಷತ್ತು ಜನರನ್ನು, ಮುಖ್ಯವಾಗಿ ಸಾಹಿತ್ಯಾಸಕ್ತರನ್ನು ಆಹ್ವಾನಿಸಿರಲಿಲ್ಲ ಎಂಬ ಅಂಶ ತದನಂತರ ಬೆಳಕಿಗೆ ಬಂದಿದೆ.
ಎಲ್.ಹನುಮಂತಯ್ಯ, ಕೆ.ಅಮರನಾರಾಯಣ, ಗೋಪಾಲಗೌಡ ಕಲ್ವಮಂಜಲಿ
ಕಂಡಿದ್ದು ಕೆಲ ಕವಿಗಳು ಮಾತ್ರ
ಇನ್ನು ಕೆಲ ಬೆರಳೆಣಿಕೆಯಷ್ಟು ಕವಿಗಳು, ತಾಲ್ಲೂಕು ಕಸಾಪ ಘಟಕಗಳ ಪದಾಧಿಕಾರಿಗಳು ಬಿಟ್ಟರೆ ಗಂಭೀರವಾಗಿ ಸಾಹಿತ್ಯ ಕೃಷಿ ಮಾಡುತ್ತಿರುವ ಜನ ಕಾಣಲಿಲ್ಲ ಸಮ್ಮೇಳನದಲ್ಲಿ. ಗೋಪಾಲಗೌಡ ಕಲ್ವಮಂಜಲಿ ಅವರಂಥ ಕೆಲ ಹಿರಿಯರಷ್ಟೇ ಕಂಡರು. ಜಿಲ್ಲೆಯ ಖ್ಯಾತ ಕವಿ ಬಿ.ಆರ್.ಲಕ್ಷ್ಮಣರಾವ್ ಸೇರಿದಂತೆ ಜಿಲ್ಲೆಯಲ್ಲಿ ಹುಟ್ಟಿ ಬೆಳೆದು ನಾನಾ ಕ್ಷೇತ್ರಗಳಲ್ಲಿ, ರಾಜ್ಯದ ನಾನಾ ಕಡೆ ನೆಲೆನಿಂತು ಕೆಲಸ ಮಾಡುತ್ತಿರುವ ಸಾಧಕರು, ಪ್ರತಿಭಾವಂತರನ್ನೂ ಪರಿಷತ್ತು ಕಡೆಗಣಿಸಿತ್ತು. ಜಿಲ್ಲಾಧ್ಯಕ್ಷರಿಗೆ ಬೇಕಾದ ಕೆಲ ನಿಲಯದ ಕಲಾವಿದರಷ್ಟೇ ಸಮ್ಮೇಳನದಲ್ಲಿ ಮಿಂಚಿದರು ಎಂದು ಕಸಾಪ ಪದಾಧಿಕಾರಿಯೊಬ್ಬರೇ ಹೇಳಿದ ಮಾತು. ಉಳಿದಂತೆ ಕೇಂದ್ರ ಸಾಹಿತ್ಯ ಪರಿಷತ್ತು ಈ ಸಮ್ಮೇಳನಕ್ಕೊಂದು ಅರ್ಥಪೂರ್ಣ ಮಾರ್ಗಸೂಚಿಯನ್ನು ನೀಡುವಲ್ಲಿ ಪೂರ್ಣ ವಿಫಲವಾಗಿದ್ದು, ಎಲ್ಲವನ್ನೂ ಜಿಲ್ಲಾ ಸಾಹಿತ್ಯ ಪರಿಷತ್ತಿಗೆ ಬಿಟ್ಟು ಕೈತೊಳೆದುಕೊಂಡಿದ್ದು ಸಮ್ಮೇಳನದಲ್ಲಿ ಢಾಳಾಗಿ ಕಂಡ ಅಂಶ. ಆದರೆ, ವೇದಿಕೆ ಹಿಂದೆ ಇದ್ದ ಬ್ಯಾಕ್‌ಡ್ರಾಪ್‌ನಲ್ಲಿ ಸಮ್ಮೇಳನಾಧ್ಯಕ್ಷರ ಚಿತ್ರಕ್ಕಿಂತ ಕೇಂದ್ರ ಕಸಾಪದ ಅಧ್ಯಕ್ಷ ಮನು ಬಳಿಗಾರ್ ಚಿತ್ರವೇ ದೊಡ್ಡದಾಗಿತ್ತು. ಇದನ್ನು ಕಂಡು ಅನೇಕರು ಹುಬ್ಬೇರಿಸಿದ್ದೂ ಆಯಿತು.
ಯಾರೂ ಕರೆದಿಲ್ಲ
-ಲಕ್ಷ್ಮಣ್, ಕನ್ನಡ ಸಾಹಿತ್ಯ ಪರಿಷತ್ತಿನ ಅಜೀವ ಸದಸ್ಯ, ಚಿಂತಾಮಣಿ
ಸಮ್ಮೇಳನದ ಬಗ್ಗೆ ಗೊತ್ತಿಲ್ಲ. ನನಗಂತೂ ಯಾರೂ ಆಹ್ವಾನ ಕೊಟ್ಟಿಲ್ಲ. ಯಾರೂ ಕರೆದಿಲ್ಲ. ಹೀಗಾಗಿ ಹೇಗೆ ಬರಲು ಸಾಧ್ಯ? ಇನ್ನು ಈ ಸಮ್ಮೇಳನದ ಬಗ್ಗೆ ಏನನ್ನೂ ಹೇಳಲು ನಾನು ಬಯಸಲಾರೆ. ನನಗೆ ಸಮ್ಮೇಳನದ ಬಗ್ಗೆ ಏನೂ ಗೊತ್ತಿಲ್ಲ. ಆ ಬಗ್ಗೆ ತಿಳಿದುಕೊಳ್ಳುವ ಕೌತುಕವೂ ಇಲ್ಲ.
ರಾಜಕಾರಣಿಗಳಿಗೆ ಅಗ್ರಮಾನ್ಯತೆ
ನಿರೀಕ್ಷೆಯಂತೆ ಜಿಲ್ಲಾ ಸಾಹಿತ್ಯ ಪರಿಷತ್ತು ರಾಜಕಾರಣಿಗಳಿಗೆ ಹೆಚ್ಚು ಮನ್ನಣೆ ನೀಡಿ ಸಾಹಿತಿಗಳ ಬಗ್ಗೆ ನಿರ್ಲಕ್ಷ್ಯ ವಹಿಸಿರುವ ಅಂಶ ಆಹ್ವಾನ ಪತ್ರಿಕೆ ನೋಡಿದ ಕೂಡಲೇ ಗೊತ್ತಾಗುತ್ತಿತ್ತು. ಆದರೆ, ಅನೇಕ ನಾಯಕರು ಸೌಜನ್ಯಕ್ಕಾದರೂ ಸಮ್ಮೇಳನದ ಕಡೆ ತಲೆ ಹಾಕಲಿಲ್ಲ. ಎಲ್ಲ ಪಕ್ಷಗಳ ಮುಖಂಡರು, ಶಾಸಕರು, ಪಕ್ಷಗಳ ಅಧ್ಯಕ್ಷರು ಎಲ್ಲ ಹೆಸರುಗಳಿದ್ದರೂ ಅವರಾರೂ ಪ್ರತ್ಯಕ್ಷರಾಗಲಿಲ್ಲ.
ಕೋವಿಡ್ ನೆಪವೋ ಏನೋ ಯಾವ ಬಗ್ಗೆ ಜಿಲ್ಲಾ ಸಾಹಿತ್ಯ ಪರಿಷತ್ತು ಮಾಹಿತಿ ಹಂಚಿಕೊಂಡಿರಲಿಲ್ಲ. ಸಮ್ಮೇಳನಾಧ್ಯಕ್ಷರ ಮೆರವಣಿಗೆ ಮಾಡಲು, ನಗರದಲ್ಲಿ ತಳಿರು-ತೋರಣ ಕಟ್ಟಲು, ಕನ್ನಡ ಬಾವುಟ ಕಟ್ಟಲು, ಇರುವ ಒಂದು ಮುಖ್ಯರಸ್ತೆಯನ್ನು ಅಲಂಕರಿಸಲು ಜಿಲ್ಲಾಡಳಿತವಾಗಲಿ ಅಥವಾ ಜಿಲ್ಲಾ ಕಸಾಪ ಆಗಲಿ ಚಿತ್ತ ಹರಿಸಲಿಲ್ಲ. ಮೊದಲೇ ಗಡಿ ಜಿಲ್ಲೆಯಲ್ಲಿ ಕನ್ನಡ ವಾತಾವರಣ ಇಲ್ಲ ಎಂದು ಬೊಬ್ಬೆ ಹೊಡೆಯುತ್ತಿರವ ಈ ಸಂದರ್ಭದಲ್ಲಿ ಅಂಥ ವಾತಾವರಣವನ್ನು ಸೃಷ್ಟಿಸಲು ಸಿಕ್ಕಿದ ಬಂಗಾರದಂಥ ಅವಕಾಶವನ್ನು ಕೈ ಚೆಲ್ಲಲಾಗಿದೆ. ಜಿಲ್ಲಾ ಕಸಾಪಕ್ಕೆ ದೂರದೃಷ್ಟಿ, ಸಂಘಟನಾತ್ಮಕ ಶಕ್ತಿ, ಸ್ಪಷ್ಟ ಪರಿಕಲ್ಪನೆ ಇಲ್ಲದಿರುವುದು ಇದರಿಂದ ಸ್ಪಷ್ಟವಾಗಿದೆ.
ಸಮ್ಮೇಳನ ಸಭಾಂಗಣದಲ್ಲಿ ಕಂಡವರು.
ಎಲ್ಲಕ್ಕೂ ಕಾಲವೇ ಉತ್ತರಿಸಲಿದೆ
-ದೇವತಾ ದೇವರಾಜ್ / ನಿಕಟಪೂರ್ವ ಅಧ್ಯಕ್ಷ. ಚಿಂತಾಮಣಿ ತಾಲ್ಲೂಕು ಕಸಾಪ
ಪರಿಷತ್ ಆಶಯಗಳನ್ನು ಗಾಳಿಗೆ ತೂರಲಾಗಿದೆ, ಜಿಲ್ಲೆಯಲ್ಲಿ ಬಹುತೇಕ ಮಂದಿ ಸಾಂಸ್ಕೃತಿಕ ಹಿನ್ನೆಲೆಯ ವ್ಯಕ್ತಿಗಳು, ಸಾಹಿತಿಗಳಿದ್ದಾರೆ. ಅವರಿಗೆ ಸಮ್ಮೇಳನದಲ್ಲಿ ಅವಕಾಶ ಸಿಕ್ಕಿಲ್ಲ. ಸಾಹಿತ್ಯ ಸಮ್ಮೇಳನ ಅಂದರೆ ಎಲ್ಲರನ್ನೂ ಒಳಗೊಂಡು ನಡೆಯಬೇಕು. ಆದರೆ ಈ ಸಮ್ಮೇಳನ ಹಾಗೆ ನಡೆದಿಲ್ಲ. ಏನೇ ಆಗಲಿ ಜಿಲ್ಲಾ ಕಸಾಪ ಅಧ್ಯಕ್ಷರಿಗೆ ಮುಂದೆ ಕಾಲವೇ ಉತ್ತರ ನೀಡಲಿದೆ.