- ಯುಪಿಎ ಸರಕಾರದ ಭಾಗ ಒಂದರ ಕಾಲದಲ್ಲಿ ಘಟಿಸಿದ್ದ ಅನೇಕ ‘ಚಿದಂಬರ ರಹಸ್ಯ’ಗಳು ಎಷ್ಟೋ ದಿನವಾದರೂ ಬೆಳಕಿಗೆ ಬಂದಿರಲಿಲ್ಲ. ಅದರಲ್ಲೂ ಎನ್ರಾನ್ ಕಂಪನಿ ವಿರುದ್ಧ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ನಡೆದ ಕಾನೂನು ಹೋರಾಟ, ಅದರಲ್ಲಿ ಭಾರತದ ವಿರುದ್ಧವೇ ವಕಾಲತ್ತು ಹಾಕಿದ್ದವರು, ಆಮೇಲೆ ಪಾಕಿಸ್ತಾನದ ವಕೀಲರೊಬ್ಬರು ಎಂಟ್ರ ಕೊಟ್ಟಿದ್ದು, ಅಂತಿಮವಾಗಿ ಈ ಪ್ರಕರಣವನ್ನು ಭಾರತ ಸೋತಿದ್ದು.. ಈ ಘಟನೆಯನ್ನು ಆಗಿನ ಮಾಧ್ಯಮಗಳು ವ್ಯವಸ್ಥಿತವಾಗಿ ಹೂತಿಟ್ಟವು. ಆ ಹೂತಿಟ್ಟ ಸತ್ಯದ ಬಗ್ಗೆ ಹಿರಿಯ ಪತ್ರಕರ್ತ ದು.ಗು.ಲಕ್ಷ್ಮಣ ಬೆಳಕು ಚೆಲ್ಲಿ ಮತ್ತೊಮ್ಮೆ ಜನರ ಮುಂದಿಟ್ಟಿದ್ದಾರೆ.
ಇತ್ತೀಚೆಗೆ ಪ್ರಧಾನಿ ಮೋದಿಯವರ ಅಗಾಧ ಸಾಧನೆಗಳನ್ನು ಕಂಡು ಕರುಬುತ್ತಿರುವ ಕಾಂಗ್ರೆಸ್ ಮುಖಂಡರು, ಪ್ರಗತಿಪರರು ಹಾಗೂ ಮೋದಿ ನಿಂದಕರಿಗೆ ಪರಚಿಕೊಳ್ಳುವಷ್ಟು ಕೋಪ ಉಕ್ಕೇರುತ್ತಿದೆ. ಮೋದಿಯನ್ನು ಟೀಕಿಸಲು ಯಾವುದೇ ಪ್ರಬಲ ಕಾರಣಗಳು, ಸಾಕ್ಷ್ಯಗಳು ದೊರೆಯದೆ ವ್ಯಂಗ್ಯವಾಗಿ ಅವರನ್ನಾಡಿಕೊಳ್ಳುವ ಹತಾಶೆಯ ಸೂತ್ರಕ್ಕೆ ಕೊನೆಗೂ ಗಂಟುಬಿದ್ದಿದ್ದಾರೆ.
ನನ್ನ ಗೆಳೆಯರೂ ಮೊದಲು ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರೂ ಆಗಿದ್ದ ಉಪನ್ಯಾಸಕರೊಬ್ಬರು, ಅನಂತರ ಪ್ರಗತಿಪರರ ಎಡಚರ ಕೂಟ ಸೇರಿ ಆರೆಸ್ಸೆಸ್ ಹಾಗೂ ಸಂಘ ಪರಿವಾರದ ವಿರುದ್ಧ ಸಮಯ, ಸನ್ನಿವೇಶ ಒದಗಿದಾಗಲೆಲ್ಲ ಟೀಕಾಸ್ತ್ರಗಳನ್ನು ಬಿಟ್ಟು ಸಮಾಧಾನಪಟ್ಟುಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅವರು ಸದಾ ಸಕ್ರಿಯರು. ಮೋದಿಯವರನ್ನು ಕುಟುಕಲು ಈಚೆಗೆ ಫೇಸ್‌ಬುಕ್‌ನಲ್ಲಿ ಈ ʼಮಹನೀಯರುʼ ಎರಡು ಚಿತ್ರಗಳನ್ನು ಅಕ್ಕಪಕ್ಕದಲ್ಲಿ ಜೋಡಿಸಿಟ್ಟಿದ್ದರು. ಒಂದು ಚಿತ್ರದಲ್ಲಿ ಡಾ.ಮನಮೋಹನ ಸಿಂಗ್ ತನಗಿಂತಲೂ ಎತ್ತರಕ್ಕೆ ಕಡತಗಳನ್ನು ಮೇಜಿನ ಮೇಲೆ ಪೇರಿಸಿಕೊಂಡು ಕತ್ತುಬಗ್ಗಿಸಿ ಒಂದಾದ ಮೇಲೊಂದು ಕಡತಕ್ಕೆ ನಿರಂತರ ಉಸಿರುಗಟ್ಟಿ ಸಹಿ ಹಾಕುತ್ತಿರುವ ಚಿತ್ರ. ಇನ್ನೊಂದು: ಪ್ರಧಾನಿ ಮೋದಿ ಆರಾಮವಾಗಿ ತಮ್ಮ ಮನೆಯ ಪಾರ್ಕ್‌ನಲ್ಲಿ ಕುಳಿತು ಬಳಿಸಾರಿದ ನವಿಲಿಗೆ ಕಾಳುಗಳನ್ನು ತಿನ್ನಿಸುತ್ತಿರುವ ಚಿತ್ರ. ಪ್ರಧಾನಿಯಾಗಿದ್ದ ಡಾ.ಸಿಂಗ್ ಸದಾ ಸರಕಾರಿ ಕೆಲಸದಲ್ಲೇ ನಿರತರಾಗಿರುತ್ತಿದ್ದರು. ಪ್ರಧಾನಿಯಾಗಿರುವ ಮೋದಿ ಮಾತ್ರ ಅದರ ಗೋಜಿಗೇ ಹೋಗದೆ ನವಿಲಿಗೆ ಕಾಳು ತಿನ್ನಿಸುವ ಬೇಜವಾಬ್ದಾರಿ ವರ್ತನೆ ತೋರುತ್ತಿದ್ದಾರೆ ಎಂದು ಬಿಂಬಿಸುವ ಪ್ರಯತ್ನ ಈ ಪ್ರಗತಿಪರ ಗೆಳೆಯರದ್ದು!
@narendramodi
ಹಾಗಿದ್ದರೆ ಡಾ.ಮನಮೋಹನ ಸಿಂಗ್ ಪ್ರಾಮಾಣಿಕವಾಗಿ ದೇಶಹಿತ ಗಮನದಲ್ಲಿಟ್ಟುಕೊಂಡು ಹತ್ತು ವರ್ಷ ʼಅಮೋಘ ಸೇವೆʼ ಸಲ್ಲಿಸಿದರೆ? ಅವರು ಪ್ರಧಾನಿಯಾಗಿದ್ದಾಗ ಹಲವಾರು ಭ್ರಷ್ಟಾಚಾರ ಹಗರಣಗಳು ಬಯಲಾಗಿ, ಸರಕಾರದ ಮರ್‍ಯಾದೆ ಮಾನ ಹರಾಜಾಗಿದ್ದೇಕೆ? ಈ ಪ್ರಶ್ನೆಗೆ ಮಾತ್ರ ಈ ಪ್ರಗತಿಪರ ಗೆಳೆಯರು ಉತ್ತರಿಸುವ ಗೋಜಿಗೆ ಹೋಗುವುದಿಲ್ಲ. ಮೋದಿಯನ್ನು ವ್ಯಂಗ್ಯವಾಗಿ ಟೀಕಿಸುವುದನ್ನೂ ಅವರು ಬಿಡುವುದಿಲ್ಲ. ಬಿಡಿ, ಮೋದಿಯನ್ನು ಟೀಕಿಸಲು ಅವರಿಗೆ ಸ್ವಾತಂತ್ರ್ಯವಿದೆ! ಆದರೆ, ಮನಮೋಹನ್ ಸಿಂಗ್ ಕಾಲದಲ್ಲಿ ಎಂತೆಂಥ ಮಹಾಮೋಸ, ವಂಚನೆ ಪ್ರಕರಣಗಳು ನಡೆದು ಹೋದವೆಂದು ಗೊತ್ತಾದರೆ ಎಂಥವರಿಗೂ ಆಘಾತವಾಗುತ್ತದೆ. ಅಂತಹುದೊಂದು ಮಹಾಮೋಸ ವಿದ್ಯಮಾನವನ್ನು ಸುಮ್ಮನೆ ಓದುತ್ತಾ ಹೋಗಿ.
ಏನಿದು ಮಹಾಮೋಸ?
ಅದು 1992ನೇ ಇಸವಿ. ಅಮೆರಿಕದ ಹೆಸರಾಂತ ಕಂಪನಿ ಎನ್ರಾನ್, ಭಾರತ ಸರಕಾರ ಮತ್ತು ಮಹಾರಾಷ್ಟ್ರ ಸರಕಾರಗಳೊಂದಿಗೆ ಒಪ್ಪಂದ ಮಾಡಿಕೊಂಡು ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ದಾಭೋಲ್‌ನಲ್ಲಿ ಒಂದು ವಿದ್ಯುತ್ ಯೋಜನೆಗೆ ಕೈ ಹಾಕಿತು. ಆದರೆ ಸ್ಥಳೀಯರ ಭಾರೀ ವಿರೋಧದಿಂದಾಗಿ ಆ ಯೋಜನೆಯನ್ನು ಕೈಬಿಡಬೇಕಾಗಿ ಬರುತ್ತದೆ. ಕುಪಿತಗೊಂಡ ಎನ್ರಾನ್ ಕಂಪನಿ ಭಾರತ ಸರಕಾರದ ವಿರುದ್ಧ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ನಷ್ಟ ಭರಿಸುವಂತೆ ದಾವೆ ಹೂಡಿತು.
ಆಗ ಕೇಂದ್ರದಲ್ಲಿ ಎನ್‌ಡಿಎ ನೇತೃತ್ವದ ವಾಜಪೇಯಿ ಸರಕಾರ ಖ್ಯಾತ ವಕೀಲ ಹರೀಶ್ ಸಾಳ್ವೆಯವರನ್ನು ಭಾರತ ಸರಕಾರದ ಪರವಾಗಿ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ವಕಾಲತು ವಹಿಸುವಂತೆ ನೇಮಕ ಮಾಡಿಕೊಂಡಿತು. ಆದರೆ, ಅಚ್ಚರಿಯ ಸಂಗತಿಯೆಂದರೆ ಭಾರತದ ಪ್ರಜೆಯಾದ ಹಾಗೂ ವೃತ್ತಿಯಲ್ಲಿ ವಕೀಲರಾದ ಪಿ.ಚಿದಂಬರಂ ಎನ್ರಾನ್ ಪರ ವಕಾಲತು ವಹಿಸಿ ಭಾರತ ಸರಕಾರದ ವಿರುದ್ಧವೇ ಹೋರಾಡಲು ಒಪ್ಪಿಕೊಂಡರು.
ಚಿದಂಬರ ಕರಾಮತ್ತು!
ದುರಾದೃಷ್ಟವಶಾತ್ 2004ರಲ್ಲಿ ವಾಜಪೇಯಿ ಸರಕಾರ ಪತನಗೊಂಡು ಸೋನಿಯಾ ನೇತೃತ್ವದ ಯುಪಿಎ ಸರಕಾರ ಅಧಿಕಾರಕ್ಕೇರಿತು. ಡಾ.ಮನಮೋಹನ ಸಿಂಗ್ ಪ್ರಧಾನಿಯಾದರೆ, ಪಿ.ಚಿದಂಬರಂ ಹಣಕಾಸು ಸಚಿವರಾಗಿ ಅಧಿಕಾರ ವಹಿಸಿಕೊಂಡರು. ಈ ಪರಿಸ್ಥಿತಿಯಲ್ಲಿ ಪಿ.ಚಿದಂಬರಂ ಅವರು ಎನ್ರಾನ್ ಪರವಾಗಿ ಭಾರತ ಸರಕಾರದ ವಿರುದ್ಧ ವಕಾಲತು ವಹಿಸುವುದು ಅಸಾಧ್ಯವಾಗುತ್ತದೆ. ಆದರೂ ಚಿದಂಬರಂ, ಎನ್ರಾನ್ ಕಂಪನಿಯ ಕಾನೂನು ಸಲಹೆಗಾರರಾಗಿ ಮುಂದುವರಿಯುತ್ತಾರೆ.
ಮುಂದೆ ಸಂಭವಿಸುವ ಬೆಳವಣಿಗೆ ಮಾತ್ರ ಕಲ್ಪನೆಗೂ ನಿಲುಕದ್ದು ಹಾಗೂ ಅತ್ಯಂತ ಅಘಾತಕಾರಿ. ಹಣಕಾಸು ಸಚಿವರಾಗಿದ್ದ ಪಿ.ಚಿದಂಬರಂ ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡು ವಾಜಪೇಯಿ ನೇಮಿಸಿದ್ದ ದೇಶಾಭಿಮಾನಿ, ನಿಷ್ಠಾವಂತ ವಕೀಲ ಹರೀಶ್ ಸಾಳ್ವೆಯವರಿಂದ ಕೇಸನ್ನು ಕಿತ್ತು ಪಾಕಿಸ್ತಾನಿ ಮೂಲದ ವಕೀಲ ಖಬರ್ ಖುರೇಷಿಯನ್ನು ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಭಾರತ ಸರಕಾರದ ಪರ ವಕಾಲತು ವಹಿಸಲು ನೇಮಕ ಮಾಡಿದರು. ಭಾರತ ಸರಕಾರದ ಪರ ಹೋರಾಡಲು ಪಾಕಿಸ್ತಾನಿ ಮೂಲದ ವಕೀಲ! ಹೇಗಿದೆ ನೋಡಿ ಚಿದಂಬರ ಕರಾಮತ್ತು! ಒಂದು ರೀತಿಯಲ್ಲಿ ಜನಗಳ ಜೀವ ಕಾಯುವ ಕೆಲಸವನ್ನು ಉಗ್ರರ ಪಾಲಿಗೆ ವಹಿಸಿದ ಹಾಗೆ!
ಅಷ್ಟಾಗಿದ್ದರೆ ಪರವಾಗಿರಲಿಲ್ಲ. ಈ ಖುರೇಶಿಗೆ ಭಾರತದ ಪರವಾಗಿ ವಕಾಲತಿಗೆ ನೀಡಿದ ಸೇವಾಶುಲ್ಕ 1,400 ಕೋಟಿ ರೂ.! ಸಾಳ್ವೆ, ಅಮೆರಿಕ ಮೂಲದ ಟ್ರಿಬ್ಯೂನಲ್ ಕೋರ್ಟಿನಲ್ಲಿ ವಾದಿಸಲು ದಿನವೊಂದಕ್ಕೆ ಕೇವಲ 1 ಲಕ್ಷ ರೂ. ಸೇವಾ ಶುಲ್ಕಕ್ಕೆ ಸಮ್ಮತಿಸಿದ್ದರು. ಆದರೆ ಭಾರತ ಸರಕಾರ ಇದಕ್ಕೊಪ್ಪಲಿಲ್ಲ. ಬೇಕಿದ್ದರೆ ಖುರೇಶಿಗೆ ಸಹಾಯಕನಾಗಿ ಕೆಲಸ ಮಾಡಿರೆಂದು ಸಾಳ್ವೆಗೆ ಚಿದಂಬರಂ ತಿಳಿಸಿದರು. ಸ್ವಾಭಿಮಾನಧನ ವ್ಯಕ್ತಿ ಸಾಳ್ವೆ ಇದಕ್ಕೊಪ್ಪದೆ ಈ ಮೊಕದ್ದಮೆಯ ಸಹವಾಸವೇ ಬೇಡವೆಂದು ಹೊರನಡೆದರು.
ಪಾಕಿಸ್ತಾನದ ವಕೀಲನಿಗೆ 1,400 ಕೋಟಿ ರೂ. ಶುಲ್ಕ
ಇದೇ ಹರೀಶ್ ಸಾಳ್ವೆ ಅವರು ಕುಲ್‌ಭೂಷಣ್ ಜಾಧವ್ ಬಿಡುಗಡೆ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಖಬರ್ ಖುರೇಷಿ ವಾದಕ್ಕೆ ಪ್ರತಿವಾದಿಸಲು ಭಾರತ ಸರಕಾರದಿಂದ ಪಡೆದುಕೊಂಡ ಸೇವಾಶುಲ್ಕ ಕೇವಲ ಒಂದು ರೂಪಾಯಿ ಮಾತ್ರ!
ಭಾರತ ಸರಕಾರವನ್ನು ಸೋಲಿಸಲು ಡಾ.ಸಿಂಗ್ ಸರಕಾರ ಖುರೇಷಿಗೆ ನೀಡಿದ್ದು 1,400 ಕೋಟಿ ರೂ., ಪರಿಣಾಮವಾಗಿ 12 ತಿಂಗಳೊಳಗೆ ಸೋತು 38 ಸಾವಿರ ಕೋಟಿ ರೂ.ಗಳನ್ನು ಎನ್ರಾನ್ ಕಂಪನಿಗೆ ಪಾವತಿಸಬೇಕಾಗಿ ಬಂತು. ಈ ಭಯಾನಕ ವಿದ್ಯಮಾನ ಮಾತ್ರ ಆಗ ಸುದ್ದಿಯಾಗಲೇ ಇಲ್ಲ. ಏಕೆಂದರೆ, ಪ್ರಧಾನಿ ಜೊತೆಗೆ ವಿದೇಶಗಳಿಗೆ ತೆರಳಿ ಸರಕಾರಿ ಖರ್ಚಿನಲ್ಲಿ ಮೋಜು ಮಸ್ತಿ ಮಾಡಿ, ಪದ್ಮ ಪ್ರಶಸ್ತಿಗಳನ್ನೂ ಹೊಡೆದುಕೊಂಡ, ಸ್ವಾಭಿಮಾನ, ದೇಶಾಭಿಮಾನವನ್ನು ಎಂಜಲು ಕಾಸಿಗೆ ಮಾರಿಕೊಂಡ ಮಾಧ್ಯಮದ ದೊಡ್ಡ ಪಡೆಯೇ ಆಗಿತ್ತು. ಕಾವಲು ನಾಯಿಗಳಾಗಿ ಪ್ರಜಾತಂತ್ರ ವ್ಯವಸ್ಥೆಯನ್ನು ರಕ್ಷಿಸಬೇಕಾಗಿದ್ದವರು ಮಾಂಸದ ತುಣುಕಿಗೆ ಜೊಲ್ಲು ಸುರಿಸುವ ಬೀದಿ ನಾಯಿಗಳಾಗಿಬಿಟ್ಟಿದ್ದರು. ಹಾಗಾಗಿ ಭಾರತದ ಮಾನ ಹರಾಜಾದ ಸುದ್ದಿ ಬಯಲಾಗಲೇ ಇಲ್ಲ.
ಎನ್ರಾನ್ ಕಂಪನಿಗೆ ಭಾರತ ಸರಕಾರ ದಂಡದ ರೂಪದಲ್ಲಿ ಪಾವತಿಸಿದ ಬರೋಬ್ಬರಿ 38 ಸಾವಿರ ಕೋಟಿ ಭರ್ಜರಿ ಮೊತ್ತದಲ್ಲಿ ಯಾರ್‍ಯಾರ ಜೇಬಿಗೆ ಎಷ್ಟೆಷ್ಟು ಹೋಯಿತು ಎನ್ನುವುದು ಪಿ.ಚಿದಂಬರಂಗೆ ಮಾತ್ರ ಗೊತ್ತಿರಬಹುದು!
ಡಾ.ಮನಮೋಹನ ಸಿಂಗ್ ತಡೆಯಬಹದಿತ್ತು
ಡಾ.ಮನಮೋಹನ ಸಿಂಗ್ ದಕ್ಷ, ಸಮರ್ಥ ಪ್ರಧಾನಿಯಾಗಿದ್ದಿದ್ದರೆ ಎನ್ರಾನ್ ಮೊಕದ್ದಮೆಯಲ್ಲಿ ಭಾರತದ ಪರವಾಗಿ ವಾದಿಸಲು ಪಾಕಿಸ್ತಾನಿ ಖುರೇಷಿಯನ್ನು ದುಬಾರಿ ಶುಲ್ಕ ತೆತ್ತು ನೇಮಿಸಿಕೊಂಡಿದ್ದೇಕೆ? ರಿಯಾಯಿತಿ ಶುಲ್ಕ ಪಡೆವ ಸಮರ್ಥ ವಕೀಲ ಹರೀಶ್ ಸಾಳ್ವೆಯವರನ್ನು ಕೈಬಿಟ್ಟಿದ್ದೇಕೆ? ಅಸಲಿಗೆ ಈ ಕೇಸನ್ನು ಭಾರತದ ಪರವಾಗಿ ಗೆಲ್ಲಬೇಕೆಂಬ ಇಚ್ಛೆ ಮನಮೋಹನ ಸಿಂಗ್‌ಗಾಗಲಿ, ಪಿ.ಚಿದಂಬರಂಗಾಗಲಿ ಖಂಡಿತಾ ಇರಲಿಲ್ಲ. ಕೇಸನ್ನು ಸೋತರೆ ಭಾರತದ ಮರ್‍ಯಾದೆ ಮಣ್ಗೂಡುತ್ತದೆ ಎಂಬ ಕಾಳಜಿಯೂ ಇರಲಿಲ್ಲ.
ಮನಮೋಹನ್ ಸಿಂಗ್, ಪಿ.ಚಿದಂಬರಂ ಅದೆಂಥ ಮನೆಮುರುಕರಾಗಿದ್ದರು, ದೇಶದ್ರೋಹಿಗಳಾಗಿದ್ದರು ಎಂಬುದಕ್ಕೆ ಎನ್ರಾನ್ ಪ್ರಕರಣದ ವಿದ್ಯಮಾನವೊಂದೇ ಸಾಲದೆ?
Dr. Manmohan singh & P Chidambaram photos curtesy: Wikipedia.
ದು.ಗು. ಲಕ್ಷ್ಮಣ
- ನಮ್ಮ ನಾಡಿನ ಹಿರಿಯ ಪತ್ರಕರ್ತರು ಹಾಗೂ ‘ಹೊಸ ದಿಗಂತ’ ದಿನಪತ್ರಿಕೆಯ ವಿಶ್ರಾಂತ ಸಂಪಾದಕರು. ಜತೆಗೆ, ‘ವಿಕ್ರಮ’ ವಾರಪತ್ರಿಕೆಯೆ ಸಂಪಾದಕರೂ ಆಗಿದ್ದರು. ನೇರ, ನಿಷ್ಠುರ ಬರವಣಿಗೆಗೆ ಅವರು ಪ್ರಸಿದ್ಧಿ. ಬದ್ಧತೆ, ಪ್ರಾಮಾಣಿಕತೆಯ ಪತ್ರಿಕೋದ್ಯಮದಲ್ಲಿ ಬಲುದೊಡ್ಡ ಹೆಸರು ಅವರದು. ತೀಕ್ಷ್ಣ ಸಂಪಾದಕೀಯಗಳನ್ನು ಬರೆದ ವಿರಳ ಸಂಪಾದಕ. ’ನೇರನೋಟ’ ಅವರ ಜನಪ್ರಿಯ ಅಂಕಣ. ಲಕ್ಷ್ಮಣರು ಹಲವಾರು ಪುಸ್ತಕಗಳನ್ನೂ ಬರೆದಿದ್ದಾರೆ.