ಬೆಂಗಳೂರು: ಕೋವಿಡ್ ವಿರುದ್ಧ ಭಾರತ ನಡೆಸುತ್ತಿರುವ ಹೋರಾಟ ನಿರ್ಣಾಯಕ ಹಂತಕ್ಕೆ ಬಂದಿದ್ದು, ಇಂದಿನಿಂದ (ಮಾರ್ಚ್ 1) ದೇಶದ ಉದ್ದಗಲಕ್ಕೂ 2ನೇ ಸುತ್ತಿನ ಲಸಿಕಾ ಅಭಿಯಾನ ಆರಂಭವಾಯಿತು.
ಬೆಳಗ್ಗೆ 9 ಗಂಟೆ ಹೊತ್ತಿಗೆ ದೇಶಾದ್ಯಂತ ಈ ಅಭಿಯಾನ ಆರಂಭವಾಗಿದ್ದು, ಅದಕ್ಕೆ ಕೆಲ ಹೊತ್ತಿನ ಮೊದಲೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಎರಡನೇ ಸುತ್ತಿನ ಲಸಿಕೆ ಅಭಿಯಾನದಲ್ಲಿ ಕೋವಿಡ್-19 ಲಸಿಕೆಯ ಮೊದಲ ಡೋಸ್ ಹಾಕಿಸಿಕೊಂಡರು. ಇದರೊಂದಿಗೆ ಎರಡನೇ ಸುತ್ತಿನ ಲಸಿಕೆ ಅಭಿಯಾನ ವಿಧ್ಯುಕ್ತವಾಗಿ ಆರಂಭವಾಯಿತು.
ಬೆಳಗ್ಗೆಯೇ ದಿಲ್ಲಿಯ ಏಮ್ಸ್ ಆಸ್ಪತ್ರೆಗೆ ಆಗಮಿಸಿದ ಪ್ರಧಾನಿಗೆ ಪುದುಚೆರಿ ಮೂಲದ ಸಿಸ್ಟರ್ ಪಿ.ನಿವೇದಿತಾ ಅವರು ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದ ಕೊವ್ಯಾಕ್ಸಿನ್ ಲಸಿಕೆಯನ್ನು ಹಾಕಿದರು. ಈ ಸಂದರ್ಭದಲ್ಲಿ ಲಸಿಕೆ ನೀಡುವ ವಿಧಾನ, ಏಮ್ಸ್‌ನಲ್ಲಿ ಮಾಡಿರುವ ವ್ಯವಸ್ಥೆಗಳನ್ನು ಕ್ಲುಪ್ತವಾಗಿ ಪಿಎಂ ಪರಿಶೀಲನೆ ಮಾಡಿದರು. ಲಸಿಕೆ ಪಡೆದ ನಂತರ, ತಮಗೆ ಲಸಿಕೆ ಹಾಕಿದ ಸಿಸ್ಟರ್‌ಗೆ ಹಾಗೂ ಅಲ್ಲಿನ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದರು.
ಇದಾದ ಮೇಲೆ ಟ್ವೀಟ್ ಮಾಡಿದ ಪ್ರಧಾನಿ, “ಕೋವಿಡ್-19 ವಿರುದ್ಧ ಜಗತ್ತಿನೆಲ್ಲಡೆ ಹೋರಾಡಲು ಸೂಕ್ತ ಸಮಯದಲ್ಲಿ ಹಾಗೂ ಕ್ಷಿಪ್ರವಾಗಿ ನಮ್ಮ ವಿಜ್ಞಾನಿಗಳು ಮತ್ತು ವೈದ್ಯರು ಕೆಲಸ ಮಾಡಿದ್ದಾರೆ. 2ನೇ ಸುತ್ತಿನಲ್ಲಿ ಅರ್ಹರೆಲ್ಲರೂ ಲಸಿಕೆ ಹಾಕಿಸಿಕೊಳ್ಳಿ. ನಾವೆಲ್ಲರೂ ಒಟ್ಟು ಸೇರಿ ಕೋವಿಡ್ ಮುಕ್ತ ಭಾರತ ನಿರ್ಮಿಸೋಣ” ಎಂದು ಬರೆದಿದ್ದಾರೆ. ಕೆಲ ಹೊತ್ತಿನಲ್ಲಿಯೇ ಸಾವಿರಾರು ಟ್ವಿಟ್ಟಿಗರು ಮೋದಿ ಟ್ವೀಟ್ ಅನ್ನು ಲೈಕ್ ಮಾಡಿ ರೀ ಟ್ವೀಟ್ ಮಾಡಿದರು.
60 ವರ್ಷಕ್ಕಿಂತಲೂ ಮೇಲ್ಪಟ್ಟ ಹಾಗೂ 45 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಆನಾರೋಗ್ಯ ಸಮಸ್ಯೆಗಳನ್ನು ಹೊಂದಿರುವವರಿಗೆ ಇಂದಿನಿಂದ ಲಸಿಕೆ ನೀಡಲಾಗುತ್ತಿದೆ. ಅರ್ಹ ಫಲಾನುಭವಿಗಳು ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು. ಬೆಳಗ್ಗೆ 9 ಗಂಟೆಯಿಂದಲೇ https://www.cowin.gov.in/ ಪೋರ್ಟಲ್‌ನಲ್ಲಿ ನೋಂದಣಿ ಆರಂಭವಾಗಲಿದೆ. ಕೋ–ವಿನ್ ಆ್ಯಪ್ ಅಥವಾ ಆರೋಗ್ಯ ಸೇತು ಆ್ಯಪ್ ಮೂಲಕವೂ ಲಸಿಕೆ ಪಡೆಯುವ ಸಮಯವನ್ನು ಯಾವುದೇ ಸಮಯದಲ್ಲೂ, ಯಾವುದೇ ಸ್ಥಳದಿಂದಲೂ ಕಾದಿರಿಸಬಹುದು. ಕೇಂದ್ರ ಆರೋಗ್ಯ ಸಚಿವಾಲಯ ನೀಡುರವ ಮಾಹಿತಿಯಂತೆ, 60 ವರ್ಷ ಮೇಲ್ಪಟ್ಟವರು ಹಾಗೂ 2022 ಜನವರಿ 1ಕ್ಕೆ 60 ವರ್ಷ ತುಂಬುವವರು ಲಸಿಕೆ ನೋಂದಣಿಗೆ ಅರ್ಹರಾಗಿದ್ದಾರೆ.
ಇನ್ನು; ಇತರೆ ಯಾವುದೇ ಕಾಯಿಲೆಗಳನ್ನು ಹೊಂದಿರುವ, 2022 ಜನವರಿ 1ಕ್ಕೆ 45 ವರ್ಷ ತುಂಬುವವರು ಇಲ್ಲವೇ ಈಗಾಗಲೇ 45 ದಾಟಿದವರು ಕೂಡ ನೋಂದಣಿಗೆ ಅರ್ಹರಾಗಿರುತ್ತಾರೆ. ಈ ಎಲ್ಲ ಮಾಹಿತಿಯನ್ನು ಈಗಾಗಲೇ ಕೇಂದ್ರ ಸರಕಾರ ಎಲ್ಲ ರಾಜ್ಯಗಳ ಜತೆ ಹಂಚಿಕೊಂಡಿದೆ.
ನೋಂದಣಿ ಮಾಡಿಕೊಳ್ಳುವುದು ಹೇಗೆ?
ಒಂದು ಮೊಬೈಲ್ ಸಂಖ್ಯೆ ನೀಡಿ ಗರಿಷ್ಠ ನಾಲ್ವರು ನೋಂದಣಿ ಮಾಡಿಕೊಳ್ಳಬಹುದು. ಆಧಾರ್, ವೋಟರ್ ಐಡಿ, ಪಾಸ್‌ಪೋರ್ಟ್, ಪ್ಯಾನ್‌ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಎನ್‌ಪಿಆರ್ ಸ್ಮಾರ್ಟ್‌ಕಾರ್ಡ್ ಹಾಗೂ ಫೋಟೋವುಳ್ಳ ನಿವೃತ್ತಿ ವೇತನದ ಪತ್ರವಿದ್ದರೂ ಸಾಕು, ನೋಂದಣಿ ಮಾಡಬಹುದು. ದೇಶಾದ್ಯಂತ ಕೇಂದ್ರ ಸರಕಾರವು 8,600ಕ್ಕೂ ಹೆಚ್ಚು ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳನ್ನು ಗುರುತಿಸಿದೆ.