ನಮ್ಮಲ್ಲಿ ಸಿಎಂ ಪದವಿಗೆ ಪೈಪೋಟಿ ಇಲ್ಲ; ಮೈಸೂರು ಬಿಕ್ಕಟ್ಟು ಸಣ್ಣ ಸಮಸ್ಯೆ
ಮುಳಬಾಗಿಲು: ರಾಜ್ಯ ಕಾಂಗ್ರೆಸ್‌ಗೆ ಚೈತನ್ಯ ನೀಡಲು ನಾಡಿನ ದೇವಮೂಲೆಯಿಂದಲೇ ಕೆಲಸ ಆರಂಭ ಮಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸೋಮವಾರ ಬೆಳಗ್ಗೆ ಕುರುಡುಮಲೆಯ ಐತಿಹಾಸಿಕ ಮಹಾ ಗಣಪತಿಗೆ ವಿಶೇಷ ಪೂಜೆ ಸಲ್ಲಿದರು.
ಬೆಂಗಳೂರಿಗೆ ಹತ್ತಿರವೂ, ಒಂದ ಕಾಲದಲ್ಲಿ ಕಾಂಗ್ರೆಸ್ ಅಬೇಧ್ಯ ಕೋಟೆಯಾಗಿದ್ದ ಕೋಲಾರದಿಂದಲೇ ತಮ್ಮ ಕೆಲಸವನ್ನು ಶುರು ಮಾಡಿರುವ ಡಿಕೆಶಿ, ಕುರುಡುಮಲೆಯಲ್ಲಿ ಪೂಜೆ ಸಲ್ಲಿಸಿದ ನಂತರ ಮುಳಬಾಗಿಲಿನ ಖಾದರ್ ಆಲಿ ದರ್ಗಾಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ಜಿಲ್ಲೆಗೆ ಬರುವ ಮುನ್ನ ಕರಾರುವಕ್ಕಾದ ಪ್ಲ್ಯಾನ್ ಮೂಲಕವೇ ಬಂದ ಡಿಕೆಶಿ, ಯಾರಿಗೆ ಯಾವ ಸಂದೇಶ ಮುಟ್ಟಿಸಬೇಕೋ ಅದನ್ನು ಮಾಡಿದರು. ತಮ್ಮ ಭೇಟಿಯ ಕಾಲಕ್ಕೆ ಜಿಲ್ಲೆಯ ಎಲ್ಲ ಮುಖಂಡರು ಜತೆಯಲ್ಲಿ ಇರುವಂತೆ ನೋಡಿಕೊಂಡರಲ್ಲದೆ, ಪಕ್ಷ ಬಲಪಡಿಸಬೇಕಾದರೆ ಒಗ್ಗಟ್ಟು ಬಹಳ ಮುಖ್ಯ ಎಂಬುದನ್ನು ನಾಯಕರಿಗೆ ಮನದಟ್ಟು ಮಾಡಿಕೊಟ್ಟರು.
ಕೇಂದ್ರದ ಮಾಜಿ ಸಚಿವ ಕೆ.ಹೆಚ್ ಮುನಿಯಪ್ಪ, ವಿಧಾನಸಭೆ ಮಾಜಿ ಸಭಾಧ್ಯಕ್ಷ ಕೆ.ಆರ್.ರಮೇಶ್ ಕುಮಾರ್, ವಿಧಾನ ಪರಿಷತ್ ಸದಸ್ಯ ನಸೀರ್ ಅಹಮದ್ ಸೇರಿದಂತೆ ಜಿಲ್ಲೆಯ ಬಹುತೇಕ ಎಲ್ಲ ಮುಖಂಡರು ಡಿಕೆಶಿ ಜತೆಯಲ್ಲಿದ್ದರು. ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಅವರೂ ಈ ಸಂದರ್ಭದಲ್ಲಿದ್ದರು.
ಇದಾದ ಮೇಲೆ ಡಿಕೆಶಿ ಅವರು ಮುಳಬಾಗಿಲಿನಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಹೀಗೆ ಬಿಡುವಿಲ್ಲದ ಕಾರ್ಯಕ್ರಮಗಳಲ್ಲಿ ಭಾಗಿಯಾದರು.
ಪಕ್ಷದಲ್ಲಿ ಗೊಂದಲ ಇಲ್ಲ
ಮುಳಬಾಗಿಲಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಡಿಕೆಶಿ; “ಪಕ್ಷದಲ್ಲಿ ಯಾವುದೇ ಗೊಂದಲ, ಭಿನ್ನಮತ ಇಲ್ಲ. ಮನೆ ಎಂದ ಮೇಲೆ ಸಣ್ಣಪುಟ್ಟ ಅಸಮಾಧಾನ ಇರುತ್ತದೆ. ನಮ್ಮಲ್ಲೂ ಅಷ್ಟೇ” ಎಂದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಗಾದಿಗೇರಲು ಕಾಂಗ್ರೆಸ್‌ನಲ್ಲಿ ಪೈಪೋಟಿ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಅದೆಲ್ಲವೂ ಸುಳ್ಳು. ಪಕ್ಷವನ್ನು ಅಧಿಕಾರಕ್ಕೆ ತರುವುದಷ್ಟೇ ನಮ್ಮ ಗುರಿ. ಇನ್ನು, ರಾಜ್ಯದಲ್ಲಿ ಮುಂದೆ ಬಿಜೆಪಿ ಅಧಿಕಾರಕ್ಕೆ ಬರುವುದು ಸಾಧ್ಯವಿಲ್ಲ. ಬಿಜೆಪಿಯ ದುರಾಡಳಿತಕ್ಕೆ ರಾಜ್ಯದ ಜನರು ರೋಸಿ ಹೋಗಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಖಂಡಿತವಾಗಿಯೂ ಅಧಿಕಾರಕ್ಕೆ ಬರುತ್ತದೆ. ಜನರು ಆಶೀರ್ವಾದ ಮಾಡುತ್ತಾರೆ ಎಂಬ ವಿಶ್ವಾಸವನ್ನು ಡಿ.ಕೆ.ಶಿವಕುಮಾರ್ ವ್ಯಕ್ತಪಡಿಸಿದರು.
ಎಲ್ಲೆಲ್ಲಿ ಪಕ್ಷ ದುರ್ಬಲವಾಗಿದೆಯೋ ಅಲ್ಲೆಲ್ಲ ಪಕ್ಷವವನ್ನು ಬಲಪಡಿಸಲಾಗುವುದು. ರಾಜ್ಯದ ಪ್ರತಿಯೊಂದು ಕ್ಷೇತ್ರಕ್ಕೂ ನಾನು ಹೋಗುತ್ತೇನೆ. 1999ರಲ್ಲಿ ಎಸ್.ಎಂ.ಕೃಷ್ಣ ಅವರು ಪಾಂಚಜನ್ಯ ಮೊಳಗಿಸಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದರು. ನಾನು ಕೂಡ ಪಾಂಚಜನ್ಯ ಮೊಳಗಿಸಿ ಪಕ್ಷವನ್ನು ಅಧಿಕಾರಕ್ಕೆ ತರುತ್ತೇನೆ. ಪಕ್ಷದ ಎಲ್ಲ ನಾಯಕರು, ಕಾರ್ಯಕರ್ತರ ಸಹಕಾರದೊಂದಿಗೆ ಕೆಲಸ ಮಾಡುತ್ತೇನೆ ಎಂದು ಡಿಕೆಶಿ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
ಮೈಸೂರು ಸಮಸ್ಯೆ ಚಿಕ್ಕದು
ಮೈಸೂರು ಪಾಲಿಕೆಗೆ ಸಂಬಂಧಿಸಿದಂತೆ ಉಂಟಾಗಿರುವ ಸಮಸ್ಯೆ ತೀರಾ ಚಿಕ್ಕದು. ಅದನ್ನು ಸರಿ ಮಾಡಲಾಗುವುದು ಎಂದು ಡಿಕೆಶಿ, ಸ್ಥಳೀಯ ಮಟ್ಟದಲ್ಲಿ ಈ ರೀತಿಯ ಸಣ್ಣಪುಟ್ಟ ಸಮಸ್ಯೆಗಳಿರುತ್ತವೆ. ಅವೆಲ್ಲವನ್ನೂ ಪಕ್ಷದ ಒಳಗೆ ಸರಿ ಮಾಡಿಕೊಳ್ಳುತ್ತೇವೆ ಎಂದರು.
ಕೆಲ ವಿಚಾರಗಳನ್ನು ಮುಕ್ತವಾಗಿ ಹೇಳಲಾಗದು. ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಅವರು ಮೈಸೂರು ಪಾಲಿಕೆ ಮೈತ್ರಿ ವಿಚಾರವಾಗಿ ನನಗೆ ಮೊಬೈಲ್ ಕರೆ ಮಾಡಿದ್ದರು. ಅದು ನಿಜ. ಹಿಂದೆ ಅವರು ಮಾತು ಕೊಟ್ಟಿದ್ದ ಹಾಗೆ ಈ ಬಾರಿಯೂ ಮೈತ್ರಿಯನ್ನು ಮುಂದುವರಿಸಿ ಮೇಯರ್ ಪಟ್ಟವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಬೇಕಿತ್ತು. ಆ ವಚನವನ್ನು ಅವರು ಪಾಲಿಸಬೇಕಿತ್ತು, ಉಳಿದಂತೆ ಈ ಬಗ್ಗೆ ಮೈಸೂರಿನ ತನ್ವೀರ್ ಸೇಠ್ ಅವರ ಜತೆ ಮಾತುಕತೆ ನಡೆಸುತ್ತೇನೆ” ಎಂದು ಡಿ.ಕೆ.ಶಿವಕುಮಾರ್ ಹೇಳಿದರು.