M Krishnappa Chikkaballapur
ಚಿಕ್ಕಬಳ್ಳಾಪುರ: ಫೆಬ್ರವರಿ 22ರಂದು ಹಿರೇನಾಗವೇಲಿ ಸಮೀಪದ ಗಣಿಯೊಂದಕ್ಕೆ ಸೇರಿದ ಜಿಲೆಟನ್ ಕಡ್ಡಿಗಳ ಸ್ಫೋಟದಿಂದ ಆರು ಜನ ಧಾರುಣವಾಗಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಅವರು ಜಿಲ್ಲೆಯ ಎಲ್ಲ ಕ್ವಾರಿಗಳು ಮತ್ತು ಕ್ರಷರ್ ಮಾಲೀಕರಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಜಿಲ್ಲೆಯ ಎಲ್ಲ ಕ್ವಾರಿಗಳು ಮತ್ತು ಕ್ರಷರ್ ಮಾಲೀಕರ ಜತೆಗೆ, ಎಲ್ಲ ಸರ್ಕಲ್ ಇನಸ್ಪೆಕ್ಟರ್‌ಗಳು-ಸಬ್ ಇನಸ್ಪೆಕ್ಟರ್‌ಗಳ ಸಭೆ ಕರೆದು ಎಚ್ಚರಿಕೆ ನೀಡಿದರಲ್ಲದೆ, ನಿಯಮಬಾಹಿರವಾಗಿ ಯಾರಾದರೂ ಕ್ವಾರಗಳನ್ನಾಗಲಿ ಅಥವಾ ಕ್ರಷರ್‌ಗಳನ್ನು ನಡೆಸಿದರೆ, ಸ್ಫೋಟಗಳನ್ನು ನಡೆಸಿದರೆ ಹೆಡೆಮುರಿ ಕಟ್ಟಲಾಗುವುದು ಎಂದರು.
- ಚಿಕ್ಕಬಳ್ಳಾಪುರ ಜಿ.ಪಂ. ಸಭಾಂಗಣದಲ್ಲಿ ತುಂಬಿದ್ದ ಕ್ವಾರಿ, ಕ್ರಷರ್ ಮಾಲೀಕರು.
ಪುನಾರಂಭ ಮಾಡಬಾರದು
ಎಲ್ಲ ಕ್ವಾರಿ-ಕ್ರಷರ್‌ಗಳನ್ನು ಸ್ಥಗಿತ ಮಾಡಬೇಕು. ನಾವು ಹೇಳುವ ತನಕ ಪುನಾರಂಭ ಮಾಡಬಾರದು. ಪೊಲೀಸರು ಯಾವುದೇ ಕ್ರಷರ್, ಕ್ವಾರಿಗೆ ತಪಾಸಣೆ ಮಾಡಲು ಬಂದರೆ ಎಲ್ಲ ಅಧಿಕೃತ ದಾಖಲೆಗಳೇ ಇರಬೇಕು. ಒಂದು ವೇಳೆ ಇಲ್ಲದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟ ಎಚ್ಚರಿಕೆ ನೀಡಿದರು.
ಕೆಲವರು ಒಂದು ಕ್ರಷರ್‌ಗೆ ಪರವಾನಗಿ ಪಡೆದು, ಅದೇ ಪರವಾನಗಿ ಇಟ್ಟುಕೊಂಡು ಮತ್ತೊಂದೆಡೆ ಕ್ರಷರ್-ಕ್ವಾರಿ ನಡೆಸುತ್ತಿರುವ ಮಾಹಿತಿ ನಮಗೆ ಸಿಕ್ಕಿದೆ. ಕೂಡಲೇ ಅಂಥವರು ಅನಧಿಕೃತ ಕ್ವಾರಿ-ಕ್ರಷರ್ ಅನ್ನು ಸ್ಥಗಿತ ಮಾಡಬೇಕು. ಒಂದು ಎಚ್ಚರಿಕೆ ಮೀರಿ ಅದನ್ನೇ ಮುಂದುವರಿಸಿದರೆ ತಕ್ಕ ಶಾಸ್ತಿ ಮಾಡಲಾಗುವುದು ಎಂದು ಮಿಥುನ್ ಕುಮಾರ್ ಖಡಕ್ ಎಚ್ಚರಿಕೆ ನೀಡಿದರು.
ನಿಯಮಾನುಸಾರವೇ ಸ್ಫೋಟ ಮಾಡಬೇಕು
ಕ್ವಾರಿಗಳಲ್ಲಿ ಪರವಾನಗಿ ಇಲ್ಲದೆ ಯಾವ ಸ್ಫೋಟಗಳನ್ನೂ ಮಾಡುವಂತಿಲ್ಲ. ಸ್ಫೋಟಗಳನ್ನು ನಡೆಸಲು ತಜ್ಞರನ್ನೇ ನೇಮಕ ಮಾಡಿಕೊಳ್ಳಬೇಕು, ಸ್ಫೋಟಕಗಳನ್ನು ಅಧಿಕೃತ ಪೂರೈಕೆದಾರರಿಂದಲೇ ಪಡೆಯಬೇಕು. ಸ್ಫೋಟಗಳನ್ನು ನಿಯಮಾನುಸಾರವೇ ಮಾಡಬೇಕು. ಇದರಲ್ಲಿ ಏನಾದರೂ ಲೋಪದೋಷ ಕಂಡು ಬಂದರೆ ಸುಮ್ಮನಿರುವುದಿಲ್ಲ. ಯಾವುದೇ ಕಾರಣಕ್ಕೂ ಹಿರೇನಾಗವೇಲಿ ಸ್ಫೋಟದಂಥ ಘಟನೆ ನಡೆಯಬಾರದು ಎಂದು ಅವರು ವಾರ್ನಿಂಗ್ ಮಾಡಿದರು.
ಪೊಲೀಸರಿಗೂ ಎಚ್ಚರಿಕೆ
ಇದೇ ವೇಳೆ ಎಲ್ಲ ತಾಲ್ಲೂಕುಗಳ ಸರ್ಕಲ್ ಇನಸ್ಪೆಕ್ಟರ್‌ಗಳು, ಸಬ್ ಇನಸ್ಪೆಕ್ಟರ್‌ಗಳಿಗೂ ಎಸ್‌ಪಿ ಅವರು ಖಡಕ್ ಎಚ್ಚರಿಕೆ ಕೊಟ್ಟರು. ಇನ್ನು ಮುಂದೆ ಯಾವುದೇ ಕಾರಣಕ್ಕೂ ಹಿರೇನಾಗವೇಲಿಯಲ್ಲಿ ಸಂಭವಿಸಿದ ದುರಂತಗಳು ಮರುಕಳಿಸಬಾರದು. ನಿಯಮಿತವಾಗಿ ಕ್ರಷರ್-ಕ್ವಾರಿಗಳಿಗೆ ಭೇಟಿ ಕೊಟ್ಟು ಪರಿಶೀಲನೆ ಮಾಡುತ್ತಿರಬೇಕು. ತೀವ್ರ ನಿಗಾ ಇಟ್ಟು ದಾಖಲೆಗಳನ್ನು ಪರಿಶೀಲನೆ ಮಾಡಬೇಕು. ಎಚ್ಚರ ತಪ್ಪಿದರೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಪ್ರತಿ ಕ್ವಾರಿ-ಕ್ರಷರ್ ಮಾಲೀಕರ ಮೇಲೂ ಕಣ್ಣಿಡಿ. ಬಾಲ ಬಿಚ್ಚಿದರೆ ಕಠಿಣ ಕ್ರಮ ಕೈಗೊಳ್ಳಿ. ಮುಲಾಜು ಇಟ್ಟುಕೊಳ್ಳಲೇಬೇಡಿ ಎಂದು ಎಲ್ಲ ಅಧಿಕಾರಿಗಳಿಗೆ ಮಿಥುನ್ ಕುಮಾರ್ ಸೂಚನೆ ಕೊಟ್ಟರು.
ಈ ಸಭೆಯಲ್ಲಿ ಜಿಲ್ಲಾ ಹಿರಿಯ ಭೂ ವಿಜ್ಞಾನಿ ನಂಜುಂಡಸ್ವಾಮಿ, ಆ ಇಲಾಖೆಯ ಇತರೆ ಅಧಿಕಾರಿಗಳು ಹಾಜರಿದ್ದರು. ಚಿಕ್ಕಬಳ್ಳಾಪುರ ಡಿವೈಎಸ್‌ಪಿ ರವಿಶಂಕರ್, ಚಿಂತಾಮಣಿ ಡಿವೈಎಸ್‌ಪಿ ಲಕ್ಷ್ಮಯ್ಯ ಹಾಜರಿದ್ದರು.