ಬೆಂಗಳೂರು: ತಮ್ಮ ವಿರುದ್ಧ ಕೇಳಿಬಂದ ರಾಸಲೀಲೆ ಆರೋಪಕ್ಕೆ ಕಂಗೆಟ್ಟ ಜಲಸಂಪನ್ಮೂಲ ಖಾತೆ ಸಚಿವ ರಮೇಶ್ ಜಾರಕಿಹೊಳಿ ಕೊನೆಗೂ ರಾಜೀನಾಮೆ ನೀಡಿದ್ದಾರೆ. ಬುಧವಾರ ಬೆಳಗ್ಗೆಯಿಂದ ಪದತ್ಯಾಗ ಮಾಡುವುದಕ್ಕೆ ಕಣ್ಣಾಮುಚ್ಚಾಲೆ ಆಡಿದ್ದ ಅವರು ಕೊನೆಗೂ ಮುಖ್ಯಮಂತ್ರಿಗೆ ರಾಜೀನಾಮೆ ಪತ್ರ ಕಳಿಸಿದ್ದಾರೆ. ಮುಖ್ಯಮಂತ್ರಿ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಸರಕಾರ ಬರುವುದಕ್ಕೆ ತಾವೇ ಕಾರಣ ಎಂದು ಬಿಂಬಿಸಿಕೊಂಡಿದ್ದ ಅವರು, ರಾಸಲೀಲೆ ಸಿಡಿ ಸಂಪೂರ್ಣ ನಕಲಿ. ಅದರಲ್ಲಿರುವುದು ನಾನಲ್ಲ ಎಂದು ಪದೇಪದೆ ಹೇಳಿದರೂ ಬಿಜೆಪಿ ಬೇರೆಯದ್ದನ್ನೇ ಅಲೋಚನೆ ಮಾಡುತ್ತಿತ್ತು.
ಫೆಬ್ರವರಿ 22ರಂದು ಚಿಕ್ಕಬಳ್ಳಾಪುರದಲ್ಲಿ, ಅದಕ್ಕೂ ಮೊದಲು ಶಿವಮೊಗ್ಗ ಜಿಲ್ಲೆ ಹುಣಸೋಡಿನಲ್ಲಿ ಸಂಭವಿಸಿದ ಕಲ್ಲು ಗಣಿ ಸ್ಫೋಟಗಳಿಂದ ಕಂಗೆಟ್ಟಿದ್ದ ಬಿಜೆಪಿ, ಆ ಎರಡೂ ಘಟನೆಗಳಿಂದ ಆಗಿದ್ದ ಡ್ಯಾಮೇಜ್‌ಗಳನ್ನು ಸರಿಪಡಿಸಿಕೊಳ್ಳಲು ಯತ್ನಿಸುತ್ತಿತ್ತು. ಇದೀಗ, ಯಾವಾಗ ರಾಸಲೀಲೆ ಸಿಡಿ ಆಚೆ ಬಂತೋ ಆಗ ಕಮಲ ಪಾಳೆಯ ದಂಗಾಯಿತು. ಹಾಗಾದರೆ, ಜಾರಕಿಹೊಳಿ ರಾಜೀನಾಮೆಗೆ ಕಾರಣವಾದರೂ ಏನು?
ಮೇಲ್ನೋಟಕ್ಕೆ ಬೆಂಬಲ
ರಮೇಶ್ ಜಾರಕಿಹೊಳಿ ಸಹೋದರ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಬಹಿರಂಗವಾಗಿ ತಮ್ಮ ಸಹೋದರನ ಜತೆ ನಿಂತಿದ್ದು ಬಿಟ್ಟರೆ, ಆಪರೇಷನ್ ಕಮಲದ ಮೂಲಕ ಇದೇ ಜಾರಕಿಹೊಳಿ ಮೂಲಕ ಬಜೆಪಿಗೆ ಹಾರಿ ಮಂತ್ರಿಗಳಾಗಿರುವ ಬಹುತೇಕರು ಬೆಳಗಾವಿ ಸಾಹುಕಾರನಿಗೆ ಬೆಂಬಲ ಮಾತುಗಳನ್ನಾಡಿದರು. ಆದರೆ, ಬಹಿರಂಗವಾಗಿ ಅವರ ಸಮರ್ಥನೆ ಮಾಡಿಕೊಳ್ಳಲು ಅವರು ಧೈರ್ಯ ಮಾಡಲಿಲ್ಲ.

ಇನ್ನು, ಮೂಲ ಬಿಜೆಪಿಗರಲ್ಲಿ ಬಹುತೇಕರು ಜಾರಕಿಹೊಳಿ ರಾಜೀನಾಮೆ ಪಡೆಯಲೇಬೇಕು ಎಂದು ಮುಖ್ಯಮಂತ್ರಿಗೆ ಸಲಹೆ ಮಾಡಿದ್ದಾರೆ. ಈಗಾಗಲೇ ಪಕ್ಷದಲ್ಲಿ ನಡೆದಿರುವ ಇಂಥ ಘಟನೆಗಳಿಂದ ರೋಸಿ ಹೋಗಿರುವ ಸಿಎಂ ರಾಜೀನಾಮೆ ಪಡೆಯುವ ಬಗ್ಗೆ ಸಾಕಷ್ಟು ಚಿಂತನಮಂಥನ ನಡೆಸಿದಾರಾದರೂ ಮಧ್ಯಾಹ್ನದ ಹೊತ್ತಿಗೆ ಅಂತಿಮ ನಿರ್ಧಾರ ಕೈಗೊಂಡಿದ್ದಾರೆ.
ನಾಳೆಯಿಂದ ಬಜೆಟ್ ಅಧಿವೇಶನ
ಗುರುವಾರ ವಿಧಾನ ಮಂಡಲದ ಅಧಿವೇಶನ ಆರಂಭವಾಗುತ್ತಿದ್ದು, ಸರಕಾರದ ಮೇಲೆ ಮುಗಿಬೀಳಲು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಆಗಲೇ ರಣತಂತ್ರ ರೂಪಿಸಿದ್ದವು. ಬಿಜೆಪಿ ಪಾಳಿಗೆ ಬಜೆಟ್ ಅಧಿವೇಶನ ಮಹತ್ವದ್ದಾಗಿತ್ತು. ಯಾವುದೇ ಕಾರಣಕ್ಕೂ ಕಲಾಪ ಹಳಿತಪ್ಪುವುದು ಸರಕಾರಕ್ಕೆ ಇಷ್ಟವಿರಲಿಲ್ಲ.
ಪ್ರತಿಪಕ್ಷಗಳ ಬಾಯಿಗೆ ಆಹಾರವಾಗುವುದು ಆಡಳಿತ ಪಕ್ಷಕ್ಕೆ ಇಷ್ಟವಿರಲಿಲ್ಲ. ಬಿಜೆಪಿಗೆ ಮಾನ ಮರ್ಯಾದೆ ಇದ್ದರೆ ಕೂಡಲೇ ರಮೇಶ ಜಾರಕಿಹೊಳಿ ರಾಜೀನಾಮೆ ಪಡೆಯಬೇಕು ಎಂದು ಸಿದ್ದರಾಮಯ್ಯ ಹೇಳಿದ್ದರು. ಇನ್ನು ಎಚ್.ಡಿ.ಕುಮಾರಸ್ವಾಮಿ ಅವರು, ಬಜೆಟ್ ಅಧಿವೇಶನಕ್ಕೂ ಮೊದಲೇ ರಾಜೀನಾಮೆ ನೀಡದರೆ ಉತ್ತಮ ಎಂದು ಹೇಳಿದ್ದರು.
ರಾಜೀನಾಮೆ ಪಡೆಯಲು ಸೂಚಿಸಿದ ಹೈಕಮಾಂಡ್
ಇಂಥ ವರ್ತನೆಗಳನ್ನು ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಕಳೆದ ರಾತ್ರಿಯ ಹೊತ್ತಿಗೇ ಹೈಕಮಾಂಡ್ ಬಂದಿತ್ತು. ಅದಕ್ಕೆ ಪೂರಕವಾಗಿ ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿದ್ದರು. “ಘಟನೆಯ ಬಗ್ಗೆ ಮಾಧ್ಯಮಗಳ ಮೂಲಕ ತಿಳಿದಿದೆ. ನಮ್ಮ ಬಿಜೆಪಿ ಶುದ್ಧವಾದ ಪಕ್ಷ. ಇಲ್ಲಿರುವ ನಾಯಕರ ಚಾರಿತ್ರ್ಯ ಶುದ್ಧವಾಗಿರಬೇಕು. ಇದರಲ್ಲಿ ಯಾವುದೇ ರಾಜಿ ಇಲ್ಲ. ಒಂದು ವೇಳೆ ತಪ್ಪಿದ್ದರೆ ಪಕ್ಷ ಕ್ರಮ ಕೈಗೊಳ್ಳುತ್ತದೆ. ಈ ಬಗ್ಗೆ ನಾನು ಮುಖ್ಯಮಂತ್ರಿಗಳು ಹಾಗೂ ಪಕ್ಷದ ರಾಜ್ಯಾಧ್ಯಕ್ಷರ ಜತೆ ಮಾತನಾಡುತ್ತೇನೆ” ಎಂದಿದ್ದರು. ಅಲ್ಲಿಗೆ ಜಾರಕಿಹೊಳಿ ರಾಜೀನಾಮೆ ಖಚಿತವಾಗಿತ್ತು.
ಬುಧವಾರ ಬೆಳಗ್ಗೆಯೇ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಜತೆ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್, ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರು ರಾಸಲೀಲೆ ಬಗ್ಗೆ ಚರ್ಚೆ ನಡೆಸಿದ್ದರು. ಆಗ್ಗೆ ಒಂದು ನಿರ್ಧಾರಕ್ಕೆ ಬಂದಿದ್ದ ರಾಷ್ಟ್ರೀಯ ನಾಯಕರು ಜಾರಕಿಹೊಳಿ ರಾಜೀನಾಮೆ ಪಡೆಯುವಂತೆ ಮುಖ್ಯಮಂತ್ರಿಗೆ ಸೂಚಿಸಿದರು.
ಪಂಚರಾಜ್ಯ ಚುನಾವಣೆ ಮತ್ತು ಮೋದಿ ವರ್ಚಸ್ಸು
ಕರ್ನಾಟಕದ ನೆರೆ ರಾಜ್ಯಗಳಾದ ತಮಿಳುನಾಡು, ಕೇರಳ ಸೇರಿ ಪುದುಚೆರಿ, ಪಶ್ಚಿಮ ಬಂಗಾಳ ಹಾಗೂ ಅಸೋಮ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿರುವುದು ಇನ್ನೊಂದು ಕಾರಣ. ಈ ಹಿನ್ನೆಲೆಯಲ್ಲೇ ಜಾಕರಿಹೊಳಿ ಬಗ್ಗೆ ಕೇಂದ್ರ ನಾಯಕತ್ವ ಕ್ಷಿಪ್ರಗತಿಯಲ್ಲಿ ನಿರ್ಧಾರ ಕೈಗೊಂಡಿದೆ. ಇನ್ನೊಂಡೆದೆ, ಪ್ರಧಾನಿ ನರೆಂದ್ರ ಮೋದಿ, ಅಮಿತ್ ಶಾ ವರ್ಚಸ್ಸಿಗೆ ಧಕ್ಕೆ ಆಗುವುದನ್ನು ತಪ್ಪಿಸಲು ಪಕ್ಷ ಈ ನಿರ್ಧಾರ ಕೈಗೊಂಡಿದೆ. ಇದೇ ವೇಳೆ ರಾಜ್ಯದಲ್ಲೂ ಕೆಲ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ.
ಅಣ್ಣನ ಜಾಗ ಸಹೋದರನಿಗೆ?
ರಮೇಶ ಜಾರಕಿಹೊಳಿ ರಾಜೀನಾಮೆ ಸರಕಾರದ ಅಸ್ತಿತ್ವಕ್ಕೆ ಧಕ್ಕೆ ಉಂಟು ಮಾಡಬಹುದು ಎಂಬ ಆತಂಕದಲ್ಲಿದ್ದ ಮುಖ್ಯಮಂತ್ರಿಗಳು, ಸದ್ಯಕ್ಕೆ ಕೆಎಂಎಫ್ ಅಧ್ಯಕ್ಷರಾಗಿರುವ ಬಾಲಚಂದ್ರ ಚಾರಕಿಹೊಳಿಯನ್ನು ಸಂಪುಟಕ್ಕೆ ಸೇರಿಸಿಕೊಳ್ಳುತ್ತಾರಾ? ಎಂಬ ಬಗ್ಗೆ ಚರ್ಚೆ ಶುರುವಾಗಿದೆ.
ಈ ಬಗ್ಗೆ ಬೆಳಗ್ಗೆಯಿಂದಲೇ ಅಜ್ಞಾತದಲ್ಲಿರುವ ರಮೇಶ್ ಜಾರಕಿಹೊಳಿ ಅಲ್ಲಿಂದಲೇ ತಮ್ಮಿಂದ ತೆರವಾಗುವ ಸ್ಥಾನವನ್ನು ಸಹೋದರ ಬಾಲಚಂದ್ರ ತುಂಬಬೇಕು ಎಂದು ಚೌಕಾಶಿ ಶುರುವಿಟ್ಟುಕೊಂಡಿದ್ದರು ಎಂಬ ಮಾಹಿತಿಯೂ ಸಿಕ್ಕಿದೆ. ಆದರೆ, ಈ ಬಗ್ಗೆ ರಮೇಶ್ ಯಾವುದೇ ಷರತ್ತು ಹಾಕಿಲ್ಲ ಎಂದು ಸ್ವತಃ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.
ವಿಶ್ವಸನೀಯ ಮೂಲಗಳ ಪ್ರಕಾರ, ರಾಜ್ಯ ನಾಯಕತ್ವಕ್ಕೆ ಬಾಲಚಂದ್ರ ಜಾರಕಿಹೊಳಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಬಗ್ಗೆ ಒಲವು ಹೊಂದಿದೆ. ಈ ಬಗ್ಗೆ ಆಪ್ತರು ಸಲಹೆ ಮಾಡಿದ್ದಾರೆನ್ನಲಾಗಿದೆ. ಆದರೆ, ಹೈಮಾಂಡ್ ಒಪ್ಪುತ್ತಾ ಎನ್ನುವ ಪ್ರಶ್ನೆ. ಒಂದು ವೇಳೆ ಬಾಲಚಂದ್ರ ಜಾರಕಿಹೊಳಿ ಅವರಿಗೆ ಸ್ಥಾನ ಕೊಟ್ಟರೆ ಪರೋಕ್ಷವಾಗಿ ರಾಸಲೀಲೆ ಪ್ರಕರಣವನ್ನು ಬಿಜೆಪಿ ಸಮ್ಮಿತಿಸಿದಂತೆ ಆಗುತ್ತದೆ ಎಂಬ ಟೀಕೆಯೂ ಶುರುವಾಗಿದೆ.
ಇನ್ನೊಂದೆ, ರಮೇಶ್ ರಾಜೀನಾಮೆ ನೀಡುತ್ತಿದ್ದಂತೆಯೇ ಅವರ ಸ್ವಕ್ಷೇತ್ರ ಗೋಕಾಕ್ ಉದ್ರಿಕ್ತವಾಗಿತ್ತು. ಅವರ ಬೆಂಬಲಿಗರು ಕೈಯ್ಯಲ್ಲಿ ಕಲ್ಲು ಹಿಡಿದು ಅಂಗಡಿ ಬಾಗಿಲು ಮುಚ್ಚಿಸಿದರು. ಎಚ್.ವಿಶ್ವನಾಥ್ ಸೇರಿ ಕೆಲ ನಾಯಕರು ಬೆಳಗಾವಿ ಸಾಹುಕಾರನ ಪರ ಬ್ಯಾಟಿಂಗ್ ಶುರು ಮಾಡಿದರು.


















