ಬೆಂಗಳೂರು: ವಿಧಾನಸಭೆ ಕಲಾಪದ ವೇಳೆ ʼಒಂದು ದೇಶ-ಒಂದು ಚುನಾವಣೆ; ವಿಷಯದ ಬಗ್ಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಚರ್ಚೆ ಆರಂಭಿಸಿದಾಗ ಕಾಂಗ್ರೆಸ್ ಸದಸ್ಯರು ಸಭಾಧ್ಯಕ್ಷರ ಪೀಠದ ಮುಂದೆ ಪ್ರತಿಭಟನೆ ನಡೆಸುವ ವೇಳೆ ಅಂಗಿ ಬಿಚ್ಚಿ ಪ್ರತಿಭಟಿಸಿದ ಭದ್ರಾವತಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ಕೆ.ಸಂಗಮೇಶ್ ಅವರನ್ನು ಒಂದು ವಾರದ ಕಾಲ ಕಲಾಪದಿಂದ ಅಮಾನತು ಮಾಡಲಾಗಿದೆ.
ಗುರುವಾರ ಆರಂಭವಾದ ಅಧಿವೇಶನದಲ್ಲಿ ಗದ್ದಲದಿಂದ ಹದಿನೈದು ನಿಮಿಷ ಕಾಲ ಕಲಾಪವನ್ನು ಮುಂದಕ್ಕೆ ಹಾಕಿದ್ದ ಸ್ಪೀಕರ್ ಅವರು, ಮರಳಿ ಕಲಾಪ ಆರಂಭಿಸಿ ಸದನದಲ್ಲಿ ಅಸಭ್ಯ ವರ್ತನೆ ತೋರಿದ ಸಂಗಮೇಶ್ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ತದ ನಂತರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ ಬೊಮ್ಮಾಯಿ ಅವರು, ಸಂಗಮೇಶ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಪ್ರಸ್ತಾವನೆ ಮಂಡಿಸಿದರು. ಕೂಡಲೇ ಈ ಪ್ರಸ್ತಾವನೆಯನ್ನು ಮತಕ್ಕೆ ಹಾಕಿದ ಸಭಾಧ್ಯಕ್ಷರು, ಪ್ರಸ್ತಾವನೆ ಪಾಸ್ ಆಗಿದೆ ಎಂದು ಘೋಷಿಸಿದರು.
ಇನ್ನು ಒಂದು ವಾರದ ಕಾಲ ಶಾಸಕ ಸಂಗಮೇಶ್ ಅವರು ಸದನ ಕಲಾಪದಲ್ಲಿ ಭಾಗಿಯಾಗುವಂತಿಲ್ಲ ಎಂದು ಹೇಳಿದರು ಸ್ಪೀಕರ್. ಬಳಿಕ ಕಲಾಪವನ್ನು ಮೂರು ಗಂಟೆವರೆಗೂ ಮುಂದೂಡಿದರು.
Lead Photo Courtesy: B K Sangamesh Bhadravathi facebook