ಬೆಂಗಳೂರು: ಪರಿಶಿಷ್ಟ ಪಂಗಡಕ್ಕೆ ಶೇ.7.5 ಮೀಸಲಾತಿ ಘೋಷಣೆ ಮಾಡುವುದಾಗಿ ಹೇಳಿದ್ದ ರಾಜ್ಯ ಸರಕಾರ ಕೊಟ್ಟ ಮಾತು ಉಳಿಸಿಕೊಳ್ಳಲಿ ಎಂದು ವಾಲ್ಮೀಕಿ ಸಮುದಾಯದ ಒಕ್ಕೂಟ ಅಭಿಯಾನ ಆರಂಭಿಸಿದೆ.
ಸರಕಾರ ರಚಿಸಿರುವ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದ ಸಮಿತಿ ಸರಕಾರಕ್ಕೆ ವರದಿ ನೀಡಿದೆ. ಆ ವರದಿ ಅನುಷ್ಠಾನಕ್ಕಾಗಿ ಪರಿಶೀಲನೆ ನಡೆಸಲು ರಾಜ್ಯ ಸರಕಾರವೇ ಸಂಪುಟ ಉಪ ಸಮಿತಿ ರಚಿಸಿತ್ತು. ಇದರಿಂದಾಗಿ ಮಾರ್ಚ್ 9ರೊಳಗೆ ಪರಿಶಿಷ್ಟ ಪಂಗಡಕ್ಕೆ ಶೇ.7.5 ಮೀಸಲಾತಿ ಘೋಷಣೆ ಮಾಡುವುದಾಗಿ ಸ್ವತಃ ಮುಖ್ಯಮಂತ್ರಿ ಬಿಎಸ್. ಯಡಿಯೂರಪ್ಪ ಫೆ.9 ರಂದು ವಾಲ್ಮೀಕಿ ಜಾತ್ರಾ ಮಹೋತ್ಸವದಲ್ಲಿ ವಚನ ನೀಡಿದ್ದರು.
ಆದರೆ, ಇನ್ನೂ ಕೇವಲ ನಾಲ್ಕು ದಿನಗಳು ಮಾತ್ರ ಬಾಕಿ ಆದರೂ ಸರಕಾರವೇ ರಚಿಸಿದ್ದ ಸಂಪುಟ ಸಮಿತಿ ಮುಖ್ಯಮಂತ್ರಿಗಳಿಗೆ ವರದಿ ನೀಡಿಲ್ಲ. ಇದರ ನಡುವೆ ಲಿಂಗಾಯತ ಪಂಚಮಸಾಲಿ ಹೋರಾಟ, ಕುರುಬರ ಹೋರಾಟ, ನೇಕಾರರ ಹೋರಾಟ, ಸವಿತಾ ಸಮಾಜದ ಹೋರಾಟಗಳು ನಡೆದು ಎಲ್ಲರೂ ಅವರದ್ದೇ ಆದ ಮೀಸಲಾತಿಗೆ ಪಟ್ಟು ಹಿಡಿದಿವೆ. ಆದರೆ ಪರಿಶಿಷ್ಟ ವರ್ಗದ ಮೀಸಲಾತಿ ಹೋರಾಟಕ್ಕೂ ಉಳಿದ ಸಮುದಾಯಗಳ ಹೋರಾಟಕ್ಕೂ ಯಾವುದೇ ಸಂಬಂಧ ಇರದಿದ್ದರೂ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಸರಕಾರ ಮೀಸಲಾತಿ ಅನುಷ್ಠಾನದ ಕುರಿತು ಮತ್ತೊಬ್ಬ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ತ್ರಿಸದಸ್ಯ ಸಮಿತಿ ರಚನೆ ಮಾಡಲು ನಿರ್ಧರಿಸಿದೆ ಎಂದು ಒಕ್ಕೂಟ ಅಸಮಾಧಾನ ವ್ಯಕ್ತಪಡಿಸಿದೆ.
ನಾಟಕ ಬಿಡಿ, ಮೀಸಲಾತಿ ಕೊಡಿ ಅಭಿಯಾನ
ಈಗಾಗಲೇ ನಿವೃತ್ತ ನ್ಯಾಯಮೂರ್ತಿ ಒಬ್ಬರ ನೇತೃತ್ವದ ಸಮಿತಿ ನೀಡಿದ ವರದಿ ಅನುಷ್ಠಾನಕ್ಕೆ ಮತ್ತೊಬ್ಬ ನಿವೃತ್ತ ನ್ಯಾಯಮೂರ್ತಿಯ ಪರಿಶೀಲನೆ ವರದಿ ಬೇಕಾ? ಇಂತಹ ನಾಟಕವನ್ನು ರಾಜ್ಯ ಸರಕಾರ ನಡೆಸಬೇಕಾದ ಅಗತ್ಯವಿದೆಯಾ ಎಂಬುದು ವಾಲ್ಮೀಕಿ ಅಥವಾ ಪರಿಶಿಷ್ಟ ವರ್ಗದ ಪ್ರಶ್ನೆಯಾಗಿದೆ.
ಈ ಹಿನ್ನೆಲೆಯಲ್ಲಿ ತೀವ್ರ ಅಸಮಾಧಾನಗೊಂಡಿರುವ ಪರಿಶಿಷ್ಟ ಪಂಗಡದ ಸಮುದಾಯ ಸಾಮಾಜಿಕ ಜಾಲತಾಣಗಳಲ್ಲಿ “ನಾಟಕ ಬಿಡಿ, ಮೀಸಲಾತಿ ಕೊಡಿ” ಅಭಿಯಾನ ಆರಂಭಿಸಿದೆ. ಆ ಮೂಲಕ ರಾಜ್ಯ ಸರಕಾರದ ನಡೆಯ ವಿರುದ್ಧ ಆಕ್ರೋಶ ಹೊರ ಹಾಕಿದೆ. ರಾಜ್ಯ ಸರಕಾರ ನೀಡಿರುವ ವಚನವನ್ನ ಉಳಿಸಿಕೊಳ್ಳಬೇಕು ಪರಿಶಿಷ್ಟ ವರ್ಗಕ್ಕೆ ಮೀಸಲಾತಿ ಘೋಷಣೆ ಮಾಡಬೇಕು. ಇಲ್ಲದೆ ಹೋದರೆ ಈ ಸರ್ಕಾರ ಪರಿಶಿಷ್ಟ ವರ್ಗದ ವಿರೋಧಿ ಸರಕಾರ ಜೊತೆಗೆ ವಚನಭ್ರಷ್ಟ ಸರಕಾರ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಒಪ್ಪಿಕೊಳ್ಳಲಿ ಎಂದು ಸಮುದಾಯದ ನಾಯಕರ ಒಕ್ಕೂಟ ಆಗ್ರಹಿಸಿದೆ.
ಸರಕಾರಕ್ಕೆ ಎಚ್ಚರಿಕೆ
ನಾಯಕ ಸಮುದಾಯಕ್ಕೆ ಬಿಜೆಪಿ ಸರಕಾರ ಡಿಸಿಎಂ ಹುದ್ದೆಯನ್ನೂ ನೀಡಲಿಲ್ಲ, ಸರಿಯಾದ ಸಚಿವ ಸ್ಥಾನವನ್ನೂ ನೀಡಿಲ್ಲ. ಈಗ ಮೀಸಲಾತಿ ಘೋಷಣೆ ಮಾಡುವುದಾಗಿ ಹೇಳಿ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದೆ. ಇದು ಸರಿಯಾದ ಕ್ರಮವಲ್ಲ. ತಕ್ಷಣ ರಾಜ್ಯ ಸರಕಾರ ಎಚ್ಚೆತ್ತುಕೊಂಡು ತನ್ನ ತಪ್ಪು ಸರಿಪಡಿಸಿಕೊಳ್ಳಬೇಕು. ತಕ್ಷಣವೇ ಪರಿಶಿಷ್ಟ ಪಂಗಡ ಸಮುದಾಯಕ್ಕೆ ಶೇ.7.5 ಮೀಸಲಾತಿ ಘೋಷಣೆ ಮಾಡಬೇಕು. ಇಲ್ಲದಿದ್ದರೆ ಈ ಸರಕಾರದ ವಿರುದ್ಧ ಬಹಿರಂಗವಾಗಿ ಬೃಹತ್ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ನಾಯಕರ ಒಕ್ಕೂಟ ಎಚ್ಚರಿಸಿದೆ.