ವರ್ಷಕ್ಕೊಮ್ಮೆ ಕಡ್ಡಾಯವಾಗಿ ಕ್ಯಾನ್ಸರ್ ತಪಾಸಣೆ ಮಾಡಿಸಿಕೊಳ್ಳಿ ಎಂದು ಸಲಹೆ ಮಾಡಿದ ಡಾಕ್ಟರ್
ಚಿಕ್ಕಬಳ್ಳಾಪುರ: ಕ್ಯಾನ್ಸರ್ ರೋಗಿಗಳು ದೂರದ ಪ್ರದೇಶಗಳಿಂದ ಬೆಂಗಳೂರಿಗೆ ಬಂದು ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಕಷ್ಟವನ್ನು ತಪ್ಪಿಸಲು ರಾಜ್ಯದ ನಾಲ್ಕು ಭಾಗಗಳಲ್ಲಿ ಆಸ್ಪತ್ರೆಯ ಪ್ರಾದೇಶಿಕ ಕೇಂದ್ರಗಳನ್ನು ನಾಲ್ಕು ಭಾಗಗಳಲ್ಲಿ ಆರಂಭಿಸುವ ಪ್ರಯತ್ನ ನಡೆದಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ರೆಡ್ ಕ್ರಾಸ್ ಹಾಗೂ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಸಹಯೋಗದಲ್ಲಿ ಚಿಕ್ಕಬಳ್ಳಾಪುರದಲ್ಲಿ ನಡೆದ ಕ್ಯಾನ್ಸರ್ ತಪಾಸಣಾ ಶಿಬಿರದಲ್ಲಿ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್, ರಾಜ್ಯದಲ್ಲಿ ಕಿದ್ವಾಯಿ ಸಂಸ್ಥೆಯಲ್ಲಿ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ರಾಜ್ಯದ ದೂರದ ಪ್ರದೇಶಗಳಿಂದಲೂ ಇಲ್ಲಿಗೆ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಹೀಗೆ ದೂರ ಪ್ರಯಾಣ ಮಾಡುವುದನ್ನು ತಪ್ಪಿಸಲು ನಾಲ್ಕು ಭಾಗಗಳಲ್ಲಿ ಸಂಸ್ಥೆಯ ಕೇಂದ್ರಗಳನ್ನು ಆರಂಭಿಸಲು ಚಿಂತಿಸಲಾಗಿದೆ. ಬೆಳಗಾವಿ, ಮಲೆನಾಡು ಭಾಗ, ಕರಾವಳಿ ಹಾಗೂ ಕಲ್ಯಾಣ ಕರ್ನಾಟಕ ಭಾಗಗಳಲ್ಲಿ ಕಿದ್ವಾಯಿ ಸಂಸ್ಥೆಯ ಪ್ರಾದೇಶಿಕ ಕೇಂದ್ರಗಳನ್ನು ಆರಂಭಿಸಲು ಮುಖ್ಯಮಂತ್ರಿಗಳಿಗೆ ಕೋರಲಾಗಿದೆ. ಆಗ ದೂರದಿಂದ ರೋಗಿಗಳು ಬೆಂಗಳೂರಿಗೆ ಬರುವ ಕಷ್ಟ ತಪ್ಪಲಿದೆ ಎಂದು ತಿಳಿಸಿದರು.
ಕ್ಯಾನ್ಸರ್ ಎಂದರೆ ಸಾವೇ ಗತಿ ಎಂಬ ತಪ್ಪು ಆಲೋಚನೆ ಇದೆ. ಈಗಿನ ಆಧುನಿಕ ಚಿಕಿತ್ಸಾ ಪದ್ಧತಿಯನ್ನು ಬಳಸಿಕೊಂಡು ಕ್ಯಾನ್ಸರ್ ಅನ್ನು ಯಶಸ್ವಿಯಾಗಿ ಗುಣಪಡಿಸಬಹುದು. ಆದರೆ ಹೀಗೆ ಚಿಕಿತ್ಸೆ ನೀಡಲು ಆರಂಭಿಕ ಹಂತದಲ್ಲೇ ರೋಗ ಪತ್ತೆ ಮಾಡಬೇಕು ಎಂದರು.
ಮಹಿಳೆಯರು ಈಗ ಹೆಚ್ಚಾಗಿ ಸ್ತನ ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ. ಹೀಗಾಗಿ ಮಹಿಳೆಯರು 35 ವರ್ಷ ವಯಸ್ಸಿನ ಬಳಿಕ ವರ್ಷಕ್ಕೊಮ್ಮೆ ಕಡ್ಡಾಯವಾಗಿ ಕ್ಯಾನ್ಸರ್ ತಪಾಸಣೆ ಮಾಡಿಸಬೇಕು. ಉಚಿತ ವೈದ್ಯಕೀಯ ತಪಾಸಣಾ ಸೌಲಭ್ಯ ಇರುವುದರಿಂದ ಇದಕ್ಕಾಗಿ ಹಣ ಖರ್ಚು ಮಾಡಬೇಕಿಲ್ಲ. ಮುಂಚಿತವಾಗಿಯೇ ತಪಾಸಣೆ ಮಾಡಿದರೆ ಆರಂಭಿಕ ಹಂತದಲ್ಲೇ ಕ್ಯಾನ್ಸರ್ ಪತ್ತೆ ಮಾಡಿ ಬೇಗ ಚಿಕಿತ್ಸೆ ನೀಡಬಹುದು. ಕುಟುಂಬಗಳಲ್ಲಿ ಯುವಜನರು ಹಿರಿಯರನ್ನು ಕರೆದುಕೊಂಡು ಹೋಗಿ ಕ್ಯಾನ್ಸರ್ ತಪಾಸಣೆ ಮಾಡಿಸಬೇಕು ಎಂದು ಕಿವಿಮಾತು ಹೇಳಿದರು.
ಕಿದ್ವಾಯಿಯಲ್ಲಿ ಮೂಲಸೌಕರ್ಯಗಳನ್ನು ಹೆಚ್ಚಿಸಲಾಗುತ್ತಿದೆ. ಈ ಆಸ್ಪತ್ರೆಗೆ ಬಡಜನರು ಹೆಚ್ಚಾಗಿ ಬರುತ್ತಿದ್ದು, ಅವರಿಗೆ ಯಾವುದೇ ಶೋಷಣೆಯಾಗದಂತೆ ಎಚ್ಚರ ವಹಿಸಬೇಕು. ಕೆಲ ಸಂದರ್ಭಗಳಲ್ಲಿ ಎಕ್ಸ್ ರೇ, ಸ್ಕ್ಯಾನಿಂಗ್ ನಲ್ಲಿ ಹಣ ಪಡೆಯುವ ಸನ್ನಿವೇಶ ಇರುತ್ತದೆ. ಇಂತಹ ಚಟುವಟಿಕೆಗಳಿಗೆ ಕಡಿವಾಣ ಹಾಕಿ, ಆಸ್ಪತ್ರೆ ಹಾಗೂ ಸರ್ಕಾರದ ಮೇಲೆ ಜನರಿಗೆ ತಪ್ಪು ಭಾವನೆ ಮೂಡುವುದನ್ನು ತಪ್ಪಿಸಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ಬಿ. ಚಿಕ್ಕನರಸಿಂಹಯ್ಯ, ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್‍ಕುಮಾರ್, ಕರ್ನಾಟಕ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಅಧ್ಯಕ್ಷ ಕೆ.ವಿ.ನಾಗರಾಜು, ನಗರಸಭೆ ಅಧ್ಯಕ್ಷ ಆನಂದ್‍ರೆಡ್ಡಿ, ರೆಡ್‍ಕ್ರಾಸ್ ಸಂಸ್ಥೆಯ ಸಭಾಪತಿ ನಾಗಣ್ಣ , ಕಿದ್ವಾಯಿ ನಿರ್ದೇಶಕ ರಾಮಚಂದ್ರ, ಚಿಕ್ಕಬಳ್ಳಾಪುರ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಉಪಾಧ್ಯಕ್ಷ ಡಾ. ಕೋಡಿರಂಗಪ್ಪ, , ಕಾರ್ಯದರ್ಶಿ ಬಿ.ಎನ್.ರವಿಕುಮಾರ್ ಖಜಾಂಚಿ ಎಂ.ಜಯರಾಮ್ ಇದ್ದರು.