ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯ ರೆಡ್ಡಿ ಆಕ್ರೋಶ
Karnataka Budget 2021-22
ಚಿಕ್ಕಬಳ್ಳಾಪುರ: ಸಮಾನ ಅಭಿವೃದ್ಧಿಯ ಮಂತ್ರವನ್ನು ಪಠಿಸುತ್ತಲೇ 2021-22ನೇ ಸಾಲಿನ ರಾಜ್ಯ ಮುಂಗಡಪತ್ರದಲ್ಲಿ ಬರಪೀಡಿತ ಬಯಲುಸೀಮೆಗೆ ಮತ್ತೆ ಅನ್ಯಾಯ ಎಸಗಲಾಗಿದೆ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೈಜತೆ, ನಿಖರತೆ, ಪ್ರಾಮಾಣಿಕತೆ, ದೂರದೃಷ್ಟಿಯ ಕೊರತೆಯಿಂದ ಬಯಲುಸೀಮೆ ಪಾಲಿಗೆ ಮರೀಚಿಕೆಯಾದ ಶಾಶ್ವತ ನೀರಾವರಿ ಎಂದು ಯಡಿಯೂರಪ್ಪ ಅವರು ಸೋಮವಾರ ಮಂಡಿಸಿದ ಬಜೆಟ್ ಬಗ್ಗೆ ಅವರು ಪ್ರತಿಕ್ರಿಯಿಸಿದ್ದಾರೆ.
ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ ಬಯಲುಸೀಮೆಯ ಒಟ್ಟು ಹದಿನಾಲ್ಕು ಜಿಲ್ಲೆಗಳಿಗೆ ಅನ್ಯಾಯ ಎಸಗಲಾಗಿದೆ ಎಂದಿರುವ ಅವರು ವಿವರವಾಗಿ ಹೇಳಿದ್ದಿಷ್ಟು;
- ನೀರಾವರಿಗೆ ಒಳಪಟ್ಟ ಕೃಷ್ಣಾ , ಕಾವೇರಿ ಅಚ್ಚುಕಟ್ಟು ಪ್ರದೇಶಗಳು ಹಾಗೂ ನೀರಾವರಿ ವಂಚಿತ, ಮಳೆಯಾಶ್ರಿತ ಬಯಲುಸೀಮೆಯ ಪ್ರದೇಶಗಳ ತಾರತಮ್ಯವು ಈ ಬಜೆಟ್‌ನಲ್ಲೂ ಮುಂದುವರಿದಿದೆ.
- ಬಯಲುಸೀಮೆಗೆ ಹರಿಸಬೇಕಾದ ಜಿ.ಎಸ್.ಪರಮಶಿವಯ್ಯ ಅವರ ವರದಿ ಆಧಾರಿತ ಪಶ್ಚಿಮವಾಹಿನಿ ನದಿಗಳ ನೀರಿಗೆ ಕಿಂಡಿ ಅಣೆಕಟ್ಟುಗಳ ನಿರ್ಮಾಣದಿಂದ ಬಯಲುಸೀಮೆ ಅತಂತ್ರ ಪರಿಸ್ಥಿತಿಗೆ ಬೀಳಲಿದೆ.
- ಬಯಲುಸೀಮೆಯ ದಾಹ ನೀಗಿಸಲಾಗದ ಅವೈಜ್ಞಾನಿಕ ಎತ್ತಿನ ಹೊಳೆಯ ಜಲವಿಜ್ಞಾನವನ್ನು CWC ಕೇಂದ್ರೀಯ ಜಲ ಆಯೋಗದಿಂದ ಮರು ಅಧ್ಯಯನಕ್ಕೊಳಪಡಿಸದೇ, ಯೋಜನೆ ಪೂರ್ಣಗೊಳಿಸಲು ಆದ್ಯತೆ ಕೊಟ್ಟಿರುವುದರಿಂದ, ಭ್ರಷ್ಟರ ಜೋಳಿಗೆ ತುಂಬುತ್ತದೆಯೇ ಹೊರತು ನಮ್ಮ ಕೆರೆಗಳಿಗೆ ನೀರು ಹರಿಯುವುದಿಲ್ಲ.
ಕೃಷ್ಣಾ ನದಿ ನೀರನ್ನು ಬಯಲುಸೀಮೆಗೆ ಹರಿಸಲು ಆಲಮಟ್ಟಿ ಮತ್ತು ಪೆನ್ನಾರ್ ಜೋಡಣೆಗೆ NWDA (ನ್ಯಾಷನಲ್ ವಾಟರ್ ಡೆವಲಪಮೆಂಟ್ ಏಜನ್ಸಿ) ಈಗಾಗಲೇ ಅಧ್ಯಯನ ವರದಿ ಸಿದ್ದಪಡಿಸಿ, ಹಸಿರು ನಿಶಾನೆ ತೋರಿಸಿದ್ದರೂ ಸಹಾ, ಕೃಷ್ಣಾ ನೀರನ್ನು ಮತ್ತೆ ಉತ್ತರ ಕರ್ನಾಟಕಕ್ಕೆ ಮೀಸಲಿಟ್ಟು ಬಯಲುಸೀಮೆಗೆ ಸೊನ್ನೆ ಸುತ್ತಲಾಗಿದೆ.
-ಆರ್.ಆಂಜನೇಯ ರೆಡ್ಡಿ
- ರಾಜ್ಯ ಸರಕಾರ ಬಹಳ ಉದಾರತೆಯಿಂದ ಬರಪೀಡಿತ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಆಯ್ದ ಕೆಲ ಕೆರೆಗಳಿಗೆ ಹರಿಸುತ್ತಿರುವ ಬೆಂಗಳೂರು ನಗರದ ತ್ಯಾಜ್ಯ ನೀರನ್ನು ಕೇಂದ್ರ ಸರಕಾರದ ಮಾನದಂಡಕ್ಕನುಗುಣವಾಗಿ ಮೂರನೇ ಹಂತಕ್ಕೆ ಶುದ್ದೀಕರಿಸುವಲ್ಲಿ ಸರಕಾರದಲ್ಲಿ ಚಿತ್ತಶುದ್ಧಿ ಮರೆಯಾಗಿದೆ.
- ಅಂತರ್ಜಲ ಆಧಾರಿತ ಕೃಷಿ ಮಾಡುವ ಬಯಲು ಸೀಮೆ ರೈತರ ಲಕ್ಷಾಂತರ ಕೊಳವೆ ಬಾವಿಗಳು ವಿಫಲವಾಗಿವೆ. ಇವುಗಳ ಮರುಪೂರಣ, ಪುನಶ್ಚೇತನಕ್ಕೆ ವಿಶೇಷ ಅನುದಾನ ಒದಗಿಸುವುದನ್ನು ಮರೆತಿದ್ದಾರೆ ಮುಖ್ಯಮಂತ್ರಿಗಳು.
- ಸಾವಿರಾರು ಕೆರೆಗಳಿರುವ ಬಯಲುಸೀಮೆಯ ಕೆರೆಗಳ ಜಲಾನಯನ ಪ್ರದೇಶದ ಒತ್ತುವರಿ ತೆರುವು, ರಾಜ ಕಾಲುವುವೆಗಳ ಪುನರುಜ್ಜೀವನಗೊಳಿಸಿ, ಅಂತರ್ಜಲ ಅಭಿವೃದ್ದಿಪಡಿಸುವ ಯಾವುದೇ ನಿಖರವಾದ ವೈಜ್ಞಾನಿಕ ಯೋಜನೆಗಳ ಕಡೆ ಗಮನಹರಿಸದೆ, ಓಬಿರಾಯನ ಹಳೆಯ ಪದ್ಧತಿಗಳಿಗೆ ಜೋತು ಬಿದ್ದಿರುವುದರಿಂದ ಬಯಲುಸೀಮೆಗೆ ಯಾವುದೇ ಉಪಕಾರವಾಗುವುದಿಲ್ಲ.
- ಬಯಲು ಸೀಮೆಯ ಜಿಲ್ಲೆಗಳಲ್ಲಿ ರಾಡಾರ್ ಆಧಾರಿತ ಹವಾಮಾನ ಮತ್ತು ಮಳೆ ಮುನ್ಸೂಚನಾ ಕೇಂದ್ರಗಳನ್ನು ಸ್ಥಾಪಿಸಿದರೆ, ಕೃಷಿಯಲ್ಲಿ ಅಂತರ್ಜಲದ ಉಳಿತಾಯ, ಜಲ ಸಂರಕ್ಷಣೆ, ಬರ ನಿರ್ವಹಣೆ ಮತ್ತು ಬೆಳೆಗಳ ರೋಗ ನಿರ್ವಹಣೆಗೆ ಅನುಕೂಲವಾಗುತ್ತಿತ್ತು.
- ಈ ಬಜೆಟ್ ಬಯಲುಸೀಮೆಯ ಪಾಲಿಗೆ ಹೊಸ ಬಾಟಲಿಯಲ್ಲಿ ಹಳೇ ಮದ್ಯ ಎಂಬಂತಿದೆ.
Lead photo: BNMK Photographs