ಎಸ್ಟಿ ಮೀಸಲು ಹೋರಾಟ ಮುಂದುವರಿದಿರುವ ಹೊತ್ತಿನಲ್ಲೇ ಬಂದ 2021ನೇ ಸಾಲಿನ ಮುಂಗಡ ಪತ್ರ ಆ ಸಮುದಾಯದ ನಿರೀಕ್ಷೆಗಳನ್ನು ಹುಸಿ ಮಾಡಿದೆ ಎಂಬ ವಾದ ಗಟ್ಟಿಯಾಗಿ ಕೇಳಿಬರುತ್ತಿದೆ. ಅದು ಹೇಗೆ? ಯಾವ ರೀತಿ? ಪತ್ರಕರ್ತ ರಮೇಶ್ ಹಿರೇಜಂಬೂರು ಅವರು ಇಲ್ಲಿ ವಿಶ್ಲೇಷಿಸಿದ್ದಾರೆ.
ರಾಜ್ಯ ಸರಕಾರದ ಜಿಡಿಪಿ ಶೇ.2.6ರಷ್ಟು ಕುಸಿತ ಕಂಡಿದ್ದರೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸಮುದಾಯದಲ್ಲಿ ಈ ಬಾರಿ ಸಾಕಷ್ಟು ನಿರೀಕ್ಷೆ ಇತ್ತು. ಆದರೆ ಅದೆಲ್ಲವನ್ನೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹುಸಿಗೊಳಿಸಿದ್ದಾರೆ.
ಹೌದು, ಕೋವಿಡ್ ಸಮಯದಲ್ಲಿ ರಾಜ್ಯ ಸರಕಾರ ಆರ್ಥಿಕವಾಗಿ ನಷ್ಟ ಅನುಭವಿಸಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ವೇಳೆ ಸರಕಾರ ಪರಿಸ್ಥಿತಿ ಸುಧಾರಿಸಲು ಸಮಾಜ ಕಲ್ಯಾಣ ಇಲಾಖೆಯ ಎಸ್‌ಸಿಎಸ್‌ಪಿ-ಟಿಎಸ್‍ಪಿ ಹಣವನ್ನು ಬಳಸಿಕೊಂಡಿತ್ತು. ಇದಕ್ಕೆ ತೀವ್ರ ವಿರೋಧದ ನಡುವೆಯೂ ಹಣ ಬಳಕೆ ಆಗುತ್ತಿರುವುದು ಪರಿಶಿಷ್ಟರಿಗಾಗಿಯೇ ಎಂದು ಸಬೂಬನ್ನೂ ಹೇಳಿತ್ತು. ಆದರೆ ಈ ಬಾರಿ ಬಜೆಟ್‍ನಲ್ಲಿ ಅದೆಲ್ಲವನ್ನೂ ಸರಕಾರ ಸರಿದೂಗಿಸಲಿದೆ ಎನ್ನುವ ನಿರೀಕ್ಷೆಯಿತ್ತು. ಆದರೆ ಆ ಎಲ್ಲ ನಿರೀಕ್ಷೆಗಳೂ ಹುಸಿಯಾಗಿವೆ.
ಈ ಬಾರಿಯ ಬಜೆಟ್‍ನಲ್ಲಿ ಎಸ್‌ಸಿಎಸ್‌ಪಿ-ಟಿಎಸ್‍ಪಿ ಯೋಜನೆಯಡಿ 26,005 ಕೋಟಿ ರೂ.ಗಳನ್ನು ಹಂಚಿಕೆ ಮಾಡಿದೆ. ಒಟ್ಟಾರೆಯಾಗಿ ಇದು ದೊಡ್ಡ ಮೊತ್ತವೆಂದು ನೋಡುವವರಿಗೆ ಅನಿಸಿದರೂ ಖಂಡಿತಾ ಇತರೆ ಸಮುದಾಯಗಳಿಗೆ ಹೋಲಿಸಿದರೆ ಇದು ಸಣ್ಣ ಮೊತ್ತವೇ ಸರಿ. ಸಮಾಜ ಕಲ್ಯಾಣ ಇಲಾಖೆಯಿಂದ 50 ಕೋಟಿ ರೂ. ವೆಚ್ಚದಲ್ಲಿ 50 ಹೊಸ ಮೆಟ್ರಿಕ್ ನಂತರದ ಹಾಸ್ಟೆಲ್‍ಗಳನ್ನು ಆರಂಭಿಸುವುದಾಗಿ ಹೇಳಿದೆ. ಈ ಹಾಸ್ಟೆಲ್‍ಗಳ ಆರಂಭದಿಂದ ರಾಜ್ಯದ 5 ಸಾವಿರ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದೆ.
ಜತೆಗೆ ಎಸ್.ಸಿ/ಎಸ್ಟಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸೌಲಭ್ಯದೊಂದಿಗೆ ಕ್ರೀಡಾ ಕ್ಷೇತ್ರದಲ್ಲಿ ವಿಶೇಷ ತರಬೇತಿ ನೀಡಲು 5 ಕೋಟಿ ರೂ.ಗಳ ವೆಚ್ಚದಲ್ಲಿ ಪ್ರತಿ ವಿಭಾಗದಲ್ಲಿ ಕೂಡ ತಲಾ ಒಂದೊಂದು ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನು ಅದ್ವಿತೀಯ ಕ್ರೀಡಾ ಶಾಲೆ ಎಂದು ಉನ್ನತೀಕರಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿದೆ. ಜೊತೆಗೆ ಎಸ್.ಸಿ/ಎಸ್ಟಿ ಉದ್ಯಮಿಗಳಿಗೆ ಹಾಳಿ ಜಾರಿಯಲ್ಲಿರುವ ಶೇ.4ರಷ್ಟು ಬಡ್ಡಿ ಸಹಾಯ ಧನ ಯೋಜನೆಯಡಿ ಮಳಿಗೆ/ ಡೀಲರ್‌ಶಿಪ್/ ಪ್ರಾಂಚೈಸಿ ಮತ್ತು ಹೋಟೆಲ್ ಉದ್ಯಮಗಳನ್ನು ಪ್ರಾರಂಭಿಸಲು ಅವಕಾಶ ನೀಡಿದ್ದು, ಗರಿಷ್ಠ 1 ಕೋಟಿ ರೂ.ವರೆಗೆ ಸಾಲ ಪಡೆಯಲು ಅವಕಾಶ ನೀಡಲಿದ್ದೇವೆಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.
ವಚನ ಪೂರೈಸುವಲ್ಲಿ ವಿಫಲ
ಇನ್ನು ನಗರಸಭೆ, ಪುರಸಭೆ ಹಾಗೂ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಗಳ ಪುನರ್ವಸತಿಗೆ, ಸಂಘಗಳನ್ನು ರಚಿಸಿ ಸಕ್ಕಿಂಗ್ ಮತ್ತು ಜಟ್ಟಿಂಗ್ ಯಂತ್ರಗಳಿಗೆ ಶೇ.75ರಷ್ಟು ಸಹಾಯ ಧನ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಅದಕ್ಕಾಗಿ 2 ಕೋಟಿ ರೂ. ಅನುದಾನ ನೀಡಲಾಗುವುದು ಎಂದು ಹೇಳಿರುವ ಮುಖ್ಯಮಂತ್ರಿಗಳು, ನಿಪ್ಪಾಣಿಯಲ್ಲಿ ಕೊಲ್ಲಾಪುರಿ ಪಾದರಕ್ಷೆಗಳ ಕ್ಲಸ್ಟರ್ ಹಾಗೂ ಚಿತ್ರದುರ್ಗದಲ್ಲಿ ಕೇಂದ್ರ ಪಾದರಕ್ಷಾ ತರಬೇತಿ ಸಂಸ್ಥೆಯ ವಿಸ್ತರಣಾ ಕೇಂದ್ರ ಸ್ಥಾಪನೆ ಮಾಡುವುದಾಗಿ ಹೇಳಿದ್ದಾರೆ.
ಹಾಗೆಯೇ, ಪರಿಶಿಷ್ಟ ಪಂಗಡದ ಆಶ್ರಮ ಶಾಲೆಗಳಿಗೆ ವಾಲ್ಮೀಕಿ ಆಶ್ರಮ ಶಾಲೆ ಎಂದು ಮರುನಾಮಕರಣ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಆದರೆ, ಇಲ್ಲಿ ಪರಿಶಿಷ್ಟ ವರ್ಗಕ್ಕೆ ಶೇ.7.5ರಷ್ಟು ಮೀಸಲಾತಿಯನ್ನು ಮಾರ್ಚ್ 9ರೊಳಗೆ ಘೋಷಣೆ ಮಾಡುವುದಾಗಿ ವಾಲ್ಮೀಕಿ ಜಾತ್ರಾ ಮಹೋತ್ಸವದಲ್ಲಿ ಹೇಳಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಣೆ ಮಾಡಬೇಕಾದದ್ದನ್ನೇ ಪರಿಶಿಷ್ಟ ವರ್ಗಕ್ಕೆ ಘೋಷಣೆ ಮಾಡದೇ ಜಾಣ ಹೆಜ್ಜೆ ಇಡುವ ಮೂಲಕ ಇಡೀ ಪರಿಶಿಷ್ಟ ವರ್ಗಕ್ಕೆ ನೀಡಿದ್ದ ವಚನವನ್ನು ಪೂರೈಸುವಲ್ಲಿ ವಿಫಲರಾಗಿದ್ದಾರೆ.
ಜಾಣ ನಡೆ
ಇಡೀ ಪರಿಶಿಷ್ಠ ವರ್ಗದ ರಮೇಶ್ ಜಾರಕಿಹೊಳಿಯ ಸಿಡಿ ಪ್ರಕರಣದ ಬಗ್ಗೆ ತಲೆ ಕೆಡಿಸಿಕೊಂಡಿರುವ ಹೊತ್ತಿನಲ್ಲಿ ಆಶ್ರಯ ಶಾಲೆಗಳ ವಾಲ್ಮೀಕಿ ಹೆಸರು ಮರುನಾಮಕರಣ ಮಾಡಿ ಮೂಗಿಗೆ ತುಪ್ಪ ಸವರಿದ್ದಾರೆ. ಆದರೆ, ರಮೇಶ್ ಜಾರಕಿಹೊಳಿ ಸಿಡಿ ಬಿಡುಗಡೆಯ ಹಿಂದೆ ಬಿಜೆಪಿಯ ಕಾಣದ ಕೈಗಳೇ ಕೆಲಸ ಮಾಡಿವೆ ಎಂಬುದನ್ನು ಇಡೀ ರಾಜ್ಯದ ಎಸ್ಟಿ ಸಮುದಾಯ ಹೇಳುತ್ತಿರುವುದನ್ನು ಲೆಕ್ಕಿಸಿಯೇ ಇದ್ದಂತೆ ಕಾಣುತ್ತಿಲ್ಲ. ಮತ್ತೊಂದೆಡೆ ಎಸ್ಸಿ ಸಮುದಾಯ ಮೀಸಲಾತಿ ಒಳ ಮೀಸಲಾತಿಗೆ ಪಟ್ಟು ಹಿಡಿದಿದ್ದರೂ ಅದರ ಬಗ್ಗೆಯೂ ಒಂದಕ್ಷರವೂ ಮಾತನಾಡದೆ ಡಾ.ಬಿ.ಆರ್.ಅಂಬೇಡ್ಕರ್ ಭೇಟಿ ನೀಡಿದ್ದ ಹಾಸನ ನಗರದ ಎಂ.ಕೆ.ಬೋರ್ಡಿಂಗ್ ಹೋಮ್ ಸ್ಥಳದಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ಸ್ಮಾರಕ ನಿರ್ಮಾಣ ಮಾಡುವುದಾಗಿ ಹೇಳಿ ಎಲ್ಲವನ್ನೂ ಮರೆಮಾಚುವ ಕೆಲಸ ಮಾಡಿದ್ದಾರೆ.
ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಕಾರ್ಯಕ್ರಮಗಳಿಗೆ 50 ಕೋಟಿ ರೂ., ಅಲ್ಪಸಂಖ್ಯಾತರಿಗೆ 1,500 ಕೋಟಿ ರೂ., ಕ್ರಿಶ್ಚಿಯನ್ ಸಮುದಾಯದ ವಿವಿಧ ಕಾರ್ಯಕ್ರಮಗಳಿಗೆ 200 ಕೋಟಿ ರೂ., ವೀರಶೈವ ಲಿಂಗಾಯತ ಸಮಾಜದ ಅಭಿವೃದ್ಧಿಗಾಗಿ 500 ಕೋಟಿ ರೂ., ಒಕ್ಕಲಿಗ ಸಮುದಾಯದ ಅಭಿವೃದ್ಧಿಗೆ 500 ಕೋಟಿ ರೂ. ನೀಡಿದ್ದರ ಜೊತೆಗೆ ವಿವಿಧ ಇತರ ಕಾರ್ಯಕ್ರಮಗಳನ್ನೂ ಘೋಷಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ; ಎಸ್ಸಿ, ಎಸ್ಟಿ ಹಾಗೂ ಒಬಿಸಿ ಸಮುದಾಯಗಳನ್ನೆಲ್ಲ ಸೇರಿಸಿ ಅವುಗಳ ಅಭಿವೃದ್ಧಿಗೆ 500 ಕೋಟಿ ರೂ. ನೀಡಿದ್ದಾರೆ! ಇದನ್ನು ಜಾಣ ನಡೆ ಎನ್ನದೆ ಏನೆನ್ನಬೇಕು!?
ಉಳಿದಿದ್ದು ಗಂಗಾ ಕಲ್ಯಾಣ ಯೋಜನೆ
ರಾಜ್ಯಾದ್ಯಂತ 30 ಕೋಟಿ ರೂ. ವೆಚ್ಚದಲ್ಲಿ ಮೀನು ಮಾರಾಟ ಘಟಕ ಹಾಗೂ ಮತ್ಸ್ಯದರ್ಶಿನಿಗಳ ಸ್ಥಾಪನೆ. ರಾಜ್ಯದ ಆಯ್ದ ಮಹಾನಗರ ಪಾಲಿಕೆ ಹಾಗೂ ನಗರಸಭೆಗಳಲ್ಲಿ ಪ್ರಾಯೋಗಿಕವಾಗಿ ಸಂಜೆ ಕಾಲೇಜು ಪ್ರಾರಂಭ. ಅಪೌಷ್ಟಿಕತೆಯಿಂದ ತಾಯಿ ಮತ್ತು ಮಗುವನ್ನು ರಕ್ಷಿಸಲು 5 ಕೋಟಿ ರೂ. ವೆಚ್ಚದಲ್ಲಿ ಭಾರತೀಯ ವೈದ್ಯ ಪದ್ಧತಿ ಆಧರಿಸಿದ “ಪೋಷಣೆ ಮತ್ತು ಜೀವನೋಪಾಯ ಕಾರ್ಯಕ್ರಮ ಜಾರಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ 11 ಜಿಲ್ಲೆಗಳಲ್ಲಿ 17 ತಾತ್ಕಾಲಿಕ ವಸತಿಗೃಹಗಳ ಸೌಲಭ್ಯಗಳನ್ನು ನೀಡಿದ್ದರಲ್ಲಿ ಅಲ್ಲಲ್ಲಿ ಎಸ್ಸಿ-ಎಸ್ಟಿ ಸಮುದಾಯಕ್ಕೆ ಇವುಗಳ ಉಪಯೋಗ ಇದೆಯಾದರೂ ಹೆಚ್ಚಿನ ಪಾಲು ಬಹುಸಂಖ್ಯಾತರಿಗೇ ಹೋಗುತ್ತದೆ. ಹೀಗಾಗಿ ಅಂತಿಮವಾಗಿ ಉಳಿದಿದ್ದು ಮಾತ್ರ ಗಂಗಾ ಕಲ್ಯಾಣ ಯೋಜನೆ. ಗಂಗಾ ಕಲ್ಯಾಣ ಯೋಜನೆಯ ಪಾರದರ್ಶಕ, ಕಾಲಮಿತಿಯ ಅನುಷ್ಠಾನಕ್ಕಾಗಿ “ಅನುಷ್ಠಾನದ ವಿವೇಚನೆ ಫಲಾನುಭವಿಯ ಕೈಗೆ” ಎಂಬ ನೂತನ ವಿಧಾನ ಜಾರಿಗೆ ತಂದಿರುವುದು ಒಂದು ರೀತಿಯ ಸಮಾಧಾನಕರ ಸಂಗತಿಯಷ್ಟೇ.
ಇಡೀ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸಮುದಾಯ ಈ ಬಾರಿ ಯಡಿಯೂರಪ್ಪನವರು ಶೇ.7.5ರಷ್ಟು ಮೀಸಲಾತಿ ಘೋಷಣೆ ಮಾಡುತ್ತಾರೆ. ವಿವಿಧ ಅನುಕೂಲಗಳನ್ನು ಮಾಡಿಕೊಡುತ್ತಾರೆ ಎಂದು ನಂಬಿ ಚಾತಕಪಕ್ಷಿಯಂತೆ ಕಾಯುತ್ತಿದ್ದರು. ಆದರೆ ಆ ನಿರೀಕ್ಷೆಯನ್ನು ಅವರು ಹುಸಿಗೊಳಿಸಿದ್ದಾರೆ.
ರಮೇಶ್ ಹಿರೇಜಂಬೂರು
- ಪ್ರತಿಭಾವಂತ ಪತ್ರಕರ್ತ, ಲೇಖಕ. ನಾಡಿನ ಪ್ರಮುಖ ಪತ್ರಿಕೆಗಳು, ಸುದ್ದಿವಾಹಿನಿಗಳಲ್ಲಿ ಕಾರ್ಯ ನಿರ್ವಹಿಸಿರುವ ಅವರು ಫೊಟೋಗ್ರಫಿಯಲ್ಲೂ ಆಸಕ್ತರು.