ಚಿಕ್ಕಬಳ್ಳಾಪುರ/ಬೆಂಗಳೂರು: ಚಿಕ್ಕಬಳ್ಳಾಪುರ, ಕೋಲಾರ ಸೇರಿ ರಾಜ್ಯದ ಹ್ನನೊಂದು ಕಡೆ ರಾಜ್ಯ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ದಾಳಿ ನಡೆಸಿದೆ. ಆದಾಯಕ್ಕೂ ಮೀರಿದ ಆಸ್ತಿ ಹೊಂದಿರುವ ಸರಕಾರಿ ಅಧಿಕಾರಿಗಳ ಮೇಲೆ ಈ ದಾಳಿ ನಡೆದಿದೆ.
ಅಕ್ರಮ ಆಸ್ತಿ ಸಂಪಾದನೆ ಆರೋಪ ಹಿನ್ನೆಲೆ ಚಿಕ್ಕಬಳ್ಳಾಪುರ ಜಿಲ್ಲಾ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಕೃಷ್ಣೇಗೌಡ ಮನೆ ಹಾಗೂ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.
ಚಿಕ್ಕಬಳ್ಳಾಪುರ ನಗರದ ಮುಷ್ಟೂರು ರಸ್ತೆಯ ಕೃಷ್ಣೇಗೌಡರ ವಾಸದ ಮನೆ, ಜಿಲ್ಲಾ ನಿರ್ಮಿತಿ ಕೇಂದ್ರ ಕಚೇರಿ ಹಾಗೂ ಕೋಲಾರ ತಾಲ್ಲೂಕಿನ ಯಲಗಲಬುರ್ರೆ ಗ್ರಾಮದ ಅವರ ಮನೆ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು, ಕೆಲ ಮಹತ್ವದ ದಾಖಲೆಗಳನ್ನು ಪರಿಶೀಲನೆ ನಡೆಸಿ ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಗೊತ್ತಾಗಿದೆ.
ಎಸ್ಪಿ ಕಲಾ ಕೃಷ್ಣಸ್ವಾಮಿ ನೇತೃತ್ವ
ಬೆಂಗಳೂರು ವಿಭಾಗದ ಎಸಿಬಿ ಎಸ್ಪಿ ಕಲಾ ಕೃಷ್ಣಸ್ವಾಮಿ ನೇತೃತ್ವದಲ್ಲಿ ಕೃಷ್ಣೇಗೌಡರ ಮನೆ ಮೇಲೆ ದಾಳಿ ನಡೆಸಲಾಗಿದೆ. ಕೃಷ್ಣೇಗೌಡ ಅವರ ಚಿಕ್ಕಬಳ್ಳಾಪುರದ ಮುಸ್ಟೂರು ರಸ್ತೆಯಲ್ಲಿನ ಮನೆ ಶೋಧ ಮಾಡುತಿರುವ ಭ್ರಷ್ಟಾಚಾರ ನಿಗ್ರಹ ದಳದ DYSP ಮಂಜುನಾಥ್ ನೇತೃತ್ವದ ತಂಡದಲ್ಲಿ ಇನಸ್ಪೆಕ್ಟರ್ ರವಿಕುಮಾರ್ ಮತ್ತಿತರೆ ಸಿಬ್ಬಂದಿ ಇದ್ದಾರೆ.
ಇನ್ನೆಲ್ಲಿ ದಾಳಿ ನಡೆದಿದೆ?
ಇದೇ ವೇಳೆ ಮಂಗಳವಾರ ಬೆಳಗ್ಗೆಯೇ ಎಸಿಬಿ ಅಧಿಕಾರಿಗಳು ರಾಜ್ಯದ 11 ಜಿಲ್ಲೆಗಳಲ್ಲಿನ ಸುಮಾರು 28 ಕಡೆಗಳಲ್ಲಿ ಕಡೆ ದಾಳಿ ನಡೆಸಿದ್ದಾರೆ. ಕೆಲವಾರು ಇಲಾಖೆಗಳ 9 ಅಧಿಕಾರಿಗಳ ಮನೆಗಳು- ಕಚೇರಿಗಳ ಮೇಲೆ ಎಸಿಬಿ ಮುಗಿಬಿದ್ದಿದೆ.
ಈ ಪೈಕಿ ಚಿಕ್ಕಬಳ್ಳಾಪುರ, ಕೋಲಾರ ಸೇರಿ ರಾಮನಗರ, ಕಾರವಾರ, ಮಂಡ್ಯ, ಉತ್ತರ ಕನ್ನಡ, ಉಡುಪಿ, ಯಾದಗಿರಿ, ಮೈಸೂರು, ದಾವಣಗೆರೆ, ಬೆಳಗಾವಿ ಜಿಲ್ಲೆಗಳಲ್ಲಿ ದಾಳೆ ನಡೆದಿದೆ. ಆದಾಯಕ್ಕೂ ಮೀರಿ ಆಸ್ತಿ ಹೊಂದಿರುವ ಆರೋಪದ ಮೇಲೆ ಒಟ್ಟು ೯ ಅಧಿಕಾರಿಗಳು ಎಸಿಬಿ ಬಲೆಗೆ ಬಿದ್ದಿದ್ದಾರೆ.
- ಚಿಕ್ಕಬಳ್ಳಾಪುರದ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಕೃಷ್ಣೇಗೌಡ ಮೇಲೆ ದಾಳಿ ನಡೆಸಿರುವುದು ಜಿಲ್ಲೆಯ ಸರಕಾರಿ ಅಧಿಕಾರಿಗಳ ವಲಯದಲ್ಲಿ ತಲ್ಲಣ ಉಂಟು ಮಾಡಿದೆ. ಅವರ ಮನೆ, ಕಚೇರಿ ಸೇರಿ ಸಹೋದರರ ಮನೆಗಳನ್ನೂ ಎಸಿಬಿ ಜಾಲಾಡಿದೆ.
- ದಾವಣಗೆರೆಯ ಪ್ಯಾಕ್ಟರಿಸ್ ಆಂಡ್ ಬಾಯ್ಲರೀಸ್ ಸಂಸ್ಥೆಯ ಉಪ ನಿರ್ದೇಶಕ ಕೆ.ಎಂ. ಪ್ರಥಮ್ ಮೇಲೆ ದಾಳಿ ನಡೆದಿದೆ. ಅವರಿಗೆ ಸೇರಿದ್ದೆನ್ನಲಾದ ಬೆಂಗಳೂರಿನ ಸಂಜಯನಗರ ಬಳಿಯ ನಾಗಶೆಟ್ಟಿಹಳ್ಳಿಯ ಮನೆ, ಅದೇ ಸಂಜಯನಗರದಲ್ಲಿರುವ ಅವರ ಸಹೋದರನ ಮನೆ ಹಾಗೂ ದಾವಣಗೆರೆಯ ಕಚೇರಿ ಮೇಲೆ ದಾಳಿ ನಡೆಸಲಾಗಿದೆ.
- ಮೈಸೂರಿನ ಬೆಸ್ಕಾಂ ಸೂಪರಿಂಟೆಂಡೆಂಟ್ ಎಂಜಿನಿಯರ್ ಮುನಿ ಗೋಪಾಲರಾಜು ಅವರ ಮೈಸೂರು ಕಚೇರಿ, ಮೈಸೂರಿನಲ್ಲಿನ ಗೋಕುಲಂನಲ್ಲಿನ ನಿವಾಸ, ಕನಕಪುರದ ಮನೆ ಮೇಲೆ ದಾಳಿ ನಡೆಸಲಾಗಿದೆ.
- ಬೆಳಗಾವಿಯ ಡೆಪ್ಯುಟಿ ಚೀಫ್ ಎಲೆಕ್ಟ್ರಿಕಲ್ ಇನ್ಸ್‌ಪೆಕ್ಟರ್ ಹನಮಂತ ಶಿವಪ್ಪ ಚಿಕ್ಕಣ್ಣನವರ ಮನೆ, ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿನ ಮನೆ, ಬೆಳಗಾವಿಯ ಕಚೇರಿ, ಅವರ ಹುಟ್ಟೂರು ಜಮಖಂಡಿಯಲ್ಲಿನ ಮನೆ, ಬೆಳಗಾವಿಯ ಫ್ಲಾಟ್ ಮೇಲೆ ದಾಳಿ ನಡೆದಿದೆ.
- ಬಿಬಿಎಂಪಿಯ ಟೌನ್ ಫ್ಲಾನಿಂಗ್ ವಿಭಾಗದ ಕಿರಿಯ ಸಹಾಯಕ ಎಂಜಿನಿಯರ್ ಕೆ.ಸುಬ್ರಹ್ಮಣ್ಯಂ ಮೇಲೆ ಕೂಡ ದಾಳಿ ನಡೆದಿದ್ದು, ಬೆಂಗಳೂರಿನ ಸಹಕಾರ ನಗರದ್ಲಲಿರುವ ಅವರ ಮನೆ, ಯಲಹಂಕದಲ್ಲಿರುವ ಕಚೇರಿ ಮೇಲೆ ದಾಳಿ ನಡೆಸಲಾಗಿದೆ.
- ಮೈಸೂರಿನ ಟೌನ್ ಆಂಡ್ ಕಂಟ್ರಿ ಫ್ಲಾನಿಂಗ್ ಇಲಾಖೆಯ ಜಂಟಿ ನಿರ್ದೇಶಕ ಸುಬ್ರಹ್ಮಣ್ಯ ಕೆ.ವಡ್ಡರ್ ಅವರ
- ಉಡುಪಿಯಲ್ಲಿನ ಮನೆ, ಕಾರವಾರದಲ್ಲಿರುವ ತಾಯಿಯ ಮನೆ, ಮೈಸೂರಿನಲ್ಲಿರುವ ಬಾಡಿಗೆ ಮನೆ ಹಾಗೂ ಕಚೇರಿ ಮೇಲೆ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ.
- ಹಾಗೆಯೇ ಮೈಸೂರಿನ ಆರ್ಟಿಓ ಕಚೇರಿಯ ಪ್ರಥಮ ದರ್ಜೆ ಸಹಾಯಕ ಚನ್ನವೀರಪ್ಪ ಅವರೂ ಎಸಿಬಿ ಬಲೆಗೆ ಬಿದ್ದಿದ್ದು, ಅವರಿಗೆ ಸೇರಿದ ಮಂಡ್ಯದ ಕುವೆಂಪು ನಗರದ ಮನೆ, ಹುಟ್ಟೂರು ಹಲಕೆರೆಯಲ್ಲಿನ ಮನೆ ಹಾಗೂ ಮೈಸೂರಿನ ಲಕ್ಷ್ಮೀಪುರಂನಲ್ಲಿರುವ ಕಚೇರಿ ಮೇಲೆ ದಾಳಿ ಮಾಡಲಾಗಿದೆ.
- ಯಾದಗಿರಿಯ ಬೆಸ್ಕಾಂ ಲೆಕ್ಕಾಧಿಕಾರಿ ರಾಜು ಫತ್ತರ್ ಕೂಡ ಖೆಡ್ಡ್ಕಕೆ ಬಿದ್ದಿದ್ದು, ಯಾದಗಿರಿಯಲ್ಲಿನ ಅವರ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಲಾಗಿದೆ.
- ಬಿಎಂಟಿಎಫ್ ಪೊಲೀಸ್ ಇನ್ಸ್‌ಪೆಕ್ಟರ್ ವಿಕ್ಟರ್ ಸೈಮನ್ ಅವರ ಮೇಲೂ ದಾಳಿ ನಡೆದಿದ್ದು, ಅವರಿಗೆ ಸೇರಿದ ಬೆಂಗಳೂರಿನ ಕಸವನಹಳ್ಳಿಯಲ್ಲಿನ ಮನೆ, ಮೈಸೂರಿನ ಎರಡು ಮನೆ, ಮತ್ತು ಬೆಂಗಳೂರಿನ ಕಚೇರಿ ಮೇಲೆ ದಾಳಿ ನಡೆದಿದೆ.
- Lead photo: ಕೋಲಾರ ತಾಲ್ಲೂಕಿನ ಯಲಗಲಬುರ್ರೆ ಗ್ರಾಮದಲ್ಲಿನ ಕೃಷ್ಣೇಗೌಡರ ಮನೆ.