ಜನರ ಮೇಲೆ ಭಾರ ಹಾಕುವುದು ಬೇಡ ಎಂದು ಅವರು ಸವಾಲು ಸ್ವೀಕರಿಸಿ ಬಜೆಟ್ ಮಂಡಿಸಿ ಸೈ ಎನಿಸಿಕೊಂಡಿದ್ದಾರೆ ಮುಖ್ಯಮಂತ್ರಿ.
ಚಿಕ್ಕಬಳ್ಳಾಪುರ: ಕೋವಿಡ್ ಸಂಕಷ್ಟ ಕಾಲದಲ್ಲೂ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಮತೋಲಿತ ಹಾಗೂ ಅಭಿವೃದ್ಧಿಪರ ಮುಂಗಡ ಪತ್ರವನ್ನು ಮಂಡಿಸಿದ್ದು, ವಿರೋಧ ಪಕ್ಷದವರು ಅನಗತ್ಯ ಟೀಕೆ ಮಾಡುವುದು ಸರಿಯಲ್ಲ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಮಲಿಂಗಪ್ಪ ಹೇಳಿದರು.
ಸುದ್ದಿಗಾರರ ಜತೆ ಮಾತನಾಡುತ್ತ ಬಜೆಟ್ ಬಗ್ಗೆ ತಮ್ಮ ಅಭಿಪ್ರಾಮ ವ್ಯಕ್ತಪಡಿಸಿದ ಅವರು; ಕೋವಿಡ್ ಸಂಕಷ್ಟದಿಂದ ಆರ್ಥಿಕ ಸಂಪನ್ಮೂಲಗಳ ಕೊರತೆ ಉಂಟಾಯಿತು. ಒಂದು ಕಡೆ ವೈರಸ್ ವಿರುದ್ಧ ಹೋರಾಟ ನಡೆಸುತ್ತಲೇ, ಮತ್ತೊಂದೆಡೆ ಅಭಿವೃದ್ಧಿಯತ್ತಲೂ ಗಮನ ಹರಿಸಿದ್ದ ಮುಖ್ಯಮಂತ್ರಿಗಳು ಸೀಮಿತ ಸಂಪನ್ಮೂಲಗಳಿಂದಲೇ ಉತ್ತಮ ಬಜೆಟ್ ಮಂಡಿಸಿದ್ದಾರೆ. ಇಂಥ ಕಠಿಣ ಸಂದರ್ಭದಲ್ಲಿ ವಿರೋಧ ಪಕ್ಷಗಳು ಸಿಎಂ ಅವರನ್ನು ಶ್ಲಾಘಿಸಿ ರಚನಾತ್ಮಕ ಬೆಂಬಲ ನೀಡಬೇಕೆ ಹೊರತು ಟೀಕಿಸಬಾರದು ಎಂದರು.
ಪ್ರತಿ ವರ್ಷದ ಬಜೆಟ್‌ನಂತೆ ಈ ಬಜೆಟ್ ಅನ್ನು ನೋಡಬಾರದು ಎಂದ ಅವರು; ನೆರೆ, ಕೋವಿಡ್ ಸೇರಿದಂತೆ ಹಲವಾರು ಜ್ವಲಂತ ಸಮಸ್ಯೆಗಳನ್ನು ರಾಜ್ಯ ಎದುರಿಸಿದೆ ಎಂಬುದು ಎಲ್ಲರಿಗೂ ಗೊತ್ತು. ಲಾಕ್‌ಡೌನ್ ಕಾಲದಲ್ಲಿ ಇಡೀ ರಾಜ್ಯವೇ ಸ್ತಭ್ದವಾಗಿತ್ತು. ಇನ್ನು ಸಂಪನ್ಮೂಲ ಸಂಗ್ರಹ ಎಲ್ಲಿಂದ ಆಗುತ್ತದೆ? ಟೀಕಾಕಾರರಿಗೆ ಈ ವಿಷಯ ತಿಳಿಯದೇ ಎಂದು ಅವರು ಕುಟುಕಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಅವರು ೮ನೇ ಸಲ ಬಜೆಟ್ ಮಂಡಿಸಿದ್ದು ಒಂದು ದಾಖಲೆ. ಆದರೆ, ಈ ವರ್ಷದ ಬಜೆಟ್ ಮಂಡನೆ ಕಠಿಣವಾಗಿತ್ತು. ಅನೇಕ ಸವಾಲುಗಳ ನಡುವೆಯೂ ಅವರು ಅಭಿವೃದ್ಧಿಗೆ, ಸಾಮಾಜಿಕ ನ್ಯಾಯಕ್ಕೆ ಆದ್ಯತೆ ನೀಡಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಗೂ ಅವರು ಪ್ರಾಮುಖ್ಯತೆ ಕೊಟ್ಟ ವಿವಿಧ ಯೋಜನೆಗಳನ್ನು ಪ್ರಕಟಿಸಿದ್ದಾರೆ. ಇದಕ್ಕಾಗಿ ನಾನು ಮುಖ್ಯಮಂತ್ರಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ರಾಮಲಿಂಗಪ್ಪ ಹೇಳಿದರು.
ಸಿಎಂ ಸೈ ಎನಿಸಿಕೊಂಡಿದ್ದಾರೆ
ಯಾವುದೇ ಬಜೆಟ್ ಇದ್ದರೂ ತೆರಿಗೆ ಹೆಚ್ಚಳ ಅಥವಾ ಬೆಲೆ ಹೆಚ್ಚಳ ಸಾಮಾನ್ಯವಾಗಿರುತ್ತದೆ. ಆದರೆ, ಖಜಾನೆಗೆ ಸಂಪನ್ಮೂಲ ಕೊರತೆ ಇದ್ದರೂ ಯಡಿಯೂರಪ್ಪ ಅವರು ತೆರಿಗೆ ಹೆಚ್ಚಿಸಲು ಹೋಗಿಲ್ಲ. ಜನರ ಮೇಲೆ ಭಾರ ಹಾಕುವುದು ಬೇಡ ಎಂದು ಅವರು ಸವಾಲು ಸ್ವೀಕರಿಸಿ ಬಜೆಟ್ ಮಂಡಿಸಿ ಸೈ ಎನಿಸಿಕೊಂಡಿದ್ದಾರೆ ಎಂದು ಅವರು ತಿಳಿಸಿದರು.
ಕೃಷಿ, ನೀರಾವರಿ ಸೇರಿ ಎಲ್ಲ ವಲಯಗಳಿಗೂ ಆದ್ಯತೆ ನೀಡಲಾಗಿದ್ದು, ಮಹಿಳಾ ದಿನಾಚರಣೆ ದಿನ ಮಂಡಿಸಿದ ಈ ಮುಂಗಡ ಪತ್ರದಲ್ಲಿ ಮಹಿಳೆಯರ ಸ್ವಾವಲಂಭನೆ ಹಾಗೂ ಸುರಕ್ಷತೆಗೆ ಹೆಚ್ಚು ಕೊಡಲಾಗಿದೆ.
-ರಾಮಲಿಂಗಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷ
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮರುಳುಕುಂಟೆ ಕೃಷ್ಣಮೂರ್ತಿ, ವಕ್ತಾರ ರಮೇಶ್ ಬಾಗೇರಿ, ಮಧುಚಂದ್ರ ಇದ್ದರು.