ಚಿಕ್ಕಬಳ್ಳಾಪುರ: ಸ್ವಾತಂತ್ರ್ಯ ಹೋರಾಟದಲ್ಲಿ ಸಹಸ್ರಾರು ಹೋರಾಟಗಾರರ ತ್ಯಾಗ ಮತ್ತು ಬಲಿದಾನಗಳಿಂದ ಗಳಿಸಿರುವ ಸ್ವಾತಂತ್ರ್ಯಕ್ಕೆ ದೊಡ್ಡ ಗೌರವವಿದೆ. ಹೋರಾಟಗಾರರ ಕನಸು ಮತ್ತು ನಿರೀಕ್ಷೆಗಳನ್ನ ನನಸಾಗಿಸುವ ದಿಸೆಯತ್ತ ನಮ್ಮ ಗಮನ ಹರಿಸಬೇಕು ಎಂದು ರಾಜ್ಯಪಾಲ ವಜುಭಾಯಿ ವಾಲಾ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ವತಿಯಿಂದ. ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ವಿದುರಾಶ್ವತ್ಥದಲ್ಲಿ ಹಮ್ಮಿಕೊಳ್ಳಲಾಗಿದ್ದ ʼಸ್ವಾತಂತ್ರ್ಯದ ಅಮೃತ ಮಹೋತ್ಸವʼ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು ಅವರು.
ಮುಂಬರುವ ಅಗಸ್ಟ್ 15ಕ್ಕೆ ಬ್ರಿಟಿಷರಿಂದ ಮುಕ್ತಿಪಡೆದು ನಮ್ಮ ರಾಷ್ಟ್ರ ಸ್ವತಂತ್ರ ರಾಷ್ಟ್ರವಾಗಿ 75 ವರ್ಷಗಳಾಗುತ್ತದೆ. ಅನೇಕ ಮಹನೀಯರ ತ್ಯಾಗ ಬಲಿದಾನಗಳಿಂದ ಭರತಭೂಮಿ ಸ್ವಾತಂತ್ರ್ಯಭೂಮಿಯಾಗಿದೆ. ಸಂಸ್ಕಾರವಂತ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ನಮ್ಮ ದೇಶದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ನಂತರ ದೇಶದ ಬೆಳವಣಗೆ ಬಗ್ಗೆ ಅವಲೋಕನ ಮಾಡಬೇಕಾಗಿದೆ. ಮುಂದಿನ 25 ವರ್ಷಗಳ ನಂತರ ದೇಶ ಹೇಗಿರಬೇಕು ಎಂಬ ಚಿಂತನೆ ಮಾಡಬೇಕಿದೆ. ಮುಂದಿನ ದಿನಗಳನ್ನು ನೆನಪಿನಲ್ಲಿಟ್ಟುಕೊಂಡು ದೇಶದ ಅಭಿವೃದ್ಧಿ ಮತ್ತು ಶಾಂತಿಯುತ ಸಮಾಜ ನಿರ್ಮಾಣ ಮಾಡಲು ಮುನ್ನುಡಿ ಬರೆಯಬೇಕಿದೆ. ಮುಂದಿನ ಕಾಲು ಶತಮಾನ ಭಾರತಕ್ಕೆ ಬಹಳ ಮಹತ್ತ್ವದ್ದು ಎಂದು ರಾಜ್ಯಪಾಲರು ಹೇಳಿದರು.
ನಮ್ಮ ರಾಷ್ಟ್ರಕ್ಕಾಗಿ ಅನೇಕ ಮಹನೀಯರು ತಮ್ಮ ಬಲಿದಾನ ಮಾಡಿದ್ದಾರೆ. ಅಂತಹ ಮಹಾನ್ ವ್ಯಕ್ತಿಗಳ ತ್ಯಾಗಕ್ಕೆ ನಾವು ತಲೆತಗ್ಗಿಸಬೇಕು. ಮಹನೀಯರ ತ್ಯಾಗವನ್ನು ಅರಿತು ದೇಶವನ್ನು ಕಟ್ಟಬೇಕು. ಯಾವುದೇ ವ್ಯಕ್ತಿಯೂ ಸ್ವಾರ್ಥ ಮನೋಭಾವದಿಂದ ಮುನ್ನುಗ್ಗದೇ, ಸಮಾನತೆಯ ಮನೋಭಾವದಿಂದ ಮುನ್ನಗ್ಗಬೇಕು ಎಂದರು ರಾಜ್ಯಪಾಲರು.
ಸ್ವಾಮಿ ವಿವೇಕಾನಂದರ ಸ್ಫೂರ್ತಿದಾಯಕ ನುಡಿಗಳನ್ನು ನೋಡಿದರೆ ಅವರೆಷ್ಟು ಭರವಸೆಯನ್ನು ನಮ್ಮ ದೇಶದ ಯುವ ಜನಾಂಗದ ಮೇಲೆ ಹೊಂದಿದ್ದರು ಎಂಬುದು ಅರಿವಾಗುತ್ತದೆ. ಸ್ವಾಮಿ ವಿವೇಕಾನಂದರು ಕೇವಲ 39 ವರ್ಷ ವಯಸ್ಸಿನಲ್ಲಿ ಸಾಧಿಸಿದ್ದನ್ನು ಇಡೀ ಜಗತ್ತು ಮತ್ತು ನಮ್ಮ ರಾಷ್ಟ್ರ ಸ್ಮರಿಸುತ್ತದೆ. ದೇಶದ ಜನರ ಉನ್ನತಿಗಾಗಿ ಶ್ರಮಿಸಿದವರು ಇಂತಹ ಮಹಾನ್ ಪುರುಷರ ಹಾದಿಯಲ್ಲಿ ನಾವು ನಡೆಯಬೇಕು ಎಂದು ಅವರು ಕರೆ ನೀಡಿದರು.
ಸ್ತ್ರೀ ಎಂದರೆ ನಮ್ಮ ದೇಶದ ಶಕ್ತಿ
ನಾರಿಗೆ ಎಲ್ಲಿ ಗೌರವ ಸಲ್ಲುತ್ತದೋ ಅಲ್ಲಿ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಮಹಾತ್ಮ ಗಾಂಧೀಜಿ, ಸರ್ದಾರ್ ವಲ್ಲಭಾಯಿ ಪಟೇಲ್, ಲಾಲ ಲಜಪಥ್ ರಾಯ್, ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್, ಡಾ.ಬಿ.ಆರ್.ಅಂಬೇಡ್ಕರ್ ಸೇರಿದಂತೆ ಅನೇಕ ಮಹನೀಯರು ಸ್ತ್ರೀಯರನ್ನು ಗೌರವಿಸಿದ್ದಾರೆ. ಪುರುಷರಿಗೆ ಸಮನಾಗಿ ಮಹಿಳೆ ಎಲ್ಲಾ ಕ್ಷೇತ್ರಗಳಲ್ಲೂ ಮುನ್ನುಗ್ಗುತ್ತಿದ್ದಾಳೆ. ನಮ್ಮ ರಾಷ್ಟ್ರ ಗಟ್ಟಿಗೊಳಿಸುವಲ್ಲಿ ಮಹಿಳೆಯ ಪಾತ್ರ ಅಪಾರ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಜೀವಕ್ಕೆ ಹೆದರದೇ, ಮೃತ್ಯುವಿಗೆ ತಲೆವೊಡ್ಡಿದ್ದಾರೆ. ಇಂತಹ ಮಹನೀಯರ ತ್ಯಾಗವನ್ನು ನೆನಪಿಸಿಕೊಳ್ಳುತ್ತಾ ಈ ದಿನ ನಾವೆಲ್ಲರೂ ರಾಷ್ಟ್ರಕ್ಕಾಗಿ ನಮ್ಮನ್ನು ನಾವು ಸಮರ್ಪಿಸಿಕೊಂಡು, ಸಮಾಜದ ರಕ್ಷಣೆಗಾಗಿ ನಿಲ್ಲುತ್ತೇವೆಂದು ಪ್ರಮಾಣ ಮಾಡೋಣ ಎಂಬ ಸಂದೇಶವನ್ನು ಇದೇ ವೇಳೆ ರಾಜ್ಯಪಾಲರು ಸಾರಿದರು.
ಸಂಸದ ಬಿ.ಎನ್.ಬಚ್ಚೇಗೌಡ, ಕೋಲಾರ ಸಂಸದ ಮುನಿಸ್ವಾಮಿ, ಜಿ.ಪಂ. ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ, ಸಂಸದ ಪಿ.ಸಿ.ಮೋಹನ್, ಶಿವಕುಮಾರ ಉದಾಸಿ, ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ಜಿಪಂ ಸಿಇಒ ಪಿ.ಶಿವಶಂಕರ್, ಎಸ್‍ಪಿ ಜಿ.ಕೆ.ಮಿಥುನ್‍ಕುಮಾರ್, ಅಪರ ಜಿಲ್ಲಾಧಿಕಾರಿ ಎಚ್.ಅಮರೇಶ್, ಉಪ ವಿಭಾಗಾಧಿಕಾರಿ ಎ.ಎನ್.ರಘುನಂದನ್, ತಹಸೀಲ್ದಾರ್ ಶ್ರೀನಿವಾಸ್, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಜನಪ್ರತಿನಿಧಿಗಳು ಇದ್ದರು.