ಚಿಕ್ಕಬಳ್ಳಾಪುರ: ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕರ್ನಾಟಕವು ಅನೇಕ ಮೈಲುಗಲ್ಲುಗಳನ್ನು ಹೊಂದಿದ್ದು, ಅದರಲ್ಲಿ ಕರ್ನಾಟಕದ ಜಲಿಯನ್ ವಾಲಾಬಾಗ್ ಎಂದೇ ಹೆಸರಾಗಿರುವ ವಿಧುರಾಶ್ವತ್ಥದ ಹತ್ಯಾಕಾಂಡ ಘಟನೆಯೂ ಒಂದು. ಹೋರಾಟಕ್ಕೆ ಹೊಸ ದಿಕ್ಕು ತೋರಿದ ಘಟನೆ ಇದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ಬ್ರಿಟೀಷರ ಗುಂಡಿಗೆ ಬಲಿಯಾದ ಆ ವೀರಯೋಧರ ತ್ಯಾಗ ಬಲಿದಾನಗಳನ್ನು ನಾವು ಸ್ಮರಿಸಬೇಕು. ಅವರ ಆದರ್ಶ ಮತ್ತು ಸ್ಫೂರ್ತಿಯ ದಾರಿಯಲ್ಲಿ ನಡೆಯಬೇಕು ಎಂದು ಸಿಎಂ ಕರೆ ನೀಡಿದರು.
ಅವರು ಜಿಲ್ಲೆಯ ಗೌರಿಬಿದನೂರು ತಾಲೂಕಿನ ವಿಧುರಾಶ್ವತ್ಥದ ಡಾ.ಎನ್.ಸಿ.ನಾಗಯ್ಯರೆಡ್ಡಿ ಸ್ಮಾರಕ ಧ್ವಜ ಸತ್ಯಾಗ್ರಹ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತಿ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ 75ನೇ ಸ್ವಾತಂತ್ರ್ಯ ಅಜಾದ್ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಮೂಲೆ ಮೂಲೆಗಳಲ್ಲಿ ಬ್ರೀಟಿಷರ ವಿರುದ್ಧ ಮೊಳಗಿದ ಚಳುವಳಿಯ ರಣಕಹಳೆಗೆ ಕರುನಾಡು ಸಹಾ ಹೊರೆತಾಗಿಲ್ಲ. ಮೈಸೂರು ಸಂಸ್ಥಾನದ ಕಿತ್ತೂರು, ಹಲಗಲಿ ಬಂಡಾಯ, ನರಗುಂದ ರೈತರ ಬಂಡಾಯ, ಸುರಪುರ ಬಾದಾಮಿ ಬಂಡಾಯ, ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನ, ವಿದುರಾಶ್ವತ್ಥದಲ್ಲಿ ನಡೆದಿರುವ ಸ್ವಾತಂತ್ರ್ಯ ಚಳುವಳಿಗಳು ಸ್ವಾತಂತ್ರ್ಯೋತ್ಸವದ ಇತಿಹಾಸದ ಮೈಲುಗಲ್ಲುಗಳಾಗಿವೆ. ಇಂತಹ ಮಹೋನ್ನತ ಹೋರಾಟದಲ್ಲಿ ಭಾಗಿಯಾಗಿ ವೀರಮರಣವನ್ನಪ್ಪಿದ ಯೋಧರ ಆದರ್ಶಗಳು, ಚಿಂತನೆಗಳನ್ನು ಇಂದಿನ ಯುವಕರು ಹಾಗೂ ವಿದ್ಯಾರ್ಥಿಗಳು ತಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಉತ್ತಮ ಸಮಾಜ ನಿರ್ಮಾಣಕ್ಕೆ ನೆರವಾಗಬೇಕು ಎಂದು ಯಡಿಯೂರಪ್ಪ ಅವರು ಕಿವಿಮಾತು ಹೇಳಿದರು.
ಸ್ವಾತಂತ್ರ್ಯ ಹೋರಾಟಗಾರರ ಚಿಂತನೆಗಳು ಮತ್ತು ಅವರ ಆದರ್ಶಗಳು ಎಲ್ಲಾ ಕಾಲಕ್ಕೂ ಅಮರ. ಅಂಥಹ ಮಹಾನ್ ಹೋರಾಟಗಾರರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಅನೇಕ ವೀರ ಯೋಧರು, ಮಹನೀಯರ ಪ್ರಾಣ, ತ್ಯಾಗ ಬಲಿದಾನಗಳಿಂದ ನಮಗೆ ಸ್ವಾತಂತ್ರ್ಯ ದೊರೆತಿದೆ. ಇಂತಹ ಮಹೋನ್ನತ ಸಂಗ್ರಾಮದ ಮಹತ್ವದ ಬಗ್ಗೆ ಹಾಗೂ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿ ವೀರಮರಣವನ್ನಪ್ಪಿದ ಹೋರಾಟಗಾರರ ತತ್ವಾದರ್ಶಗಳು, ಚಿಂತನೆಗಳನ್ನು ಇಂದಿನ ಯುವ ಪೀಳಿಗೆ ಹಾಗೂ ವಿದ್ಯಾರ್ಥಿಗಳಿಗೆ ತಿಳಿಸಬೇಕಾದ ಅವಿವಾರ್ಯತೆ ಇದೆ ಎಂದು ಮುಖ್ಯಮಂತ್ರಿಗಳು ಹೇಳಿದರು.
ದಂಡಿಯಾತ್ರೆ ಸ್ಮರಣೀಯ ಘಟ್ಟ
ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ 1930ರಲ್ಲಿ ಕೈಗೊಂಡ ಉಪ್ಪಿನ ಸತ್ಯಾಗ್ರಹದ ಸ್ಮರಣಾರ್ಥ ಮಹಾತ್ಮ ಗಾಂಧಿಜೀ ಅವರು ಗುಜರಾತ್‍ನ ಸಬರಮತಿ ಆಶ್ರಮದಿಂದ ಕೈಗೊಂಡ 21 ದಿನಗಳ ದಂಡಿಯಾತ್ರೆಯು ಸ್ಮರಣೀಯ ಘಟ್ಟವಾಗಿದೆ. ದೇಶದ ಇತಿಹಾಸದಲ್ಲಿ ಅನೇಕ ಹೋರಾಟದ ಸ್ಮರಣೆಗಳನ್ನು ಸ್ಮರಿಸುವ ಸುಸಂದರ್ಭ ಇದಾಗಿದೆ. 1857ರ ಸಿಪಾಯಿ ದಂಗೆಯಿಂದ ಆರಂಭಗೊಂಡ ದೇಶದ ಸ್ವಾತಂತ್ರ್ಯ ಚಳುವಳಿ ಕಾಲಕಾಲಕ್ಕೆ ಹಲವು ಮಜಲುಗಳನ್ನು ಪಡೆಯಿತು. ಅದರಲ್ಲೂ 1918ರ ಬಳಿಕ ಮಹಾತ್ಮಾ ಗಾಂಧಿಜೀ ಅವರ ನಾಯಕತ್ವದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟ ಇಡೀ ಜಗತ್ತೇ ಅಚ್ಚರಪಡುವ ನಿಟ್ಟಿನಲ್ಲಿ ಬೇರಗಾಗಿ ನೋಡಿತು ಎಂದು ಸಿಎಂ ಬಣ್ಣಿಸಿದರು.
ಬಾಲಗಂಗಾಧರ ತಿಲಕ್, ಲಾಲಾ ಲಜಪತ್ ರಾಯ್, ಭಗತ್ ಸಿಂಗ್, ವೀರ ಸಾವರ್ಕರ್ ಹೀಗೆ ಅನೇಕರ ತ್ಯಾಗ ಬಲಿದಾನದಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ನಾಡ ಪ್ರೇಮಿಗಳಿಂದ ಮೊಳಗಿದ ವಂದೇ ಮಾತರಂ ಕೂಗಿಗೆ ಕಿವಿಗೊಟ್ಟು ಲಕ್ಷಾಂತರ ಜನ ಹೋರಾಟಗಾರರು ಸ್ವಾತಂತ್ರ್ಯ ಚಳವಳಿಗೆ ಧುಮುಕಿ ತಮ್ಮ ಬದುಕು ಮೀಸಲಿಟ್ಟು ಹಲವರು ಅಮರ ಜೀವಿಗಳ ತ್ಯಾಗ ಬಲಿದಾನ ದೇಶದ ಇತಿಹಾಸದಲ್ಲಿ ಸುವರ್ಣ ಅಕ್ಷರಗಳನ್ನು ಬರೆದಿಡಬೇಕಾಗಿದೆ ಎಂದರು ಮುಖ್ಯಮಂತ್ರಿ.
ಐತಿಹಾಸಿಕ ಕಾರ್ಯಕ್ರಮ: ಡಾ.ಸುಧಾಕರ್
ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಅವರು ಮಾತನಾಡಿ; “75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮವು ಒಂದೊಂದು ಐತಿಹಾಸಿಕ ಕಾರ್ಯಕ್ರಮವಾಗಿದೆ. ದೇಶದ ಸ್ವಾತಂತ್ರ್ಯೋತ್ಸವದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ದಂಡಿಯಲ್ಲಿ ರಾಷ್ಟ್ರ ಮಟ್ಟದ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, ಜಿಲ್ಲೆಯ ಪ್ರಮುಖ ಐತಿಹಾಸಿಕ-ಧಾರ್ಮಿಕ ತಾಣವಾದ ವಿದುರಾಶ್ವತ್ಥದಲ್ಲಿ ರಾಜ್ಯ ಮಟ್ಟದ ಕಾರ್ಯಕ್ರಮಕ್ಕೆ ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗಳು ಚಾಲನೆ ನೀಡಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳು ಆಗಿದ್ದು, ಅದರ ನೆನಪಿಗಾಗಿ ದೇಶದ 75 ಸ್ಥಳಗಳಲ್ಲಿ 75 ವಾರಗಳ ಕಾಲ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ವಿಧುರಾಶ್ವತ್ಥವು ಹೋರಾಟದ ನೆಲವಾಗಿದ್ದು, 1932ರಲ್ಲಿ ನಡೆದ ಬ್ರಿಟೀಷರು ನಡೆಸಿದ ಗುಂಡಿನ ದಾಳಿಗೆ ಸುಮಾರು 32 ಜನರು ಮೃತಪಟ್ಟಿರುವುದಾಗಿ ಇತಿಹಾಸ ಹೇಳುತ್ತದೆ. ಇಂತಹ ಐತಿಹಾಸಿಕ ಸ್ಥಳವನ್ನು ಹಲವು ರೀತಿಯಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಮತ್ತಷ್ಟು ಅಭಿವೃದ್ಧಿ ಆಗಬೇಕಿದೆ. ಈ ದಿಸೆಯಲ್ಲಿ ಈ ಸ್ಥಳವನ್ನು ಅಂತರಾಷ್ಟ್ರೀಯ ಸ್ಮಾರಕ ಕೇಂದ್ರವಾಗಿ ಅಭಿವೃದ್ಧಿಪಡಿಸಬೇಕಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈ ಬಗ್ಗೆ ವಿಶೇಷ ಗಮನ ಕೊಡಬೇಕು ಎಂದು ಮನವಿ ಮಾಡಿದರು.
ಕಳೆದ ಒಂದು ವಾರದ ಹಿಂದೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಂಡಿಸಿದ ಬಜೆಟ್‍ನಲ್ಲಿ ಹೊಸೂರಿನ ಅಂತರಾಷ್ಟ್ರೀಯ ವಿಜ್ಞಾನ ಕೇಂದ್ರಕ್ಕೆ 10 ಕೋಟಿ ರೂ. ಅನುದಾನ ಘೋಷಿಸಿದ್ದಾರೆ. ಅಲ್ಲದೆ, ವಿಶ್ವವಿಖ್ಯಾತ ನಂದಿಗಿರಿಧಾಮವನ್ನು ಅಂತರಾಷ್ಟ್ರೀಯ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಘೋಷಿಸಿದ್ದು, ಎತ್ತಿನಹೊಳೆ ಯೋಜನೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಆಂಧ್ರದ ಕೃಷ್ಣಾನದಿಯಿಂದ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಿಗೆ 5 ಟಿಎಂಸಿ ನೀರು ತರಲು ಆ ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಿ ನೀರು ಹರಿಸಬೇಕು ಎಂದು ಅವರು ಮನವಿ ಮಾಡಿದರು.
ವಿದುರಾಶ್ವತ್ಥ ಸಮಗ್ರ ಅಭಿವೃದ್ಧಿ ಆಗಲಿ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಹಾಗೂ ಗೌರಿಬಿದನೂರು ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಮಾತನಾಡಿ; “ಮುಖ್ಯಮಂತ್ರಿ ಯಡಿಯೂರಪ್ಪರವರು ಬಜೆಟ್‍ನಲ್ಲಿ ಹೊಸೂರಿನ ಅಂತರಾಷ್ಟ್ರೀಯ ವಿಜ್ಞಾನ ಕೇಂದ್ರಕ್ಕೆ 10 ಕೋಟಿ ಅನುದಾನ ನೀಡಿರುವುದು ಸ್ವಾಗತಾರ್ಹ. ಹಾಗೆಯೇ ವಿದುರಾಶ್ವತ್ಥ ಕ್ಷೇತ್ರಕ್ಕೆ ತನ್ನದೇ ಆದ ಇತಿಹಾಸವಿದೆ. ದೇಶದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಗೌರಿಬಿದನೂರು ತಾಲೂಕಿನ ಪಾತ್ರವೂ ಸಹ ಹೆಚ್ಚಾಗಿದ್ದು, ಈ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಇ.ಡಿ.ಸಿ. ಎಂಬ ಸಂಸ್ಥೆಯು ವಿದುರಾಶ್ವತ್ಥದ ಸಮಗ್ರ ಅಭಿವೃದ್ಧಿಗಾಗಿ ಯೋಜನೆಯೊಂದನ್ನು ತಯಾರಿಸಿದ್ದು, ಇದಕ್ಕಾಗಿ ಅಂದಾಜು 16 ಕೋಟಿ ರೂ. ಹಣ ಬೇಕಾಗಿದೆ. ಈ ಹಣವನ್ನು ಮುಖ್ಯಮಂತ್ರಿಗಳು ನೀಡುವ ಮೂಲಕ ವಿದುರಾಶ್ವತ್ಥವನ್ನು ಮತ್ತಷ್ಟು ಅಭಿವೃದ್ಧಿ ಮಾಡಲು ಸಹಕಾರ ನೀಡಬೇಕು ಎಂದರು.
ಅಲ್ಲದೆ ಮಿನಿ ವಿಧಾನಸೌಧದ ಬಳಿ ಅಂಬೇಡ್ಕರ್ ಸೌಧ ನಿರ್ಮಾಣ ಮಾಡಿದ್ದು, ಅಲ್ಲಿ ಅಂಬೇಡ್ಕರ್ ಅವರ ಜೀವನ ಚರಿತ್ರೆಯನ್ನು ಸಾರುವ ಪೋಟೋ ಗ್ಯಾಲರಿ, ಗ್ರಂಥಾಲಯ ಸ್ಥಾಪನೆ ಹಾಗೂ ಐಎಎಸ್, ಐಪಿಎಸ್‍ನಂತಹ ಸ್ಮರ್ಧಾತ್ಮಕ ಪರೀಕ್ಷೆ ಬರೆಯುವವರಿಗೆ ತರಬೇತಿ ನೀಡಲು ತರಬೇತಿ ಕೇಂದ್ರಕ್ಕೆ 5 ಕೋಟಿ ಅನುದಾನ ಬೇಕಿದ್ದು, ಇದನ್ನೂ ಸಹ ಮುಖ್ಯಮಂತ್ರಿಗಳು ಕೊಡಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಬ್ರಹ್ಮಯ್ಯ ಮತ್ತು ಎಂ.ನಂಜಪ್ಪ ಅವರನ್ನು ಗೌರವಿಸಲಾಯಿತು.
ಪ್ರಾದೇಶಿಕ ಜನಸಂಪರ್ಕ ಇಲಾಖೆ ವತಿಯಿಂದ ವಿದುರಾಶ್ವತ್ಥದಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯ ಅಮೃತ ಮಹೋತ್ಸವದಲ್ಲಿ ಛಾಯಾಚಿತ್ರ ಪ್ರದರ್ಶನವನ್ನು ರಾಜ್ಯಪಾಲ ವಜುಭಾಯಿ ವಾಲಾ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಉದ್ಘಾಟಿಸಿದರು. ಇದೇ ಅವರು ವೀರಯೋಧರ ಸ್ಮಾರಕಕ್ಕೆ ನಮನ ಸಲ್ಲಿಸಿದರು.
ಯೋಗದ ಮೂಲಕ ಚಾಲನೆ
75ನೇ ವರ್ಷದ ಸ್ವಾತಂತ್ರೋತ್ಸವದ ಅಜಾದ್ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಮೊತ್ತ ಮೊದಲಿಗೆ ಬೆಳಗ್ಗೆ ಯೋಗಾಸನದ ಮೂಲಕ ಚಾಲನೆ ನೀಡಲಾಯಿತು.
ಇಲ್ಲಿನ ವೀರಸೌಧದ ಬಳಿಯಿರುವ ಸ್ವಾತಂತ್ರ್ಯ ಹೋರಾಟಗಾರ ಸ್ಥೂಪದ ಪಕ್ಕದಲ್ಲಿ ಶ್ರೀ ಪಥಂಜಲಿ ಯೋಗ ಸಮಿತಿ ವತಿಯಿಂದ ಸುಮಾರು 75 ಮಂದಿ ಯೋಗಾಪಟುಗಳು ಯೋಗಾಸನ ನಡೆಸಿಕೊಟ್ಟರು. ಇದಕ್ಕೂ ಮೊದಲು ಸೈಕಲ್ ಜಾಥಾ ಕೂಡ ನಡೆಯಿತು.
ಈ ಸಂದರ್ಭದಲ್ಲಿ ಸಂಸದರಾದ ಬಿ.ಎನ್.ಬಚ್ಚೇಗೌಡ, ಮುನಿಸ್ವಾಮಿ, ಜಿ.ಪಂ. ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ, ಸಂಸದರಾದ ಪಿ.ಸಿ.ಮೋಹನ್, ಶಿವಕುಮಾರ್ ಉದಾಸಿ, ವಿಧಾನಪರಿಷತ್ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ, ಜಿಪಂ ಸಿಇಒ ಪಿ.ಶಿವಶಂಕರ್, ಎಸ್‍ಪಿ ಜಿ.ಕೆ.ಮಿಥುನ್‍ಕುಮಾರ್, ಅಪರ ಜಿಲ್ಲಾಧಿಕಾರಿ ಎಚ್.ಅಮರೇಶ್, ಉಪವಿಭಾಗಾಧಿಕಾರಿ ಎ.ಎನ್.ರಘುನಂದನ್, ತಹಶೀಲ್ದಾರ್ ಶ್ರೀನಿವಾಸ್, ಜನಪ್ರತಿನಿಧಿಗಳು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.