ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿ.ಡಿ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಅದರಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನೀಡುತ್ತಿರುವ ಕೆಲ ಹೇಳಿಕೆಗಳು ದೊಡ್ಡ ಕಂಪನ ಉಂಟು ಮಾಡುತ್ತಿವೆ. ಅದರಲ್ಲೂ ಡಿ.ಕೆ.ಶಿವಕುಮಾರ್ ಕುರಿತ ಅವರ ಹೇಳಿಕೆಗಳು ಹೆಚ್ಚು ಚರ್ಚೆಯಾಗುತ್ತಿವೆ.
ಮೈಸೂರು: ಮಾಜಿ ಸಚಿವ ರಮೇಶ್ ಜಾರಕಿಹೋಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ.ಕೆ.ಶಿವಕುಮಾರ್ ಹೆಸರು ಯಾರು ಹೇಳಿದ್ದಾರೆ? ತಮ್ಮ ಹೆಸರನ್ನು ಅವರೇ ಏಕೆ ಮುಂದೆ ಬಿಟ್ಟುಕೊಂಡಿದ್ದಾರೆ. ಅವರೇ ಮಾಡಿದ್ದಾರೆ ಅಂತ ಯಾರಾದರೂ ಹೇಳಿದ್ದಾರಾ? ರಾಜ್ಯದಲ್ಲಿ ಎಷ್ಟು ಜನ ಮಹಾನ್ ನಾಯಕರು ಇದ್ದಾರೆ? ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಡಿಕೆಶಿ ಕಾಲೆಳೆದಿದ್ದಾರೆ.
ಮೈಸೂರಿನಲ್ಲಿ ಈ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿದ ಅವರು; ಸಿ.ಡಿ, ಪ್ರಕರಣದ ಬಗ್ಗೆ ಡಿಕೆಶಿ ಅವರೇ ಹೆಚ್ಚು ಮಾತನಾಡುತ್ತಿದ್ದಾರೆ. ಅವರ ಹೆಸರನ್ನು ಇತರೆ ಯಾರೂ ಹೇಳುತ್ತಿಲ್ಲ. ಆದರೆ, ಅವರೇ ತಮ್ಮ ಹೆಸರನ್ನು ಹೆಚ್ಚೆಚ್ಚು ಹೇಳಿಕೊಳ್ಳುತ್ತಿದ್ದಾರೆ. ಇದು ಯಾಕೆ ಅಂತ ಅರ್ಥವಾಗುತ್ತಿಲ್ಲ ಎಂದರು.
ಡಿಕೆಶಿ ಬಹಳ ಮೆಚ್ಯೂರ್ಡ್ ಪೊಲಿಟಿಶಿಯನ್
ಬಿಜೆಪಿಯಲ್ಲೇ ಒಬ್ಬರು ಮಹಾನ್ ನಾಯಕರು ಬೆಳೆಯುತ್ತಿದ್ದಾರೆ. ಹೀಗಾಗಿ, ರಮೇಶ್ ಅವರು ಯಾವ ಮಹಾನ್ ನಾಯಕರು ಅಂತ ಹೇಳಿದ್ದಾರೋ ಗೊತ್ತಿಲ್ಲ. ಇವರು ತಾವೇ ಅಂತ ಯಾಕೆ ಅಂದುಕೊಂಡರೋ ಗೊತ್ತಿಲ್ಲ. ಡಿ.ಕೆ.ಶಿವಕುಮಾರ್ ಬಹಳ ಮೆಚ್ಯೂರ್ಡ್ ಪೊಲಿಟಿಶಿಯನ್ ಎಂದರು ಎಚ್ಡಿಕೆ.
ಡಿಕೆಶಿ ಅವರಿಗೆ ಇರುವ ಅನುಭವ ನಮಗೂ ಇಲ್ಲ. ನಿನ್ನೆ (ಶನಿವಾರ) ದುಡುಕಿ ಅವರ ಹೆಸರನ್ನ ಅವರೇ ಹೇಳಿಬಿಟ್ಟಿದ್ದಾರೆ. ಯಾಕೆ ಈ ಪ್ರಕರಣಕ್ಕೆ ಅವರ ಹೆಸರು ಸಿಲುಕಿಸಿಕೊಳ್ಳಲು ಹೊರಟಿದ್ದಾರೋ, ಗೊತ್ತಿಲ್ಲ. ಈ ಪ್ರಕರಣವನ್ನು ಎಲ್ಲರೂ ಹುಡುಗಾಟಿಕೆಯಾಗಿ ತೆಗೆದುಕೊಂಡಿದ್ದಾರೆ. ಯಾರಿಗೂ ಗಂಭೀರತೆ ಇಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಇದರಿಂದ ರಾಜ್ಯದ ಗೌರವ ಹಾಳಾಗುತ್ತಿದೆ. ಅಧಿಕಾರಿಗಳು ಯಾವುದೇ ಪ್ರಭಾವಕ್ಕೆ ಒಳಗಾಗಬಾರದು. ರಾಜ್ಯದ ಗೌರವ ಉಳಿಸಲು ನಿಷ್ಪಕ್ಷಪಾತ ತನಿಖೆ ಮಾಡಬೇಕು. ಸಂತ್ರಸ್ತ ಮಹಿಳೆಗೆ ಯಾರಿಂದ ರಕ್ಷಣೆ ಸಿಗಬೇಕಿತ್ತೋ ಅದು ಸಿಕ್ಕಿದೆ. ಆ ಹೆಣ್ಣು ಮಗಳಿಗೆ ಎಲ್ಲಾ ರೀತಿಯ ರಕ್ಷಣೆ ಸಿಕ್ಕಿದೆ ಎಂದು ಮಾಜಿ ಸಿಎಂ ಹೇಳಿದರು.
ಸರ್ಕಾರದಿಂದ ಆಕೆಯನ್ನು ಹುಡುಕಲು ಆಗದಿದ್ದರೂ, ಹಿಂದೆ ಇರುವವರು ಎಲ್ಲಾ ಬಗೆಯ ರಕ್ಷಣೆ ಕೊಟ್ಟಿದ್ದಾರೆ. ನಿನ್ನೆ (ಶನಿವಾರ) ಆಕೆ ಸರ್ಕಾರಕ್ಕೆ ವೀಡಿಯೋ ರೆಕಾರ್ಡ್ ಕಳುಹಿಸಿದ್ದಾರೆ. ಬೇರೆ ಯಾರಾದರೂ ರೆಕಾರ್ಡ್ ಮಾಡಿ ಕಳುಹಿಸಿದ್ದಾರೋ ಹೇಗೆ ಎಂಬ ಸಂಗತಿಯೂ ತನಿಖೆಯಿಂದ ಹೊರ ಬರಬೇಕು. ರಕ್ಷಣೆಯನ್ನು ಸರ್ಕಾರ ಕೊಟ್ಟಿದೆಯೋ, ವಿರುದ್ಧ ಇರೋರು ಕೊಟ್ಟಿದ್ದಾರೊ ಗೊತ್ತಿಲ್ಲ. ಸರ್ಕಾರ ರಚನೆಗೆ ಈತನ ಸಹಾಯ ಪಡೆದವರು ಈತನ ಸ್ಪೀಡ್ ಕಟ್ ಮಾಡೋಕೆ ಮಾಡಿದ್ದಾರೋ ನನಗೆ ಗೊತ್ತಿಲ್ಲ ಎಂದು ವ್ಯಂಗ್ಯವಾಗಿ ಹೇಳಿದರು ಎಚ್ಡಿಕೆ.
ಯಾವುದೇ ತನಿಖೆ ಸರ್ಕಾರದಿಂದ ನಡೆದಾಗ ತಾರ್ಕಿಕ ಅಂತ್ಯ ಕಾಣಲ್ಲ. ಇಡೀ ದೇಶದ ವ್ಯವಸ್ಥೆ ಅದೇ ರೀತಿ ಇದೆ. ಯಾರನ್ನಾದರೂ ರಾಜಕೀಯವಾಗಿ ಮುಗಿಸುವಾಗ ಸಣ್ಣಪುಟ್ಟ ತಪ್ಪು ಮುಂದಿಟ್ಟುಕೊಂಡು ಅಧಿಕಾರದಲ್ಲಿ ಇರುವವರು ತಾತ್ಕಾಲಿಕವಾಗಿ ಬೆಳವಣಿಗೆ ಕುಂಠಿತ ಮಾಡುತ್ತಾರೆ ಎಂದು ಅವರು ಕಿಡಿ ಕಾರಿದರು.
ಇಂತಹ ವ್ಯವಸ್ಥಿತ ಬೆಳವಣಿಗೆ ದೇಶದಲ್ಲಿ ಕಂಡಿದ್ದೇವೆ. ಈಗಲೂ ಅದೇ ರೀತಿ ನಡೆಯುತ್ತಿದೆ. ಇಲ್ಲಿ ಹೆಣ್ಣು ಮಗಳಿಗೆ ನ್ಯಾಯ ಸಿಗುತ್ತದೆಯೋ, ಇಲ್ಲ ಸಂತ್ರಸ್ತರಿಗೆ ನ್ಯಾಯ ಸಿಗುವುದೋ ಗೊತ್ತಿಲ್ಲ. ಇಲ್ಲಿ ಯಾರನ್ನು ನಾನು ಸಂತ್ರಸ್ತರು ಎನ್ನೋದು ಎಂದು ಪ್ರಶ್ನಿಸಿದ್ದಾರೆ.