ಕೆಲ ತಿಂಗಳ ಹಿಂದೆಯಷ್ಟೇ ಸೂಕ್ಷ್ಮಜೈವಿಕ ತಾಣವಾಗಿ ಘೋಷಿಸಲ್ಪಟ್ಟಿದ್ದ ಹಾಗೂ ಪವಿತ್ರ ಪಂಚನಾರಾಯಣ ಕ್ಷೇತ್ರಗಳಲ್ಲಿ ಒಂದಾದ ಎಲ್ಲೋಡು ಶ್ರೀ ಆದಿನಾರಾಯಣ ಸ್ವಾಮಿ ಬೆಟ್ಟದಲ್ಲಿ ಇದೇ ಮೊದಲ ಬಾರಿಗೆ ಸೋಮವಾರ ರಾತ್ರಿ ಬೆಂಕಿ ಕಾಣಿಸಿಕೊಂಡಿದೆ.
ಗುಡಿಬಂಡೆ: ಕೆಲ ತಿಂಗಳ ಹಿಂದೆಯಷ್ಟೇ ಪಾರಂಪರಿಕ ಸೂಕ್ಷ್ಮ ಜೈವಿಕ ಪ್ರದೇಶವೆಂದು ಘೋಷಿಸಲ್ಪಟ್ಟಿದ್ದ ತಾಲ್ಲೂಕಿನ ಇತಿಹಾಸ ಮತ್ತು ಪುರಾಣ ಪ್ರಸಿದ್ಧ ಎಲ್ಲೋಡು ಆದಿನಾರಾಯಣ ಸ್ವಾಮಿ ಬೆಟ್ಟದಲ್ಲಿ ಭಾರೀ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಸೋಮವಾರ ರಾತ್ರಿ 9.30 ಗಂಟೆ ಹೊತ್ತಿಗೆ ಬೆಂಕಿ ಕಾಣಿಸಿಕೊಂಡಿದ್ದು, ಬೇಸಿಗೆಯ ತಾಪಮಾನದಿಂದ ಬೆಂಕಿಯ ಕೆನ್ನಾಲಿಗೆ ಕ್ಷಿಪ್ರವಾಗಿ ಇಡೀ ಬೆಟ್ಟವನ್ನು ಆವರಿಸಿಕೊಂಡಿದೆ. ಅಪಾರ ಪ್ರಮಾಣದ ಜೀವ ಸಂಕುಲ, ಅಪರೂಪದ ಮರಗಿಡಗಳು ಅಗ್ನಿಗೆ ಸಿಕ್ಕಿ ಭಸ್ಮವಾಗಿವೆ. ದುಷ್ಕರ್ಮಿಗಳು ಯಾರೋ ಬೆಂಕಿ ಹಚ್ಚಿದ್ದಾರೆ. ಅವರಿಗಾಗಿ ಬೇಟೆ ಶುರುವಾಗಿದೆ.
ಧಾರ್ಮಿಕ ಶ್ರದ್ಧಾ ಕೇಂದ್ರ ಹಾಗೂ ಪುರಾಣ ಪ್ರಸಿದ್ಧ ಕ್ಷೇತ್ರವೂ ಆಗಿರುವ ಎಲ್ಲೋಡು ಆದಿನಾರಾಯಣ ಸ್ವಾಮಿ ಬೆಟ್ಟದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬ ಸುದ್ದಿ ತಾಲ್ಲೂಕಿನಾದ್ಯಂತ ತೀವ್ರ ಸಂಚಲನ ಉಂಟು ಮಾಡಿದ್ದು, ಎಲ್ಲೋಡು ಸೇರಿದಂತೆ ಅಕ್ಕಪಕ್ಕದ ಗ್ರಾಮಗಳ ಜನರು ಬೆಂಕಿಯನ್ನು ನಂದಿಸಲು ಅರಣ್ಯ ಇಲಾಖೆ ಸಿಬ್ಬಂದಿಗೆ ನೆರವಾಗಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ವಾಚರ್ಸ್, ಅರಣ್ಯ ಸಿಬ್ಬಂದಿ ಸೇರಿ 30ಕ್ಕೂ ಹೆಚ್ಚು ಜನ ಬೆಂಕಿಯನ್ನು ನಂದಿಸುತ್ತಿದ್ದಾರೆ. ಅಗ್ನಿಶಾಮಕ ದಳವೂ ಜತೆಯಾಗಿದೆ.
ಇನ್ನು ಬೇಸಿಗೆಯ ಆರಂಭದಲ್ಲೇ ಈ ಅಪರೂಪ ಬೆಟ್ಟವು ಬೆಂಕಿ ಕೆನ್ನಾಲಿಗೆಗೆ ಸಿಕ್ಕಿದ್ದು, ಬೆಂಕಿಯನ್ನು ನಂದಿಸಲು ಅರಣ್ಯ ಇಲಾಖೆ, ಸ್ಥಳಿಯ ಕಂದಾಯ ಅಧಿಕಾರಿಗಳು ತೀವ್ರವಾಗಿ ಪ್ರಯತ್ನಿಸುತ್ತಿದ್ದಾರೆ. ಆದರೆ, ಶರವೇಗದಲ್ಲಿ ಹಬ್ಬುತ್ತಿರುವ ಬೆಂಕಿಯನ್ನು ಹತೋಟಿಗೆ ತರುವುದು ರಾತ್ರಿ 12 ಗಂಟೆಯಾದರೂ ಸಾಧ್ಯವಾಗಿರಲಿಲ್ಲ.
ರಾತ್ರಿ 11.30 ಗಂಟೆಗೆ ಸಿಕೆನ್ಯೂಸ್ ನೌ ಗೆ ಸಿಕ್ಕಿದ ಮಾಹಿತಿ ಪ್ರಕಾರ ಬೆಟ್ಟದ ಶೇ.60ರಷ್ಟು ಅರಣ್ಯ ಸುಟ್ಟು ಭಸ್ಮವಾಗಿತ್ತು ಎನ್ನಲಾಗಿದೆ. ಆದರೆ, ಬೆಂಕಿ ನಂದಿಸುವ ಕೆಲಸದಲ್ಲಿ ತಲ್ಲೀನರಾಗಿರುವ ಸಂಬಂಧಿತ ಯಾವ ಅಧಿಕಾರಿಯೂ ಮಾಹಿತಿಗೆ ಲಭ್ಯವಾಗಿಲ್ಲ.
ಅಪರೂಪದ ತಾಣ; ಜೀವ ವೈವಿಧ್ಯದ ಸ್ವರ್ಗ
ಕೆಲ ತಿಂಗಳ ಹಿಂದೆ ರಾಜ್ಯ ಜೀವ ವೈವಿಧ್ಯ ಮಂಡಳಿ ಎಲ್ಲೋಡು ಆದಿನಾರಾಯಣ ಸ್ವಾಮಿ ಬೆಟ್ಟದ ಪ್ರದೇಶವನ್ನು ʼಸೂಕ್ಷ್ಮ ಜೈವಿಕ ಪ್ರದೇಶʼ ಘೋಷಣೆ ಮಾಡಿತ್ತು. ಅಷ್ಟೇ ಅಲ್ಲದೆ, ಮಂಡಳಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅವರು ಬೆಟ್ಟಕ್ಕೆ ಭೇಟಿ ನೀಡಿ ಅಲ್ಲಿನ ಜೀವ ವೈವಿಧ್ಯವನ್ನು ಕಂಡು ಮಾರು ಹೋಗಿದ್ದರು.
ರಾಜ್ಯ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಅಶಿಸೇಸರ ಬೆಟ್ಟಕ್ಕೆ ಭೇಟಿ ನೀಡಿದ್ದ ಕ್ಷಣ.
ಆದಿನಾರಾಯಣ ಸ್ವಾಮಿ ಬೆಟ್ಟದ ಪ್ರದೇಶವು ಅಪರೂಪದ ವೃಕ್ಷಗಳು, ಜೀವಿಗಳು, ಪಕ್ಷಿಗಳ ನೆಲೆಯಾಗಿದ್ದು, ಪ್ರಾಕೃತಿಕವಾಗಿ ಸಮೃದ್ಧವಾಗಿತ್ತು. ಆದರೆ, ʼಸೂಕ್ಷ್ಮ ಜೈವಿಕ ಪ್ರದೇಶʼದ ಮನ್ನಣೆ ಸಿಕ್ಕಿದ ನಂತರ ಬೆಂಕಿ ದುರಂತ ಸಂಭವಿಸಿರುವುದು ಪರಿಸರ ಪ್ರಿಯರಿಗೆ ದೊಡ್ಡ ಆಘಾತ ಉಂಟಾಗಿದೆ.
ಬೆಂಕಿ ದುರಂತ ಇದೇ ಮೊದಲು
ಎಲ್ಲೋಡು ಆದಿನಾರಾಯಣ ಸ್ವಾಮಿ ಬೆಟ್ಟದ ಇತಿಹಾಸದಲ್ಲಿಯೇ ಕಾಡಿಗೆ ಬೆಂಕಿ ಬಿದ್ದಿರುವುದು ಇದೇ ಮೊದಲು. ಇಡೀ ಬೆಟ್ಟ ಪ್ರದೇಶವನ್ನು ಜನರು ಪವಿತ್ರವಾಗಿ ನೋಡುತ್ತಾರಲ್ಲದೆ, ಇಡೀ ಪ್ರದೇಶದಲ್ಲಿ ಮರಗಳನ್ನಾಗಲಿ- ಗಿಡಗಳನ್ನಾಗಲಿ ಕಡಿಯುವುದಿಲ್ಲ. ಒಂದು ವೇಳೆ ಕಡಿದರೆ ಅದರಿಂದ ಮನೆಗೆ ಕೇಡಾಗುತ್ತದೆ ಎಂಬ ನಂಬಿಕೆ ಇದೆ. ಹೀಗಾಗಿ ಸುತ್ತಮುತ್ತಲ ಬೆಟ್ಟಗಳ ಪ್ರದೇಶದಲ್ಲಿ ಹಸಿರು ನಾಶವಾಗಿದ್ದರೂ ಈ ಬೆಟ್ಟದಲ್ಲಿ ಮಾತ್ರ ಮುಕ್ಕಾಗದೇ ಹಾಗೆಯೇ ಉಳಿದಿತ್ತು.
ಶ್ರೀ ಆದಿನಾರಾಯಣ ಬೆಟ್ಟವನ್ನು ಆವರಿಸಿಕೊಂಡಿರುವ ಬೆಂಕಿ.
ಈ ಎಲ್ಲ ಹಿನ್ನೆಲೆ ನೋಡಿದರೆ ಯಾರಾದರೂ ಕುಡುಕರು ಬೀಡಿ ಅಥವಾ ಸಿಗರೇಟ್ ಸೇದಿ ಬಿಸಾಡಿರಬಹುದು ಎಂದು ಶಂಕಿಸಲಾಗುತ್ತಿದೆ. ರಾತ್ರಿ ಹೊತ್ತಿನಲ್ಲಿ ಕುಡುಕರು ಅಲ್ಲಲ್ಲಿ ಕೂತು ಕುಡಿಯುವುದು, ಧೂಮಪಾನ ಮಾಡುವುದು ಸಾಮಾನ್ಯವೆಂಬಂತೆ ಆಗಿದೆ. ಈ ಬಗ್ಗೆ ದುಷ್ಕರ್ಮಿಗಳಿಗೆ ಯಾರ ಭಯ ಇಲ್ಲ ಎನ್ನುವುದು ಎಲ್ಲೋಡು ಗ್ರಾಮಸ್ಥರ ಆಕ್ರೋಶವಾಗಿದೆ.
ಪಂಚನಾರಾಯಣ ಕ್ಷೇತ್ರಗಳಲ್ಲಿ ಒಂದು
ಎಲ್ಲೋಡು, ಐತಿಹಾಸ ಪ್ರಸಿದ್ಧ ಗುಡಿಬಂಡೆ ತಾಲ್ಲೂಕಿಗೆ ಸೇರಿದ ಪ್ರಮುಖ ಪುಣ್ಯಧಾಮ. ಪರಮ ಪವಿತ್ರ ಪಂಚನಾರಾಯಣ ಕ್ಷೇತ್ರಗಳಲ್ಲಿ ಒಂದು. ಶ್ರೀ ಲಕ್ಷ್ಮೀ ಆದಿನಾರಾಯಣಸ್ವಾಮಿ ಉಗಮ ಸ್ಥಾನವೇ ಈ ಕೂರ್ಮಗಿರಿ.
ಎಲ್ಲೋಡು ಬೆಟ್ಟ ಸಂಪೂರ್ಣವಾಗಿ ಆಮೆ ಆಕಾರದಲ್ಲಿ ಇರುವುದರಿಂದ ಇದಕ್ಕೆ ʼಕೂರ್ಮಗಿರಿʼ ಎಂದು ಹೆಸರು ಬಂದಿದೆ. ಪಂಚನಾರಾಯಣ ಕ್ಷೇತ್ರಗಳ ಉಗಮ ಸ್ಥಾನ ಎಂದೂ ಪುರಾಣ ಪ್ರಸಿದ್ದವಾಗಿದೆ. ಉತ್ತರ ಭಾರತದ ಬದರಿ ಕ್ಷೇತ್ರದ ಶ್ರೀ ಬದರಿನಾರಾಯಣ, ಗದುಗಿನ ಶ್ರೀ ವೀರನಾರಾಯಣ, ಕೈವಾರ ಕ್ಷೇತ್ರದ ಶ್ರೀ ಅಮರನಾರಾಯಣ, ಮೇಲುಕೋಟೆ ಶ್ರೀ ಚೆಲುವನಾರಾಯಣ ಹಾಗೂ ಎಲ್ಲೋಡಿನ ಶ್ರೀ ಆದಿನಾರಾಯಣ, ಶ್ರೀ ಮಹಾವಿಷ್ಣು ಅವತಾರದ ಪಂಚನಾರಾಯಣ ಕ್ಷೇತ್ರಗಳೆಂದು ಪುರಾಣ ಪ್ರಸಿದ್ಧಿ ಪಡೆದುಕೊಂಡಿವೆ. ಇಲ್ಲಿ ಪ್ರತಿ ಭಾನುವಾರ ವಿಶೇಷ ಪೂಜೆಯೂ ನಡೆಯುತ್ತದೆ.
ಆದಿನಾರಾಯಣಸ್ವಾಮಿ ಬೆಟ್ಟದಲ್ಲಿ ಪ್ರಪಂಚದಲ್ಲಿನ ವಿವಿಧ ರೀತಿಯ ಮರಗಳು, ವಿವಿಧ ರೀತಿ ಪಕ್ಷಿ ಪ್ರಭೇದ, ಪ್ರಾಣಿ ಸಂಕುಲಗಳಿವೆ. ಹಚ್ಚ ಹಸಿರಿನ ಆಮೆಯಾಕಾರದ ಕೂರ್ಮಗಿರಿಯು ಧಾರ್ಮಿಕ ಕ್ಷೇತ್ರವೂ ಆಗಿದ್ದು, ಜೀವಸಂಕುಲಗಳ ವಾಸಸ್ಥಾನವಾಗಿದೆ.
ಇಂಥ ಪರಮ ಪವಿತ್ರ ಕ್ಷೇತ್ರದಲ್ಲಿ ಬೆಂಕಿ ಅನಾಹುತ ಉಂಟಾಗಿದ್ದು, ಜನರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.