ಬೆಂಗಳೂರು: ದರ್ಶನ್ ನಟನೆಯ ʼರಾಬರ್ಟ್ʼ, ಅದಕ್ಕೂ ಹಿಂದೆ ಧುವ ಸರ್ಜಾ ನಟನೆಯ ʼಪೊಗರುʼ ಚಿತ್ರಗಳ ರಿಲೀಸ್‌ನಿಂದ ಕೊಂಚ ಮಟ್ಟಿಗೆ ಪುಟಿದೆದ್ದಿದ್ದ ಕನ್ನಡ ಚಿತ್ರರಂಗಕ್ಕೆ ಮತ್ತೂ ಒತ್ತಡ ಹಾಕದಿರಲು ರಾಜ್ಯ ಸರಕಾರ ನಿರ್ಧರಿಸಿದೆ.
ಕೋವಿಡ್ ಎರಡನೇ ಅಲೆ ಹಿನ್ನೆಲೆಯಲ್ಲಿ ಚಿತ್ರಮಂದಿರಗಳಲ್ಲಿ ಪೂರ್ಣವಾಗಿ ಆಸನಗಳನ್ನು ಭರ್ತಿ ಮಾಡಿಕೊಳ್ಳುವುದಕ್ಕೆ ಯಾವುದೇ ರೀತಿಯ ನಿರ್ಬಂಧ ಹೇರುವುದಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಪ್ರಕಟಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಯಾಂಡಲ್‌ವುಡ್ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ.
ನೆರೆಯ ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳಲ್ಲಿ ಕೋವಿಡ್ ಸೋಂಕಿತರು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಸೋಂಕಿತರು ಹೆಚ್ಚುತ್ತಲೇ ಇದ್ದಾರೆ. ಹೀಗಾಗಿ ಚಲನಚಿತ್ರ ಮಂದಿರಗಳಲ್ಲಿ ಶೇ.50ರಷ್ಟು ಆಸನ ಭರ್ತಿಗೆ ಮಾತ್ರ ಅವಕಾಶ ನೀಡುವುದು, ಮದುವೆ ಮತ್ತಿತರೆ ಸಮಾರಂಭಗಳಿಗೆ ನಿರ್ಬಂಧ ಹೇರುವ ಬಗ್ಗೆ ಸರಕಾರ ಗಂಭೀರ ಚಿಂತನೆ ನಡೆಸಿತ್ತು.
ಯಾವಾಗ ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಆಸನಗಳ ಭರ್ತಿಗೆ ಮಾತ್ರ ಅವಕಾಶ ನೀಡುವ ಬಗ್ಗೆ ಸರಕಾರ ನಿರ್ಧಾರ ಕೈಗೊಳ್ಳಬಹುದು ಎಂದ ಗೊತ್ತಾದ ಕೂಡಲೇ ಸ್ಟಾರ್ ನಟರಾದ ಕಿಚ್ಚ ಸುದೀಪ್, ಪುನೀತ್ ರಾಜ್‌ಕುಮಾರ್, ದುನಿಯಾ ವಿಜಯ್ ಸೇರಿದಂತೆ ಕೆಲ ತಾರೆಯರು, ಯಾವುದೇ ಕಾರಣಕ್ಕೂ ಚಿತ್ರಮಂದಿರ ಪೂರ್ಣ ಭರ್ತಿಯ ಮೇಲೆ ನಿರ್ಬಂಧ ಹೇರಬಾರದು ಎಂದು ಸರಕಾರವನ್ನು ಒತ್ತಾಯ ಮಾಡಿದ್ದರು.
- ಕಿಚ್ಚ ಸುದೀಪ್, ಪುನೀತ್ ರಾಜ್‌ಕುಮಾರ್ / Photos courtesy: Wikipedia
2020ರ ಮಾರ್ಚ್‌ನಿಂದ ಲಾಕ್‌ಡೌನ್ ಬಂದು ಚಿತ್ರಮಂದಿರಗಳನ್ನೂ ಮುಚ್ಚಲಾಗಿತ್ತು. ಇದರಿಂದ ಸಿನಿಮಾಗಳ ಪ್ರದರ್ಶನ ಸಂಪೂರ್ಣ ಸ್ಥಗಿತವಾಗಿತ್ತು. ಶೂಟಿಂಗ್, ಹೊಸ ಚಿತ್ರಗಳ ರಿಲೀಸ್ ಮುಂತಾದ ಚಟುವಟಿಕೆಗಳು ನಿಂತುಹೋಗಿದ್ದವು. ಹೀಗಾಗಿ ಚಿತ್ರರಂಗ ತೀವ್ರ ಸಂಕಷ್ಟಕ್ಕೆ ಗುರಿಯಾಗಿತ್ತು ಮಾತ್ರವಲ್ಲದೆ, ನಿರ್ಮಾಪಕರು ಮತ್ತು ಕಾರ್ಮಿಕರ ಜತೆಗೆ ಕಲಾವಿದರೂ ಕಷ್ಟಕ್ಕೆ ಸಿಲುಕಿದ್ದರು ಎಂದು ಪುನೀತ್ ಅವರು ಸರಕಾರದ ಗಮನ ಸೆಳೆದಿದ್ದರು.
ಅನ್‌ಲಾಕ್ ಮಾಡಿದ ಕೆಲ ದಿನಗಳಿಂದ ಮಾತ್ರ ನಿಧಾನಗತಿಯಲ್ಲಿ ಪ್ರೇಕ್ಷಕರು ಚಿತ್ರಮಂದಿರಗಳತ್ತ ಬರುತ್ತಿದ್ದಾರೆ. ಈಗಷ್ಟೇ ಮೆಲ್ಲಮೆಲ್ಲನೇ ಚಿತ್ರರಂಗ ಚೇತರಿಸಿಕೊಳ್ಳುತ್ತಿದೆ. ಇಂಥ ಹೊತ್ತಿನಲ್ಲಿ ಆಸನ ಭರ್ತಿಗೆ ನಿರ್ಬಂಧ ಹೇರಿದರೆ ಪುನಾ ಇಡೀ ಚಿತ್ರರಂಗ ಸಂಕಷ್ಟಕ್ಕೆ ಸಿಲುಕುತ್ತದೆ ಎಂಬ ಆತಂಕವನ್ನು ಹೀರೋಗಳು ವ್ಯಕ್ತಪಡಿಸಿದ್ದರು.
ಸಮಾಲೋಚಿಸಿದ ಸಿಎಂ
ಚಿತ್ರರಂಗದ ಬೇಡಿಕೆಯ ಬಗ್ಗೆ ಕೂಡಲೇ ಸ್ಪಂಧಿಸಿದ ಮುಖ್ಯಮಂತ್ರಿ ಅವರು; ಈ ಬಗ್ಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಹಿರಿಯ ಅಧಿಕಾರಿಗಳ ಜತೆ ಮಾತುಕತೆ ನಡೆಸಿದರಲ್ಲದೆ ಸಂಜೆ ಹೊತ್ತಿಗೆ ಚಿತ್ರಮಂದಿರಗಳ ಶೇ.100ರಷ್ಟು ಭರ್ತಿಗೆ ನಿರ್ಬಂಧ ಹೇರುವ ಯಾವುದೇ ಉದ್ದೇಶ ಸರಕಾರಕ್ಕಿಲ್ಲ ಎಂದು ಪ್ರಕಟಿಸಿದರು.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, “ರಾಜ್ಯದಲ್ಲಿ ಸಿನಿಮಾ ಮಂದಿರಗಳಲ್ಲಿ ಶೇ.50ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡುವ ಯಾವ ಪ್ರಸ್ತಾಪವೂ ಸರ್ಕಾರದ ಮುಂದಿಲ್ಲ. ಪ್ರೇಕ್ಷಕರು ಮತ್ತು ಥಿಯೇಟರ್ ಮಾಲೀಕರು ಎಲ್ಲಾ ಆವಶ್ಯಕ ಮುಂಜಾಗ್ರತಾ ಕ್ರಮಗಳನ್ನು ತಪ್ಪದೇ ಪಾಲಿಸಿ, ಕೊರೋನಾ ನಿಯಂತ್ರಣಕ್ಕೆ ಸರಕಾರದೊಂದಿಗೆ ಸಹಕರಿಸಿ” ಎಂದು ಜನರನ್ನು ಕೋರಿದರು.
ಜೋಶ್‌ನಲ್ಲಿದೆ ಸ್ಯಾಂಡಲ್‌ವುಡ್
ಕೆಲ ದಿನಗಳ ಹಿಂದೆ ಬಿಡುಗಡೆಯಾಗಿದ್ದ ಧ್ರುವ ಸರ್ಜಾ ನಟಿಸಿದ್ದ ʼಪೊಗರುʼ ಚಿತ್ರ ಯಶಸ್ವಿಯಾಗಿ ಪ್ರದರ್ಶನಗೊಂಡಿತ್ತು. ಇನ್ನೂ ಆನೇಕ ಚಿತ್ರಮಂದಿರಗಳಲ್ಲಿ ಆ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಮಹಾ ಶಿವರಾತ್ರಿ ದಿನದಂದು ತೆರೆಗೆ ಬಂದ ದರ್ಶನ್ ಅವರ ʼರಾಬರ್ಟ್ʼ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಪುನೀತ್ ರಾಜ್‌ಕುಮಾರ್ ಅವರ ʼಯುವರತ್ನʼ, ಕಿಚ್ಚ ಸುದೀಪ್ ಅವರ ʼಕೋಟಿಗೊಬ್ಬ 3ʼ, ದುನಿಯಾ ವಿಜಯ್ ಅವರ ʼಸಲಗʼ ಸಿನಿಮಾಗಳು ರಿಲೀಸ್‌ಗೆ ಸಿದ್ಧವಾಗಿವೆ. ಈ ಎಲ್ಲ ಕಾರಣಗಳಿಂದ ಆಸನ ಭರ್ತಿಗೆ ಸರಕಾರ ವಿಧಿಸಲಿದ್ದ ನಿರ್ಬಂಧದ ಬಗ್ಗೆ ಚಿತ್ರರಂಗ ಆತಂಕಗೊಂಡಿತ್ತು.