ಬೆಂಗಳೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಎರಡನೇ ಅತ್ಯುನ್ನತ ಸ್ಥಾನವಾದ ಸರಕಾರ್ಯವಾಹರಾಗಿ (ಪ್ರಧಾನ ಕಾರ್ಯದರ್ಶಿ) ಕನ್ನಡಿಗರಾದ ದತ್ತಾತ್ರೇಯ ಹೊಸಬಾಳೆ ಅವರು ಆಯ್ಕೆಯಾಗಿದ್ದಾರೆ.
ಬೆಂಗಳೂರಿನ ಚೆನ್ನೇನಹಳ್ಳಿ ಜನಸೇವಾ ವಿದ್ಯಾಕೇಂದ್ರದಲ್ಲಿ ನಡೆಯುತ್ತಿರುವ ಆರ್‌ಎಸ್‌ಎಸ್ ʼಅಖಿಲ ಭಾರತೀಯ ಪ್ರತಿನಿಧಿ ಸಭಾʼ (ಎಬಿಪಿಎಸ್) ದಲ್ಲಿ ದತ್ತಾತ್ರೇಯ ಹೊಸಬಾಳೆ ಅವರು ಸರಕಾರ್ಯವಾಹ ಆಗಿ ಆಯ್ಕೆಯಾಗಿದ್ದು, ರಾಜ್ಯದ ಪಾಲಿಗೆ ಇದೊಂದು ಮಹತ್ತ್ವದ ಬೆಳವಣಿಗೆಯಾಗಿದೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಸರಸಂಘಚಾಲಕ್ ಪದವಿಯೂ ಅತ್ಯುನ್ನತ ಹೊಣೆಗಾರಿಕೆಯಾಗಿದೆ. ಇನ್ನು; ಸರಕಾರ್ಯವಾಹ ಹೊಣೆಯು ಸಂಘದಲ್ಲಿ ಎರಡನೇ ಅತ್ಯುನ್ನತ ಹಾಗೂ ಅತ್ಯಂತ ಮಹತ್ತ್ವದ ಹೊಣೆಗಾರಿಕೆಯುಳ್ಳ ಸ್ಥಾನವಾಗಿದೆ.
ಮೋಹನ್ ಜೀ ಭಾಗ್ವತ್ ಅವರು ಸರಸಂಘಚಾಲಕ್ʼರಾಗಿ ಸದ್ಯಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ಹಾಗೆಯೇ, 2009ರಿಂದ ಈವರೆಗೂ ಸುರೇಶ್ ಭೈಯ್ಯಾಜಿ ಜೋಷಿ ಅವರು ಸರಕಾರ್ಯವಾಹ ಸ್ಥಾನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈಗ ದತ್ತಾತ್ರೇಯ ಹೊಸಬಾಳೆ ಅವರು ಸುರೇಶ್ ಭೈಯ್ಯಾಜಿ ಜೋಷಿ ಅವರ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ.
ಈ ಹಿಂದೆ ಹೋ.ವೇ ಶೇಷಾದ್ರಿ ಅವರು ಸರಕಾರ್ಯವಾಹರಾಗಿ ಕೆಲಸ ಮಾಡಿದ್ದರು. ಅವರ ನಂತರ ದತ್ತಾತ್ರೇಯ ಹೊಸಬಾಳೆ ಅವರು ಆ ಅತ್ಯುನ್ನತ ಸ್ಥಾನಕ್ಕೆ ಬಂದಿರುವ ಕನ್ನಡಿಗರು.
ಅಂದ ಹಾಗೆ, ಆರ್‌ಎಸ್‌ಎಸ್ ಈ ಬಗ್ಗೆ ಅಧಿಕೃತವಾಗಿ ಟ್ವೀಟ್ ಮಾಡಿ ಪ್ರಕಟಣೆ ನೀಡಿದೆ.
ಹೊಸಬಾಳೆ ಅವರ ಬಗ್ಗೆ
1954 ಡಿಸೆಂಬರ್ 1ರಂದು ಜನಿಸಿದ ದತ್ತಾತ್ರೇಯ ಹೊಸಬಾಳೆ ಅವರು ಶಿವಮೊಗ್ಗ ಜಿಲ್ಲೆಯ ಸೊರಬದವರು. ತಂದೆ ಹೊಸಬಾಳೆ ಶೇಷಗಿರಿಯಪ್ಪ, ತಾಯಿ ಮೀನಾಕ್ಷಮ್ಮ. ಅವರಿಗೆ ನಾಲ್ವರು ಸಹೋದರಿಯರು, ಇಬ್ಬರು ಸಹೋದರರು. ಇಂಗ್ಲೀಷ್‌ನಲ್ಲಿ ಎಂ.ಎ. ಆನರ್ಸ್ ವ್ಯಾಸಂಗ ಮಾಡಲು 1974ರಲ್ಲಿ ಸೆಂಟ್ರಲ್ ಕಾಲೇಜ್‌ಗೆ ಸೇರಿದ್ದ ಅವರು, 1975ರಲ್ಲಿ ತಮ್ಮ ವ್ಯಾಸಂಗವನ್ನು ಅರ್ಧಕ್ಕೆ ಬಿಟ್ಟು ಲೋಕನಾಯಕ ಜಯಪ್ರಕಾಶ ನಾರಾಯಣ ಅವರ ನವನಿರ್ಮಾಣ ಆಂದೋಲನದಲ್ಲಿ ಭಾಗಿಯಾದರು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಅವರು 16 ತಿಂಗಳು ಜೈಲುವಾಸ ಅನುಭವಿಸಿದ್ದರು. ಪುನಾ 1977ರಲ್ಲಿ ಸೆಂಟ್ರಲ್ ಕಾಲೇಜ್‌ಗೆ ಬಂದು ಎಂ.ಎ. ಪೂರ್ಣಗೊಳಿಸಿದರು.
ಕಾಲೇಜ್‌ನಲ್ಲಿ ದಲಿತ ಕವಿ ಸಿದ್ದಲಿಂಗಯ್ಯ, ಕಿ.ರಂ.ನಾಗರಾಜ್ ಅವರುಗಳು ಹೊಸಬಾಳೆ ಅವರ ಕ್ಲಾಸ್‌ಮೇಟ್ ಆಗಿದ್ದರು. ಪಿ.ಲಂಕೇಶ್ ಅವರು ಹೊಸಬಾಳೆ ಅವರ ಗುರುಗಳಾಗಿದ್ದರು. ಜೇಪಿ ಆಂದೋಲನಕ್ಕೆ ಧುಮುಕುವ ಮುನ್ನವೇ ಅವರು 1975ರಲ್ಲೇ ಆರ್‌ಎಸ್‌ಎಸ್ ಓಟಿಸಿ (ಆಫೀಸರ್ಸ್ ಟ್ರೈನಿಂಗ್ ಕೋರ್ಸ್ )ಯನ್ನು ಮಧ್ಯಪ್ರದೇಶದ ದುರ್ಗ್‌ನಲ್ಲಿ ಪೂರ್ಣಗೊಳಿಸಿದರು.
1975 ಜೂನ್ 25-26ರ ಮಧ್ಯರಾತ್ರಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದಾಗ ಬಿಜೆಪಿ ಹಿರಿಯ ನಾಯಕರಾದ ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ.ಅಡ್ವಾಣಿ, ಎಸ್.ಎನ್.ಮಿಶ್ರಾ ಹಾಗೂ ಮಧುಡಂಡವತೆ ಅವರು ಬೆಂಗಳೂರಿನಲ್ಲಿ ಒಂದು ಸಂಸದೀಯ ಸಭೆಯಲ್ಲಿದ್ದರು. ಆ ಎಲ್ಲ ನಾಯಕರಿಗೆ ತುರ್ತು ಪರಿಸ್ಥಿತಿ ಮಾಹಿತಿಯನ್ನು ಮೊದಲು (26ರ ಬೆಳಗ್ಗೆ) ಮುಟ್ಟಿಸಿದವರೇ ದತ್ತಾತ್ರೇಯ ಹೊಸಬಾಳೆ ಅವರು.
ಹೋರಾಟನ್ನು ರೂಪಿಸುವ ಸಲುವಾಗಿ ಹೊಸಬಾಳೆ ಅವರು ಕೂಡಲೇ ಭೂಗತರಾದರು. ಈ ಸಂದರ್ಭದಲ್ಲಿ ಅವರ ರಾಜ್ಯವ್ಯಾಪಿ ಪ್ರವಾಸ ಮಾಡಿ ವಿದ್ಯಾರ್ಥಿಗಳನ್ನು ಸಂಘಟಿಸಿದರು. ಆದರೆ, ಅವರನ್ನು 1975ಡಿಸೆಂಬರ್ 18ರಂದು ಮೀಸಾ ಕಾಯ್ದೆಯಡಿ ಬಂಧಿಸಲಾಯಿತು. ಮೊದಲು 7 ತಿಂಗಳು ಅವರನ್ನು ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಇರಿಸಲಾಯಿತು. ನಂತರ ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಯಿತು. 1977ರ ಫೆಬ್ರವರಿಯಲ್ಲಿ ಲೋಕಸಭೆ ಚುನಾವಣೆ ದಿನಾಂಕ ಘೋಷಣೆ ಆದ ಮೇಲೆ ಅವರನ್ನು ಕಾರಾಗೃಹದಿಂದ ಬಿಡುಗಡೆ ಮಾಡಲಾಯಿತು.
1968ರಲ್ಲಿ ಆರ್‌ಎಸ್‌ಎಸ್ ಸೇರಿದ ಹೊಸಬಾಳೆ ಅವರು, 1972ರಲ್ಲಿ ಎಬಿವಿಪಿಗೆ ಬಂದರು. ಎಬಿವಿಪಿ ಪ್ರಧಾನ ಕಾರ್ಯದರ್ಶಿಯಾಗಿ 15 ವರ್ಷ ಸೇವೆ ಮಾಡಿದ್ದರು. 1978ರಿಂದ ಅವರು ಪೂರ್ಣ ಪ್ರಮಾಣದ ಸ್ವಯಂ ಸೇವಕರಾಗಿ ಕೆಲಸ ಮಾಡುತ್ತಾ ಬಂದಿದ್ದಾರೆ. ಅಸೋಮ್‌ನ ಗುವಾಹಟಿಯಲ್ಲಿ ಯುವ ಅಭಿವೃದ್ಧಿ ಕೇಂದ್ರವನ್ನು ಸ್ಥಾಪಿಸುವಲ್ಲಿ ಇವರದ್ದು ಮಹತ್ತ್ವದ ಪಾತ್ರ.
ಇನ್ನೂ ಹೊಸಬಾಳೆ ಅವರು ಸಂಘದಿಂದ ಪ್ರಕಟವಾಗುವ ʼಆಸೀಮಾʼ ಮಾಸ ಪತ್ರಿಕೆಯ ಸಂಸ್ಥಾಪಕ ಸಂಪಾದಕರೂ ಆಗಿದ್ದರು. 2003ರಲ್ಲಿ ಸಹ ಬೌದ್ಧಿಕ್ ಪ್ರಮುಖ್ ಆಗಿ ನೇಮಕವಾದ ಅವರು 2009ರವರೆಗೂ ಆ ಹುದ್ದೆಯಲ್ಲಿದ್ದರು. 2009ರಲ್ಲಿ ಅವರನ್ನು ಸಂಘದ ಸಹ ಸರಕಾರ್ಯವಾಹ ಹುದ್ದೆಗೆ ನೇಮಿಸಲಾಯಿತು. ಬಳಿಕ ತಮ್ಮ ಕಾರ್ಯಕ್ಷೇತ್ರವನ್ನು ಬೆಂಗಳೂರಿನಿಂದ ಮುಂಬಯಿ, ಗುವಾಹಟಿ, ಪಟನಾಕ್ಕೆ ಬದಲಿಸಿದ್ದರು. ಈಗ ಅವರು ಲಖನೌದಲ್ಲೇ ಹೆಚ್ಚು ಇರುತ್ತಾರೆ.
ಸಂಘದ ಪ್ರಚಾರಕರಾಗಿ ನಾಲ್ಕು ದಶಕಕ್ಕೂ ಹೆಚ್ಚು ಕಾಲವನ್ನು ಸವೆಸಿರುವ ಅವರು, ತಾವು ನಂಬಿದ ಸಿದ್ದಾಂತದ ವಿರುದ್ಧ ಧಿಕ್ಕಿನಲ್ಲಿರುವವರ ಜತೆಯೂ ಸೌಹಾರ್ದ ಸಂವಾದ ನಡೆಸಿದವರು. ಈ ಕಾರಣಕ್ಕಾಗಿಯೇ ಹೊಸಬಾಳೆ ಅವರಿಗೆ ಶೂದ್ರ ಶ್ರೀನಿವಾಸ, ಡಿ.ಆರ್.ನಾಗರಾಜ್, ರಾಮ್ ಮೋಹನ್, ಸಮಾಜವಾದಿ ಹೋರಾಟಗಾರ ವೆಂಕರಾಮ್, ರಂಗಕರ್ಮಿ ಪ್ರಸನ್ನ ಅವರಂಥ ಅನೇಕ ಸ್ನೇಹಿತರಿದ್ದಾರೆ.
ಪಂಚಭಾಷೆಗಳಲ್ಲಿ ಪ್ರವೀಣರು. ಕನ್ನಡದ ಜತೆಗೆ ಇಂಗ್ಲೀಷ್ ಹಿಂದಿ, ತಮಿಳು, ಸಂಸ್ಕೃತದಲ್ಲಿ ನಿರರ್ಗಳವಾಗಿ ಮಾತನಾಡುತ್ತಾರೆ.