- ರಾಜ್ಯದಲ್ಲಿ ಮಾಜಿ ಸಚಿವರೊಬ್ಬರ ಅಶ್ಲೀಲ ಸಿ.ಡಿ. ಬಗ್ಗೆ ಅಲ್ಲೋಲ ಕಲ್ಲೋಲವೇ ಆಗುತ್ತಿದೆ. ಇನ್ನಷ್ಟು ಸಿ.ಡಿ.ಗಳಿವೆ ಎಂದು ಕೆಲವರು ಹೇಳುತ್ತಿದ್ದಾರೆ. ಹಾಗಾದರೆ, ಈ ಸಿ.ಡಿ.ಗಳು ಆಗಿದ್ದಾರೂ ಯಾಕೆ? ಕಾರಣ ಹೇಳಿದ್ದಾರೆ ಮಾಜಿ ಸಿಎಂ ಎಚ್‌ಡಿಕೆ.
ಬೆಂಗಳೂರು: ಶಾಸಕರು ನನ್ನ ಸರಕಾರವನ್ನು ಬೀಳಿಸಿ ಮುಂಬಯಿಗೆ ಹೋಗಿದ್ದೇ ಸಿ.ಡಿ. ಆಗಲು ಕಾರಣ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.
ವಿಧಾನಸೌಧದಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು; ಸಮ್ಮಿಶ್ರ ಸರಕಾರ ಬೀಳಿಸಿದ ಬಗ್ಗೆ ಎಚ್.ವಿಶ್ವನಾಥ್ ಅಸಮಾಧಾನಗೊಂಡ ಕುರಿತು ಪ್ರತಿಕ್ರಿಯಿಸಿದರಲ್ಲದೆ, ವಿಶ್ವನಾಥ್ ಮಾತ್ರವಲ್ಲ, ಮಂತ್ರಿ ಆಗಿರುವವರೇ, ಆಂತರಿಕವಾಗಿ ಕೇಳಿದರೆ ಸರ್ಕಾರ ಕೆಡವಿದ್ದು ಸರಿಯಲ್ಲ ಎಂದು ಹೇಳುತ್ತಾರೆ ಎಂದರು.
ಸಿ.ಡಿ. ವಿಚಾರದ ತನಿಖೆಯನ್ನು ಎಸಿಬಿ, ಎಸ್‍ಐಟಿ, ಸರಕಾರ ನೋಡಿಕೊಳ್ಳಲಿದೆ. ಯಾವ್ಯಾವ ಅಧಿಕಾರಿಯನ್ನು ಬೇಕಾದರೂ ಕರೆಸಿಕೊಂಡು ಮಾಹಿತಿ ಪಡೆಯಲಿ. ಆದರೆ ಸರಕಾರ ಬೀಳಿಸಿ ಬಾಂಬೆಗೆ ಹೋಗಿದ್ದೇ ಈ ಸಿ.ಡಿ. (ಜಾರಕಿಹೊಳಿ ಸಿ.ಡಿ.) ಆಗಲು ಕಾರಣ ಎಂದರು ಅವರು.
ಮಸ್ಕಿ ಅಭಿವೃದ್ಧಿ ಮಾಡಲು ಬಿಜೆಪಿಗೆ ಅಧಿಕಾರ ಕೊಡಿ ಎಂದು ಕೇಳಿರುವ ವಿಚಾರವಾಗಿ ಮಾತನಾಡಿದ ಅವರು, ಈಗಾಗಲೇ ಅಧಿಕಾರಕ್ಕೆ ಬಂದು ಎರಡು ವರ್ಷ ಆಗಿದೆ. ಇವರೇ ತಾನೆ ಎರಡು ವರ್ಷದಿಂದ ಅಧಿಕಾರ ನಡೆಸುತ್ತಿರುವುದು. ನಾನು ಅಧಿಕಾರದಲ್ಲಿದ್ದಾಗ 500 ಕೋಟಿ ರೂ.ಗೂ ಹೆಚ್ಚಿನ ಅನುದಾನ ನೀಡಿದ್ದೆ. ಎರಡು ವರ್ಷದಲ್ಲಿ ಕೆಲಸ ಮಾಡಿಸಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು.
ಮಸ್ಕಿ ಬಿಜೆಪಿ ಅಭ್ಯರ್ಥಿ ಅಧಿಕಾರ ತ್ಯಾಗ ವಿಚಾರದ ಬಗ್ಗೆ ಮಾತನಾಡಿದ ಎಚ್‌ಡಿಕೆ, “ಜನಕ್ಕೆ ಅವರು ತ್ಯಾಗ ಮಾಡಿಲ್ಲ. ಬಿಜೆಪಿ ಅಧಿಕಾರಕ್ಕೆ ಬರಲು ತ್ಯಾಗ ಮಾಡಿದ್ದಾರೆ” ಎಂದರು.