- ರೈತರಿಗೆ ಆಗುತ್ತಿರುವ ವಂಚನೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಸುಪ್ರೀಂ ಕೋರ್ಟ್‌ನ ವಿಶ್ರಾಂತ ನ್ಯಾಯಮೂರ್ತಿಗಳಾದ ಜಸ್ಟೀಸ್ ವಿ.ಗೋಪಾಲಗೌಡರು, ಕೃಷಿ ಕಾಯ್ದೆಗಳ ಜಾರಿ ವಿಷಯದಲ್ಲಿ ಕೇಂದ್ರ ಸರಕಾರ ಮಾಡಿದ ತಪ್ಪನ್ನು ಬೊಟ್ಟು ಮಾಡಿ ತೋರಿಸಿದ್ದಾರೆ.
- M Krishnappa Chikkaballapur
ಚಿಕ್ಕಬಳ್ಳಾಪುರ: ಸಂಸತ್ತಿನಲ್ಲಿ, ವಿಧಾನಮಂಡಲದಲ್ಲಿ, ಸ್ಥಳೀಯ ಸಂಸ್ಥೆಗಳಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸದೇ ಅರ್ಥವಿಲ್ಲದ ಚರ್ಚೆಗಳಿಂದ ಸಮಯ ಪೋಲು ಮಾಡುತ್ತಿರುವ ಜನಪ್ರತಿನಿಧಿಗಳಿಗೆ ಪಾಠ ಕಲಿಸಿ ಅವರನ್ನು ಒದ್ದೋಡಿಸುವ ದಿನಗಳು ದೂರವಿಲ್ಲ ಎಂದು ಸುಪ್ರೀಂ ಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ವಿ.ಗೋಪಾಲಗೌಡರು ಎಚ್ಚರಿಕೆ ನೀಡಿದರು.
ವಿಶ್ವ ಜಲ ದಿನಾಚರಣೆ ನಿಮಿತ್ತ ಚಿಕ್ಕಬಳ್ಳಾಪುರದಲ್ಲಿ ಖ್ಯಾತ ನೀರಾವರಿ ತಜ್ಞ ಡಾ.ಜಿ.ಎಸ್.ಪರಮಶಿವಯ್ಯ ಅವರ ಸ್ಮರಣಾರ್ಥ ಶಾಶ್ವತ ನೀರಾವರಿ ಸಮಿತಿ ವತಿಯಿಂದ ಸ್ಥಾಪನೆ ಮಾಡಲಾಗಿರುವ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರದ ಲೋಕಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಮ್ಮ ಭಾಷಣದಲ್ಲಿ ಅನೇಕ ಅಂಶಗಳನ್ನು ಪ್ರಸ್ತಾಪ ಮಾಡಿದ ನ್ಯಾಯಮೂರ್ತಿಗಳು; ಮುಖ್ಯವಾಗಿ ರೈತನಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಎಲ್ಲ ಸಿಡಿದೇಳಬೇಕು ಎಂದು ಕರೆ ನೀಡಿದರು.
ನ್ಯಾಯಾಂಗ ಸೇವೆಯಿಂದ ನಾನು ನಿವೃತ್ತನಾಗಿ ನಾಲ್ಕೂವರೆ ವರ್ಷಗಳಷ್ಟೇ ಆಗಿವೆ. ಆದರೆ ಹೋರಾಟಗಳಿಂದ ನಿವೃತ್ತನಾಗಿಲ್ಲ. ರೈತರ ಹೋರಾಟಕ್ಕೆ ನಾನೂ ಜತೆಯಾಗುತ್ತೇನೆ. ನಿಮ್ಮ ಬೆಂಬಲಕ್ಕೆ ನಾನಿದ್ದೇನೆ ಎಂದರು ಅವರು.
ಮುಂದುವರಿದು ಅವರು ಹೇಳಿದ ಮಾತುಗಳು ಹೀಗಿವೆ;
- ರಾಜಕೀಯ ನಾಯಕರು ಜನರಿಗೆ ಸಾಮಾಜಿಕ ನ್ಯಾಯ ಒದಗಿಸಬೇಕು. ಮಹಿಳೆಯರು, ಕೃಷಿಕರಿಗೆ, ಕಾರ್ಮಿಕರು, ಬಡಜನರಿಗೆ ನ್ಯಾಯ ಸಿಗುತ್ತಿಲ್ಲ. ಅನ್ನದಾತರಿಗೆ ಅನ್ಯಾಯವಾಗುತ್ತಿದೆ ಎಂದಾದರೆ ನಮಗೆ ಈ ಸಂಸತ್ತು ಏಕೆ ಬೇಕು? ಈ ವಿಧಾನಮಂಡಲ ಏಕೆ ಬೇಕು?
- ಸಂವಿಧಾನದ 14ನೇ ಪರಿಚ್ಛೇಧದ ಪ್ರಕಾರ ಎಲ್ಲಡೆ ಎಲ್ಲರಿಗೂ ಸಮಾನತೆ ಇರಬೇಕು ಹಾಗೂ ಸಮಾನ ಅವಕಾಶಗಳು ಸಿಗಬೇಕು. ಆದರೆ ಸಮಾನತೆ ಎಲ್ಲಿ ಸಿಗುತ್ತಿದೆ? ಕೃಷಿ ಕಾರ್ಮಿಕನಿಗೂ ರೈತನಿಗೆ ಸಮಾನತೆ ಸಿಕ್ಕಿಲ್ಲ. ಅಡುಗೆ ಮನೆಯಲ್ಲಿ ಜೀವನ ಸವೆಸುವ ಮಹಿಳೆಯರಿಗೆ ಸಮಾನತೆ ಇದೆಯೇ? ನಾವು ಮಹಿಳೆಯರನ್ನು ಲಕ್ಷ್ಮೀ. ಸರಸ್ವತಿ, ಪಾರ್ವತಿ ಎಂದು ನೋಡುತ್ತೇವೆ, ಗೌರವಿಸುತ್ತೇವೆ. ಆದರೆ ಸಂಸತ್ತಿನಲ್ಲಿ ವಿಧಾನಮಂಡಲದಲ್ಲಿ ಶೇ.50ರಷ್ಟು ಪ್ರಾತಿನಿಧ್ಯ ಸಿಕ್ಕಿಲ್ಲ ಏಕೆ? ನ್ಯಾಯಾಂಗ ವ್ಯವಸ್ಥೆಯಲ್ಲೀ ಶೇ.50ರಷ್ಟು ಅವಕಾಶ ಇಲ್ಲ, ಯಾಕೆ? ಇದಕ್ಕೆ ಹೊಣೆಗಾರರು ಯಾರು? ಪ್ರಜಾಪ್ರಭುತ್ವ ಎಂದು ಹೇಳಿಕೊಂಡು ಪಾಳೆಯಗಾರಿಕೆ ಮನಃಸ್ಥಿತಿಯ ಆಡಳಿತಗಾರರ ಕೈಗೆ ಸಿಕ್ಕಿ ನಾವು ನಲುಗುತ್ತಿದ್ದೇವೆ.
- ರೈತ ಬೆಳೆಯುವ ಬೆಳೆಗೆ ಸೂಕ್ತ ಬೆಲೆ ಸಿಗುತ್ತಿಲ್ಲ.4,500 ರೂ. ಕೊಟ್ಟು ಒಂದು ಮೂಟೆ ಭಿತ್ತನೆ ಆಲೂಗಟ್ಟೆ ತಂದು ಹಾಕಿದರೆ, ರೈತ ಬೆಳೆದ ಒಂದು ಮೂಟೆ ಆಲೂಗಡ್ಡೆಗೆ ಸಿಗುತ್ತಿರುವ ಬೆಲೆ 550 ರೂ. ಮಾತ್ರ! 20 ಲಕ್ಷ ರೂ. ಖರ್ಚು ಮಾಡಿದರೆ ಕೊನೆಪಕ್ಷ 10 ಲಕ್ಷವೂ ವಾಪಸ್ ಬರುವುದಿಲ್ಲ. ಇನ್ನು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಬರೀ ದಲ್ಲಾಳಿಗಳೇ ತುಂಬಿಹೋಗಿದ್ದಾರೆ. ಅಲ್ಲಿ ನರಹತ್ಯೆ ನಡೆಯುತ್ತಿದೆ. ರೈತರ ಶವಗಳ ಮೇಲೆ ದಲ್ಲಾಳಿಗಳು ಕೋಟ್ಯಧಿಪತಿಗಳಾಗುತ್ತಿದ್ದಾರೆ.
- 2010ರಲ್ಲಿ ಎಂ.ಎಸ್.ಸ್ವಾಮಿನಾಥನ್ ಸಮಿತಿ ವರದಿಯಂತೆ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಲು ಕಾಯ್ದೆ ಜಾರಿ ಮಾಡದ ಕೇಂದ್ರ ಸರಕಾರ, ರೈತರನ್ನು ಇನ್ನೂ ಗುಲಾಮರನ್ನಾಗಿ ಮಾಡಲು ಮೂರು ಕೃಷಿ ಕಾಯ್ದೆಗಳನ್ನು ಜಾರಿಗೆ ತಂದಿದೆ. ಆಗ ಕಾಂಗ್ರೆಸ್ ಸರಕಾರವೇ ಇತ್ತು. ಡಾ.ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದರು. ಯುಪಿಎ ಸರಕಾರ ಸ್ವಾಮಿನಾಥನ್ ಸಮಿತಿ ವರದಿಯನ್ನು ಒಪ್ಪಲಿಲ್ಲ ಏಕೆ? ಈಗಿನ ಸರಕಾರವು ರೈತರ ಬಗ್ಗೆ ಯಾವ ನೀತಿ ಅನುಸರಿಸುತ್ತಿದೆ ಎಂದು ಎಲ್ಲರೂ ಬಲ್ಲರು. ರೈತರಿಗಾಗಿ ಕನಿಷ್ಠ ಬೆಂಬಲ ಬೆಲೆ ನೀಡದ ಸರಕಾರಗಳು, ಸಾವಿರಾರು ಕೋಟಿ ರೂ. ಸಾಲ ಮಾಡಿ ದೇಶಬಿಟ್ಟು ಓಡಿಹೋಗುವ ಉದ್ಯಮಿಗಳಿಗೆ ಒತ್ತಾಸೆ ಕೊಟ್ಟು ಸಾಲ ಕೊಡಿಸುತ್ತವೆ. ಅದೇ ರೈತ ತೆಗೆದುಕೊಂಡಿರುವ ನಾಲ್ಕೈದು ಲಕ್ಷ ಸಾಲವನ್ನು ಕಟ್ಟುವುದು ತಡವಾದರೆ ಅವನ ಮನೆ, ಆಸ್ತಿ ಹರಾಜಿಗಿಡುತ್ತಿವೆ ಬ್ಯಾಂಕ್‌ಗಳು. ಆದರೆ, ಉದ್ಯಮಿಗಳು ಸಾವಿರಾರು ಕೋಟಿ ರೂ.ಸಾಲ ಮಾಡಿ ರಾತ್ರೋರಾತ್ರಿ ದೇಶ ಬಿಟ್ಟು ಓಡಿಹೋಗಿದ್ದಾರೆ. ಇದ್ಯಾವ ಸಾಮಾಜಿಕ ನ್ಯಾಯ?
ಬೆಳೆ ಸಾಲ ತೆಗೆದುಕೊಂಡ ರೈತರಿಗೆ ಬ್ಯಾಂಕುಗಳು ಸಿಕ್ಕಾಪಟ್ಟೆ ಕಿರುಕುಳ ನೀಡುತ್ತಿವೆ. ಏಪ್ರಿಲ್ ಬಂದರೆ ರೈತರು ಓಡಿಹೋಗ್ತಾರೆ? ಇನ್ನು ಮುಂದೆ ಯಾರೂ ಹಾಗೆ ಓಡಿ ಹೋಗಬೇಡಿ. ಬ್ಯಾಂಕ್‌ನವರು ವಸೂಲಿಗೆ ಬಂದರೆ ಕಟ್ಟಿಹಾಕಿ. ನಾನು ಹೇಳ್ತಾ ಇದೀನಿ, ನಿವೃತ್ತ ನ್ಯಾಯಮೂರ್ತಿ. ಭಯಪಡಬೇಡಿ, ನಿಮ್ಮ ಜತೆ ನಾನಿದ್ದೀನಿ.
-ನ್ಯಾಯಮೂರ್ತಿ ವಿ.ಗೋಪಾಲಗೌಡರು
- ಈ ದೇಶದಲ್ಲಿ ಆಡಳಿತಶಾಹಿ ಮತ್ತು ಅಧಿಕಾರಶಾಹಿ ದುರಾಡಳಿತ ನಡೆಯುತ್ತಿದೆ. ರೈತರ ಸಮಸ್ಯೆಗಳಿಗೆ ಸ್ಪಂದಿಸದ ಈ ಐಎಎಸ್ ಏತಕ್ಕೆ ಬೇಕು? ಹಕ್ಕುಗಳಿಗಾಗಿ ಹೋರಾಟ ಮಾಡುವ ಹೋರಾಟಗಾರರ ಮೇಲೆ ಸುಳ್ಳು ಮೊಕದ್ದಮೆಗಳನ್ನು ದಾಖಲು ಮಾಡುವ ಐಪಿಎಸ್‌ಗಳಿಗೆ ಯಾರೂ ಹೆದರಬೇಕಿಲ್ಲ. ಯಾವ ರೀತಿಯ ಕಾನೂನು ನೆರವನ್ನೂ ನಾವು ಒದಗಿಸುತ್ತೇವೆ. ಹೋರಾಟಗಾರರು ಯಾವ ಕಾರಣಕ್ಕೂ ಅಧೀರರಾಗಬಾರದು. ಎಪ್ಪತ್ತಮೂರು ವರ್ಷವಾದರೂ ಈ ದೇಶದಲ್ಲಿ ರೈತನ ಕಷ್ಟಕಾರ್ಪಣ್ಯಗಳು ನೀಗಿಲ್ಲ. ಆಡಳಿತ ನಡೆಸುವವವರಿಗೆ ನಾಚಿಕೆಯಾಗಬೇಕು.
- ಏನಾಗಿದೆ ಈ ಜಿಲ್ಲೆಗಳಲ್ಲಿ ಈಗ? ನದಿಗಳು ಬತ್ತಿವೆ, ಬಾವಿಗಳು ಬತ್ತಿವೆ, ಕೆರೆಕಟ್ಟೆಗಳು ಬತ್ತಿವೆ, ಅಂತರ್ಜಲ ಪಾತಾಳಕ್ಕೆ ಸೇರಿದೆ. ಸುರಿಯುವ ಮಳೆಯನ್ನು ಸಂಗ್ರಹ ಮಾಡಿಟ್ಟುಕೊಳ್ಳಲು ಸರಕಾರಗಳು ಏನೂ ಮಾಡಿಲ್ಲ.
- ನೀರು ನಮ್ಮ ಹಕ್ಕು. ಅಷ್ಟೇ ಅಲ್ಲ, ಅದೊಂದು ಮಾನವೀಯ ಹಕ್ಕು. ಎಲ್ಲಿದೆ ಮಾನವ ಹಕ್ಕುಗಳು? ಮಾರ್ಚ್ ಬಂದ ಕೂಡಲೇ ಸುಡುವ ಕೂಪದಲ್ಲಿ ಜನರು ನೀರಿಲ್ಲದೆ ನರಳುವಂತಾಗಿದೆ. ಬೋರ್‌ವೆಲ್‌ಗಳು ಬತ್ತಿ ಹೋಗುತ್ತವೆ. ಎಲ್ಲಿದ್ದೀಯಪ್ಪ ನೀರಾವರಿ ಮಂತ್ರಿ? ನಿಮಗೆ ಈ ದೃಶ್ಯಗಳು ಕಾಣುವುದಿಲ್ಲವೆ? ಕೃಷಿ ಮಂತ್ರಿಯೇ ಎಲ್ಲಿದ್ದೀರಿ? ಎಲ್ಲಿದ್ದೀರಿ ಮುಖ್ಯಮಂತ್ರಿಗಳೇ? ಚುನಾವಣೆಗಳನ್ನು ಗೆಲ್ಲುವುದರಲ್ಲಿ, ಉಪ ಚುನಾವಣೆಗಳನ್ನು ನಡೆಸುವುದರಲ್ಲಿ ಇರುವ ಆಸಕ್ತಿ ಜನರ ಉದ್ಧಾರ ಮತ್ತು ನೀರು ಕೊಡುವ ಕಡೆ ಏಕಿಲ್ಲ?
- 2020 ಸೆಪ್ಟೆಂಬರ್‌ನಲ್ಲಿ ಕೃಷಿ ಕಾಯ್ದೆಗಳನ್ನು ರೂಪಿಸಿ ಸಂಸತ್ತಿನಲ್ಲಿ ಪಾಸ್ ಮಾಡಿಕೊಂಡ ಕೇಂದ್ರ ಸರಕಾರ ತನ್ನ ವ್ಯಾಪ್ತಿ ಮರೆತಿದೆ. ಇಂಥ ಕಾಯ್ದೆಗಳನ್ನು ರೂಪಿಸುವ ಅಧಿಕಾರ ಇರುವುದು ಸಂವಿಧಾನಾತ್ಮಕವಾಗಿ ಆಯಾ ರಾಜ್ಯಗಳ ವಿಧಾನ ಮಂಡಲಗಳಿಗೆ ಮಾತ್ರ. ಆದರೆ, ಯಾರ ರಕ್ಷಣೆಗೆ ಈ ಕಾಯ್ದೆಗಳನ್ನು ರೂಪಿಸಲಾಯಿತು?
- ಈ ದೇಶದಲ್ಲಿ ತಾರತಮ್ಮ ತಾಂಡವವಾಡುತ್ತಿದೆ. ಶೇ.೬೮ರಷ್ಟಿರುವ ರೈತರಿಗೆ ಭದ್ರತೆ ಇಲ್ಲ. ಆದರೆ, ಶೇ.10ರಷ್ಟಿರುವ ಉದ್ಯಮಿಗಳಿಗೆ ಎಲ್ಲ ರಕ್ಷಣೆಯೂ ಇದೆ. ಬೆಲೆ ನಿಗದಿಪಡಿಸುವ ಅಧಿಕಾರವನ್ನು ರೈತರಿಗೆ ನೀಡುತ್ತಿಲ್ಲ, ಯಾಕೆ? ಉದ್ಯಮಿಗಳ ಮೇಲೆ ಅಷ್ಟೆಲ್ಲ ಮೋಹ ಯಾಕೆ? ಒಂದು ಕಣ್ಣಿಗೆ ಸುಣ್ಣ, ಇನ್ನೊಂದು ಕಣ್ಣಿಗೆ ಬೆಣ್ಣೆ ಇಡುವ ಕೆಲಸ ಆಗುತ್ತಿದೆ.
- ನಮ್ಮಲ್ಲಿ ಬದಲಾವಣೆಗಳು ಆಗಬೇಕು. ಕೃಷಿ ಕಾರ್ಮಿಕರ ಮಕ್ಕಳು ನ್ಯಾಯಮೂರ್ತಿಗಳಾಗಬೇಕು. ಕೃಷಿ ಕಾರ್ಮಿಕರ ಮಕ್ಕಳು ವಿಜ್ಞಾನಿಗಳು ಆಗಬೇಕು. ಆಗ ಮಾತ್ರ ಬದಲಾವಣೆ ಬರುತ್ತದೆ. ನಾನು ನ್ಯಾಯಮೂರ್ತಿ ಆಗಿದ್ದಾಗ ಬೆಳೆ ನಷ್ಟವಾಗಿದ್ದ ರೈತರ ವಿರುದ್ಧವಾಗಿ ಒಂದು ರಾಜ್ಯ ಸರಕಾರ ಸುಪ್ರೀಂ ಕೋರ್ಟಿಗೆ ಮನವಿ ಸಲ್ಲಿಸಿತು. ಆದರೆ, ವಿಮಾ ಸಂಸ್ಥೆ ಆಯಾ ರೈತರಿಗೆ ವಿಮಾ ಪರಿಹಾರವನ್ನು ಪಾವತಿ ಮಾಡಬೇಕಾಗಿತ್ತು. ಸರಕಾರ ವಿಮಾ ಕಂತನ್ನು ಪಾವತಿ ಮಾಡಿತ್ತು. ಆದರೆ, ನಷ್ಟವಾಗುತ್ತದೆ ಎಂದು ಸರಕಾರವೇ ನ್ಯಾಯಾಲಯಕ್ಕೆ ಬಂದಿತ್ತು. ನಾನು ಆ ಸರಕಾರ ಮನವಿಯನ್ನು ತಿರಸ್ಕರಿಸಿ ರೈತರಿಗೆ ಪರಿಹಾರ ನೀಡುವಂತೆ ಆದೇಶ ಕೊಟ್ಟೆ. ಒಬ್ಬ ರೈತನ ಮಗ ನ್ಯಾಯಮೂರ್ತಿ ಆದರೆ ಹೀಗೆ ಮಾಡಬಹುದು.