ಬಾಗೇಪಲ್ಲಿಯಲ್ಲಿ ವಿಶ್ವ ಜಲದಿನ ಕಾರ್ಯಕ್ರಮ
ಬಾಗೇಪಲ್ಲಿ: ನೀರು ಸಕಲ ಜೀವರಾಶಿಗಳಿಗೂ ಜೀವಜಲ ಹಾಗೂ ಅಮೃತ. ಇದು ಮುಗಿದು ಹೋಗುವ ಸಂಪನ್ಮೂಲವಾದ ನೀರನ್ನು ಮಿತವಾಗಿ ಬಳಸದಿದ್ದರೆ ಮುಂದೆ ಕಷ್ಟದ ದಿನಗಳನ್ನು ಎದುರಿಸಬೇಕಾಗುತ್ತದೆ ಎಂದು ನ್ಯಾಯಾಧೀಶರಾದ ಎಸ್.ಎಂ.ಅರುಟಗಿ ಆತಂಕ ವ್ಯಕ್ತಪಡಿಸಿದರು.
ಬಾಗೇಪಲ್ಲಿ ಕಾನೂನು ಸೇವಾ ಸಮಿತಿ, ತಾಲ್ಲೂಕು ವಕೀಲರ ಸಂಘ, ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ವತಿಯಿಂದ ಸೋಮವಾರ ನ್ಯಾಯಾಲಯದ ಆವರಣದಲ್ಲಿ ಏರ್ಪಡಿಸಿದ್ದ ವಿಶ್ವ ಜಲ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನೀರಿದ್ದರೆ ಮಾತ್ರವೇ ನಮ್ಮೆಲ್ಲರ ಉಳಿವು. ನೀರಿಲ್ಲವಾದರೆ ನಮ್ಮೆಲ್ಲರ ಶಾಶ್ವತ ಅಳಿವು ಶತಸಿದ್ಧ ಎಂಬುದನ್ನು ಎಲ್ಲರೂ ನೆನಪಿಡಿ. ಅಮೃತ ಸಮಾನವಾದ ನೀರನ್ನು ನಾವು ಮಾತ್ರವಲ್ಲದೆ, ನಮ್ಮ ಮುಂದಿನ ಜನಾಂಗಕ್ಕೂ ಕೂಡ ಉಳಿಸೋಣ ಎಂದು ನ್ಯಾಯಾಧೀಶರು ಹೇಳಿದರು.
ನೀರಿನ ಸದ್ಬಳಕೆ ಆಗಲಿ
ವಕೀಲ ಚಾಂದ್ ಭಾಷಾ ಅವರು ಮಾತನಾಡಿ; ಮನುಷ್ಯನ ದೇಹ ಪಂಚಭೂತಗಳಿಂದ ಸೃಷ್ಟಿಯಾಗಿದೆ. ನಮ್ಮ ಸುತ್ತಲೂ ಸಾಕಷ್ಟು ನೀರಿದೆ. ಆದರೆ, ಅದು ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಮನುಷ್ಯ ಮನಬಂದಂತೆ ಅವೈಜ್ಞಾನಿಕವಾಗಿ ನೀರು ಬಳಕೆ ಮಾಡುತ್ತಿದ್ದಾನೆ. ನೀರನ್ನು ಸಂರಕ್ಷಿಸದಿದ್ದರೆ ಮನುಕುಲದ ಭವಿಷ್ಯ ಕರಾಳವಾಗುತ್ತದೆ ಎಂದರು.
ತಾಲ್ಲೂಕಿನಲ್ಲಿ ನೀರಿನ ಸಮಸ್ಯೆ ಗಂಭೀರವಾಗಿದೆ. ಮಳೆ ಕೊರತೆಯಿಂದ ಪ್ರತಿ ವರ್ಷ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಜಿಲ್ಲೆಯ ಜನರಲ್ಲಿ ಮಳೆ ನೀರಿನ ಬಳಕೆ ಬಗ್ಗೆ ಅರಿವು ಮೂಡಿಸಬೇಕು. ಚಿಕ್ಕಬಳ್ಳಾಪುರ ಮತ್ತು ಕೋಲಾರ ಅವಳಿ ಜಿಲ್ಲೆಗಳಳಾದ ಬಯಲುಸೀಮೆ ಪ್ರದೇಶದಲ್ಲಿ ಮಳೆ ನೀರಿನ ಸದ್ಬಳಕೆ ಅತ್ಯವಶ್ಯಕ ಎಂದು ಅವರು ಕಿವಿಮಾತು ಹೇಳಿದರು.
ವಕೀಲ ಎ.ಮಂಜುನಾಥ ಅವರು ಮಾತನಾಡಿ; ಜಾಗತಿಕ ತಾಪಮಾನ, ಪರಿಸರ ಮಾಲಿನ್ಯ, ಕೈಗಾರಿಕರಣ, ಅರಣ್ಯನಾಶ ಇನ್ನಿತರೆ ಕಾರಣಗಳಿಂದ ಅಂತರ್ಜಲ ಮಟ್ಟ ದಿನೆದಿನೇ ಕುಸಿಯುತ್ತಿದೆ. ಬೇಸಿಗೆ ಶುರುವಾಗುವ ಮುಂಚೆಯೇ ನೀರಿನ ಕೊರತೆ ಕಂಡುಬರುತ್ತಿದೆ. ನಮ್ಮ ಭಾರತದಲ್ಲಿ ಎಷ್ಟೋ ಗ್ರಾಮಗಳಲ್ಲಿ ಇಂದಿಗೂ ನೀರಿನ ಕೊರತೆಯ ತೀವ್ರ ಸಮಸ್ಯೆ ಇದೆ. ನೀರನ್ನು ಅನವಶ್ಯಕವಾಗಿ ಪೋಲು ಮಾಡದೆ ಹನಿ ಹನಿ ನೀರನ್ನು ಸಂರಕ್ಷಿಸುವುದು, ಮುಂದಿನ ಪೀಳಿಗೆಗೆ ಉಳಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ಸಿ.ಎನ್.ಚಿನ್ನಸ್ವಾಮಿ, ಪಿ.ವಿ.ಅಪ್ಪಾಸ್ವಾಮಿ ಹಾಗೂ ನಾಗಭೂಷಣ. ಎನ್. ಮುಂತಾದವರು ಪ್ರಮುಖರು ಪಾಲ್ಗೊಂಡಿದ್ದರು