ಬಾಗೇಪಲ್ಲಿ: ಭಗತ್ ಸಿಂಗ್ ಕನಸು ಕೇವಲ ಸ್ವತಂತ್ರ ಭಾರತ ಮಾತ್ರವಲ್ಲ, ಸಮಾಜವಾದಿ ಭಾರತವನ್ನು ನಿರ್ಮಾಣ ಮಾಡಬೇಕೆಂದು ಅವರು ಹಂಬಲಿಸಿದ್ದರು. ಮಾರ್ಕ್ಸ್‌ವಾದದ ಬಗ್ಗೆ ಚಿಕ್ಕ ವಯಸ್ಸಿನಲ್ಲೇ ಓದಿ ತಿಳಿದುಕೊಂಡಿದ್ದ ಅವರು ಕೋಮುವಾದ ಮತ್ತು ಜಾತಿವಾದಗಳನ್ನು ಕಟುವಾಗಿ ವಿರೋಧಿಸುತ್ತಿದ್ದರು ಎಂದು ಬಾಗೇಪಲ್ಲಿ ತಾಲ್ಲೂಕು ಎಸ್ಎಫ್ಐ ತಾಲ್ಲೂಕು ಘಟಕ ಅಧ್ಯಕ್ಷ ವಿ.ಸತೀಶ್ ಹೇಳಿದರು.
ಕ್ರಾಂತಿಕಾರಿ ಭಗತ್ ಸಿಂಗ್ ಬಲಿದಾನದ ದಿನದ ಅಂಗವಾಗಿ ಪಟ್ಟಣದ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಭಗತ್ ಸಿಂಗ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, “ಅನೇಕರು ಹುಟ್ಟುತ್ತಾರೆ, ಸಾಯುತ್ತಾರೆ. ಇಂತಹವರಲ್ಲಿ ಕೆಲವರು ಮಾತ್ರ ಸಾವಿನ ನಂತರವೂ ಜೀವಂತವಾಗಿರುತ್ತಾರೆ. ಅಂಥ ವಿರಳಾತಿ ವಿರಳದ ಸಾಲಿನಲ್ಲಿ ಭಗತ್ ಸಿಂಗ್, ರಾಜಗುರು, ಸುಖದೇವ ಮೊದಲಿಗರಾಗಿ ನಿಲ್ಲುತ್ತಾರೆ” ಎಂದು ಹೇಳಿದರು.
ಎಸ್ಎಫ್ಐ ಜಿಲ್ಲಾಧ್ಯಕ್ಷ ಸೋಮಶೇಖರ್ ಮಾತನಾಡಿ; “ಇಂದಿನ ವಿದ್ಯಾರ್ಥಿ ಯುವಜನರಿಗೆ ಭಗತ್ ಸಿಂಗ್ ಅವರ ತತ್ತ್ವ ವಿಚಾರಗಳು ಅತ್ಯವಶ್ಯಕವಾಗಿವೆ. ಶೋಷಣೆ ಇಲ್ಲದ ಸಮಾಜ ಸ್ಥಾಪಿಸಬೇಕೆಂದು ಭಗತ್ ಸಿಂಗ್ ಕನಸು ಕಂಡಿದ್ದರು” ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಗಾಯದ ಮೇಲೆ ಬರೆ ಎಳೆಯುತ್ತಿವೆ. ಧೀರ ಕ್ರಾಂತಿಕಾರರಂತೆ ಎಲ್ಲರೂ ಇಂತಹ ಸಮಸ್ಯೆ ವಿರುದ್ಧ ಹೋರಾಡುವ ಅಗತ್ಯವಿದೆ ಎಂದು ಸೋಮಶೇಖರ್ ಹೇಳಿದರು.
ಸಹ ಸಂಚಾಲಕಿಯರಾದ ತ್ರಿವೇಣಿ ಸೇನ್, ಸದಸ್ಯರಾದ ಸರಸ್ವತಿ ಇದ್ದರು. ಜತೆಗೆ; ಪವನ್.ಜಿ ಗಣೇಶ. ಎನ್.ಚಂದ್ರಶೇಖರ, ಮುರಳಿ, ರೆಡ್ಡಿ ಇನ್ನೂ ಮುಂತಾದವರು ಪಾಲ್ಗೊಂಡಿದ್ದರು.
Lead photo: Wikipedia