- ಡಾ.ಕೆ.ಸುಧಾಕರ್ ಹೇಳಿಕೆಯ ಬಗ್ಗೆ ಕೆಂಡಾಮಂಡಲಗೊಂಡಿರುವ ಕಾಂಗ್ರೆಸ್ ಶಾಸಕಿಯರು, ಸಚಿವರ ವಿರುದ್ಧ ಹೋರಾಟವನ್ನು ತೀವ್ರಗೊಳಿಸಲು ಮುಂದಾಗಿದ್ದಾರೆ. ಕಾನೂನು ಹೋರಾಟ ನಡೆಸುವ ನಿರ್ಧಾರವನ್ನೂ ಮಹಿಳಾ ಕಾಂಗ್ರೆಸ್ ಕೈಗೊಂಡಿದೆ.
ಬೆಂಗಳೂರು: ಸೀಡಿ ಪ್ರಕರಣದಲ್ಲಿ ನ್ಯಾಯಾಲಯದಿಂದ ತಡೆಯಾಜ್ಞೆ ತರುವ ಮೂಲಕ ತಮ್ಮ ಹೆಗಲು ತಾವೇ ಮುಟ್ಟುಕೊಂಡಿರುವ ಹಾಗೂ ಮಹಿಳೆಯರ ಗೌರವಕ್ಕೆ ಧಕ್ಕೆ ತರುತ್ತಿರುವ 6 ಸಚಿವರು ತಮ್ಮ ಸ್ಥಾನದ ಜತೆಗೆ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಬೇಕು ಎಂದು ಮಹಿಳಾ ಕಾಂಗ್ರೆಸ್ ಘಟಕ ಹಾಗೂ ಶಾಸಕಿಯರು ಒತ್ತಾಯ ಮಾಡಿದ್ದಾರೆ.
ಸಚಿವ ಡಾ.ಕೆ.ಸುಧಾಕರ್ ಅವರ ಹೇಳಿಕೆ ವಿಚಾರವಾಗಿ ಗುರುವಾರ ರೇಸ್ʼಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್ ಹಾಗೂ ಶಾಸಕಿಯರಾದ ಲಕ್ಷ್ಮಿ ಹೆಬ್ಬಾಳ್ಕರ್, ಸೌಮ್ಯಾ ರೆಡ್ಡಿ, ಕುಸುಮಾ ಶಿವಳ್ಳಿ ಹಾಗೂ ರೂಪಾ ಶಶಿಧರ್ ಅವರು ಜಂಟಿ ಪತ್ರಿಕಾಗೋಷ್ಠಿಗೋಷ್ಠಿ ನಡೆಸಿದರು.
ಈ ವೇಳೆ ಮಾತನಾಡಿದ ಪುಷ್ಪಾ ಅಮರನಾಥ್; “ಸಿಡಿ ಪ್ರಕರಣದಲ್ಲಿ 6 ಸಚಿವರು ತಡೆಯಾಜ್ಞೆ ತರುವ ಮೂಲಕ ತಾವು ತಪ್ಪು ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಈ ವಿಚಾರವಾಗಿ ನಮ್ಮ ಪಕ್ಷದ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸೇರಿದಂತೆ ನಮ್ಮ ಪಕ್ಷದ ಶಾಸಕರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದಾರೆ” ಎಂದರು.
ಇವರು ನೈತಿಕತೆ, ಯೋಗ್ಯತೆ ಕಳೆದುಕೊಂಡಿದ್ದು, ಕೇವಲ ಸಚಿವ ಸ್ಥಾನಕ್ಕೆ ಮಾತ್ರವಲ್ಲ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಬೇಕು. ಇವರಿಗೆ ಮತ್ತೆ ಅವಕಾಶವೇ ನೀಡಬಾರದು. ಇವರು ಇಡೀ ಮಹಿಳಾ ಕುಲಕ್ಕೆ ಅಪಮಾನ ಮಾಡಿದ್ದಾರೆ. ಲಂಚಕ್ಕೆ ಮಂಚಕ್ಕೆ ಹೆಸರಾಗಿರುವ ಸರಕಾರದ ನಾಲಾಯಕ್ ಸಚಿವರು ಈ ರೀತಿ ಹೇಳಿಕೆ ನೀಡಿದ್ದಾರೆ ಎಂದು ಟೀಕಿಸಿದರು ಪುಷ್ಪಾ ಅಮರನಾಥ್.
ಸಚಿವ ಸುಧಾಕರ್ ಅವರಿಗೆ ತಮ್ಮ ಹೆತ್ತ ತಾಯಿ ಬಗ್ಗೆ ಕಿಂಚಿತ್ತಾದರೂ ಗೌರವ ಇದ್ದರೆ, ಶಾಸಕ ಸ್ಥಾನಕ್ಕೂ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು. ಇವರು ರಾಜೀನಾಮೆ ನೀಡದಿದ್ದರೆ, ಮುಖ್ಯಮಂತ್ರಿ ಯಡಿಯೂರಪ್ಪನವರು ಅವರನ್ನು ವಜಾ ಮಾಡಿ ಮನೆಗೆ ಕಳುಹಿಸಬೇಕು. ಇಂತಹ ಸಚಿವರನ್ನು ಸಂಪುಟದಲ್ಲಿಟ್ಟುಕೊಂಡು ಹೇಗೆ ಕೆಲಸ ಮಾಡುತ್ತಾರೆ? 225 ಶಾಸಕರ ಬಗ್ಗೆ ಪ್ರಶ್ನೆ ಎತ್ತಿದಾಗ ಸ್ಪೀಕರ್ ಅವರೂ ಕೂಡ ಸೇರಿಕೊಳ್ಳುತ್ತಾರೆ. ಅವರ ಘನತೆ ಏನಾಗಬೇಕು? ಸ್ಪೀಕರ್ ಅವರು ಏನು ಮಾಡುತ್ತಿದ್ದಾರೆ? ಅವರಾದರೂ ಈ ಸಚಿವರನ್ನು ಶಾಸಕ ಸ್ಥಾನದಿಂದಲೇ ವಜಾ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಬಿಜೆಪಿ ಮಹಿಳಾ ನಾಯಕಿಯರು ದನಿ ಎತ್ತಲಿ: ಲಕ್ಷ್ಮಿ ಹೆಬ್ಬಾಳ್ಕರ್
ಡಾ.ಸುಧಾಕರ್ ಅವರ ಹೇಳಿಕೆ ಪಕ್ಷತೀತವಾಗಿ ಇಡೀ ರಾಜಕಾರಣ ಕುಟುಂಬಕ್ಕೆ ದೊಡ್ಡ ಅಪಮಾನ ಮಾಡಲಾಗಿದೆ. ಬಾಯಿಬಿಟ್ಟರೆ ರಾಮನ ಜಪ ಮಾಡುವ ಪಕ್ಷದಲ್ಲಿ ಈ ರೀತಿ ಮಾತನಾಡಲು ಅವರಿಗೆ ಅವಕಾಶ ಮಾಡಿಕೊಟ್ಟವರು ಯಾರು? ಬಿಜೆಪಿಯ ನಾಯಕಿಯರಾದ ಶೋಭಾ ಕರಂದ್ಲಾಜೆ ಅವರಾಗಲಿ, ಶಶಿಕಲಾ ಜೊಲ್ಲೆ, ಭಾರತಿ ಶೆಟ್ಟಿ, ತೇಜಸ್ವಿನಿ, ಪೂರ್ಣಿಮಾ ಅವರಾಗಲಿ ಈ ಮಾತನ್ನು ಒಪ್ಪಿಕೊಳ್ಳಲು ಆಗುವುದಿಲ್ಲ. ಅವರೆಲ್ಲರೂ ದನಿ ಎತ್ತಲಿ.
ಈ ಸಚಿವರರು ಪ್ರಮಾಣ ವಚನ ಸ್ವೀಕಾರ ಮಾಡಿದ ಸಂದರ್ಭದಲ್ಲಿ, ಯಾರ ಮೇಲೂ ದ್ವೇಷ, ಅಸೂಹೆಯಿಂದ ಕೆಲಸ ಮಾಡುವುದಿಲ್ಲ ಎಂದು ಸಂವಿಧಾನದ ಮೇಲೆ ಪ್ರಮಾಣ ಮಾಡಿರುತ್ತಾರೆ. ಸುಧಾಕರ್ ಅವರು ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ರಮೇಶ್ ಕುಮಾರ್ ಹಾಗೂ ಕುಮಾರಸ್ವಾಮಿ ಅವರ ಹೆಸರು ತೆಗೆದುಕೊಂಡು ಮಾತನಾಡಿದ್ದಾರೆ. ಸುಧಾಕರ್ ಅವರು ಈ ರೀತಿ ಆರೋಪ ಮಾಡುವ ಬದಲು, ಅವರ ಬಳಿ ಏನಾದರೂ ಸಾಕ್ಷಿ ಇದ್ದರೆ, ಅದನ್ನು ನ್ಯಾಯಾಲಯಕ್ಕೆ ನೀಡಲಿ.
ಯಡಿಯೂರಪ್ಪನವರಾಗಲಿ, ಪ್ರಧಾನಿಯಾಗಲಿ ಈ ಬಗ್ಗೆ ಗಮನಹರಿಸಬೇಕು. ಸಚಿವರು ಹಿಂದೂ ಸಂಸ್ಕೃತಿಯ ಬಗ್ಗೆ ಅಪಮಾನ ಮಾಡಿದ್ದಾರೆ. ಬಿಜೆಪಿಯವರದ್ದು ಹಿಂದೂ ರಾಷ್ಟ್ರದ ಪರಿಕಲ್ಪನೆ. ಇದೇನಾ ಇಂದೂ ಸಂಸ್ಕೃತಿ. ಮೊದಲೇ ರಾಜಕಾರಣದಲ್ಲಿ ಮಹಿಳೆಯರು ಬರುವುದು ವಿರಳ. ರಾಜಕಾರಣದಲ್ಲಿ ಶೇ.33ರಷ್ಟು ಹಾಗೂ ಶೇ.50ರಷ್ಟು ಮೀಸಲಾತಿ ಎಂದು ನಾವು ಎಷ್ಟೇ ಬಾಯಿ ಬಡಿದುಕೊಂಡರೂ ನಾವಿರೋದು ಇಷ್ಟೇ.
ರಾಜಕಾರಣದಲ್ಲಿ ಮೌಲ್ಯ ಇಟ್ಟುಕೊಂಡು, ಪ್ರಾಮಾಣಿಕವಾಗಿ ರಾಜಕಾರಣ ಮಾಡುತ್ತಿರುವವರೂ ಇದ್ದಾರೆ. ಅವರಿಗೆಲ್ಲಾ ನೋವಾಗಿದೆ. ನಮ್ಮ ಮಾತಿಂದ ನೋವಾಗಿದ್ದರೆ ಕ್ಷಮಿಸಿ ಎಂದಿದ್ದಾರೆ. ಸುಧಾಕರ್ ಅವರೇ ಊರು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದಂತಾಗಿದೆ ನಿಮ್ಮ ಮಾತು. ಇಡೀ ಮಹಿಳಾ ಕುಲಕ್ಕೆ ಮಾಡಿರುವ ಅಪಮಾನ ಇದು.
ಭದ್ರಾವತಿ ಶಾಸಕ ಸಂಗಮೇಶ್ ಸದನದಲ್ಲಿ ಅಂಗಿ ಬಿಚ್ಚಿದ ಕಾರಣಕ್ಕೆ ಒಂದು ವಾರ ಕಲಾಪದಿಂದ ಅವರನ್ನು ಅಮಾನತು ಮಾಡಲಾಗಿತ್ತು. ಆದರೆ, 225 ಶಾಸಕರ ಬಗ್ಗೆ ಹೊಲಸಾಗಿ ಮಾತನಾಡಿರುವ ಸಚಿವ ಸುಧಾಕರ್ ಬಗ್ಗೆ ಕ್ರಮ ಇಲ್ಲ ಏಕೆ? ಸಭಾಧ್ಯಕ್ಷರನ್ನು ಒಳಗೊಂಡು ಅವರು ಮಾತಮಾಡಿದ್ದಾರೆ.
-ಲಕ್ಷ್ಮೀ ಹೆಬ್ಬಾಳ್ಕರ್, ಶಾಸಕಿ
ಶಾಸನಸಭೆಗೆ ಮಾಡಿದ ಅಪಮಾನ: ರೂಪಾ ಶಶಿಧರ್
ಸಮಾಜಕ್ಕಾಗಿ ಶ್ರಮಿಸುವ ಸದನದ ಸದಸ್ಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಶಾಸನಸಭೆಗೆ ಮಾಡಿದ ಅಪಮಾನ. ಈ ವಿಚಾರದಲ್ಲಿ ಮಾತನಾಡಲು ಅವರಿಗೆ ಯಾವುದೇ ನೈತಿಕತೆ, ಹಕ್ಕಿಲ್ಲ. ಸದನ ಪವಿತ್ರ ಸ್ಥಾನ. ರಾಜ್ಯದ ಜನ ಪ್ರಜ್ಞಾವಂತಿಕೆಯಿಂದ ಜವಾಬ್ದಾರಿಯುತವಾಗಿ ನಡೆದುಕೊಳ್ಳಲಿ ಎಂದು ಜನಪ್ರತಿನಿಧಿಗಳನ್ನು ಆರಿಸಿ ಕಳುಹಿಸುತ್ತಾರೆ. ಸಭಾಧ್ಯಕ್ಷರು, ಮುಖ್ಯಮಂತ್ರಿಗಳನ್ನೂ ಬಿಡದೇ ಈ ಆರೋಪ ಮಾಡಿದ್ದಾರೆ. ಮಾಡಬಾರದ ಕೆಲಸ ಮಾಡಿದವರಿಗೆ ಸಚಿವ ಸ್ಥಾನ ನೀಡಿದ್ದು, ಗೌರವಾನ್ವಿತ ಹುದ್ದೆಯಲ್ಲಿರುವವರಿಗೂ ಅಪಮಾನ ಮಾಡಿದ್ದಾರೆ.
ಶಾಸನಸಭೆಗೆ ಬರುವ ಹೆಣ್ಣುಮಕ್ಕಳನ್ನು ನೀವು ಗೌರವಯುತವಾಗಿ ನೋಡಲಿಲ್ಲ ಎಂದರೆ, ನೀವು ಸಮಾಜಕ್ಕೆ ಯಾವ ಸಂದೇಶ ರವಾನಿಸುತ್ತೀರಿ. ಸಮಾಜಕ್ಕೆ ನಿಮ್ಮ ಕೊಡುಗೆ ಏನು? ಮುಂದೆ ಯಾರಾದರೂ ಹೆಣ್ಣುಮಗಳು ಅನ್ಯಾಯವಾಗಿದೆ ಎಂದು ನಿಮ್ಮ ಬಳಿ ಬರುವಂತಹ ವಾತಾವರಣ ನಿರ್ಮಾಣ ಮಾಡಿದ್ದೀರಾ? ನಿಮ್ಮನ್ನು ನಂಬಿ ಬರುವ ಅವಕಾಶ ಇದೆಯಾ? ಅವರಿಗೆ ನ್ಯಾಯ ಕೊಡಿಸಬೇಕಾದ ಸ್ಥಾನದಲ್ಲಿರುವ ನೀವು ಈ ರೀತಿ ನಡೆದುಕೊಳ್ಳುವುದು ಸರಿನಾ? ಇಡೀ ಚರಿತ್ರೆಯಲ್ಲಿ ಯಾರೂ ಈ ರೀತಿ ಅಪಮಾನ ಮಾಡಿರಲಿಲ್ಲ.
ನಿಮ್ಮ ಮೇಲಿನ ಆರೋಪವನ್ನು ನಿವಾರಿಸಿಕೊಳ್ಳಲು ಅದಕ್ಕೆ ಸಂಬಂಧಿಸಿದ ಸಾಕ್ಷಿ ಒದಗಿಸಿ, ಅದನ್ನು ಬಿಟ್ಟು ಎಲ್ಲರಿಗೂ ಅಪಮಾನ ಮಾಡುವುದು ಸರಿಯಲ್ಲ. ಸಚಿವರು ತಮ್ಮ ಜವಾಬ್ದಾರಿ ಅರಿಯದೇ ಈ ರೀತಿ ಮಾನಾಡಿರುವುದು ಸರಿಯಲ್ಲ. ಅವರು ಟ್ವಿಟರ್ ನಲ್ಲಾ ಕ್ಷಮೆ ಕೇಳಿರುವುದು? ನಮ್ಮ ಶಾಸಕರು ಸನದಲ್ಲಿ ಸಭ್ಯವಾಗಿ ನಡೆದುಕೊಳ್ಳಲಿಲ್ಲಾ ಎಂದು ಸ್ಪೀಕರ್ ಅವರು ಅವರನ್ನು ಸದನದಿಂದ ಬಹಿಷ್ಕರಿಸಿದರು. ಅದೇ ಅವರದೇ ಪಕ್ಷದ ಸಚಿವರು ಈ ರೀತಿ ಬೇಜವಾಬ್ದಾರಿಯುತವಾಗಿ ನಡೆದುಕೊಂಡರೆ ಅವರಿಗೆ ಯಾಕೆ ಶಿಕ್ಷೆ ನೀಡಿಲ್ಲ. ಅವರಿಗೊಂದು ನ್ಯಾಯ, ನಮಗೊಂದು ನ್ಯಾಯವಾ? ಸದನದ ಗಂಭೀರತೆ, ಗೌರವಕ್ಕೆ ಧಕ್ಕೆ ತಂದವರನ್ನು ಪ್ರಶ್ನಿಸಲಿಲ್ಲ ಯಾಕೆ?
ಮಹಿಳೆಯರಿಗೆ ಮಾಡಿದ ಅಪಮಾನ: ಸೌಮ್ಯಾ ರೆಡ್ಡಿ
ಈ ವಿಚಾರವಾಗಿ ನಾನು ವಿಧಾನಸೌಧಕ್ಕೆ ಹೋದಾಗ ಮಾಧ್ಯಮದವರು ಪ್ರಶ್ನೆ ಕೇಳಿದಾಗ ನನಗೆ ನಗಬೇಕೋ ಅಳಬೇಕೋ ತೋಚಲಿಲ್ಲ. ನಿಜವಾಗಿಯೂ ಇಂತಹ ಹೇಳಿಕೆ ನೀಡಲು ಸಾಧ್ಯವಾ? ನಾವು ಚಿಕ್ಕವಯಸ್ಸಿನಿಂದ ಜನರ ಸೇವೆ ಮಾಡುವ ಹಠ ಛಲ ಬಂದಿತ್ತು.
ಶಾಲೆಗಳಿಗೆ ಹೋದಾಗ ನಾನು ಮಕ್ಕಳನ್ನು ಏನಾಗುತ್ತೀರಾ ಎಂದು ಕೇಳಿದರೆ ಪೋಲೀಸ್, ಡಾಕ್ಟರ್ ಅಂತಾರೆ ರಾಜಕಾರಣಿ ಅಂತಾ ಯಾರೂ ಹೇಳುವುದಿಲ್ಲ. ಎರಡು ವರ್ಷಗಳ ಹಿಂದೆ ನಮ್ಮ ಪಕ್ಷದಲ್ಲಿದ್ದವರೇ ತಾಯಿ ಪಕ್ಷಕ್ಕೆ ದ್ರೋಹ ಬಗೆದು ಹೋಗಿದ್ದರು. ಇದನ್ನೆಲ್ಲಾ ಜನ ನೋಡಿ ಬೇಸತ್ತಿದ್ದಾರೆ. ಅವರನ್ನು ಆಯ್ಕೆ ಮಾಡಿದ ಜನ ಯಾವರೀತಿ ಯೋಚಿಸುತ್ತಿರುತ್ತಾರೆ.
ಆದರ್ಶ, ಸಿದ್ಧಾಂತದಿಂದ ಹೋರಾಡಿ, ತಪಸ್ಸು ಮಾಡಿ, ಜನರ ಜತೆ ಬೆರೆತು, ನಾವು ನಿಮ್ಮ ಜತೆ ಇರುತ್ತೇವೆ ಎಂದು ಹೇಳುವವರು ನಾವು. ರಾಜ್ಯದಲ್ಲಿ ಮಹಿಳೆಯರ ಪ್ರಮಾಣ ಶೇ.50ರಷ್ಟಿದೆ. ಆದರೆ ನಮ್ಮನ್ನು ಪ್ರತಿನಿಧಿಸುವವರ ಪ್ರಮಾಣ ಎಷ್ಟು ಕಡಿಮೆ ಇದೆ ಎಂದರೆ ಶೇ.4ರಷ್ಟೂ ಇಲ್ಲ. ಈ ರೀತಿ ಮಾತನಾಡಿದರೆ, ಯಾರು ತಮ್ಮ ಹೆಣ್ಣು ಮಕ್ಕಳನ್ನು ರಾಜಕೀಯಕ್ಕೆ ಕಳುಹಿಸುತ್ತಾರೆ. ನನಗೆ ಎಷ್ಟೋ ಬಾರಿ ಅನಿಸಿದೆ, ನಾನು ಗಂಡಸಾಗಿದ್ದರೆ ರಾಜಕಾರಣದಲ್ಲಿ ಎಷ್ಟು ಅವಕಾಶ ಸಿಗುತ್ತಿತ್ತು ಎಂದು.
ನಾವೂ ಪ್ರತಿನಿತ್ಯ ಈ ಪುರುಷ ಪ್ರಧಾನ ಸಮಾಜದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಜನಪ್ರತಿನಿಧಿ ಎಂದರೆ ಜನರ ಪರವಾಗಿ ನಿಲ್ಲುವವರು. ಈಗ ರಾಜಕಾರಣಿ ಎಂದರೆ ಜನ ನಗುತ್ತಿದ್ದಾರೆ.
ನನಗೆ ನಿನ್ನೆ ಮಾಧ್ಯಮದವರು ಬಜೆಟ್ ಬಗ್ಗೆ ಪ್ರಶ್ನೆ ಕೇಳುತ್ತಾರೆ ಎಂದು ಭಾವಿಸಿದ್ದೆ. ಆದರೆ ಈ ಪ್ರಶ್ನೆ ಕೇಳಿದ್ದು ನನಗೆ ಅಚ್ಚರಿಯಾಯಿತು. ರಾಜ್ಯ ದೇಶದಲ್ಲಿ ಸಮಸ್ಯೆಗಳು ತಾಂಡವವಾಡುತ್ತಿದೆ. ಆ ಬಗ್ಗೆ ಚರ್ಚಿಸಿ ಎಂದು ಜನ ನಮ್ಮನ್ನು ಆರಿಸಿ ಕಳುಹಿಸಿದ್ದಾರೆ. ನಾವು ಮತ್ತೆ ಅವರ ಬಳಿ ಹೋಗಿ ಮುಖ ತೋರಿಸುವುದೇಗೆ?
-ಸೌಮ್ಯಾ ರೆಡ್ಡಿ, ಶಾಸಕಿ
ರಕ್ಷಣೆ ನೀಡುವುದು ಸರಕಾರದ ಮೂಲಭೂತ ಕರ್ತವ್ಯ: ಡಿಕೆಶಿ
ʼರಕ್ಷಣೆ ನೀಡುವುದು, ದೌರ್ಜನ್ಯವಾಗದಂತೆ ನೋಡಿಕೊಳ್ಳುವುದು ರಾಜ್ಯ ಸರಕಾರದ ಮೂಲಭೂತ ಕರ್ತವ್ಯ. ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ಹೇಳಬೇಕಾಗಿರುವುದನ್ನೆಲ್ಲಾ ಸದನದಲ್ಲಿ ಹೇಳಿದ್ದೇನೆʼ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ನಗರದ ಸದಾಶಿವನಗರದ ತಮ್ಮ ನಿವಾಸದಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು; “ಸಂತ್ರಸ್ತ ಯುವತಿಯ ವಿಡಿಯೋ ನಾನು ನೋಡಿಲ್ಲ. ಈಗಷ್ಟೇ ಜನಪ್ರತಿನಿಧಿ ನ್ಯಾಯಾಲಯದಲ್ಲಿ ಎಕನಾಮಿಕ್ ಅಫೆನ್ಸ್ ಪ್ರಕರಣದ ವಿಚಾರಣೆ ಇತ್ತು. ಅದಕ್ಕೆ ಹಾಜರಾಗಿ ಈಗಷ್ಟೇ ಬಂದಿದ್ದೇನೆ. ಕಳೆದ ಬಾರಿ ಹೋಗಲು ಆಗಿರಲಿಲ್ಲ. ಹೀಗಾಗಿ ಇವತ್ತು ಹೋಗಿ ಬಂದಿದ್ದೇನೆ. ಈ ವಿಡಿಯೋ ಏನು ಎಂಬುದನ್ನು ನೋಡುತ್ತೇನೆ” ಎಂದು ತಿಳಿಸಿದರು.
ಈ ವಿಚಾರದಲ್ಲಿ ನನ್ನದೇನು ಹೇಳಲು ಇಲ್ಲ. ನಾನು ಏನೇನು ಮಾತನಾಡಬೇಕೋ ಅದನ್ನು ಸದನದಲ್ಲಿ ಮಾತನಾಡಿದ್ದೇನೆ. ಮಿಕ್ಕಿದ್ದನ್ನು ವಿಡಿಯೋ ನೋಡಿದ ನಂತರ ನಿರ್ಧರಿಸುತ್ತೇನೆ ಎಂದರು.
ಇನ್ನು ರಮೇಶ್ ಜಾರಕಿಹೊಳಿ ಅವರ ಹೇಳಿಕೆಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸುತ್ತಾ, “ಅವರ ಬಳಿ ಇರುವ ದಾಖಲೆಗಳನ್ನು ಬಿಡುಗಡೆ ಮಾಡುವುದು ಬೇಡ ಎಂದು ಹೇಳಿದವರು ಯಾರು? ಅದರಲ್ಲಿ ಶಾಕ್ ಆದರೂ ಇರಲಿ, ಏನಾದರೂ ಇರಲಿ. ಅವರಿಗೆ ಒಳ್ಳೆಯದಾಗಲಿ ಪಾಪ” ಎಂದರು.