ಆರು ಕಾರ್ಮಿಕರ ಅಮೂಲ್ಯ ಜೀವಗಳ ಶವಗಳ ಮೇಲೆ; ಪ್ರಾಕೃತಿಕ ಸಂಪತ್ತಿಗೆ ಸಮಾಧಿ ಕಟ್ಟಿ ಮೇಲೆ ಬೆಂಗಳೂರು ಉದ್ಧಾರ ಮಾಡಲು ಹೊರಟ ಬಿಜೆಪಿ ಸರಕಾರ: ಕ್ವಾರಿ-ಕ್ರಷರ್ & ಬಿಲ್ಡರ್ ಲಾಬಿಗೆ ಕೊನೆಗೂ ಮಣೆ
ಬೆಂಗಳೂರು/ಚಿಕ್ಕಬಳ್ಳಾಪುರ: ಫೆಬ್ರವರಿ 22ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಹಿರೇನಾಗವೇಲಿ ಗ್ರಾಮದ ಬಳಿ ಸಂಭವಿಸಿದ ಜಿಲೆಟಿನ್ ಕಡ್ಡಿಗಳ ಮಹಾಸ್ಫೋಟದಿಂದ ಧಾರುಣವಾಗಿ ಸಾವನ್ನಪ್ಪಿದ ಆರು ಕಾರ್ಮಿಕರ ಕುಟುಂಬಗಳ ಕಣ್ಣೀರು ನಿಲ್ಲುವುದಕ್ಕೆ ಮೊದಲೇ ಸ್ಥಗಿತಗೊಂಡಿರುವ ಕ್ವಾರಿ ಮತ್ತು ಕ್ರಷರ್‌ಗಳನ್ನು ಪುನಾರಂಭ ಮಾಡಲು ಸರಕಾರ ಹೊರಟಿದೆ.
ಘಟನೆಯ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ. ಜತೆಗೆ, ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ (ಎನ್‌ಜಿಟಿ) ತನಿಖೆ ನಡೆಸಿ ಸಮಗ್ರ ವರದಿ ನೀಡಲು ಉನ್ನತಮಟ್ಟದ ಸಮಿತಿಯೊಂದನ್ನು ರಚನೆ ಮಾಡಿದೆ. ಸಮಿತಿ ಇನ್ನೂ ಸ್ಥಳಕ್ಕೆ ಭೇಟಿ ನೀಡಬೇಕಿದೆ. ಅದಕ್ಕೂ ಮುನ್ನವೇ ರಾಜ್ಯ ಗಣಿ ಮತ್ತು ಭೂ ವಿಜ್ಞಾನ ಖಾತೆ ಮಂತ್ರಿ ಮುರುಗೇಶ್ ನಿರಾಣಿ ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳು ಸೇರಿದಂತೆ ರಾಜ್ಯಾದ್ಯಂತ ಕಲ್ಲು ಕ್ವಾರಿ ಮತ್ತು ಕ್ರಷರ್‌ಗಳನ್ನು ಷರತ್ತುಬದ್ಧ ಅನುಮತಿಯೊಂದಿಗೆ ಪುನಾರಂಭಿಸಲಾಗುವುದು ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು; ಕಲ್ಲು ಗಣಿಗಳನ್ನು ಪುನಾರಂಭ ಮಾಡಲಿಚ್ಚಿಸುವವರು 90 ದಿನಗಳ ಒಳಗಾಗಿ ಗಣಿ ಮತ್ತು ಸುರಕ್ಷತಾ ಮಹಾನಿರ್ದೇಶಕರಿಂದ (ಡಿಜಿಎಂಎಸ್) ಅವರಿಂದ ಅನುಮತಿಯನ್ನು ಕಡ್ಡಾಯವಾಗಿ ಪಡೆಯಲೇಕಾಗುತ್ತದೆ ಎಂದರು.
ತಮ್ಮ ಮಾತಿನ ನಡುವೆಯೇ ಸ್ಫೋಟಕ ಸುದ್ದಿಯನ್ನು ಬಹಿರಂಗಪಡಿಸಿದ ನಿರಾಣಿ; “ರಾಜ್ಯದಲ್ಲಿ ಶೇ.10ರಷ್ಟು ಕಲ್ಲು ಗಣಿಗಳು ಮಾತ್ರ ಗಣಿ ಮತ್ತು ಸುರಕ್ಷತಾ ಮಹಾನಿರ್ದೇಶಕರಿಂದ ಅನುಮತಿ ಪಡೆದಿವೆ. ಉಳಿದ ಶೇ.90ರಷ್ಟು ಕಲ್ಲು ಗಣಿ ಇದರ ಅನುಮತಿ ಪಡೆಯದೇ ಕಾರ್ಯಾಚರಣೆ ಮಾಡುತ್ತಿವೆ. ಈ ರೀತಿಯ 2,500ಕ್ಕೂ ಹೆಚ್ಚು ಗಣಿಗಳಿವೆ. ಈಗ ಅವೆಲ್ಲವೂ ಗಣಿ ಮತ್ತು ಸುರಕ್ಷತಾ ಮಹಾನಿರ್ದೇಶಕರಿಂದ ಅನುಮತಿ ಪಡೆಯಲೇಬೇಕಾಗುತ್ತದೆ. ಅದರ ಅನುಮತಿ ಅಥವಾ ಪರವಾನಗಿ ಪಡೆಯದೇ ಕಲ್ಲು ಗಣಿಗಳನ್ನು ಪುನಾರಂಭ ಮಾಡಲು ಸಾಧ್ಯವೇ ಇಲ್ಲ. ಅದೇ ರೀತಿ ಕಲ್ಲು ಕ್ರಷರ್ ಮತ್ತು ಕ್ವಾರಿಗಳ ಮಾಲೀಕರು ಸುರಕ್ಷತಾ ಕ್ರಮಗಳ ಬಗ್ಗೆ ಮುಚ್ಚಳಿಕೆಯನ್ನು ಬರೆದುಕೊಡಬೇಕು.” ಎಂದರು.
ಅಲ್ಲಿಗೆ ರಾಜ್ಯದ ಅಸುರಕ್ಷಿತ ಕಲ್ಲು ಗಣಿಗಳ ಬಗ್ಗೆ ಸ್ವತಃ ಗಣಿ ಸಚಿವರೇ ಬೆಳಕು ಚೆಲ್ಲಿದಂತಾಯಿತು.
ನಷ್ಟದ ಸಬೂಬು, ಅಭಿವೃದ್ಧಿಯ ನೆಪ
ಚಿಕ್ಕಬಳ್ಳಾಪುರದ ಹಿರೇನಾಗವೇಲಿ ಹಾಗೂ ಶಿವಮೊಗ್ಗ ಜಿಲ್ಲೆಯ ಹುಣಸೋಡು ಗ್ರಾಮದಲ್ಲಿ ನಡೆದ ಸ್ಫೋಟಗಳ ನಂತರ ರಾಜ್ಯದಲ್ಲಿ ಎಲ್ಲ ಕಲ್ಲು ಕ್ವಾರಿ-ಕ್ರಷರ್‌ಗಳನ್ನು ಸ್ಥಗಿತಗೊಳಿಸಲಾಯಿತು. ಕೆಲ ದಿನಗಳ ನಂತರ ಅಭಿವೃದ್ಧಿ ಮತ್ತು ನಿರ್ಮಾಣ ಕೆಲಸಗಳಿಗೆ ಸಮಸ್ಯೆಯಾಗುತ್ತಿದೆ ಎಂಬ ನೆಪವೊಡ್ಡಿ ಶೇ.10ರಷ್ಟು ಗಣಿಗಳನ್ನು ಪುನಾರಂಭ ಮಾಡಲು ಸದ್ದಿಲ್ಲದೆ ಸರಕಾರ ಅನುಮತಿ ನೀಡಿತು. ಕ್ರಷರ್‌ಗಳಲ್ಲಿ ಕಾರ್ಮಿಕರಿಗೆ ಕೆಲಸ ಇಲ್ಲದಾಗಿದೆ. ಅವುಗಳ ಮಾಲೀಕರು ವಿಪರೀತ ಸಾಲ ಮಾಡಿ ಕ್ರಷರ್-ಕ್ವಾರಿಗಳನ್ನು ನಡೆಸುತ್ತಿದ್ದಾರೆ. ಈಗ ಅವರೆಲ್ಲರೂ ಸಾಲ ತೀರಿಸಲಾಗದೆ ಬೀದಿಬೀಳುವಂಥ, ಅವರ ಹೆಂಡತಿ ಮಕ್ಕಳು ಉಪವಾಸ ಬೀಳುವಂಥ ಸನ್ನಿವೇಶ ಎದುರಾಗಿದೆ ಎಂಬುದು ನಿರಾಣಿ ಸಾಹೇಬರ ಒಕ್ಕಣಿ.
ಇನ್ನು ಅವರ ಲೆಕ್ಕದ ಪ್ರಕಾರ ರಾಜ್ಯದಲ್ಲಿ ಕ್ರಷರ್ ಮತ್ತು ಕ್ವಾರಿಗಳು ಸ್ಥಗಿತವಾದ ಮೇಲೆ ಕಮ್ಮಿ ಎಂದರೂ 300-350 ಕೋಟಿ ರೂ. ನಷ್ಟವಾಗಿದೆಯಂತೆ.
ಅಧಿಕಾರಿಗಳು ನೆಮ್ಮದಿಯಾಗಿದ್ದಾರೆ!!
ಹಿರೇನಾಗವೇಲಿ ಘಟನೆ ನಡೆದ ನಂತರ ಗುಡಿಬಂಡೆ ಪೊಲೀಸ್ ಠಾಣೆಯ ಇನಸ್ಪೆಕ್ಟರ್ ಮತ್ತು ಸಬ್ ಇನಸ್ಪೆಕ್ಟರ್ ಇಬ್ಬರನ್ನು ಅಮಾನತು ಮಾಡಿದ್ದು ಬಿಟ್ಟರೆ, ಈವರೆಗೂ ದುರಂತಕ್ಕೆ ಸಂಬಂಧಿಸಿದ ಯಾವೊಬ್ಬ ಅಧಿಕಾರಿಯ ತಲೆದಂಡವಾಗಿಲ್ಲ. ಸಣ್ಣಪುಟ್ಟ ಸಮಸ್ಯೆಗೂ ಉನ್ನತ ಅಧಿಕಾರಿಗಳನ್ನು ಆರೇಳು ತಿಂಗಳಿಗೆಲ್ಲ ಪೇರಿ ಕೀಳಿಸುವ ಸರಕಾರ, ದುರಂತಕ್ಕೆ ಹೊಣೆಗಾರಿಕೆ ಹೊರಬೇಕಿರುವ ಇಬ್ಬರು ಅತ್ಯುನ್ನತ ಅಧಿಕಾರಿಗಳನ್ನು ಕನಿಷ್ಠ ವರ್ಗಾವಣೆಯನ್ನು ಮಾಡಿಲ್ಲ. ಜಿಲ್ಲೆಯಲ್ಲಿ ರಾಜಕೀಯ ಪ್ರಭಾವ ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತಿದೆ ಎಂಬುದಕ್ಕೆ ಇದೊಂದು ಉದಾಹರಣೆ ಎನ್ನುವುದು ಜನರ ದೂರು.
ದುರಂತದ ತನಿಖೆ ಇನ್ನೂ ಮುಗಿದಿಲ್ಲ. ಆದರೆ, ಆಗಲೇ ಚಿಕ್ಕಬಳ್ಳಾಪುರ ಕಲ್ಲುಗುಡ್ಡೆಗಳ ಮೇಲೆ ಮುಗಿಬೀಳಲು ಕೆಲವರು ಉನ್ನತ ಮಟ್ಟದಲ್ಲಿ ಸರಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ಇದಕ್ಕೆ ಜನರೂ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಕಲ್ಲು ಗಣಿಗಾರಿಕೆ ಹಾಗೂ ಕ್ವಾರಿಗಳಲ್ಲಿ ಸ್ಫೋಟಗಳು ಸಂಪೂರ್ಣವಾಗಿ ಸ್ಥಗಿತ ಆಗಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನಿರ್ಮಾಣ ಕಾಮಗಾರಿಗಳಿಗೆ ಕಷ್ಟವಾಗಿದ್ದು, ಎಂ ಸ್ಯಾಂಡ್ ಇಲ್ಲದೆ ಸಮಸ್ಯೆಯಾಗಿದೆ. ಇದರಿಂದ ಅಭಿವೃದ್ಧಿ ಕುಂಠಿತವಾಗಿದೆ ಎಂದು ಸಬೂಬು ಕೊಟ್ಟು ಸರಕಾರದ ದಿಕ್ಕು ತಪ್ಪಿಸುವ ಕೆಲಸ ಶುರುವಾಗಿದೆ.
ಕೆಲ ದಿನಗಳ ಹಿಂದೆ ಕರ್ನಾಟಕ ಬೃಹತ್ ಕೈಗಾರಿಕೆ ಹಾಗೂ ಮಧ್ಯಮ ಗಾತ್ರದ ಕೈಗಾರಿಕೆಗಳ ಒಕ್ಕೂಟ (Chamber of Commerce representing large and medium industries in Karnataka) ಪದಾಧಿಕಾರಿಗಳು ಕಳೆದ ಗುರುವಾರ (ಮಾ.೧೧) ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವ ಮರುಗೇಶ್ ನಿರಾಣಿ ಅವರನ್ನು ಭೇಟಿ ಮಾಡಿ, ಚಿಕ್ಕಬಳ್ಳಾಪುರದಲ್ಲಿ ಸ್ಥಗಿತವಾಗಿರುವ ಕ್ವಾರಿ-ಕ್ರಷರ್‌ಗಳನ್ನು ಕೂಡಲೇ ಆರಂಭಿಸುವಂತೆ ಮನವಿ ಸಲ್ಲಿಸಿದ್ದರು.
ಆದರೆ, ಇವರ ಬೇಡಿಕೆಗೆ ಅಷ್ಟೇನೂ ಸಕಾರಾತ್ಮಕವಾಗಿ ಸ್ಪಂದಿಸದ ನಿರಾಣಿ, ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವರ ಜತೆ ಚರ್ಚೆ ಮಾಡುತ್ತೇನೆಂದು ಹೇಳಿ ಕರ್ನಾಟಕ ಬೃಹತ್ ಕೈಗಾರಿಕೆ ಹಾಗೂ ಮಧ್ಯಮ ಗಾತ್ರದ ಕೈಗಾರಿಕೆಗಳ ಒಕ್ಕೂಟದ ಪದಾಧಿಕಾರಿಗಳನ್ನು ಸಾಗಹಾಕಿದ್ದರು. ಆದರೆ, ಈಗ ಎರಡೂ ಸ್ಫೋಟಗಳ ತನಿಖೆ ಮುಗಿಯುವ ಮುನ್ನವೇ ಷರತ್ತುಬದ್ಧ ಅನುಮತಿ ಎಂಬ ಮಾತಿನ ಮುತ್ತುಗಳು ಸಚಿವರ ಬಾಯಿಯಿಂದ ಉದುರುತ್ತಿವೆ.
ಚಿಕ್ಕಬಳ್ಳಾಪುರದಲ್ಲೂ ಒತ್ತಡ
ರಾಜ್ಯ ರಾಜಧಾನಿಯಲ್ಲಿ ಒತ್ತಡ ಹೇರುತ್ತಿರುವ ಬೆನ್ನಲ್ಲಿಯೇ ಚಿಕ್ಕಬಳ್ಳಾಪುರದಲ್ಲೂ ಕ್ರಷರ್ ಮತ್ತು ಕ್ವಾರಿ ಮಾಲೀಕರು ವಿವಿಧ ಹಂತಗಳಲ್ಲಿ ಒತ್ತಡ ಹೇರುವ ತಂತ್ರ ಅನುಸರಿಸಿದ್ದರು. ಇದರಲ್ಲಿ ಅವರು ಯಶಸ್ವಿಯಾದಂತೆ ಕಾಣುತ್ತಿದೆ.
ಮಾರ್ಚ್ 1ರಂದು ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಅವರು ಕ್ವಾರಿ-ಕ್ರಷರ್ ಮಾಲೀಕರ ಸಭೆ ಕರೆದು, ಸರಕಾರ ಆದೇಶ ಕೊಡುವ ತನಕ ಯಾರೂ ಪುನಾ ಕಲ್ಲು ಗಣಿಗಾರಿಕೆಯನ್ನು ಆರಂಭ ಮಾಡುವಂತಿಲ್ಲ. ಒಂದು ವೇಳೆ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದರು. ಇದು ಕೇವಲ ಜನರನ್ನು ದಿಕ್ಕು ತಪ್ಪಿಸುವ, ಕಣ್ಣೊರೆಸುವ ತಂತ್ರವಷ್ಟೇ. ಜಿಲ್ಲೆಯಲ್ಲಿ ಕ್ರಷರ್ ಮತ್ತು ಕ್ವಾರಿ ಲಾಬಿ ಬಹಳ ಸಂಘಟನಾತ್ಮಕವಾಗಿದೆ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಬಿಜೆಪಿ ನಾಯಕರೊಬ್ಬರು.
ಯಾರ ಬಳಿ ಹೋದರೆ ತಮ್ಮ ಕೆಲಸ ಆಗುತ್ತದೋ ಎಂದು ನಂಬಿರುವ ಕ್ವಾರಿ-ಕ್ರಷರ್ ಮಾಲೀಕರು, ತಮ್ಮ ಅಳಲು ತೋಡಿಕೊಂಡಿದ್ದರೆಂದು ಗೊತ್ತಾಗಿದೆ. “ಅಣ್ಣ.. ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿದ್ದೇವೆ. ಈ ಸಮಯದಲ್ಲಿ ಕ್ವಾರಿ-ಕ್ರಷರ್‌ಗಳು ಬಂದ್ ಆದರೆ ನಾವೆಲ್ಲರೂ ಬೀದಿಪಾಲಾಗುತ್ತೇವೆ” ಎಂದು ಬೇಡಿಕೊಂಡಿದ್ದಾರೆ. ಇದಕ್ಕೆ ಪೂರಕವಾಗಿ ಸ್ಪಂದಿಸಿರುವ ʼಯಜಮಾನರುʼ, “ನೀವೇನು ಹೆದರಬೇಡಿ. ನಾನು ನೋಡಿಕೊಳ್ಳುತ್ತೇನೆ” ಎಂದು ಧೈರ್ಯ ತುಂಬಿ ಕಳಿಸಿದ್ದರೆಂಬ ಮಾಹಿತಿ ಸಿಕೆನ್ಯೂಸ್ ನೌ ಗೆ ಸಿಕ್ಕಿತ್ತು.
ಹೀಗಾಗಿ, ಯಾವುದೇ ಕ್ಷಣದಲ್ಲಾದರೂ ಕ್ರಷರ್ ಮತ್ತು ಕ್ವಾರಿಗಳು ಪುನಾರಂಭ ಆಗಬಹುದು ಎಂಬ ನಿರೀಕ್ಷೆಯಲ್ಲಿದ್ದರು ಅವುಗಳ ಮಾಲೀಕರು. ಈಗ ನಿರಾಣಿ ಸಾಹೇಬರು ಅವರಿಗೆಲ್ಲ ಗುಡ್‌ನ್ಯೂಸ್ ಕೊಟ್ಟಿದ್ದಾರೆ.
ಅಚ್ಚರಿಯ ಸಂಗತಿ ಎಂದರೆ, ಕಲ್ಲು ಗಣಿಗಳನ್ನು ಷರತ್ತುಬದ್ಧವಾಗಿ ಪುನಾರಂಭ ಮಾಡಲು ಸ್ವತಃ ಮುಖ್ಯಮಂತ್ರಿಯಡಿಯೂರಪ್ಪ ಅವರೇ ಅನುಮತಿ ನೀಡಿದರು ಎಂದು ನಿರಾಣಿ ತಿಳಿಸಿದ್ದಾರೆ. ಈ ಸಂಬಂಧ ಕ್ವಾರಿ-ಕ್ರಷರ್ ಮಾಲೀಕರು ಸರಕಾರಕ್ಕೆ ಮನವಿ ಮಾಡಿದ್ದರು. ತಮ್ಮ ಕಷ್ಟಗಳ ಬಗ್ಗೆ ಅಳಲು ತೋಡಿಕೊಂಡಿದ್ದರು. ಆದರೆ, ಅವರ ಮಾತುಗಳಲ್ಲಿ ಗಣಿ ಮಾಲೀಕರ ಹಿತದ ಬಗ್ಗೆ, ರಿಯಲ್ ಎಸ್ಟೇಟ್ ಕುಳಗಳ ಬಗ್ಗೆ ಕಾಳಜಿ ಇತ್ತೇ ಹೊರತು, ಕಲ್ಲು ದಂಧೆಯಿಂದ ಚಿಕ್ಕಬಳ್ಳಾಪುರ-ಕೋಲಾರ ಮತ್ತು ಇಡೀ ರಾಜ್ಯಕ್ಕೆ ಆಗುತ್ತಿರುವ ಹಾನಿಯ ಬಗ್ಗೆ ಎಳ್ಳಷ್ಟು ಕಳಕಳಿ ಕಾಣಲಿಲ್ಲ.
- ಈ ಸುದ್ದಿಯನ್ನು ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ..
ಈ ನಡುವೆ ಬರಪೀಡಿತ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಕಲ್ಲು ಕ್ವಾರಿ ಮತ್ತು ಕ್ರಷರ್‌ಗಳನ್ನು ಪುನಾರಂಭ ಮಾಡಲು ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಕಾನೂನು ತಜ್ಞ ಹಾಗೂ ಹಿರಿಯ ವಕೀಲ ಸಿ.ಎಸ್.ದ್ವಾರಕಾನಾಥ್ ಮತ್ತು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್. ಆಂಜನೇಯ ರೆಡ್ಡಿ ಈ ಬಗ್ಗೆ ಸಿಕೆನ್ಯೂಸ್ ನೌ ಜತೆ ಮಾತನಾಡಿದ್ದಾರೆ.
ಕ್ವಾರಿ-ಕ್ರಷರ್ ಮಾಲೀಕರಿಗೆ ರಾಜಕಾರಣಿಗಳ ಶ್ರೀರಕ್ಷೆ ಇದೆ
ಸಿ.ಎಸ್.ದ್ವಾರಕಾನಾಥ್
ರಾಜ್ಯದ ಎಲ್ಲ ಭಾಗಗಳಲ್ಲೂ ಪರಿಸರಕ್ಕೆ ಮಾರಕವಾಗುವ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಅದು ನಮ್ಮ ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಜಾಸ್ತಿಯೇ ಎನ್ನಬಹುದು. ಹುಣಸೋಡು ಮತ್ತು ಹಿರೇನಾಗವೇಲಿ ಸ್ಫೋಟಗಳಿಂದ ಸರಕಾರ ಪಾಠ ಕಲಿಯಬೇಕಿತ್ತು. ಆದರೆ, ಕಲಿತಿಲ್ಲ. ಯಾಕೆಂದರೆ ಎಲ್ಲ ಕ್ರಷರ್-ಕ್ವಾರಿ ಮಾಲೀಕರಿಗೆ ರಾಜಕೀಯ ನಾಯಕರ ಬೆಂಬಲ ಇದೆ. ಅನೇಕ ಕಡೆ ರಾಜಕೀಯ ಮುಖಂಡರೇ ಕಲ್ಲು ದಂಧೆಯನ್ನು ನಡೆಸುತ್ತಿದ್ದಾರೆ. ನಮ್ಮ ಜಿಲ್ಲೆಗಳಲ್ಲಿ ಇದು ಎದ್ದು ಕಾಣುತ್ತಿದೆ. ನಮ್ಮ ಭಾಗದ ಯುವಕರು ಇದರ ವಿರುದ್ಧ ದನಿ ಎತ್ತಬೇಕು. ಉಗ್ರವಾದ ಹೋರಾಟಗಳನ್ನು ರೂಪಿಸಬೇಕು. ನಾನು ಅಂಥ ಹೋರಾಟಗಳಲ್ಲಿ ಭಾಗಿಯಾಗಲು, ಕಾನೂನು ನೆರವು ನೀಡಲು ಸಿದ್ಧ. ಈ ಕ್ಷಣದಲ್ಲಿಯೇ ನಾವೆಲ್ಲರೂ ಎಚ್ಚೆತ್ತುಕೊಳ್ಳಬೇಕು ಎನ್ನುತ್ತಾರೆ ಹಿರಿಯ ವಕೀಲ ಸಿ.ಎಸ್.ದ್ವಾರಕಾನಾಥ್ ಅವರು.
ನಮ್ಮ ಸಮಾಧಿ ಮೇಲೆ ಬೆಂಗಳೂರು ಅಭಿವೃದ್ಧಿ ಆಗಬೇಕೆ?
ಆರ್. ಆಂಜನೇಯ ರೆಡ್ಡಿ
ನಮ್ಮ ಜಿಲ್ಲೆಗಳನ್ನು ಮರುಭೂಮಿಯನ್ನಾಗಿ ಪರಿವರ್ತಿಸಿ, ಇಲ್ಲಿನ ಪ್ರಾಕೃತಿಕ ಸಂಪತ್ತನ್ನು ನಾಶ ಮಾಡಿ ಬೆಂಗಳೂರು ನಗರವನ್ನು ಉದ್ಧಾರ ಮಾಡಲು ಈ ಸರಕಾರ ಹೊರಟಿದೆ. ನಮ್ಮ ಸಮಾಧಿಗಳ ಮೇಲೆ ರಾಜಧಾನಿಯ ಅಭಿವೃದ್ಧಿ ಆಗಬೇಕೆ? ಈ ಕಲ್ಲು ಗಣಿಗಾರಿಕೆಯಿಂದ ಈ ಭಾಗದ ಪ್ರಾಕೃತಿಕ ಸಂಪತ್ತು ವಿನಾಶದತ್ತ ಸಾಗಿದೆ. ಜಲಮೂಲಗಳು ನಾಶವಾಗುತ್ತಿವೆ. ವಿಷಕಾರಿ ಸೂಕ್ಷ್ಮ ಕಲ್ಲುಧೂಳಿನಿಂದ ಜನರು ಅನಾರೋಗ್ಯಪೀಡಿತರಾಗುತ್ತಿದ್ದಾರೆ. ವಿನಾಶಕಾರಿ ಫ್ಲೋರೋಸಿಸ್ ನೀರಿನಿಂದ ಶಾಶ್ವತ ಅಂಗವೈಕಲ್ಯಕ್ಕೆ ತುತ್ತಾಗುತ್ತಿರುವ ಇಲ್ಲಿನ ಕ್ರಷರ್-ಕ್ವಾರಿಗಳಿಂದ ಶಾಶ್ವತ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಎಂದು ಅವರು, ಕಳವಳ ವ್ಯಕ್ತಪಡಿಸಿದರಲ್ಲದೆ, ಯಾವುದೇ ಕಾರಣಕ್ಕೆ ಕಲ್ಲು ಗಣಿಗಳ ಆರಂಭಕ್ಕೆ ಅನುಮತಿ ಕೊಡಬಾರದು ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್. ಆಂಜನೇಯ ರೆಡ್ಡಿ ಪ್ರಶ್ನೆ ಮಾಡಿದ್ದಾರೆ. ಇವರು, ಕ್ವಾರಿ-ಕ್ಷಷರ್‌ಗಳ ಪರವಾಗಿ ರಾಜ್ಯ ಸರಕಾರ ಜಾರಿಗೆ ತಂದಿರುವ ತಿದ್ದುಪಡಿ ಮಸೂದೆ ವಿರುದ್ಧ ರಾಜ್ಯ ಹೈಕೋರ್ಟ್‌ನಲ್ಲಿ ಕಾನೂನು ಹೋರಾಟ ನಡೆಸುತ್ತಿದ್ದಾರೆ.
- ಈ ಸುದ್ದಿಯನ್ನು ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ..