ಚಿಕ್ಕಬಳ್ಳಾಪುರ ಸೇರಿ ಸ್ವಂತ ಜಿಲ್ಲೆಗಳ ಉಸ್ತುವಾರಿ ಹೊಂದಿರುವ ಎಲ್ಲ ಸಚಿವರಿಗೂ ಅನ್ಯಜಿಲ್ಲೆಗಳ ಉಸಾಬರಿ; ಡಾ.ಕೆ.ಸುಧಾಕರ್ ಸೇರಿ ಕೆಲ ವಲಸಿಗರ ಜಿಲ್ಲೆಗಳು ಬದಲು
ಬೆಂಗಳೂರು: ಅಕ್ಕಪಕ್ಕದಲ್ಲಿ ಅಧಿಕಾರಿಗಳನ್ನು ನಿಲ್ಲಿಸಿಕೊಂಡು ಜಿಲ್ಲೆಗಳಲ್ಲಿ ಸ್ವಂತ ರಿಪಬ್ಲಿಕ್‌ಗಳನ್ನು ಕಟ್ಟಿಕೊಂಡು ಮೆರೆಯುವ ಸಚಿವರಿಗೆ ಬಿಸಿ ಮುಟ್ಟಿಸಲು ಕೊನೆಗೂ ಬಿಜೆಪಿ ಹೈಕಮಾಂಡ್ ಒಂದು ಸ್ಮಾರ್ಟ್ ಐಡಿಯಾ ಮಾಡಿದ್ದು, ಅದು ಚಿಕ್ಕಬಳ್ಳಾಪುರ ಜಿಲ್ಲೆಗೂ ಅನ್ವಯ ಆಗಲಿದೆ.
ರಾಜ್ಯ ಸಚಿವ ಸಂಪುಟದಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವರುಗಳಿಗೆ ಕಹಿ ಆಗುವಂಥ ಐಡಿಯಾ ಇದಾಗಿದ್ದು, ಸಂಪುಟದಲ್ಲಿರುವ ಎಲ್ಲ ಸಚಿವರಿಗೂ ತಮ್ಮ ತವರು ಜಿಲ್ಲೆಯ ಉಸ್ತುವಾರಿ ಕೈತಪ್ಪಲಿದೆ.
ಇದು ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಅವರಿಗೂ ಅನ್ವಯ ಆಗಲಿದ್ದು, ಅವರೂ ತಮ್ಮ ತವರು ಜಿಲ್ಲೆಯನ್ನು ಬಿಟ್ಟು ಅನ್ಯ ಜಿಲ್ಲೆಯ ಉಸ್ತುವಾರಿಯನ್ನು ವಹಿಸಿ ಕೊಳ್ಳಬೇಕಾಗುತ್ತದೆ.
ಸಂಪುಟದಲ್ಲಿರುವ ಅನೇಕ ಸಚಿವರು ತವರು ಜಿಲ್ಲೆಯ ಉಸ್ತುವಾರಿಯನ್ನೇ ಹೊಂದಿದ್ದು, ಇಬ್ಬಿಬ್ಬರು ಸಚಿವರು ಇರುವ ಜಿಲ್ಲೆಗಳಲ್ಲಿ ಉಸ್ತುವಾರಿಗಾಗಿ ತಿಕ್ಕಾಟವೂ ನಡೆದಿತ್ತು. ಆದರೆ, ಅಳೆದೂ ತೂಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಜಿಲ್ಲೆಗಳ ಉಸ್ತುವಾರಿಯನ್ನು ಹಂಚಿಕೆ ಮಾಡಿದ್ದರು. ಅದರಲ್ಲೂ ಬೆಂಗಳೂರು ನಗರ ಹಾಗೂ ಬೆಳಗಾವಿ ಉಸ್ತುವಾರಿ ಬಗ್ಗೆಯಂತೂ ಹಿರಿಯ ಸಚಿವರ ನಡುವೆ ಭಾರೀ ಪೈಪೋಟಿ ನಡೆದಿತ್ತು.
ಹೊಸ ಪಟ್ಟಿ ಇಂದೇ ಹೊರಬೀಳಬೇಕಿತ್ತು
ಮುಖ್ಯಮಂತ್ರಿಗಳು ಬೆಳಗಾವಿಗೆ ಹೊರಟ ಕಾರಣ ನೂತನ ಉಸ್ತುವಾರಿ ಪಟ್ಟಿ ಹೊರಬೀಳುವುದು ತಡವಾಗಿದೆ. ಈಗಾಗಲೇ ಪಟ್ಟಿ ಸಿದ್ಧವಾಗಿದ್ದು, ಮಂಗಳವಾರ ಬೆಳಗ್ಗೆಯೇ ಸಿಎಂ ಅವರು ಅಂಕಿತ ಹಾಕಬೇಕಿತ್ತು. ಇನ್ನು, ಅವರು ಬೆಳಗಾವಿಯಿಂದ ವಾಪಸ್ ಬಂದ ಮೇಲೆ ಪಟ್ಟಿ ಹೊರಬೀಳುವ ಸಾಧ್ಯತೆ ಇದೆ ಎಂದು ಉನ್ನತ ಮೂಲವೊಂದು ಸಿಕೆನ್ಯೂಸ್ ನೌ ಗೆ ತಿಳಿಸಿದೆ.
ಇದು ಹೈಕಮಾಂಡ್ ನಿರ್ಧಾರ
ತವರು ಜಿಲ್ಲೆಗಳ ಉಸ್ತುವಾರಿ ಬದಲಿಸುತ್ತಿರುವ ಉದ್ದೇಶಕ್ಕೆ ಕಾರಣ ಪೈಪೋಟಿ, ತಿಕ್ಕಾಟ ಅಲ್ಲ. ಇದು ಸಿಎಂ ಯಡಿಯೂರಪ್ಪ ಅವರ ಪ್ಲ್ಯಾನ್ ಕೂಡ ಅಲ್ಲ. ಕೆಲ ಸಚಿವರಿಗೆ ʼಕರೆಕ್ಟಾಗಿʼ ಕಡಿವಾಣ ಹಾಕಲು ಬಿಜೆಪಿ ಹೈಕಮಾಂಡ್ ತೆಗೆದುಕೊಂಡಿರುವ ಕಟು ನಿರ್ಧಾರ. ಕರ್ನಾಟಕಕ್ಕೆ ಮಾತ್ರವಲ್ಲದೆ ಇಡೀ ದೇಶದ ಉದ್ದಗಲಕ್ಕೂ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲೂ ಇದೇ ಸೂತ್ರ ಜಾರಿಗೆ ಬರಲಿದೆ ಎಂದು ಮೂಲಗಳು ತಿಳಿಸಿವೆ.
ಇನ್ನು, ಉತ್ತರ ಕರ್ನಾಟಕ ಕಡೆಯ ಸಚಿವರನ್ನು ದಕ್ಷಿಣ ಕರ್ನಾಟಕ ಮತ್ತು ಹಳೇ ಮೈಸೂರು ಭಾಗಕ್ಕೆ, ಈ ಭಾಗದವರನ್ನು ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕದತ್ತ ನಿಯೋಜಿಸಲಾಗುವುದು. ಬಯಲುಸೀಮೆ ಕಡೆಯವರನ್ನು ಮಂಗಳೂರು, ಮಲೆನಾಡಿನತ್ತ, ಅಲ್ಲಿನವರಿಗೆ ಬಯಲುಸೀಮೆ ಜಿಲ್ಲೆಗಳ ಉಸ್ಕತುವಾರಿ ನೀಡಲು ವರಿಷ್ಠರು ಸೂಚಿಸಿದ್ದಾರೆ ಎನ್ನಲಾಗಿದೆ.
ಒಬ್ಬರೇ ಸಚಿವರಿದ್ದರೂ ಉಸ್ತುವಾರಿ ಕೈತಪ್ಪುತ್ತಾ?
ಹಾಗಾದರೆ, ಒಂದು ಜಿಲ್ಲೆಗೆ ಒಬ್ಬರೇ ಸಚಿವರಿದ್ದರೂ ಜಿಲ್ಲಾ ಉಸ್ತುವಾರಿ ಕೈತಪ್ಪುತ್ತಾ? ಎಂಬ ಪ್ರಶ್ನೆಗೆ ಆ ಮೂಲಗಳು ʼಹೌದುʼ ಎನ್ನುತ್ತಿವೆ. ತವರು ಜಿಲ್ಲೆಯಲ್ಲಿ ಅಧಿಕಾರಶಾಹಿಯನ್ನು ತಮ್ಮ ತಾಳಕ್ಕೆ ತಕ್ಕಂತೆ ಕುಣಿಸಿಕೊಂಡು ತಮ್ಮದೇ ಪ್ರಭಾವ ಬೆಳೆಸಿಕೊಂಡು ಸಾಮ್ರಾಜ್ಯ ಸೃಷ್ಟಿಸಿಕೊಂಡು ಇತರೆ ಶಾಸಕರ ಮೇಲೆ ಸವಾರಿ ಮಾಡುವ ಚಾಳಿಗೆ ಬೀಳುವ ಸಚಿವರಿಗೆ ಬ್ರೇಕ್ ಹಾಕಲು ಬಿಜೆಪಿ ವರಿಷ್ಠರು ಈ ಕ್ರಮಕ್ಕೆ ಮುಂದಾಗಿದ್ದಾರೆ.
ಇಷ್ಟೇ ಅಲ್ಲ, ಉಸ್ತುವಾರಿ ಸಚಿವರ ಆಟಾಟೋಪದ ಬಗ್ಗೆ ವರಿಷ್ಠರು ಭರ್ತಿ ಮಾಹಿತಿ ಸಂಗ್ರಹ ಮಾಡಿದ್ದಾರೆ. ಎಲ್ಲರ ವರದಿಗಳೂ ವರಿಷ್ಠರ ಕೈಯ್ಯಲ್ಲಿದೆ. ಮುಖ್ಯವಾಗಿ ಶಿವಮೊಗ್ಗದ ಹುಣಸೋಡು ಹಾಗೂ ಚಿಕ್ಕಬಳ್ಳಾಪುರದ ಹಿರೇನಾಗವೇಲಿ ಕ್ರಷರ್ ಸ್ಫೋಟಗಳ ಹಿನ್ನೆಲೆಯಲ್ಲಿ ಆ ಎರಡೂ ಜಿಲ್ಲೆಗಳ ಉಸ್ತುವಾರಿ ಸಚಿವರು ಬದಲಾಗುವುದು ಖಚಿತ. ಇದರ ಜತೆಗೆ, ವಿವಿಧ ಜಿಲ್ಲೆಗಳಲ್ಲಿ ಈ ಆಪರೇಷನ್ ನಡೆಯಲಿದೆ.
ಡಾ.ಸುಧಾಕರ್ ಟಾರ್ಗೆಟ್‌ಗೆ ಕಾರಣಗಳೇನು?
ಡಾ.ಸುಧಾಕರ್ ಅವರಿಗೆ ಜಿಲ್ಲೆಯ ಉಸ್ತುವಾರಿ ಕೈತಪ್ಪಲು ಹಲವು ಕಾರಣಗಳಿವೆ ಎನ್ನುತ್ತವೆ ಆ ಮೂಲಗಳು. ಅವು ಹೀಗಿವೆ;
- ಅವರ ಹುಟ್ಟೂರಿಗೆ ಅತಿ ಸನಿಹದಲ್ಲೇ ಇರುವ ಹಿರೇನಾಗವೇಲಿ ಕ್ರಷರ್‌ನಲ್ಲಿ ಜಿಲೆಟನ್ ಕಡ್ಡಿಗಳು ಸ್ಫೋಟಿಸಿ ಆರು ಜನ ಕಾರ್ಮಿಕರು ಸಾವನ್ನಪ್ಪಿದ್ದು.
- ಅಕ್ರಮ ಕ್ರಷರ್‌ಗಳೂ ಸೇರಿದಂತೆ ಚಿಕ್ಕಬಳ್ಳಾಪುರದಲ್ಲಿ ನಡೆಯುತ್ತಿರುವ ಕೆಲ ಬೆಳವಣಿಗೆಗಳು. ಉನ್ನತ ಅಧಿಕಾರಿಗಳ ಮೇಲೆ ಬಿಗಿ ಹಿಡಿತ.
- ಖಾತೆಗಳ ಮರು ಹಂಚಿಕೆ ಸಂದರ್ಭದಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಖಾತೆಗಳೆರಡೂ ಬೇಕೆಂದು ಪಟ್ಟು ಹಿಡಿದು ಮುಖ್ಯಮಂತ್ರಿಗೆ ಮುಜುಗರ ಉಂಟು ಮಾಡಿದ್ದು.
- ಸಚಿವರಾಗಿ ಕೆಲ ಮಹತ್ತ್ವದ ನಿರ್ಧಾರಗಳನ್ನು ಏಕಪಕ್ಷೀಯವಾಗಿ ಕೈಗೊಂಡಿದ್ದು.
- ರಾಜ್ಯ ನಾಯಕರನ್ನು ಬೈಪಾಸ್ ಮಾಡಿ ವರಿಷ್ಠರ ಜತೆ ವ್ಯವಹರಿಸುವುದು.
- ಪಕ್ಷದ ಗಮನಕ್ಕೂ ತರದೆ ಏಕಪಕ್ಷೀಯವಾಗಿ ಮಾಧ್ಯಮಗಳ ವಿರುದ್ಧ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದು.
ಮೂಲತಃ ರಾಮನಗರ ಜಿಲ್ಲೆಯ ಚನ್ನಪಟ್ಟಣದ ಸಿ.ಪಿ.ಯೋಗೀಶ್ವರ್ ಸಹಜವಾಗಿಯೇ ತಮ್ಮ ತವರು ಜಿಲ್ಲೆಯ ಉಸ್ತುವಾರಿಯ ಮೇಲೆ ಕಣ್ಣಿಟ್ಟಿದ್ದರು. ಜಿಲ್ಲೆಯಲ್ಲಿ ಪ್ರಬಲರಾಗಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಕಟ್ಟಿಹಾಕಲು ನನಗೆ ರಾಮನಗರ ಉಸ್ತುವಾರಿಯೇ ಬೇಕು ಎಂದು ಮುಖ್ಯಮಂತ್ರಿಗಳನ್ನು ಕೇಳಿದ್ದರು. ಆದರೆ ಅವರಿಗೆ ಕೋಲಾರ ಸಿಗಲಿದೆ ಎನ್ನಲಾಗಿದೆ. ಎಚ್.ನಾಗೇಶ್ ಅವರನ್ನು ಕೈಬಿಟ್ಟ ನಂತರ ಕೋಲಾರಕ್ಕೆ ಸಂಪುಟದಲ್ಲಿ ಪ್ರಾತಿನಿಧ್ಯವೂ ಇರಲಿಲ್ಲ, ಸಚಿವರ ಉಸ್ತುವಾರಿಯೂ ಇರಲಿಲ್ಲ.
ಕೊನೆಕ್ಷಣದ ಲಾಬಿ!
ನೂತನ ಉಸ್ತುವಾರಿ ಹೊರಬೀಳುವ ಮುನ್ನವೇ ಸಚಿವರು ಸಿಎಂ ಲಾಬಿ ಪ್ರಬಲ ಜಿಲ್ಲೆಗಾಗಿ ಲಾಬಿ ನಡೆಸುತ್ತಿದ್ದಾರೆಂದು ಗೊತ್ತಾಗಿದೆ. ಹಿರಿಯ ಸಚಿವರು ಪ್ರಭಾವೀ ಜಿಲ್ಲೆಗಳಿಗಾಗಿ ಪ್ರಯತ್ನ ಮಾಡುತ್ತಿದ್ದರೆ, ಇನ್ನು ಕೆಲವರು ಅಕ್ಕಪಕ್ಕದ ಜಿಲ್ಲೆಗಳಿಗೆ ಟ್ರೈ ಮಾಡುತ್ತಿದ್ದಾರೆ ಎನ್ನಲಾಗಿದೆ.
Comments 1