- ಶಬರಿಮಲೆ ಅಯ್ಯಪ್ಪ ಭಕ್ತರಿಗೆ ಒಳ್ಳೆಯ ಸುದ್ದಿ. ಭಕ್ತರು ನಿರಾಯಾಸವಾಗಿ ಯಾತ್ರೆ ಕೈಗೊಳ್ಳಲು ಅನುಕೂಲ ಆಗುವಂತೆ ದೇವಸ್ವಂ ಬೋರ್ಡ್ ಉನ್ನತಮಟ್ಟದ ವಿಭಾಗ ರಚಿಸಿದೆ.
ಶಬರಿಮಲೆ: ಕೋವಿಡ್ ನಡುವೆಯೂ ಭಕ್ತರ ಭಾವನೆಗಳಿಗೆ ಹಾಗೂ ಶಬರಿಮಲೆಯ ಆಚಾರಗಳಿಗೆ ಧಕ್ಕೆಯಾಗದಂತೆ ಮಕರವಿಳಕ್ಕು-ಮಂಡಲೋತ್ಸವವನ್ನು ಯಶಸ್ವಿಯಾಗಿ ನಡೆಸಿದ ಟ್ರಾವಂಕೂರು ದೇವಸ್ವಂ ಬೋರ್ಡ್, ಇದೀಗ ಭಕ್ತರ ಅನುಕೂಲಕ್ಕಾಗಿ ಇನ್ನೊಂದು ಮಹತ್ತ್ವದ ಹೆಜ್ಜೆ ಇರಿಸಿದೆ.
ಸ್ವಾಮಿ ಅಯ್ಯಪ್ಪ ಭಕ್ತರು ಶಬರಿಮಲೆಗೆ ತೀರ್ಥಯಾತ್ರೆ ಸುಲಭವಾಗಿ ಕೈಗೊಳ್ಳಲು ಅನುಕೂಲವಾಗುವಂತೆ ಮತ್ತು ಯಾತ್ರಾರ್ಥಿಗಳ ಕುಂದುಕೊರತೆಗಳನ್ನು ಪರಿಶೀಲಿಸಲು ಮತ್ತು ತಕ್ಷಣ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡುವುದಕ್ಕೆ ಟ್ರಾವಂಕೂರು ದೇವಸ್ವಂ ಮಂಡಳಿಯು ಶಬರಿಮಲೆ ದೂರು ಮತ್ತು ಪರಿಹಾರಕ್ಕೆ ಉನ್ನತ ವಿಭಾಗವನ್ನು ತೆರೆದಿದೆ.
ಟ್ರಾವಂಕೂರು ದೇವಸ್ವಂ ಮಂಡಳಿಯ ಅಧ್ಯಕ್ಷರು ಶಬರಿಮಲೆ ದೂರು ಮತ್ತು ಪರಿಹಾರ ವಿಭಾಗದ ಅಧ್ಯಕ್ಷರಾಗಿರುತ್ತಾರೆ. ದೇವಸ್ವಂ ಮಂಡಳಿಯ ಇಬ್ಬರು ಸದಸ್ಯರು ಮತ್ತು ದೇವಸ್ವಂ ಆಯುಕ್ತರು ಈ ಸೆಲ್‌ನ ಸಂಚಾಲಕರು ಆಗಿರುತ್ತಾರೆ. ಈ ವಿಭಾಗವು ಮುಖ್ಯ ಎಂಜಿನಿಯರ್ (ಜನರಲ್), ಪೊಲೀಸ್ ವರಿಷ್ಠಾಧಿಕಾರಿ (ವಿಜಿಲೆನ್ಸ್ ಮತ್ತು ಸೆಕ್ಯುರಿಟಿ) ಮತ್ತು ಶಬರಿಮಲೆಯ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಕೂಡ ಒಳಗೊಂಡಿರುತ್ತದೆ.
ಶಬರಿಮಲೆ ಯಾತ್ರಾರ್ಥಿಗಳಿಗೆ ಆಗಬಹುದಾದ ಅನಾನುಕೂಲಗಳಿಗೆ ಸಂಬಂಧಿಸಿದಂತೆ ಹಲವಾರು ದೂರುಗಳ ಹಿನ್ನೆಲೆಯಲ್ಲಿ ಟ್ರಾವಂಕೂರು ದೇವಸ್ವಂ ಮಂಡಳಿಯು ಸರಕಾರದ ಸೂಚನೆಯ ಮೇರೆಗೆ ಮೇಲ್ಮನವಿ ದೂರುಗಳ ಪರಿಹಾರ ವಿಭಾಗವನ್ನು ಸ್ಥಾಪಿಸಿದೆ.
ಭಕ್ತರ ಕುಂದುಕೊರತೆಗಳನ್ನು ನಿವಾರಿಸಿ ಅವರು ಸುಲಭವಾಗಿ ಯಾತ್ರೆ ಪೂರೈಸುವ ಉದ್ದೇಶದಿಂದ ಈ ಸಮಿತಿ ರಚಿಸಲಾಗಿದೆ. ಕೋವಿಡ್ ನಂತರ ಪರಿಸ್ಥಿತಿಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಈ ಉಪಕ್ರಮವನ್ನು ದೇವಸ್ವಂ ಬೋರ್ಡ್ ಕೈಗೊಂಡಿದೆ.
- ಸುನೀಲ್ ಅರಮಾನೂರ್ / ಸಾರ್ವಜನಿಕ ಸಂಪರ್ಕಾಧಿಕಾರಿ
ಭಕ್ತರು ತಮ್ಮ ದೂರು, ಕುಂದುಕೊರತೆಗಳಿದ್ದಲ್ಲಿ ಅವುಗಳನ್ನು ಬರೆದು [email protected] ಮೂಲಕ ಕಳುಹಿಸಬಹುದು ಅಥವಾ 0471-2723240, 2317983, 2316963, 2310921 ಸಂಖ್ಯೆಗೆ ಕರೆ ಮಾಡಿ ತಿಳಿಸಬಹುದು ಎಂದು ಶಬರಿಮಲೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಸುನೀಲ್ ಅರಮಾನೂರು ಅವರು ಸಿಕೆನ್ಯೂಸ್ ನೌ ಗೆ ತಿಳಿಸಿದ್ದಾರೆ.