ಬೆಂಗಳೂರು: ಸರಕಾರ ಹೇಳುತ್ತಲೇ ಇದೆ, ಜನರು ಮಾತು ಕೇಳುತ್ತಿಲ್ಲ. ಪರಿಣಾಮ ಸರಕಾರ ಮತ್ತಷ್ಟು ಬಿಗಿ ಕ್ರಮಗಳನ್ನು ಕೈಗೊಂಡಿದೆ.
ಕೋವಿಡ್ ನಿಯಂತ್ರಣ ಸರ್ವ ಪ್ರಯತ್ನಗಳನ್ನೂ ಮಾಡುತ್ತಿರುವ ಸರಕಾರ, ಸೋಂಕು ನಿಯಂತ್ರಣಕ್ಕಾಗಿ ಲಸಿಕೆ ಹಾಕುವುದನ್ನು ಚುರುಕುಗೊಳಿಸಲು ನಿರ್ಧರಿಸಿದೆ.
ಮತ್ತೊಂದೆಡೆ, ಆರ್ಥಿಕತೆಗೆ ಪೆಟ್ಟು ಬೀಳದಂತೆ ಎಚ್ಚರ ವಹಿಸಿರುವ ಸರಕಾರ, ಮತ್ತೆ ಲಾಕ್ಡೌನ್, ಸೆಮಿ ಲಾಕ್ಡೌನ್ ಹಾಗೂ ನೈಟ್ ಕರ್ಫ್ಯೂ ವಿಧಿಸದಿರಲು ನಿರ್ಧರಿಸಿದೆ. ಆದರೆ ಚಲನಚಿತ್ರ ಮಂದಿರಗಳಲ್ಲಿ ಶೇ.50ರಷ್ಟು ಮಾತ್ರ ಸೀಟಿಂಗ್ ಆಸನ ವ್ಯವಸ್ಥೆಗೆ ಅವಕಾಶ ನೀಡಲಾಗಿದೆ. ಬೆಂಗಳೂರು ನಗರ ಸೇರಿ ಒಟ್ಟು 8 ಜಿಲ್ಲೆಗಳಲ್ಲಿ ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ಕೊಡಲಾಗಿದೆ.
ಜತೆಗೆ; ಎಲ್ಲ ಜಿಲ್ಲೆಗಳಲ್ಲಿ 6-9ನೇ ತರಗತಿಗಳು ಬಂದ್ ಮಾಡಲಾಗಿದೆ. ಜಿಮ್, ಈಜುಕೊಳ ಮುಚ್ಚುವಂತೆ ಆದೇಶಿಸಲಾಗಿದೆ. ಇನ್ನು; ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳು, ರಾಜಕೀಯ ಸಭೆ, ಪ್ರಚಾರ ಸಭೆಗಳಿಗೆ ಜನ ಸೇರುವಿಕೆಯ ಮೇಲೆ ಮಿತಿ ಹೇರಲಾಗಿದೆ.
ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಈ ಮೇಲಿನ ಸಂಗತಿಗಳನ್ನು ತಿಳಿಸಿದರು. ಅದಕ್ಕೂ ಮೊದಲು ಅವರು ಆರೋಗ್ಯ ಇಲಾಖೆ ಹಾಗೂ ವಿವಿಧ ಇಲಾಖಾಧಿಕಾರಿಗಳ ಜತೆ ಮಹತ್ತ್ವದ ಸಭೆ ನಡೆಸಿದರು.
ಈ ಸಂದರ್ಭದಲ್ಲಿ ಒಂದು ಮಾತನ್ನು ಸ್ಪಷ್ಟವಾಗಿ ಹೇಳಿದ ರವಿಕುಮಾರ್ ಅವರು; “ಎಚ್ಚರ ತಪ್ಪುವುದರಲ್ಲಿ ಅರ್ಥವಿಲ್ಲ. ಎಚ್ಚರ ವಹಿಸಿದರೆ ಅಮೂಲ್ಯ ಜೀವವೂ ಉಳಿಯುತ್ತದೆ. ಜೀವನವೂ ಸಾಗುತ್ತದೆ. ಸೋಂಕು ನಿಯಂತ್ರಣಕ್ಕಾಗಿ ಸರಕಾರ ಜಾರಿ ಮಾಡಿರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದೊಂದೇ ದಾರಿ” ಎಂದರು.
ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆ ಅನುಸಾರ ಎಲ್ಲ ಕ್ರಮಗಳನ್ನು ಕೈಗೊಂಡು ಹೊಸ ನಿಯಮಗಳನ್ನು ಜಾರಿ ಮಾಡಲಾಗಿದೆ. ಕಾಯ್ದೆ ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಲಾಗುವುದು ಅವರು ಎಚ್ಚರಿಕೆ ನೀಡಿದರು
ಉಳಿದಂತೆ ಕೈಗಾರಿಕಾ ಪ್ರದೇಶ ಮತ್ತು ಅಪಾರ್ಟ್‌ಮೆಂಟ್ʼಗಳಲ್ಲಿ ಲಸಿಕೆ ನೀಡಲು ನಿರ್ಧರಿಸಲಾಗಿದೆ. ಮನೆಮನೆಗೂ ತೆರಳಿ ಲಸಿಕೆ ಹಾಕುವ ಸ್ಥಿತಿ ಬರುತ್ತದೆ ಎಂದ ಅವರು; ಕೇಂದ್ರ ಸರಕಾರವು ಮಾಸ್ಕ್, ದೈಹಿಕ ಅಂತರ, ಸ್ಯಾನಿಟೈಸೇಷನ್ ಮತ್ತಿತರೆ ನಿಯಮಗಳ ಪಾಲನೆಗೆ ಬಿಗಿಸೂಚನೆ ನೀಡಿದೆ. ಕೋವಿಡ್ ಮಾರ್ಗಸೂಚಿಯನ್ನು ಪಾಲಿಸದೆ ಅನ್ಯಮಾರ್ಗವಿಲ್ಲ ಎಂದು ರವಿಕುಮಾರ್ ಅವರು ತಿಳಿಸಿದರು.
ಹೊಸ ಮಾರ್ಗಸೂಚಿ
- ರಾಜ್ಯಾದ್ಯಂತ ಜಿಮ್, ಸ್ವಿಮ್ಮಿಂಗ್ ಫೂಲ್ ಸಂಪೂರ್ಣ ಬಂದ್.
- ಸಾರಿಗೆ ಬಸ್ಸುಗಳಲ್ಲಿ ನಿಗದಿತ ಆಸನದ ಮೀತಿ ಮೀರುವಂತಿಲ್ಲ.
- ಎಲ್ಲ ಜಿಲ್ಲೆಗಳಲ್ಲಿ ವಿದ್ಯಾಗಮ ಸೇರಿ ಎಲ್ಲಾ ಶೈಕ್ಷಣಿಕ ಚಟುವಟಿಕೆ ಸ್ಥಗಿತ.
- ೩೦ ಜಿಲ್ಲೆಗಳಲ್ಲಿ 6ರಿಂದ 9ನೇ ತರಗತಿ ನಡೆಯುವುದಿಲ್ಲ.
- ಪ್ರಥಮ, ದ್ವಿತೀಯ ಪಿಯುಸಿ ತರಗತಿಗಳು ಈಗಿರುವಂತೆಯೇ ನಡೆಯುತ್ತವೆ. ಈ ತರಗತಿಗಳಿಗೆ ವೈಯಕ್ತಿಕವಾಗಿ ಹಾಜರಾಗುವುದು ಕಡ್ಡಾಯವಲ್ಲ.
- ಪರೀಕ್ಷಾ ಮಂಡಲೀ, ವಿವಿ ಪರೀಕ್ಷೆಗಳು, ಆರೋಗ್ಯ ವಿಜ್ಞಾನಗಳ ತರಗತಿಗಳನ್ನು ಹೊರತುಪಡಿಸಿ ಉನ್ನತ ಹಾಗೂ ವೃತ್ತಿಪರ ಕೋರ್ಸ್‌ಗಳ ತರಗತಿಗಳ ಸ್ಥಗಿತ
- ಉನ್ನತ ಶಿಕ್ಷಣ, ವೃತ್ತಿಪರ ಕೋರ್ಸ್‌ಗಳ ವಿದ್ಯಾರ್ಥಿ ನಿಲಯಗಳನ್ನು ಬಿಟ್ಟು ಇತರೆ ಬೋರ್ಡಿಂಗ್ ಶಾಲೆಗಳು, ವಸತಿ ನಿಲಯಗಳನ್ನು ಮುಚ್ಚಲು ಸೂಚನೆ.
- ಪ್ರತಿಭಟನಾ ರ್ಯಾಲಿ, ಮುಷ್ಕರಗಳನ್ನು ನಡೆಸುವಂತಿಲ್ಲ ಹಾಗೂ ಧಾರ್ಮಿಕ ಆಚರಣೆ, ಜಾತ್ರೆಗಳಿಗೂ ಅವಕಾಶ ಇಲ್ಲ.
- ಪೂಜಾ ಸ್ಥಳಗಳಲ್ಲಿ ವ್ಯಕ್ತಿಗಳಿಗೆ ಮಾತ್ರ ಅವಕಾಶ, ಪ್ರಾರ್ಥನೆ ಸಲ್ಲಿಸಲು ಮಾತ್ರ ಅನುಮತಿ. ಸಂತೋಷ ಕೂಟಗಳಿಗೆ ನಿರ್ಬಂಧ.
- ಅಪಾರ್ಟ್‌ಮೆಂಟ್, ವಸತಿ ಸಂಕೀರ್ಣಗಳಲ್ಲಿ ಜಿಮ್, ಪಾರ್ಟಿ ಹಾಲ್, ಕ್ಲಬ್ ಹೌಸ್, ಈಜುಕೊಳ ಇತ್ಯಾದಿಗಳ ಕಡ್ಡಾಯ ಬಂದ್.
- ವರ್ಕ್ ಫ್ರಂ ಹೋಂ ಮತ್ತೆ ಶುರು ಮಾಡಲು ಕಚೇರಿಗಳಿಗೆ ಸೂಚನೆ.
- ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಕಲ್ಬುರ್ಗಿ, ದಕ್ಷಿಣ ಕನ್ನಡ, ಉಡುಪಿ, ಬೀದರ್ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಮಾತ್ರ ಥಿಯೇಟರ್‌ಗಳಲ್ಲಿ ಗರಿಷ್ಠ 50%ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ.
- ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಕಲ್ಬುರ್ಗಿ, ದಕ್ಷಿಣ ಕನ್ನಡ, ಉಡುಪಿ, ಬೀದರ್ ಮತ್ತು ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಪಬ್, ಬಾರ್, ಕ್ಲಬ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಗ್ರಾಹಕರ ಸಂಖ್ಯೆ ಶೇ.50 ಮೀರುವಂತಿಲ್ಲ.