ಚಿಕ್ಕಬಳ್ಳಾಪುರದ ಏಕೈಕ ಲಿಂಗಾಯತ ಪೀಠದ ಅಭಿವೃದ್ಧಿಗೆ ಪಟ್ಟಭದ್ರ ರಾಜಕೀಯ, ಅಧಿಕಾರಿಗಳ ಅಡ್ಡಿ; ಜಿಲ್ಲಾಡಳಿತದಿಂದ ನಿರಂತರ ಅನ್ಯಾಯ ಆಗಿದೆ ಎಂದ ನಿಡುಮಾಮಿಡಿ ಶ್ರೀಗಳು
ಚಿಕ್ಕಬಳ್ಳಾಪುರ: ಶತಶತಮಾನಗಳ ಇತಿಹಾಸವುಳ್ಳ, ಸಾಮಾಜಿಕ ಸಾಮರಸ್ಯಕ್ಕೆ ಹೆಸರಾಗಿರುವ ನಿಡುಮಾಮಿಡಿ ಪೀಠದ ಬೆಳವಣಿಗೆಯಾಗದಂತೆ ಕಳೆದ ಮೂರು ದಶಕಗಳಿಂದ ಕೆಲ ರಾಜಕೀಯ ಮತು ಆಧಿಕಾರಶಾಹಿ ಪಟ್ಟಭದ್ರ ಹಿತಾಸಕ್ತಿಗಳು ವ್ಯವಸ್ಥಿತವಾಗಿ ತಡೆಯುತ್ತಿವೆ ಎಂದು ನಿಡುಮಾಮಿಡಿ ಪೀಠಾಧ್ಯಕ್ಷರಾದ ಶ್ರೀ ವೀರಭದ್ರ ಚನ್ನಮಲ್ಲ ದೇಶಿಕೇಂದ್ರ ಮಹಾಸ್ವಾಮೀಜಿ ಅವರು ನೇರ ಆರೋಪ ಮಾಡಿದರು.
ಚಿಕ್ಕಬಳ್ಳಾಪುರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು; “ಮಠದ ಸೇವೆ ಹಾಗೂ ಬೆಳವಣಿಗೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ರಾಜ್ಯ ಸರಕಾರ ಅನೇಕ ಸಲ ಮಠಕ್ಕೆ ನೆರವಿನ ಹಸ್ತ ಚಾಚುತ್ತಿದ್ದರೂ ಈ ಪಟ್ಟಭದ್ರ ಹಿತಾಸಕ್ತಿಗಳು ಅಡ್ಡಿ ಉಂಟು ಮಾಡುತ್ತಿವೆ. ಅವಿಭಜಿತ ಕೋಲಾರ ಜಿಲ್ಲೆಯ ಕಾಲದಿಂದ ಮಾತ್ರವಲ್ಲದೆ ಚಿಕ್ಕಬಳ್ಳಾಪುರ ಪ್ರತ್ಯೇಕ ಜಿಲ್ಲೆಯಾದ ಮೇಲೂ ಈ ಅನ್ಯಾಯ ಮುಂದುವರಿದಿದೆ” ಎಂದರು.
ಅವಿಭಜಿತ ಕೋಲಾರ ಜಿಲ್ಲಾಡಳಿತ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾಡಳಿತದಿಂದಲೂ ಮಠಕ್ಕೆ ಅನ್ಯಾಯವಾಗಿದೆ ಎಂದು ದೂರಿದ ಶ್ರೀಗಳು; ಮೂರು ದಶಕಗಳಿಂದ ಆಗಿರುವ ಅನ್ಯಾಯವನ್ನು ಸರಿಪಡಿಸದಿದ್ದರೆ ನೇರವಾಗಿ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರ ಬಳಿಯೇ ಹೋಗಬೇಕಾಗುತ್ತದೆ ಎಂದು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದರು.
ಮಠಕ್ಕೆ ಆಗತ್ತಿರುವ ಅನ್ಯಾಯಗಳ ಬಗ್ಗೆ ಸ್ವಾಮೀಜಿ ಅವರು ದಾಖಲೆಗಳ ಸಮೇತ ಮಾಹಿತಿ ನೀಡಿದರು. 90 ಪುಟಗಳಷ್ಟು ದಾಖಲೆಗಳನ್ನು ಅವರು ಬಿಡುಗಡೆ ಮಾಡಿದರು.
ಮಠದ ವಿರುದ್ಧ ನಿರಂತರ ಷಡ್ಯಂತ್ರ
ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯ ಪ್ರದೇಶದಲ್ಲಿ ನಿಡುಮಾಮಿಡಿ ಪೀಠವು ಏಕೈಕ ಲಿಂಗಾಯತರ ಮಠವಾಗಿದ್ದು, ದಲಿತ ಪರ ದೋರಣೆ ಹೊಂದಿದೆ. ಇದರಿಂದ ಪ್ರಬಲ ಸಮುದಾಯದ ಕೆಲ ರಾಜಕಾರಣಿಗಳು, ಅಧಿಕಾರಿಗಳಿಗೆ ಈ ಮಠದ ಏಳಿಗೆ ಸಹಿಸಲಾಗುತ್ತಿಲ್ಲ. ಲಿಂಗಾಯತರ ಮಠವೊಂದು ಈ ಪ್ರದೇಶದಲ್ಲಿ ಬೆಳೆಯಬಾರದು ಎಂದು ಕೆಲವರು ಮೊದಲಿನಿಂದಲೂ ಷಡ್ಯಂತ್ರ ಮಾಡುತ್ತಲೇ ಇದ್ದಾರೆ. ಅವಕಾಶ ಸಿಕ್ಕಾಗಲೆಲ್ಲ ತೊಂದರೆ ಮಾಡುತ್ತಿದ್ದಾರೆ ಎಂದು ಸ್ವಾಮೀಜಿ ಅವರು ದೂರಿದರು.
ಮಠವು ಸಾಂಸ್ಥಿಕವಾಗಿ ಬೆಳೆಯದಂತೆ ಮಾಡುವುದು, ಮಠ ನಡೆಸುತ್ತಿರುವ ಶಾಲಾ-ಕಾಲೇಜುಗಳ ಅಭಿವೃದ್ಧಿಗೆ ಅಡ್ಡಿ ಉಂಟು ಮಾಡುವುದು ಮುಂದುವರಿದಿದೆ. ಮಠದ ವಿರುದ್ಧ ದಮನಕಾರಿ ಕೆಲಸ ಮಾಡಲಾಗುತ್ತಿದೆ. ಹಾಗೆಯೇ ಮಠಕ್ಕೆ ನ್ಯಾಯಯುತವಾಗಿ ಸಿಗಬೇಕಾದ ಸೌಲಭ್ಯಗಳ ವಿಷಯದಲ್ಲಿ ಜಿಲ್ಲಾಡಳಿತ ಅನ್ಯಾಯ ಮಾಡುತ್ತಿದೆ ಎಂದು ಶ್ರೀಗಳು ನೋವು ವ್ಯಕ್ತಪಡಿಸಿದರು.
ಮಠವು ಎಲ್ಲ ಸಮುದಾಯಗಳನ್ನು ಒಳಗೊಳ್ಳುವ, ಸಾಮಾಜಿಕ ಸಾಮರಸ್ಯವನ್ನು ಎತ್ತಿಹಿಡಿಯುವ ಉದಾತ್ತ ಧ್ಯೇಯದೊಂದಿಗೆ ಕೆಲಸ ಮಾಡಿಕೊಂಡು ಬಂದಿದೆ. ಯಾರಿಗೂ, ಯಾವ ಸಮುದಾಯಕ್ಕೂ ಹಾನಿ ಉಂಟು ಮಾಡುವಂಥ ಕೆಲಸವನ್ನು ಮಾಡಿಲ್ಲ. ಹೀಗಿದ್ದರೂ ಮಠವನ್ನು ತುಳಿಯುವ ಪ್ರಯತ್ನ ನಡೆಯುತ್ತಿದೆ ಎಂದು ನಿಡುಮಾಮಿಡಿ ಶ್ರೀಗಳು ಬೇಸರ ವ್ಯಕ್ತಪಡಿಸಿದರು.
ಮಠಕ್ಕೆ ಬರುತ್ತಿರುವ ಹಣಕ್ಕೆ ತಡೆಯೊಡ್ಡುವುದು, ಸರಕಾರದಿಂದ ಸೌಲಭ್ಯಗಳು ದೊರೆಯದಂತೆ ಮಾಡುವುದು ನಡೆದಿದೆ. ಅಪ್ರಾಮಾಣಿಕ ಮತ್ತು ಸ್ವಾರ್ಥ ಅಧಿಕಾರಿಶಾಹಿಯಿಂದ ಮಠದ ಸೇವಾ ಕಾರ್ಯಗಳಿಗೆ ತೊಂದರೆ ಆಗುತ್ತಿದೆ. ಶೋಷಿತರ ಪರವಾಗಿ ಹೋರಾಟ ಮಾಡಿದ ಮಠವನೇ ಶೋಷಣೆ ಮಾಡಲಾಗುತ್ತಿದೆ. ಇನ್ನೂ ಈ ದಬ್ಬಾಳಿಕೆಯನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಹೋರಾಟದ ಹಾದಿ ಹಿಡಿಯುತ್ತೇವೆ.
-ಶ್ರೀ ವೀರಭದ್ರ ಚನ್ನಮಲ್ಲ ದೇಶಿಕೇಂದ್ರ ಮಹಾಸ್ವಾಮೀಜಿ
ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಮುಖ್ಯಮಂತ್ರಿಗಳಿಗಿಂತ ದೊಡ್ಡದೆ? ಅವರ ಆದೇಶಕ್ಕೆ ಬೆಲೆ ಇಲ್ಲವೇ? ಕಂದಾಯ ಸಚಿವರು ಕೊಟ್ಟ ಪತ್ರಗಳಿಗೆ ಜಿಲ್ಲಾಡಳಿತ ಕಿಮ್ಮತ್ತು ಕೊಡುತ್ತಿಲ್ಲ ಎಂದರೆ ಹೇಗೆ? ಎಂದು ಪ್ರಶ್ನಿಸಿದ ಸ್ವಾಮೀಜಿ ಅವರು; ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಗೂಳೂರಿನ ವಿದ್ಯಾರ್ಥಿ ನಿಲಯಕ್ಕೆ ಅನುದಾನ ಬಿಡುಗಡೆ ಆಗುತ್ತದೆ. ಆದರೆ, ಆ ಅನುದಾನದ ಒಂದು ಪಾಲನ್ನು ಜಿಲ್ಲಾಧಿಕಾರಿಗ ಕಚೇರಿ ಅನ್ಯ ಉದ್ದೇಶಕ್ಕೆ ಬಳಕೆ ಮಾಡಿಕೊಂಡಿದೆ. ಮಠಕ್ಕೆ ಸೇರಬೇಕಾದ ₹30.57 ಲಕ್ಷವನ್ನು ಜಿಲ್ಲಾಧಿಕಾರಿಗಳು ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಉದ್ದೇಶಕ್ಕೆ ಬಳಸಿ ಮಠಕ್ಕೆ ಅನ್ಯಾಯವೆಸಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಹಿಂದೆ ಮಮ್ತಾಜ್ ಅಲಿ ಖಾನ್ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಅವರು ಮಠದ ಶಾಲೆ ಮತ್ತು ಕಾಲೇಜು ಕಟ್ಟಡಕ್ಕೆ ₹10 ಲಕ್ಷ ನೀಡಿದರೆ ಜಿಲ್ಲಾಡಳಿತ ಆ ಹಣವನ್ನು ಮಠಕ್ಕೆ ಕೊಡಲೇ ಇಲ್ಲ. ಅದನ್ನೂ ಮತ್ತೊಂದು ಉದ್ದೇಶಕ್ಕೆ ಬಳಸ್ತಾರೆ. ಚಿಕ್ಕಬಳ್ಳಾಪುರ 2007ರಲ್ಲಿ ಸ್ವತಂತ್ರ ಜಿಲ್ಲೆಯಾದ ಮೇಲೆ ಮಠಕ್ಕೆ ಸಂಪೂರ್ಣ ಅಸಹಕಾರ, ಅನ್ಯಾಯ ಇನ್ನೂ ಹೆಚ್ಚಾಗಿದೆ. ನಾಲ್ಕೈದು ಇಲಾಖೆಗಳಿಂದ ನಿರಂತರ ಅನ್ಯಾಯ ಆಗುತ್ತಿದೆ. ಈ ನಡುವೆಯೂ ಸುಬೋಧ್ ಯಾದವ್ ಅವರಂಥ ಒಳ್ಳೆಯ ಅಧಿಕಾರಿಗಳಿಂದ ಮಠದ ಸೇವಾ ಕಾರ್ಯಗಳಿಗೆ ಸಹಕಾರ ಸಿಕ್ಕಿದೆ ಎಂದರು ಸ್ವಾಮೀಜಿ ಅವರು.
ಮಠದ ದೇವಗುಲದ ಅರ್ಚಕರಿಗೆ ನೀಡಲಾಗುತ್ತಿದ್ದ ತಹಸೀಲ್ 12 ವರ್ಷದಿಂದ ನಿಂತುಹೋಗಿದೆ. ಮನವಿ ಮಾಡಿ ಮಾಡಿ ಸಾಕಾಗಿ ಹೋಗಿದೆ. ಭೂಮಿಗಾಗಿ ಒಂದೂವರೆ ದಶಕದಿಂದ ಮನವಿ ಮಾಡುತ್ತಿದ್ದೇವೆ. ಆ ಕೆಲಸವನ್ನೂ ಜಿಲ್ಲಾಡಳಿತ ಮಾಡಿಕೊಟ್ಟಿಲ್ಲ. ನಮ್ಮದೇ ಬಿ ಖರಾಬ್ ಭೂಮಿಯನ್ನು ನಮಗೆ ಮಾಡಿಕೊಡಲು ಮೀನಾ-ಮೇಷ ಎಣಿಸುತ್ತಿದೆ. ಅತ್ಯಂತ ಪ್ರಾಚೀನವಾದ ಮಠವನ್ನು ಜಿಲ್ಲಾಡಳಿತ ನಡೆಸಿಕೊಳ್ಳುವ ರೀತಿ ಇದಲ್ಲ ಎಂದು ಶ್ರೀಗಳು ನೊಂದು ಹೇಳಿದರು.
28 ವರ್ಷಗಳಿಂದ ಮಠಕ್ಕೆ ವರ್ಷಾಸನವನ್ನು ನಿಗದಿ ಮಾಡಿ ಎಂದು ಕೇಳುತ್ತಲೇ ಇದ್ದೇವೆ. ಆದರೂ ಮಾಡಿಲ್ಲವೆಂದರೆ ಈ ಜಿಲ್ಲಾಡಳಿತಕ್ಕೆ ಮಠದ ಬಗ್ಗೆ ಅದೆಷ್ಟು ಪೂರ್ವಗ್ರಹ ಇರಬೇಕು ಎಂದ ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಠದ ಧರ್ಮದರ್ಶಿಗಳು ಕೂಡ ಹಾಜರಿದ್ದರು.