- ಲಸಿಕೆ ಪಡೆದಾಕ್ಷಣ ಸೋಂಕು ಬರುವುದೇ ಇಲ್ಲ ಎಂದಲ್ಲ. ಲಸಿಕೆ ಪಡೆದರೆ ರೋಗ ಬಂದಾಗ ತೀವ್ರತೆ ಇರುವುದಿಲ್ಲ. ಅನೇಕರು ಲಸಿಕೆ ಪಡೆದು ಮನೆಯಲ್ಲಿ ಆರಾಮವಾಗಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ಈವರೆಗೆ 48.05 ಲಕ್ಷ ಜನರಿಗೆ ಕೋವಿಡ್ ಲಸಿಕೆ ನೀಡಿದ್ದು, ಕರ್ನಾಟಕ 6ನೇ ಸ್ಥಾನದಲ್ಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, 48.05 ಲಕ್ಷ ಜನರಿಗೆ ಸೋಮವಾರದವರೆಗೆ ಕೋವಿಡ್ ಲಸಿಕೆ ನೀಡಲಾಗಿದೆ. ಸೋಮವಾರ ಒಂದೇ ದಿನ 1,95,554 ಜನರಿಗೆ ನೀಡಲಾಗಿದೆ. 60 ವರ್ಷ ಮೇಲ್ಪಟ್ಟ ಇಪ್ಪತ್ತೆರಡೂವರೆ ಲಕ್ಷ ಜನರಿಗೆ ಲಸಿಕೆ ನೀಡಲಾಗಿದೆ. 45-59 ವರ್ಷ ವಯಸ್ಸಿನ 10.4 ಲಕ್ಷ ಜನರಿಗೆ ಲಸಿಕೆ ನೀಡಲಾಗಿದೆ. ದೇಶದಲ್ಲಿ ಲಸಿಕೆ ನೀಡಿಕೆಯಲ್ಲಿ ಕರ್ನಾಟಕ 6ನೇ ಸ್ಥಾನದಲ್ಲಿದೆ. ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳದ ನಂತರದ ಸ್ಥಾನದಲ್ಲಿ ನಾವಿದ್ದೇವೆ. ಕೇಂದ್ರ ಸರ್ಕಾರ ನಮ್ಮ ಮನವಿ ಸ್ಪಂದಿಸಿ 15 ಲಕ್ಷ ಡೋಸ್ ಲಸಿಕೆಯನ್ನು ಕಳುಹಿಸಿಕೊಟ್ಟಿದೆ ಎಂದರು.
ದೇಶದಲ್ಲಿ 1 ಲಕ್ಷಕ್ಕೂ ಹೆಚ್ಚು ಸೋಂಕಿತರು ಒಂದೇ ದಿನ ಪತ್ತೆಯಾಗಿದ್ದಾರೆ. ರಾಜ್ಯದಲ್ಲಿ ಸಾವಿನ ಸಂಖ್ಯೆಯೂ ಹೆಚ್ಚುತ್ತಿದ್ದು, ಸೋಮವಾರ ಒಂದೇ ದಿನ 32 ಸಾವಾಗಿದೆ. ಮಧ್ಯವಯಸ್ಕರು, 25 ವರ್ಷದ ಯುವಜನರು ಸಾವಿಗೀಡಾಗಿರುವುದು ಆತಂಕ ಉಂಟು ಮಾಡಿದೆ. ಈ ಹಿನ್ನಲೆಯಲ್ಲಿ ಸಾವಿನ ಆಡಿಟ್ ಮಾಡಬೇಕೆಂದು ತಾಂತ್ರಿಕ ಸಲಹಾ ಸಮಿತಿಗೆ ಸೂಚಿಸಲಾಗಿದೆ. ಮೊದಲ ಅಲೆಗೆ ಹೋಲಿಸಿದರೆ ಎರಡನೇ ಅಲೆ ಬೇಗ ಹರಡುತ್ತಿದೆ. ಇದರ ತೀವ್ರತೆ ಕಡಿಮೆ ಇದೆಯೋ ಅಥವಾ ಹೆಚ್ಚಿದೆಯೋ ಎಂದು ಹೇಳಲು ಈಗಲೇ ಸಾಧ್ಯವಿಲ್ಲ. ಆದರೆ ಅದನ್ನು ಎದುರಿಸಲು ಬೇಕಾದ ಸಿದ್ಧತೆಗಳನ್ನು ಮಾಡಲಾಗಿದೆ ಎಂದರು ಡಾ.ಸುಧಾಕರ್.
ರಾಜ್ಯಾದ್ಯಂತ 33,697 ಹಾಸಿಗೆಗಳನ್ನು ಕೋವಿಡ್ ಚಿಕಿತ್ಸೆಗಾಗಿ ಸಿದ್ಧಪಡಿಸಲಾಗಿದೆ. ಸರಕಾರಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಸಹಿತ ಹಾಸಿಗೆಗಳ ಸಂಖ್ಯೆ 15,733 ಇದೆ. ಈ ಪೈಕಿ 10,083 ಹಾಸಿಗೆಗಳನ್ನು ಕೋವಿಡ್ʼಗೆ ಮೀಸಲಿಡಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ 20% ಹಾಸಿಗೆ ಮೀಸಲಿಡಲು ಸೂಚಿಸಲಾಗಿದೆ. ಕೋವಿಡ್ ಪ್ರಕರಣ ಹೆಚ್ಚಿದರೆ ಮತ್ತಷ್ಟು ಹಾಸಿಗೆ ಮೀಸಲಿಡಬೇಕಾಗುತ್ತದೆ. ಕೋವಿಡ್ʼಯೇತರ ಚಿಕಿತ್ಸೆಗಳು ಕೂಡ ಮುಖ್ಯವಾಗಿದೆ. ಆದ್ದರಿಂದ ಜನರು ಹೆಚ್ಚು ಎಚ್ಚರ ವಹಿಸಬೇಕು ಎಂದು ಅವರು ಮನವಿ ಮಾಡಿದರು.
ಚಿತ್ರಮಂದಿರಗಳಲ್ಲಿ ಸಂಪೂರ್ಣ ಸೀಟು ಭರ್ತಿಯನ್ನು ಮುಂದುವರಿಸಬೇಕೆಂಬ ಮನವಿಗಳು ಬಂದಿವೆ. ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸರಕಾರದ ನಿರ್ಧಾರವನ್ನು ತಿಳಿಸಲಾಗುವುದು ಎಂದು ನಿರ್ಮಾಪಕರ ಸಂಘದ ನಿಯೋಗಕ್ಕೆ ಹೇಳಿದ್ದೇನೆ. ತಾಂತ್ರಿಕ ಸಲಹಾ ಸಮಿತಿಯವರು ಚಿತ್ರಮಂದಿರ, ಶಾಲೆ, ಕಲ್ಯಾಣ ಮಂಟಪ, ಬಸ್ ಪ್ರಯಾಣ ಸೇರಿ ಪ್ರತಿಯೊಂದು ಚಟುವಟಿಕೆಗಳಲ್ಲೂ ನಡವಳಿಕೆ ಹೇಗಿರಬೇಕೆಂದು 20 ದಿನಗಳ ಹಿಂದೆಯೇ ವರದಿ ನೀಡಿದ್ದರು. ಮುಖ್ಯಮಂತ್ರಿಗಳು ಎಲ್ಲರೊಂದಿಗೆ ಚರ್ಚಿಸಿ ಮಾರ್ಗಸೂಚಿಗಳನ್ನು ಪ್ರಕಟಿಸುತ್ತಾರೆ. ಇದೇ ರೀತಿ ಈ ಪ್ರಕ್ರಿಯೆ ಕೂಡ ನಡೆಯುತ್ತದೆ. ಇದಕ್ಕೆ ನಾವು ಸಲಹೆ ನೀಡಬಹುದು. ಪಕ್ಕದ ಮಹಾರಾಷ್ಟ್ರದಲ್ಲಿ ಲಾಕ್ಡೌನ್ ಆಗಿದೆ. ಅಂತಹ ಪರಿಸ್ಥಿತಿ ನಮ್ಮ ರಾಜ್ಯಕ್ಕೆ ಬರುವುದು ಬೇಡ. ಎಲ್ಲರೂ ಕೋವಿಡ್ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು ಎಂದು ಸಚಿವರು ಮನವಿ ಮಾಡಿದರು.
ಸೋಂಕು ಬರುವುದೇ ಇಲ್ಲ ಎಂದಲ್ಲ
ಲಸಿಕೆ ಪಡೆದಾಕ್ಷಣ ಸೋಂಕು ಬರುವುದೇ ಇಲ್ಲ ಎಂದಲ್ಲ. ಲಸಿಕೆ ಪಡೆದರೆ ರೋಗ ಬಂದಾಗ ತೀವ್ರತೆ ಇರುವುದಿಲ್ಲ. ಅನೇಕರು ಲಸಿಕೆ ಪಡೆದು ಮನೆಯಲ್ಲಿ ಆರಾಮವಾಗಿದ್ದಾರೆ. ಇನ್ನೂ ಕೆಲವರು ಲಸಿಕೆ ಪಡೆಯದೆಯೇ ನಂತರ ಕೊರೊನಾ ಬಂದು ಐಸಿಯುಗೆ ದಾಖಲಾಗಿರುವ ನಿದರ್ಶನಗಳಿವೆ. ಲಸಿಕೆ ತೆಗೆದುಕೊಂಡರೆ ಎಷ್ಟು ಅನುಕೂಲ ಎಂಬುದಕ್ಕೆ ಉದಾಹರಣೆ ನಮ್ಮ ಕಣ್ಣ ಮುಂದೆಯೇ ಇದೆ. ಆದ್ದರಿಂದ ಲಸಿಕೆ ಕಡ್ಡಾಯವಾಗಿ ಪಡೆಯಿರಿ ಎಂದು ಮನವಿ ಮಾಡಲಾಗುತ್ತಿದೆ ಎಂದರು ಅವರು.
ಆರೋಗ್ಯ ಸಿಬ್ಬಂದಿ ಸಮಾಜಕ್ಕೆ ಮಾದರಿಯಾಗುವ ನಿಟ್ಟಿನಲ್ಲಿ ಲಸಿಕೆ ಪಡೆಯಬೇಕು. ಆರೋಗ್ಯ ಸಿಬ್ಬಂದಿಯೇ ಲಸಿಕೆ ಪಡೆಯದೇ ಇದ್ದಲ್ಲಿ ಜನರಿಗೆ ಹೇಳಲು ಸಾಧ್ಯವಾಗುವುದಿಲ್ಲ ಎಂದೂ ಸಚಿವ ಸುಧಾಕರ್ ಅಭಿಪ್ರಾಯಪಟ್ಟರು.