Ra Na Gopala Reddy Bagepalli
ಬಾಗೇಪಲ್ಲಿ: ಆರನೇ ವೇತನ ಆಯೋಗದ ಶಿಫಾರಸು ಜಾರಿಗೆ ಒತ್ತಾಯಿಸಿ ರಾಜ್ಯ ಸಾರಿಗೆ ನೌಕರರು ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದು, ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.
ಮುಷ್ಕರದ ಹಿನ್ನೆಲೆಯಲ್ಲಿ ಯಾವೊಬ್ಬ ಸಿಬ್ಬಂದಿಯೂ ಕರ್ತವ್ಯಕ್ಕೆ ಹಾಜರಾಗಲಿಲ್ಲ. ಇದರಿಂದಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಬಹುತೇಕ ಎಲ್ಲಾ ಕಡೆ ಬಸ್ ಸಂಚಾರ ಸಂಪೂರ್ಣ ಬಂದ್ ಆಗಿದೆ. ಬಾಗೇಪಲ್ಲಿ ತಾಲ್ಲೂಕಿನಲ್ಲಿ ಕೂಡ ಕೆಂಪು ಬಸ್‌ಗಳ ಸಂಚಾರ ನಿಂತುಹೋಗಿದೆ. ಇನ್ನು; ಮುಷ್ಕರದ ಮಾಹಿತಿ ಇದ್ದುದರಿಂದ ಪಟ್ಟಣದ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಇದ್ದುದು ಕಂಡು ಬಂದಿತು.
ಪಿಎಸ್ಎಸ್, ರೈತ ಸಂಘಟನೆಗಳ ಬೆಂಬಲ
ಸಾರಿಗೆ ನೌಕರರು ಕರೆ ನೀಡಿರುವ ಮುಷ್ಕರಕ್ಕೆ ಮಾಜಿ ಶಾಸಕ ಹಾಗೂ ಪ್ರಜಾ ಸಂಘರ್ಷ ಸಮಿತಿ (ಪಿಎಸ್ಎಸ್) ಜಿಲ್ಲಾ ಸಂಚಾಲಕ ಜಿ.ವಿ.ಶ್ರೀರಾಮ ರೆಡ್ಡಿ ನೇತೃತ್ವದಲ್ಲಿ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತಸೇನೆ ಸಂಘಟನೆಗಳು ಸಂಪೂರ್ಣ ಬೆಂಬಲ ಸೂಚಿಸಿವೆ.
ಈ ಸಂದರ್ಭದಲ್ಲಿ ಮಾತನಾಡಿದ ಜಿ.ವಿ.ಶ್ರೀರಾಮರೆಡ್ಡಿ; ಸಾರಿಗೆ ನೌಕರರ ಬೇಡಿಕೆಗಳು ನ್ಯಾಯಸಮ್ಮತವಾಗಿದ್ದು ಅವುಗಳನ್ನು ಈಡೇರಿಸಲು ಸರಕಾರ ಮೀನಾಮೇಷ ಎಣಿಸುವುದು ಸರಿಯಲ್ಲ. ಚುನಾವಣಾ ನೀತಿ ಸಂಹಿತೆಯ ನೆಪ ಹೇಳದೆ ಕೂಡಲೇ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯ ಮಾಡಿದರು.
ಖಾಸಗಿ ವಾಹನಗಳ ಮೊರೆ ಹೋದ ಪ್ರಯಾಣಿಕರು
ಬಸ್ ನಿಲ್ದಾಣಗಳಿಗೆ ಬೇರೆ ಊರುಗಳಿಂದ ಬಂದ ಪ್ರಯಾಣಿಕರು ತಮ್ಮ ಊರುಗಳಿಗೆ ತೆರಳಲು ಖಾಸಗಿ ವಾಹನಗಳನ್ನೇ ಅವಲಂಬಿಸಬೇಕಾಯಿತು. ಬಾಗೇಪಲ್ಲಿ, ಗುಡಿಬಂಡೆ, ಚಿಂತಾಮಣಿ, ಚಿಕ್ಕಬಳ್ಳಾಪುರ, ಪಾತಪಾಳ್ಯ ಸೇರಿದಂತೆ ವಿವಿಧ ಕಡೆಯ ಪ್ರಯಾಣಿಕರು ಖಾಸಗಿ ಬಸ್, ಆಟೋ, ವಾಹನಗಳ ಮೊರೆ ಹೋದರು.
ಸರಕಾರಿ ಬಸ್ ಸಂಚಾರ ಇಲ್ಲದ ಹಿನ್ನೆಲೆಯಲ್ಲಿ ಹಲವೆಡೆ ಪ್ರಯಾಣಿಕರು ಪರದಾಡುತ್ತಿರುವ ದೃಶ್ಯ ಕಂಡು ಬಂದಿದೆ. ಕೆಲವರು ಊರಿಗೆ ತೆರಳಲು ಸಾಧ್ಯವಾಗದೆ ಪರಿತಪಿಸುತ್ತಿದ್ದರು. ಬೇರೆ ಊರುಗಳಿಂದ ಬಂದ ಪ್ರಯಾಣಿಕರು ಊರಿಗೆ ತೆರಳಲು ಖಾಸಗಿ ವಾಹನಗಳನ್ನೇ ಅವಲಂಬಿಸುತ್ತಿದ್ದರು.
ಜತೆಗೆ, ನೆರೆಯ ಆಂಧ್ರ ಪ್ರದೇಶದ ಕೆಲ ಬಸ್ ಸಂಚಾರ ಮಾಡಿದ್ದರಿಂದ ಗಡಿಗೆ ಹೊಂದಿಕೊಂಡಿದ್ದ ಆಂಧ್ರ ಪ್ರಯಾಣಿಕರಿಗೆ ಕಷ್ಟವಾಗಲಿಲ್ಲ.
ಈ ನಡುವೆ ತಾಲ್ಲೂಕಿನ ಯಾವ ಭಾಗದಲ್ಲೂ ಅಹಿತಕರ ಘಟನೆಗಳು ಜರುಗದಂತೆ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಅಹಿತಕರ ಘಟನೆಗಳಿಗೆ ಮುಂದಾಗುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆಯೂ ಪೊಲೀಸ್ ಇಲಾಖೆಗೆ ಜಿಲ್ಲಾಡಳಿತ ಆದೇಶ ನೀಡಿತ್ತು.