ಕೋವಿಡ್ ಎರಡನೇ ಅಲೆ ಬಗ್ಗೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿರುವ ರಾಜ್ಯ ಸರಕಾರ, ಮುಂಬರುವ ಯುಗಾದಿ ಹಾಗೂ ರಂಜಾನ್ ವೇಳೆ ಮಾರ್ಗಸೂಚಿಯಲ್ಲಿ ಯಾವುದೇ ಬದಲಾವಣೆ ಮಾಡಲ್ಲ ಎಂದು ಖಂಡತುಂಡವಾಗಿ ಹೇಳಿದೆ.
ಬೆಂಗಳೂರು: ಎರಡನೇ ಅಲೆ ತೀವ್ತವಾಗಿ ವ್ಯಾಪಿಸುತ್ತಿರುವುದರಿಂದ ಯುಗಾದಿ ಹಬ್ಬಕ್ಕಾಗಲಿ ಇಲ್ಲವೇ ರಂಜಾನ್ ಆಚರಣೆಗಾಗಲಿ ಇಲ್ಲವೇ ಇನ್ನಾವುದೇ ಕಾರಣಕ್ಕಾಗಿ ಆಗಲಿ ಕೋವಿಡ್ ಮಾರ್ಗಸೂಚಿಯಲ್ಲಿ ಬದಲಾವಣೆ ಮಾಡುವುದಿಲ್ಲ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು; ಮಾರ್ಗಸೂಚಿಯಲ್ಲಿ ಯಾವ ,ಯಾವುದೇ ವಿನಾಯಿತಿಯನ್ನೂ ಕೊಡಲು ಸಾಧ್ಯವಿಲ್ಲ ಎಂದರು.
ದಿನದಿಂದ ದಿನಕ್ಕೆ ಆತಂಕದ ಪರಿಸ್ಥಿತಿ ಸೃಷ್ಟಿಯಾಗುತ್ತಿದೆ. ಕಳೆದ ಬುಧವಾರ ಒಂದೇ ದಿನ ಬೆಂಗಳೂರಿನಲ್ಲಿ 5,೦೦೦ ಸೇರಿ ರಾಜ್ಯದಲ್ಲಿ ಒಟ್ಟು 7,೦೦೦ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದವು. ಬಿಬಿಎಂಪಿ ಆಯುಕ್ತರು, ನಗರಾಡಳಿತ ತಜ್ಞರ ಜತೆ ಸಭೆ ಮಾಡುತ್ತೇನೆ. ಬಿಬಿಎಂಪಿಯಿಂದ ಕೋವಿಡ್ʼಗಾಗಿ ಎಂಟು ವಲಯಗಳನ್ನು ರಚನೆ ಮಾಡಿದ್ದು, ಸಚಿವರನ್ನು ನೇಮಿಸಿ ಎಲ್ಲರನ್ನೊಳಗೊಂಡ ನಿಯೋಗ ಮಾಡಿದ್ದಾರೆ. ಸೋಂಕು ನಿಯಂತ್ರಣಕ್ಕೆ ಆಡಳಿತಾತ್ಮಕವಾಗಿ ಯಾವ ಕ್ರಮಕೈಗೊಳ್ಳಬೇಕು ಅದೆಲ್ಲವನ್ನು ಚರ್ಚಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸುತ್ತಿದ್ದು, ಸಭೆಯ ವೇಳೆ ಎಲ್ಲಾ ರಾಜ್ಯಗಳ ಸ್ಥಿತಿಗತಿಗಳ ಕುರಿತು ಮಾಹಿತಿ ಪಡೆಯಲಿದ್ದಾರೆ ಎಂದ ಅವರು; ಬುಧವಾರ 50 ಲಕ್ಷಕ್ಕೂ ಹೆಚ್ಚು ಜನರಿಗೆ ಲಸಿಕೆಯನ್ನು ನೀಡಲಾಗಿದೆ. ರಾಜ್ಯದ 13 ಜಿಲ್ಲೆಗಳಲ್ಲಿ ಕೊರೋನಾ ಏರುತ್ತಲೇ ಇದೆ. ಈ ಜಿಲ್ಲೆಗಳಿಗೆ ನಿರ್ದಿಷ್ಟ ಮಾರ್ಗಸೂಚಿಗಳನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಬುಧವಾರ ಒಂದೇ 7,000 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಬೆಂಗಳೂರು ನಗರ ಒಂದರಲ್ಲೇ 4,991 ಪ್ರಕರಣ ಪತ್ತೆಯಾಗಿದೆ. ಬೆಂಗಳೂರಿನಲ್ಲಿ ಸೋಂಕು ನಿಯಂತ್ರಿಸಲು ಮುಖ್ಯಮಂತ್ರಿಗಳು 8 ವಲಯಗಳನ್ನು ರಚಿಸಲಾಗಿದ್ದು, ಸಚಿವರಿಗೆ ಸೋಂಕು ನಿಯಂತ್ರಿಸುವ ಹೊಣೆಯನ್ನೂ ನೀಡಲಾಗಿದೆ. ಯಾವುದೇ ಹಬ್ಬಕ್ಕೂ ರಿಯಾಯಿತಿ ನೀಡುವುದಿಲ್ಲ. ಪ್ರತೀಯೊಬ್ಬರು ಎಚ್ಚರಿಕೆಯಿಂದ ಇರಬೇಕು ಎಂದಿದ್ದಾರೆ.