ರಾಜ್ಯ ಸಾರಿಗೆ ನೌಕರರ ಮುಷ್ಕರ 2ನೇ ದಿನವೂ ನಿಲ್ಲಲಿಲ್ಲ. ಸರಕಾರ ಬೇಡಿಕೆಗಳಿಗೆ ಮಣಿದಿಲ್ಲ, ನೌಕರರು ಹಠ ಬಿಡುತ್ತಿಲ್ಲ I ದಿನಕ್ಕೆ 20 ಕೋಟಿಗೂ ಹೆಚ್ಚು ನಷ್ಟ
ಬೆಂಗಳೂರು: ನೌಕರರು ನಡೆಸುತ್ತಿರುವ ಮುಷ್ಕರದಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಒಂದು ದಿನಕ್ಕೆ 20 ಕೋಟಿಗೂ ಹೆಚ್ಚು ನಷ್ಟ ಆಗುತ್ತಿದೆ ಎಂದು ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಂಜುಂ ಪರ್ವೇಜ್ ಹೇಳಿದರು.
ಬೆಂಗಳೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು; ಸಾರ್ವಜನಿಕರಿಗೆ ತುಂಬಾ ಕಷ್ಟವಾಗುತ್ತಿದೆ. ಮುಷ್ಕರವನ್ನು ನಿಲ್ಲಿಸಿ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಲು ಮುಂದಾಗಬೇಕೆಂದು ಅವರು ಮನವಿ ಮಾಡಿಕೊಂಡರು.
ರಾಜ್ಯದ ಸಾರಿಗೆ ಸಂಸ್ಥೆಯನ್ನು ದೇಶದ ಮಟ್ಟದಲ್ಲಿ ಅತ್ಯುತ್ತಮ ಸಂಸ್ಥೆಯಾಗಿ ಕಟ್ಟಿ ಬೆಳೆಸಿದ ಸಾರಿಗೆ ಸಂಸ್ಥೆಯ ನೌಕರರು ಇಂದು ಕೆಲವು ಕಾರಣಗಳಿಗಾಗಿ ಮುಷ್ಕರವನ್ನು ನಡೆಸುತ್ತಿದ್ದಾರೆ. ಇದು ಕಾರ್ಮಿಕರದ್ದೇ ಸಂಸ್ಥೆ. ಮುಷ್ಕರದಿಂದ ಎಲ್ಲರಿಗೂ ತೊಂದರೆಯಾಗುತ್ತಿದೆ ಎಂಬುದನ್ನು ಮರೆಯಬಾರದು ಎಂದು ಅವರು ಹೇಳಿದರು.
6ನೇ ವೇತನ ಆಯೋಗದ ವೇತನ ಕಷ್ಟ
ನೌಕರರ ಮುಷ್ಕರದಿಂದ ಸಂಸ್ಥೆಗೆ ಒಂದು ದಿನಕ್ಕೆ 20 ಕೋಟಿ ರೂ. ನಷ್ಟವಾಗುತ್ತಿದ್ದು, ಇದರಿಂದ ಯಾರಿಗೂ ಲಾಭವಿಲ್ಲ, ಸಂಘಟನೆಗಳು ಸಲ್ಲಿಸಿದ್ದ ಎಲ್ಲಾ ಬೇಡಿಕೆಗಳನ್ನು ಈಡೇರಿಸಲಾಗಿದ್ದು, ಕಾನೂನಾತ್ಮಕವಾಗಿ ಇರುವ ತೊಡಕುಗಳಿಂದ ಸಂಸ್ಥೆಯ ನೌಕರರನ್ನು ಸರ್ಕಾರಿ ಸಂಸ್ಥೆಯ ನೌಕರರನ್ನಾಗಿ ಪರಿಗಣಿಸಲು ಸಾಧ್ಯವಿಲ್ಲ ಮತ್ತು 6ನೇ ವೇತನ ಆಯೋಗದ ರೀತಿ ಸಂಬಳ ಸವಲತ್ತುಗಳನ್ನು ಜಾರಿಗೆ ತರಲು ಸಾಧ್ಯವಿಲ್ಲ. ಆದರೆ, ನಾಲ್ಕು ವರ್ಷಗಳಿಗೊಮ್ಮೆ ಜರುಗುವ ವೇತನ ಪರಿಷ್ಕರಣೆಯಲ್ಲಿ ಉತ್ತಮವಾಗಿ ಸಂಬಳ ಮತ್ತು ಸವಲತ್ತುಗಳನ್ನು ನೀಡಲು ಕ್ರಮಕೈಗೊಳ್ಳಲಾಗುವುದು, ಮುಷ್ಕರವನ್ನು ನಿಲ್ಲಿಸಿ ಮಾತುಕತೆಗೆ ಬನ್ನಿ ಎಂದು ಅವರು ಕರೆ ನೀಡಿದರು.
ಸಾರ್ವಜನಿಕರಿಗೆ ತೊಂದರೆಯಾಗದಂತೆ ಈಗಾಗಲೇ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ, ಖಾಸಗಿ ವಾಹನ ಸಂಘ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಿ ವಾಹನಗಳಿಗೆ ತಾತ್ಕಾಲಿಕ ಪರ್ಮೀಟ್‍ಗಳನ್ನು ನೀಡಲಾಗುತ್ತಿದೆ, ರೈಲ್ವೇ ಇಲಾಖೆ ಹಾಗೂ ಬೆಂಗಳೂರಿನ ಮೆಟ್ರೋ ಸಂಸ್ಥೆಗಳು ಸಹ ಹೆಚ್ಚಿನ ರೈಲುಗಳನ್ನು ಓಡಿಸಲು ಕ್ರಮ ಕೈಗೊಂಡಿವೆ. ಮುಷ್ಕರವನ್ನು ಆದಷ್ಟು ಬೇಗ ಮುಗಿಸಲು ಮಾತುಕತೆಯ ಮೂಲಕ ಶ್ರಮಿಸಲಾಗುವುದು ಎಂದು ಅಂಜುಂ ಪರ್ವೇಜ್ ತಿಳಿಸಿದರು.
ರಾಜ್ಯದ ಸಾರಿಗೆ ಸಂಸ್ಥೆಯ ನಾಲ್ಕು ವಿಭಾಗಗಳಿಂದ ಒಟ್ಟು 20000 ಹಾಗೂ ಬಿ.ಎಮ್.ಟಿ.ಸಿ ಯಿಂದ 6000 ಬಸ್ಸುಗಳು ಸೇರಿ ರಾಜ್ಯದಲ್ಲಿ ಒಟ್ಟು 26000 ಬಸ್ಸುಗಳು ಸಂಚರಿಸುತ್ತಿದ್ದವು, ಇದನ್ನು ಸರಿದೂಗಿಸಲು 18000 ಖಾಸಗಿ ವಾಹನಗಳಿಗೆ ಪರ್ಮೀಟ್ ಸರೆಂಡರ್ ರದ್ದು ಪಡಿಸಿ ವಾಹನ ಊಡಿಸಲು ಅನುಮತಿ ನೀಡಲಾಗಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕೆಎಸ್ಆರ್‌ಟಿಸಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶಿವಾನಂದ್ ಕಳಸದ್, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಶಿಖಾ ಮುಂತಾದ ಅಧಿಕಾರಿಗಳು ಉಪಸ್ಥಿತರಿದ್ದರು.