ಮೇ 16ರಂದು ಒಕ್ಕಲಿಗರ ಸಂಘದ ಚುನಾವಣೆ; ಗುರುವಾರ ತಮ್ಮ ಸಿಂಡಿಕೇಟ್‌ನ ಅಭ್ಯರ್ಥಿಗಳನ್ನು ಘೋಷಿಸಲಿರುವ ಸಚಿವರು
ಚಿಕ್ಕಬಳ್ಳಾಪುರ: ಒಕ್ಕಲಿಗ ಸಮುದಾಯ ರಾಜಕೀಯವಾಗಿ ಪ್ರಬಲವಾಗಿದ್ದರೂ ಒಕ್ಕಲಿಗರ ಸಂಘ ಮಾತ್ರ ಬಲಿಷ್ಠವಾಗಿಲ್ಲ, ಯಾಕೆ? ಇಡೀ ಸಮಾಜಕ್ಕೆ ಆದರ್ಶಪ್ರಾಯವಾಗಬೇಕಾದ ಸಮುದಾಯದಲ್ಲಿರುವ ಹೊಟ್ಟೆಕಿಚ್ಚು, ಅಸೂಯೆಗೆ ಕೊನೆ ಎಂದು? ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಖಾರವಾಗಿ ಪ್ರಶ್ನಿಸಿದ್ದಾರೆ.
ಒಕ್ಕಲಿಗರ ಸಂಘದ ನಿರ್ದೇಶಕ ಸ್ಥಾನಗಳಿಗೆ ಮೇ 16ರಂದು ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅವಿಭಜಿತ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪೂರ್ವಭಾವಿ ಸಭೆ ಚಿಕ್ಕಬಳ್ಳಾಪುರದಲ್ಲಿ ಸೋಮವಾರ ನಡೆಯಿತು.
ಈ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವರು; “80 ಲಕ್ಷ ಜನಸಂಖ್ಯೆ ಹೊಂದಿರುವ ಒಕ್ಕಲಿಗ ಸಮುದಾಯ ರಾಜಕೀಯವಾಗಿ ಪ್ರಬಲವಾಗಿದೆ, ನಿಜ. ಆದರೆ, ಸಮುದಾಯದ ಬಹುಸಂಖ್ಯಾತ ಜನರು ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ಬಹಳ ಹಿಂದುಳಿದಿದ್ದಾರೆ. ಸಂಘಟನೆಯಲ್ಲೂ ಸಮದಾಯ ಹಿಂದುಳಿದಿದೆ. ದುರ್ಬಲರನ್ನು ಮೇಲೆತ್ತುವ ಕೆಲಸವನ್ನು ಮಾಡುವ ಕೆಲಸ ಆಗುತ್ತಿಲ್ಲ. ಒಬ್ಬರ ಮಾತನ್ನು ಇನ್ನೊಬ್ಬರು ಕೇಳುತ್ತಿಲ್ಲ, ಒಬ್ಬರ ಪ್ರಗತಿಯನ್ನು ಇನ್ನೊಬ್ಬರು ಸಹಿಸುತ್ತಿಲ್ಲ. ಇನ್ನೆಷ್ಟು ವರ್ಷ ಈ ಹೊಟ್ಟೆಕಿಚ್ಚು? ಯಾರೋ ಒಬ್ಬರನ್ನು ನಮ್ಮ ನಾಯಕರು ಅಂತ ಒಪ್ಕೊಳ್ಳೋದಿಲ್ಲ ನಾವು. ಆದರೆ, ನಾಟಿ ಕೋಳಿ ಕೊಯ್ದಾಗ ಮಾತ್ರ ನಾವೆಲ್ಲ ನೆಂಟ್ರು ಎನ್ನುವಂಥ ಪರಿಸ್ಥಿತಿ ಇದೆ. ನಮ್ಮಲ್ಲಿ ಒಗ್ಗಟ್ಟಿಲ್ಲ. ಒಗ್ಗಟ್ಟಾಗಬೇಕು. ಇಲ್ಲದಿದ್ದರೆ ಸಮುದಾಯಕ್ಕೆ ಬೆಳವಣಿಗೆ ಎಂಬುದು ಮರೀಚಿಕೆ ಆಗಲಿದೆ” ಎಂದು ಎಚ್ಚರಿಸಿದರು.
ಒಕ್ಕಲಿಗರ ಸಂಘ ಬಲಿಷ್ಠವಾಗಬೇಕು. ಎಲ್ಲ ಸಮುದಾಯಗಳು ಹೆಚ್ಚು ಸೌಲಭ್ಯಕ್ಕಾಗಿ, ಹೆಚ್ಚು ಮೀಸಲಿಗಾಗಿ ಹೋರಾಟ ನಡೆಸುತ್ತಿವೆ. ನಾವು ಕೂಡ ನಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಬೇಕಿದೆ. ಸಮುದಾಯದ ಪ್ರಶ್ನೆ ಬಂದಾಗ ಎಲ್ಲರೂ ಒಗ್ಗಟ್ಟಾಗಬೇಕಿದೆ ಎಂದು ಡಾ.ಸುಧಾಕರ್ ಕಿವಿಮಾತು ಹೇಳಿದರು.
ಒಕ್ಕಲಿಗರಲ್ಲಿ ಆರ್ಥಿಕವಾಗಿ ಕೆಲವರು ಮಾತ್ರ ಸಬಲರಾಗಿದ್ದಾರೆ. ಆದರೆ ಹಿಂದುಳಿದವರು ಬಹಳಷ್ಟು ಜನ ಇದ್ದಾರೆ. ಪಕ್ಷಾತೀತವಾಗಿ ನಾವು ಇವರ ಪರ ಕೆಲಸ ಮಾಡಬೇಕು. ಸಮಾಜದ ವಿಷಯ ಬಂದಾಗ ನಾವೆಲ್ಲರೂ ಒಂದು ಎಂಬುದನ್ನು ಜಗತ್ತಿಗೆ ತೋರಿಸುವುದನ್ನು ಮರೆಯಬಾರದು. ಆದರೆ ಹಾಗೆ ಆಗುತ್ತಿಲ್ಲ ಎಂದರು ಅವರು.
ಸಮುದಾಯವನ್ನು ಒಗ್ಗೂಡಿಸಿದ ಸ್ವಾಮೀಜಿ
ಕೆಲ ವರ್ಷಗಳ ಹಿಂದೆ ನಮ್ಮ ಸಮುದಾಯ ಹರಿದು ಹಂಚಿಹೋಗಿತ್ತು. ಆದರೆ, ನಮ್ಮ ಸಮಾಜವನ್ನು ಒಟ್ಟು ಮಾಡಿದವರು ಯಾರಾದರೂ ಇದ್ದರೆ ಅವರು ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರು ಮಾತ್ರ. ಇಡೀ ಸಮುದಾಯವನ್ನು ಒಂದು ವೃಕ್ಷದಡಿ ತಂದ ಅವರು, ಅದಕ್ಕೆ ನೀರೆರದು ಅಗಾಧವಾಗಿ ಮಹಾವೃಕ್ಷವಾಗಿ ಬೆಳೆಸಿದರು. ಸಮುದಾಯಕ್ಕೆ ಬೆಳಕಾದರು ಎಂದು ಶ್ರೀ ಆದಿಚುಂಚನಗಿರಿ ಮಠದ ಹಿರಿಯ ಶ್ರೀಗಳನ್ನು ಸ್ಮರಿಸಿದರು ಡಾ.ಸುಧಾಕರ್.
ಕೇವಲ 30 ವರ್ಷಗಳಲ್ಲಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರು ೫೦೦ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದರು. ಉತ್ತರ ಕನ್ನಡ, ದಕ್ಷಿಣ ಕನ್ನಡದಂಥ ಜಿಲ್ಲೆಗಳಲ್ಲೂ ಬಿಜಿಎಸ್ ಶಿಕ್ಷಣ ಸಂಸ್ಥೆಗಳಿವೆ. ಆರಂಭದಲ್ಲಿ ಮಠವನ್ನು ನಡೆಸಲು ಜೋಳಿಗೆ ಹಿಡಿದು ಹಳ್ಳಿಗಳನ್ನು ಸುತ್ತಿ ರಾಗಿ ತಂದು ಮಕ್ಕಳನ್ನು ಸಾಕಿ ಸಲುಹಿದ ಆ ಮಹಾನ್ ಸಂತ, ಐನೂರು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದರು ಎಂದರೆ ಅದು ಪವಾಡವೋ ನಮ್ಮ ಅದೃಷ್ಟವೋ ಗೊತ್ತಿಲ್ಲ ಎಂದು ಅವರು ಹೇಳಿದರು.
ಸಾವಿರಾರು ಕೋಟಿ ಆಸ್ತಿ ಇದೆ
ಎಲ್ಲರ ಶ್ರಮದ ಫಲವಾಗಿ ಒಕ್ಕಲಿಗರ ಸಂಘಕ್ಕೆ ಸಾವಿರಾರು ಕೋಟಿ ರೂಪಾಯಿ ಆಸ್ತಿ ಇದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಅಗಾಧವಾಗಿ ಚಿರಾಸ್ಥಿಗಳಿವೆ. ಒಂದು ಮೆಡಿಕಲ್ ಕಾಲೇಜು ಇದ್ದರೆ ಏನೆಲ್ಲ ಪ್ರಗತಿ ಸಾಧಿಸಬಹುದು ಎಂಬುದನ್ನು ನಾನು ಬಲ್ಲೆ. ಸಂಘ ಅನೇಕ ಸಂದರ್ಭದಲ್ಲಿ ದಾರಿ ತಪ್ಪಿದೆ. ಸಂಘದ ಭ್ರಷ್ಟಾಚಾರದ ಬಗ್ಗೆ ನಾನು ಮಾತನಾಡಲಾರೆ. ಆದರೆ, ಈಗ ಏನು ಅಭಿವೃದ್ಧಿಯಾಗಿದೆ, ಅದಕ್ಕಿಂತ ಹತ್ತು ಪಟ್ಟು ಅಭಿವೃದ್ಧಿಯಾಗಲು ಸಂಘಕ್ಕೆ ಅವಕಾಶವಿತ್ತು. ಯಾಕೆ ಆಗಿಲ್ಲ? ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ನಮ್ಮ ಸಮುದಾಯದ ಕೆಲವರು ಮುಖ್ಯಮಂತ್ರಿಗಳಾಗಿದ್ದರು. ಆ ಸಂದರ್ಭದಲ್ಲಿ ಸಂಘವನ್ನು ಇನ್ನಷ್ಟು ಅಭಿವೃದ್ಧಿ ಮಾಡಬಹುದಾಗಿತ್ತು. ರಾಜಕೀಯವಾಗಿ ಸಾಕಷ್ಟು ಬಲವಿದ್ದರೂ ಸಂಘವನ್ನು ಬಲಿಷ್ಠಗೊಳಿಸಲು ಸಾಧ್ಯವಾಗಿಲ್ಲ ಏಕೆ? ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಂದರ್ಭದವಿದು ಎಂದು ಮಾರ್ಮಿಕವಾಗಿ ನುಡಿದರು ಡಾ.ಸುಧಾಕರ್.
ಚಿಕ್ಕಬಳ್ಳಾಪುರಕ್ಕೆ ಬೇಕು ಪ್ರತ್ಯೇಕ ನಿರ್ದೇಶಕರು
ಕೋಲಾರ, ಚಿಕ್ಕಬಳ್ಳಾಪುರ ಅವಳಿ ಜಿಲ್ಲೆಗಳನ್ನು ಬೇರ್ಪಡಿಸದೆ ಹಾಗೆಯೇ ಉಳಿಸಲಾಗಿದೆ. 2007ರಲ್ಲೇ ಚಿಕ್ಕಬಳ್ಳಾಪುರ ಜಿಲ್ಲೆಯಾಗಿದೆ. ಈಗಾಗಲೇ ಬೇರೆ ಮಾಡಬೇಕಿತ್ತು, ಆದರೆ ಮಾಡಿಲ್ಲ. ಎರಡು ಜಿಲ್ಲೆಗಳಿಗೆ ಪ್ರತ್ಯೇಕ ನಿರ್ದೇಶಕರು ಬೇಕು. ಮುಂದಿನ ಆಡಳಿತ ಮಂಡಳಿ ಬಂದ ಮೇಲೆ ಜಿಲ್ಲೆಗಳು ಬೇರೆ ಬೇರೆಯಾಗಬೇಕು. ಚಿಕ್ಕಬಳ್ಳಾಪುರಕ್ಕೆ ಪ್ರತ್ಯೇಕ ನಿರ್ದೇಶಕರು ಬರಬೇಕು ಎಂದು ಸುಧಾಕರ್ ಪ್ರತಿಪಾದಿಸಿದರು.
ಐದು ವರ್ಷಗಳ ಹಿಂದೆ ಯಲುವಳ್ಳಿ ರಮೇಶ್, ಸತೀಶ್, ಡಾ.ರಮೇಶ್ ಇವರನ್ನು ಗೆಲ್ಲಿಸಿದ್ದೆವು. ಐದು ವರ್ಷ ಅಧಿಕಾರಾವಧಿ ನಡೆಸಿದರು ಇವರು. ಮೂರು ವರ್ಷಗಳ ಅವಧಿಗೆ ಆಯ್ಕೆಯಾದ ಇವರು ಬೈಲಾ ಬದಲಾವಣೆ ಮಾಡಿಕೊಂಡು ಐದು ವರ್ಷ ಆಡಳಿತ ನಡೆಸಿದರು. ಲೋಕಸಭೆ, ವಿಧಾನಸಭೆ ಸದಸ್ಯರಂತೆ ಇವರು ಐದು ವರ್ಷ ಆಳ್ವಿಕೆ ನಡೆಸಲು ಬೇಕಾದ ತಿದ್ದುಪಡಿಗಳನ್ನು ಮಾಡಿಕೊಂಡರು ಎಂದು ಸಚಿವರು ಕುಟುಕಿದರು.
ಸದಸ್ಯರು ಕಡ್ಡಾಯವಾಗಿ ಮೂರು ಮತ ಚಲಾಯಿಸಬೇಕು. ಮೂರು ಅಭ್ಯರ್ಥಿಗಳಿಗೆ ಮತ ಹಾಕಬೇಕು. ಎರಡು ದಿನದಲ್ಲಿ ನಮ್ಮ ಅಭ್ಯರ್ಥಿಗಳು ಯಾರು ಎಂಬುದನ್ನು ತೀರ್ಮಾನ ಮಾಡುತ್ತೇವೆ. ಸಾಧ್ಯವಾದರೆ, ಗುರುವಾರವೇ ಅಭ್ಯರ್ಥಿಗಳನ್ನು ಘೋಷಣೆ ಮಾಡೋಣ. ಎರಡೂ ಜಿಲ್ಲೆಗಳಲ್ಲಿ 65,000 ಮತದಾರರು ಇದ್ದಾರೆ ಎಂದು ಅವರು ನುಡಿದರು.
ಜಿ.ಪಂ ಸದಸ್ಯ ಪಿ.ಎನ್.ಕೇಶವರೆಡ್ಡಿ, ಮಾವು ಅಭಿವೃದ್ದಿ ಮಾರುಕಟ್ಟೆ ಮಂಡಳಿ ಅಧ್ಯಕ್ಷ ಕೆ.ವಿ.ನಾಗರಾಜ್, ನಗರಸಭೆ ಅಧ್ಯಕ್ಷ ಆನಂದರೆಡ್ಡಿ ಬಾಬು, ನಿವೃತ್ತ ಡಿವೈಎಸ್ಪಿ ಕೋನಪ್ಪರೆಡ್ಡಿ, ಒಕ್ಕಲಿಗರ ಸಂಘದ ಮುಖಂಡರಾದ ಪಾಪಣ್ಣ, ಕೃಷ್ಣಾರೆಡ್ಡಿ, ನಂದಿ ಸೀನಣ್ಣ, ಎಂಎಫ್ʼಸಿ ನಾರಾಯಣಸ್ವಾಮಿ, ಕೃಷ್ಣಮೂರ್ತಿ, ಸತೀಶ್ ಜಿ.ಆರ್., ಶ್ರೀನಿವಾಸ್, ಎ.ವಿ.ಬೈರೇಗೌಡ, ಬಿ.ಎಂ.ಕೆ.ಮಂಜುನಾಥ್, ಚಿನ್ನಪ್ಪರೆಡ್ಡಿ ಮುಂತಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು.