ಇಫ್ಕೋ, ಫ್ಯಾಕ್ಟಂಪಾಸ್ ಕಂಪನಿಗಳು ಇಡೀ ದೇಶಕ್ಕೆ ರಸಗೊಬ್ಬರ ಪೂರೈಕೆ ಮಾಡ್ತಿವೆ, ಈ ಎರಡೂ ಕಂಪನಿಗಳು ಕೇಂದ್ರದ ಅಧೀನದಲ್ಲಿವೆ. ಕೇಂದ್ರ ಸರಕಾರ ರಸಗೊಬ್ಬರ ಬೆಲೆ ಏರಿಕೆಯನ್ನು ತಡೆಯಬಹುದಿತ್ತು.
Ra Na Gopala Reddy Bagepalli
ಬಾಗೇಪಲ್ಲಿ: ರೈತರ ಆದಾಯಗಳನ್ನು ದ್ವಿಗುಣಗೊಳಿಸುವುದಾಗಿ ಬಹುದೊಡ್ಡ ಸುಳ್ಳುಗಳ ದಾಳಗಳನ್ನು ಉರುಳಿಸುತ್ತಿರುವ ಅಲ್ಪ ಸ್ವಲ್ಪ ಆದಾಯವನ್ನು ಕಾರ್ಪೋರೇಟ್ ಲೂಟಿಗೆ ತೆರೆಯುವ ಕೇಂದ್ರ ಸರಕಾರವು ರೈತರ ವಿರುದ್ಧ ಕುತಂತ್ರಗಳನ್ನು ಹೂಡುತ್ತಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ ಮುಖಂಡ ಮಂಜುನಾಥ ರೆಡ್ಡಿ ದೂರಿದರು.
ಪಟ್ಟಣದ ತಾಲೂಕು ಕಚೇರಿಯ ಮುಂದೆ ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದ ಅವರು;
“ರಸಗೊಬ್ಬರದ ಬೆಲೆಯನ್ನು ದಿಢೀರ್ ಏರಿಕೆ ಮಾಡಿರುವುದು ಸರಿಯಲ್ಲ. ಈಗಾಗಲೇ ಜನರು ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ದರ ಏರಿಕೆಯಿಂದ ತತ್ತರಿಸಿದ್ದಾರೆ. ಇದೀಗ ರಸಗೊಬ್ಬರದ ಬೆಲೆ ಏರಿಕೆ ಕಂಡು ರೈತರು ಕಂಗಾಲಾಗಿದ್ದಾರೆ. ಬೆಲೆ ಏರಿಕೆಯಿಂದ ಕೃಷಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಸರಕಾರ ಕೂಡಲೇ ಭಾರತೀಯ ರೈತರ ರಸಗೊಬ್ಬರ ಸಹಕಾರಿ ಸಂಸ್ಥೆ (ಇಫ್ಕೊ) ಜತೆ ಚರ್ಚಿಸಿ, ರೈತರ ಮೇಲಿನ ಆರ್ಥಿಕ ಭಾರ ಕಡಿಮೆ ಮಾಡಬೇಕು. ಕೃಷಿಕರಿಗೆ ಅನುಕೂಲ ಮಾಡಿಕೊಡಬೇಕು” ಎಂದು ಆಗ್ರಹಪಡಿಸಿದರು.
ತಾಲೂಕು ಪಂಚಾಯತಿ ಸದಸ್ಯ ಶ್ರೀರಾಮ್ ನಾಯಕ್ ಮಾತನಾಡಿ, ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗದೆ ರೈತರು ಈಗಾಗಲೇ ನೊಂದು ಬೆಂದಿದ್ದಾರೆ. ಇಫ್ಕೋ, ಫ್ಯಾಕ್ಟಂಪಾಸ್ ಕಂಪನಿಗಳು ಇಡೀ ದೇಶಕ್ಕೆ ರಸಗೊಬ್ಬರ ಪೂರೈಕೆ ಮಾಡ್ತಿವೆ, ಈ ಎರಡೂ ಕಂಪನಿಗಳು ಕೇಂದ್ರದ ಅಧೀನದಲ್ಲಿವೆ. ಕೇಂದ್ರ ಸರಕಾರ ರಸಗೊಬ್ಬರ ಬೆಲೆ ಏರಿಕೆಯನ್ನು ತಡೆಯಬಹುದಿತ್ತು. ಆದರೆ ರೈತರಿಗೆ ಮರಣಶಾಸನ ಬರೆಯಲು ಬೆಲೆ ಏರಿಕೆ ಮಾಡಿದ್ದಾರೆ ಎಂದು ಗುಡುಗಿದರು.
ಈ ಸಂದರ್ಭದಲ್ಲಿ ಎಂ.ಪಿ.ಮುನಿವೆಂಕಟಪ್ಪ, ಎಂ.ಎಸ್. ರಘುರಾಮ ರೆಡ್ಡಿ, ಶ್ರೀರಾಮಪ್ಪ, ಶ್ರೀರಾಮ ನಾಯಕ್, ಮಹಮದ್ ಅಕ್ರಂ, ಅಶ್ವಥಪ್ಪ, ಬಿ.ಆಂಜನೇಯ ರೆಡ್ಡಿ ಮುಸ್ತಫಾ, ಹೇಮಚಂದ್ರ ಹಾಗೂ ರಮೇಶ್ ಮುಂತಾದವರು ಪಾಲ್ಗೊಂಡಿದ್ದರು.